Wednesday, December 19, 2007

ಬ್ಯಾಳೆ

ಏಳೆಂಟು ವರ್ಷಗಳ ಹಿಂದಿನ ಕತೆ. ಬ್ಯಾಳೆ ಹುಳಿ ಉಣ್ಣುವಾಗ ಇದರ ನೆನಪಾಗದೆ ಇರುವುದಿಲ್ಲ. ಇಂದಿನಂತದೇ ಮಳೆ. ಹಿಂದಿನ ದಿನ ರಾತ್ರಿಯಿಂದಲೂ ಜಡಿಯುತ್ತಿತ್ತು. ಸಿರ್ಸಿ ಬದಿಯ ನೆಂಟರ ಮನೆಗೆ ಅಪರೂಪಕ್ಕೆ ಹೋಗಿದ್ದೆ. ನನಗಿಷ್ಟ ಎಂದು ಆ ದಿನ ಅವರ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ಬ್ಯಾಳೆ ಹುಳಿ ಮಾಡಿದ್ದರು.

ಮನೆಯವರು ಮತ್ತು ನನ್ನನ್ನು ಬಿಟ್ಟರೆ ಮತ್ಯಾರೂ ಇರಲಿಲ್ಲ. ಯಜಮಾನರೂ ಪಂಕ್ತಿಯ ಬುಡದಲ್ಲಿ, ಅವರ ಪಕ್ಕ ಅತಿಥಿಯಾದ ನಾನು ನನ್ನ ಪಕ್ಕ ಅವರ ಮಗ, ಹೀಗೆ ಕುಳಿತು ಊಟ ಪ್ರಾರಂಭಿಸಿದೆವು. ಯಜಮಾನರ ಹೆಂಡತಿ ಸಾವಕಾಶವಾಗಿ ಸಮಾಧಾನದಿಂದ ಬಡಿಸುತ್ತಿದ್ದರು. ನನಗೆ ಹುಳಿ ಬಡಿಸಿದವರೇ ಏನೋ ನೆನಪಾದಂತೆ ಒಂದು ಕಡೆ ನಿಂತು ತಮ್ಮ ತವರು ಮನೆಯ ಸುದ್ದಿ ಹೇಳತೊಡಗಿದರು.

ಸಾರಂಶ ಇಷ್ಟೆ: ಅವರ ತವರು ಮನೆಯಲ್ಲಿ ಗಂಡಸರೆಲ್ಲಾ ಹುಳಿಯಲ್ಲಿನ ಬೇಳೆಯನ್ನೆಲ್ಲಾ ಆಸೆಪಟ್ಟು ಹಾಕಿಸಿಕೊಳ್ಳುತ್ತಿದ್ದರಿಂದ ಕೊನೆಯಲ್ಲಿ ಊಟಮಾಡುತ್ತಿದ್ದ ಹೆಂಗಸರಿಗೆ ಬರೀ ಸಾರು ಉಳಿದಿರುತ್ತಿತ್ತಂತೆ.

ಅವರ ಮಾತಿನ ಕೊನೆಯ ವಾಕ್ಯ ಹೀಗಿತ್ತು..
"ಎಲ್ಲಾ ಗಂಡಸ್ರೇ ಕಾಲಿ ಮಾಡ್ಬುಡ್ತಿದ್ವಲೀ.. ಹಂಗಾಗಿ ಹೆಂಗಸ್ರಿಗೆ ಬ್ಯಾಳ್ಯೇ ಇರ್ತಿತ್ತಿಲ್ಲೆ.."

ಅಲ್ಲಿಯವರೆಗೂ ಸಹನೆಯಿಂದ ಮೌನವನ್ನು ಉಳಿಸಿಕೊಂಡಿದ್ದ ಮನೆಯ ಯಜಮಾನರು ಈಗ ಗಂಭೀರ ಸ್ವರದಲ್ಲಿ ಹಳಿದರು:
"ನಿನ್ ಅಪ್ಪನ್ ಮನೆಲ್ಲಿ ಹೇಳಲ್ಲ, ತ್ಯಳತ್ತನೇ ಯಶೋದ.. ಪ್ರಪಂಚದಲ್ಲಿ ಎಲ್ಲೇ ಹೋದ್ರು, ಹೆಂಗಸ್ರಿಗೆ ಬ್ಯಾಳಿರ್ತಿಲ್ಲೆ.. "