Wednesday, July 23, 2008

ಕಾಮಸೂತ್ರ -೩

ಮೋಡ ಬಿತ್ತಿದ್ದಕ್ಕೋ ಅಲ್ಲವೋ, ಅಂತೂ ಮಳೆ ಶುರುವಾಗಿದೆ. ಹೊರಗೆ ನಭಕೂ ಭುವಿಗೂ ರಾತ್ರಿಯಿಡೀ ಪ್ರಣಯೋತ್ಸವ ನಡೆಯುತ್ತಿದ್ದರೆ, ಒಳಗೆ, ಅಂತಃಪುರದಲ್ಲಿ, ಚಂದ್ರಮಂಚದಲ್ಲಿ, ಹೊದಿಕೆಯಡಿಯಲ್ಲಿ... ನಿಮ್ಮ ದೇಹ ಬೆಚ್ಚಗಿರಲಿ ಅಂತ ಹಾರೈಸುತ್ತಾ, ಗಂಗಾಧರ ಚಿತ್ತಾಲರ 'ಕಾಮಸೂತ್ರ' ಕವನದ ಉಳಿದ ಭಾಗವನ್ನು ಇಲ್ಲಿ ಕೊಡುತ್ತಿದ್ದೇವೆ.

*
ಕನಸು ತಲೆಯಲ್ಲಿ ತುಂಬಿದಂಥ ಹುಡುಗ
ಕಳ್ಳನೋಟವ ಕಸಿದುಕೊಳುವ ತುಡುಗ

ಕೊಬ್ಬೇರಿ ನಡೆದಿರುವೆ ಮಬ್ಬಿನಲಿ
ಬಾಳ ದಿಬ್ಬವನೇರ್ವ ಉಬ್ಬಿನಲ್ಲಿ.

ದನಿಯಲ್ಲಿ ಗಡುಸು, ಜಂಘೆಯಲೆಲ್ಲ ಬಿರುಸು
ಅಂಗಾಂಗದಲಿ ಗೂಳಿಮದ ಬಂತು ಉಗ್ಗಿ

ಗಂಡುಸಿನ ವಾರ್ತೆ ದಾಳಿಯೊಲು ನುಗ್ಗಿ
ಚೆಲ್ಲಾಡಿಸುತ ಮನವನಲ್ಲಾಡಿಸುತ ಬಂತು

ಬಡಿದೆಬ್ಬಿಸುತ ಬಂತು ಅಲಲ ಕೀಹಾ ಎಂದು
ಕೊರಳುಬ್ಬಿಸುತ ಬಂತು ಕಹಳೆಯೂದಿ.

ಹಾಲಿನೊಲು ಉಂಡ ನಿನ್ನೆಯ ಹಸುಳೆ- ಜಗವಿಂದು
ಕದಡಿ ಕವಲೊಡೆಯುತ್ತಿದೆ
ಬೇರೊಂದು ಹದಕೆ ಧುಮ್ಮಿಕ್ಕಿ ದುಂದುಮಿಸಿ ಬೆದೆ
ಗೊಳಲು ತುಡಿಯುತಿದೆ

ಒಮ್ಮೆಯ ತೊರೆದು ಇಮ್ಮೆಯ ಪಡೆಯುತಿದೆ
ಯೋನಿಮುಖ ತೋರಿ ಒಳನೀರು ಕಡೆಯುತಿದೆ

ಹೆಣ ವಾಸನೆ ಬಂದು ಮೂಗಿನಲಿ ಹೊಡೆಯುತಿದೆ.
ಕಾಮೋನ್ಮುಖ ಆಹಾ ಯೋನಿಚಕಿತಾ!

ಗೆಲಲು ಎದ್ದವನಂತೆ,
ಲೋಕಕ್ಕು ಹೊಸತಾದ ಕಂಪ ಮೆದ್ದವನಂತೆ,
ಹೊಳ್ಳೆ ಹಿಗ್ಗಿಸಿ ನಡೆವೆ ಗಾಳಿಗುಂಟಾ
ಎಡೆಮೂಸಿ ಹುಡುಕುತ್ತ ಯುಗದ ನಂಟಾ.

ಕೆಚ್ಚೆನೆಯೇ ಬಿಚ್ಚುತಿದೆ ಎಲ್ಲೊ ನಿನಗೆ
ಬೆಚ್ಚನೆಯ ತೊಡೆಯ ಹೂ ಕಾದು ಗೊನೆಗೆ

ಆಕೆಗೋ ನೆಲ ಕಾಣ, ನಿನಗೆ ದೇಶವೆ ಕಾಣ
ಲೋಹಚುಂಬಿಸಿದೆ ಗುರಿ, ಹೆದೆಗೇರುತಿದೆ ಪ್ರಾಣ.

ಇನ್ನು ನಿಲಲಿಹ ನೆತ್ತಿಗೇರಿ ಭಾನು
ಒಂದೆ ಋತುಕಾಲ; ಆದರು ಅವನ ಸಿರಿಯೇನು!
ಹುಚ್ಚೆದ್ದು ಹೂತು ಹೂಗರೇರಿ ಹಣ್ಣುವವಯ್ಯ
ಶೃಂಗ - ಸಾನು

ಇನ್ನು ತೋಟಕೆ ನುಗ್ಗಿ ಬೇಟೆ ಬೇಟ
ಗುಟ್ಟಿನಲಿ ಕೂಡಿ ಮೈಯಣಿಸುವಾಟ
ಸುಳಿಯೊಡೆದು ಹೊಸ ಜೀವ ಬರುವ ಮಾಟ!

ಈಗಾಗಲೇ ಮೋಟುಗೋಡೆಯಲ್ಲಿ: ಕಾಮಸೂತ್ರ-೧
ಕಾಮಸೂತ್ರ-೨

[ಫ್ಲಾಶ್ ನ್ಯೂಸ್! ಪರಿಸರಪ್ರೇಮಿ ಅರುಣ್ ಈಗ ಮೋಟುಗೋಡೆ ಟೀಮ್ ಮೆಂಬರ್ ಆಗಿದ್ದಾರೆ. ಅವರಿಂದ ಬರಲಿರುವ ತರಹೇವಾರಿ ಪೋಸ್ಟುಗಳಿಗಾಗಿ ನಿರೀಕ್ಷಿಸಿ!]