Thursday, November 13, 2008

ಅಪಭ್ರಂಶ

ಇಂದಿಗೂ ಕೆಲವರಿಗೆ ಕೆಲವು ಹೆಸರುಗಳು ಏಕೆ ಬಂತೆಂದು ಗೊತ್ತೇ ಇರುವುದಿಲ್ಲ.

"ಬಾಯ್ಲರ್ ಕೋಳಿ ಹಾಕಿದ ಮೇಲೆ ಚೆನ್ನಾಗಿ ದುಡ್ಡು ಮಾಡ್ತಿದ್ದೀನಿ ಸಾರ್. ನಾಟಿ ಕೋಳಿ ಏನೂ ಪ್ರಯೋಜನ ಇಲ್ಲ" ಎಂದು ಒಬ್ಬ ಕೋಳಿ ಸಾಕುವವನು ಹೇಳಿದ. ನಾನು ಇದೆಂಥದು ಬಾಯ್ಲರ್ ಕೋಳಿ ಎಂದು ಚಕಿತನಾಗದೇ ಇರಲು ಸಾಧ್ಯವೇ ಇಲ್ಲ. ಕೋಳಿಯನ್ನು ಬಾಯ್ಲರಿನಲ್ಲಿ ಹಾಕಿ ಬೇಯಿಸಿ ನಂತರ ಬೆಂದ ಕೋಳಿಯನ್ನು ಮಾರುವುದೇ ಎಂಬುವಷ್ಟರ ಮಟ್ಟಿಗೆ ಯೋಚಿಸಿದೆ. ಆದರೆ ನಂತರ ಪಿ.ಯು.ಸಿ. ಪಠ್ಯಪುಸ್ತಕವನ್ನು ತಿರುವಿಹಾಕಿದಾಗ ಗೊತ್ತಾಯಿತು ಆತ ಹೇಳ ಬಯಸುತ್ತಿದ್ದುದು "ಬ್ರಾಯ್ಲರ್ ಕೋಳಿ" ಎಂಬ ಜಾತಿಯ ಕೋಳಿಯ ಬಗ್ಗೆ ಎಂದು.

ದೊಡ್ಡಬಳ್ಳಾಪುರದವರು ದನಗಳು "ಫಲಕ್ಕೆ" ಬಂದಾಗ (ಹೀಟ್‍ಗೆ ಬಂದಾಗ) "ಏಳು ಹಾಕಿಸಬೇಕು ಇದಕ್ಕೆ" ಎನ್ನುತ್ತಾರೆ. ಹಾಗಂದರೆ ಏನೆಂದು ಕಲ್ಪನೆ ಸಹ ಮಾಡಿಕೊಳ್ಳಲಾಗುವುದಿಲ್ಲ. ಇರಲಿ, ಇದರ ಬಗ್ಗೆ ಒಂದಷ್ಟು ರಿಸರ್ಚ್ ಮಾಡಿದ ನಾನು ವಿವರಿಸುತ್ತೇನೆ. ಹೀಟ್‍ಗೆ ಬಂದ ಹಸುವನ್ನು ಹೋರಿಯೆಡೆ ಕರೆದೊಯ್ಯುವುದು ಒಬ್ಬ ವರ್ತಕನಿಗೆ ನಷ್ಟವೇ ಸರಿ. ಯಾಕೆಂದರೆ ಒಂದು ಹೋರಿಯು ಹತ್ತು ಹಸುವಿಗಾಗುವಷ್ಟು ವೀರ್ಯವನ್ನು ಉತ್ಪತ್ತಿ ಮಾಡುತ್ತೆ. ಎಷ್ಟೊಂದು ವ್ಯರ್ಥ. ಅದಕ್ಕಾಗಿಯೇ ವಿಜ್ಞಾನವು "Artificial Insemination" ಅನ್ನು ಕೊಟ್ಟಿದೆ. ಹೋರಿಯ ವೀರ್ಯವನ್ನು ಶೇಕರಿಸಿ, ಹಸುವಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ artificial ಆಗಿ ಹಸುವಿಗೆ ಕೊಡುತ್ತಾರೆ. ಇದರಿಂದ ವೀರ್ಯ ವ್ಯರ್ಥವಾಗುವುದಿಲ್ಲ. ಹೋರಿ ಸಾಕಿದವನಿಗೆ ಒಳ್ಳೇ ಲಾಭ!

ಈಗ ವಿಷಯಕ್ಕೆ ಬರೋಣ. ಇದಕ್ಕೂ "ಏಳು" ಹಾಕಿಸುವುದಕ್ಕೂ ಏನು ಸಂಬಂಧ?

ವೀರ್ಯ ಅನ್ನುವುದಕ್ಕೆ ಇಂಗ್ಲೀಷಿನಲ್ಲಿ "semen" ಎಂದು ಹೆಸರು. ಯಾವುದೋ ದನದ ಡಾಕ್ಟರು "semen ಹಾಕ್ತೀವಿ" ಅನ್ನೋದು ಇನ್ಯಾವುದೋ ದನದ ಮಾಲೀಕನಿಗೆ "seven ಹಾಕ್ತೀವಿ" ಎಂದು ಕೇಳಿಸಿರಬಹುದು. ಅದು ಹಾಗೇ ಮುಂದುವರೆದಿದೆ. ಅದೂ ಕನ್ನಡಕ್ಕೂ ಅನುವಾದವಾಗಿರುವುದು ಭಾಷಾ ಬೆಳವಣಿಗೆಗೆ ಉದಾಹರಣೆಯೆನ್ನಬಹುದೇನೋ!!

ವೀರ್ಯದ ಬಗ್ಗೆಯೇ ಇನ್ನೊಂದು ಪ್ರಸಂಗ ನಡೆದಿತ್ತು.

ಕನಕಪುರದ ಬಳಿ ಚಾರಣವೊಂದಕ್ಕೆ ಹೋಗಿದ್ದಾಗ, ಅಲ್ಲಿನ ಸ್ಥಳೀಯ ರೈತನೊಬ್ಬನನ್ನು ನನ್ನ ಗೈಡಾಗಿ ಕರೆದುಕೊಂಡೆ. ಅವನು ಒಂದೇ ಮಾತು ಹೇಳಿದ್ದು ನನಗೆ, ನಾನು ದಿಗ್ಭ್ರಾಂತನಾಗಿ ಹೋದೆ! "ಅರುಣ್, ನೀವು ಹೋಗ್ತಾ ಇರಿ, ನಾನು ಹೊಲಕ್ಕೆ ವೀರ್ಯ ಹಾಕ್ಬಿಟ್ ಬರ್ತೀನಿ!!" ಅಂದ. ಇದೆಂಥಾ ದೇಶ? ಇದೆಂಥಾ ಊರು? ಹೊಲಕ್ಕೆಲ್ಲಾ ವೀರ್ಯ ಹಾಕೋದು ಅಂದ್ರೆ ಏನು ಅರ್ಥ?? ಅದು ಹೇಗೆ ಸಾಧ್ಯ????
"ನೀನ್ ಏನ್ ಹಾಕ್ತೀಯೋ ನಾನೂ ನೋಡ್ಬೇಕಲ್ಲಾ, ನಾನೂ ಬರ್ಲಾ?" ಎಂದು ಕೇಳೋಣ ಎನ್ನಿಸಿತು, ಆದರೆ ಮುಜುಗರ ಆಗಿ ಸುಮ್ಮನಾದೆ. ಅವನೇ ಹೇಳಿದ "ನೀವೂ ಬನ್ನಿ, ನಮ್ ಹೊಲಾನೂ ನೋಡ್ದಂಗ್ ಆಯ್ತದೆ." ಅಂದ. ಅಲ್ಲಿ ಹೋಗಿ ನೋಡಿದರೆ, ಅವನ ಹೊಲಕ್ಕೆ ಅವನು ಹಾಕುತ್ತಿದ್ದುದು "Urea" - ಯೂರಿಯಾ! ಗೊಬ್ಬರ!!

-ಅ
13.11.2008
11AM

2 comments:

Shankar Prasad ಶಂಕರ ಪ್ರಸಾದ said...

ಇಂಥ ಮಾತು, ಪ್ರಸಂಗಗಳನ್ನು ಅರಗಿಸ್ಕೊಬೇಕಾದ್ರೆ ನಿಜಕ್ಕೂ ವೀರ್ಯವಂತರಾಗಿರಬೇಕು.
ಅಲ್ವೇ ??

ಕಟ್ಟೆ ಶಂಕ್ರ
http://somari-katte.blogspot.com

Prakash Payaniga said...

ednicನಿಜಕ್ಕೂ ನೀನು ವೀರ್ಯವ೦ತನಪ್ಪ....
ಅಂದ ಹಾಗೆ ಲಂಡನ್ನಲ್ಲಿ ವೀರ್ಯದ ಕೊರತೆ ಇದೆಯ೦ತೆ ....
ವೀರ್ಯ ದಾನ ಮಾಡುವವರಿಗಾಗಿ ಅವರು ಎದುರು ನೋಡುತ್ತಿದ್ದಾರೆ...
ಸಾದ್ಯ ಇದ್ದರೆ ನೀವೂ ದಾನ ಮಾಡಬಹುದು