Wednesday, June 10, 2009

ಬೇಸಗೆ ರಜೆಯಲ್ಲಿ ಮೈನೆರೆದ ಹುಡುಗಿಗೆ..

ಜೂನ್! ಶಾಲೆ-ಕಾಲೇಜುಗಳು ಶುರುವಾಗಿವೆ. ಎಂಟನೇ ಕ್ಲಾಸಿನಲ್ಲಿದ್ದ ಹುಡುಗಿಗೆ ಒಂಭತ್ತನೇ ಕ್ಲಾಸಿಗೆ ಭಡ್ತಿ ಸಿಕ್ಕಿದೆ. ಎರಡು ತಿಂಗಳ ಬೇಸಗೆ ರಜೆ ಮುಗಿಸಿ ಬಂದ ಆ ಹುಡುಗಿ, ಅರೆ! ಇದೇನಿದು ಅವಳಲ್ಲಿ ಇಂತಹ ಬದಲಾವಣೆ! ಅಚ್ಚರಿಯಲ್ಲಿ ನಿರುಕಿಸುತ್ತಿದ್ದಾನೆ ಹುಡುಗ: ಬರೀ ಮುಗ್ಧತೆ ಮಿಂಚುತ್ತಿದ್ದ ತನ್ನ ಪ್ರೀತಿಯ ಹುಡುಗಿಯ ಮೊಗದಲ್ಲೀಗ ಏನಿದು ಹೊಸ ಕಳೆ? ಏಕೀ ನಾಚಿಕೆ? ತನಗೂ ನೋಡಲು ಅಂಜಿಕೆ? ರಜೆಯಲ್ಲವಳು ಮೈನೆರದಳೇ?

ಗಂಗಾಧರ ಚಿತ್ತಾಲರ ಮತ್ತೂ ಒಂದು ಕವನ ಮೋಟುಗೋಡೆಯ ಮೆಟ್ಟಿಲೇರುತ್ತಿದೆ. ಕಂಗಳ ಸೆಳೆಯುವ ತರಳೆಯರಿಗೆಲ್ಲ ಹೊಟ್ಟೆನೋವು ಬರಲಿ!


ಕಾಮೋದಯ

ಬೆಳೆದು ನಿಂತಿಹೆ ಹುಡುಗಿ!
ಕಂಡು ಕಂಡವರ ಎದೆ ಸೆಳೆದು ನಿಂತಿಹೆ ಮತ್ತೆ
ಎಳೆತನದ ಹೂವುಕಳೆ ಕಾಣಕಾಣುತೆ ಅಡಗಿ
ಕಾಮೋದಯದ ಉಷೆಯೆ ಮೈದಾಳಿ ಬಂದಂತೆ
ನಯನಾಭಿರಾಮವಾಗಿ!

ಇದು ಒಂದು ಋತುಮಾನ
ಹರೆಯು- ಬಂದರೆ ನೆರೆಯೆ ಬಂದಂತೆ ಮೈಮನಕೆ
ತೊನೆಯುತಿದೆ ಕಣ್ಗಳಲಿ ಬರುವ ಸುಗ್ಗಿಯ ತಾನ!
ನಿಲುವಿನಲಿ ಯಾರನೋ ಕಾದು ನಿಂತಿಹ ಭಾವ
ಸುಳಿವುದವಿರಾಮವಾಗಿ!

ಏ ತರಳೆ! ಏ ಮರುಳೆ!
ಸ್ವಾತಿ ಬರೆ ಮೌಕ್ತಿಕಕೆ ಶುಕ್ತಿ ಬಾಯ್ಬಿಡುವಂತೆ
ಜೀವದಾಳವೆ ಬಾಯ ಬಿಟ್ಟಿರಲು ಬಯಕೆಯಲಿ
ಮುಗ್ದೆ ಚಂಚಲೆಯಾಗಿ ಭುಲ್ಲವಿಸಿ ನಿಂತಿರುವೆ
ಕಾಮವೇ ಪ್ರೇಮವಾಗಿ!

2 comments:

umesh desai said...

ನಿಜವೇ ಹೂ ಮೊಗ್ಗಾಗುವುದು ಹುಡುಗಿ ಯುವತಿ ಆಗುವುದು ಈ ಪ್ರಕೃತಿಯ ಸುಂದರ ಅನುಭೂತಿಗಳಲ್ಲೊಂದು
ನಮ್ಮಂತಹ ಪುರುಷೋತ್ತಮರಿಗೆ ಆ ಭಾಗ್ಯ ಉಂಟೇ..
ಗಂಗಾಧರ ಚಿತ್ತಾಲರ ಕವಿತೆ ಮೋಹಕ ವಾಗಿದೆ....

Parisarapremi said...

ಎಂಟನೆಯ ಕ್ಲಾಸಿನಿಂದ ಒಂಭತ್ತನೆಯ ಕ್ಲಾಸಿಗೆ ಹೋಗುವಾಗ "ಇದು" ಆಗುವುದು ತುಂಬ ಹಳೆಯ ವಿಷಯ. ಈ ಕಾಲದಲ್ಲಿ FSH ಮತ್ತು LH ಅಧಿಕವಾಗಿ ಉತ್ಪತ್ತಿಯಾಗುತ್ತಿರುವುದರಿಂದ ಇನ್ನೂ ಐದನೆಯ ತರಗತಿಯನ್ನೂ ಸಹ ಮುಟ್ಟಿರುವುದಿಲ್ಲ, ಆಗಲೇ ಮಕ್ಕಳು ದೊಡ್ಡವರಾಗಿರುತ್ತಾರೆ!!