Thursday, September 3, 2009

ತುಂಟಿ ನೀಲು- ೧

ನೀಲು. ಒಂದು ಕಾಲದ ಹುಡುಗರ ನಿದಿರೆ ಕೆಡಿಸಿದ್ದ ನೀರೆ. ಯಾರಿರಬಹುದು ಈಕೆ, ಹೇಗಿರಬಹುದು ಈಕೆ ಎಂದೆಲ್ಲ ಕಲ್ಪನೆಗಳನ್ನು ಕಟ್ಟಿಸಿದ್ದ ನಿಗೂಢೆ. ಯವ್ವನದ ಹುಡುಗಿಯರ ನಿರ್ಭಿಡೆಯ ದನಿಯಾಗಿದ್ದ ನಿಸ್ಸೀಮೆ. ನೀಲು ಮುಟ್ಟದ ವಿಷಯವಿಲ್ಲ. ಪುರಾಣ, ಇತಿಹಾಸ, ರಾಜಕೀಯ, ಕ್ರೀಡೆ, ಸಾಹಿತ್ಯ, ಜನ, ಜೀವನ, ಪ್ರೇಮ, ಕಾಮ... ಎಲ್ಲವೂ ನೀಲುವಿನ ಕಾವ್ಯದಲ್ಲಿ ವಸ್ತುವಾಗಿ ಬಂದಿವೆ. ನೀಲುವೆಂದರೆ ಕಾಮಿನಿ, ಭಾಮಿನಿ, ನಾಲ್ಕು ಮಿನಿ ಸಾಲುಗಳಲ್ಲೇ ಏನೇನೋ ಹೊಳೆಸುವ ಸೌದಾಮಿನಿ.

ಈಗಿಲ್ಲಿ ನಾವು ಕೊಡುತ್ತಿರುವ ಕೆಲ ಪದ್ಯಗಳಲ್ಲಿ ಕಾಣುವುದೂ ಅದೇ: ಹಸಿ ಹಸಿ ಕಾಮ, ಬಿಸಿ ಬಿಸಿ ಜವ್ವನ, ಚುಚ್ಚುವ ವ್ಯಂಗ್ಯ, ಪ್ರಬುದ್ಧ ಹಾಸ್ಯ. ಇವುಗಳಲ್ಲೆಲ್ಲ ನೀಲುವಿನ ಸೂಕ್ಷ್ಮ ದೃಷ್ಟಿಕೋನ ಕೆಲಸ ಮಾಡಿರುವುದು ತಿಳಿಯುತ್ತದೆ. ನೀಲುವಿಗೊಂದು ಗಟ್ಟಿ ಆತ್ಮವಿಶ್ವಾಸವಿದೆ ಹಾಗೇ, ಹೆಣ್ಣಿನ ಕರಗಿಬಿಡುವ ಸಹಜ ಗುಣವಿದೆ. ಇಂತಹ ನೀಲುವನ್ನು ಕಟ್ಟಿಕೊಟ್ಟ ಲಂಕೇಶರಿಗೊಂದು ಸಲಾಮು ಹೇಳುತ್ತಾ, ನೀಲು ಕಾವ್ಯದ ಕೆಲ ಝಲಕ್ ಮೊದಲ ಕಂತಾಗಿ ಕೊಡುತ್ತಿದ್ದೇವೆ; ಸ್ವೀಕರಿಸಿ!


ಲಿಂಗ ಯೋನಿಗಳೆಂಬ
ಮುಗ್ಧ ಅಂಗಗಳಲ್ಲಿ
ಮಾಂತ್ರಿಕ ಶಕ್ತಿಯನ್ನಿಟ್ಟು
ಸಂತಾನಕ್ಕಾಗಿ ಶ್ರಮಿಸುವ
ಪ್ರಕೃತಿಯ ಶ್ರದ್ಧೆಯ ಹೇಗೆ
ತಿಳಿದುಕೊಳ್ಳುವುದು?


ಅಖಂಡ ಬ್ರಹ್ಮಚಾರಿ ಬಸವ
ತನ್ನ ಅಚಲತೆಯ ಬಗ್ಗೆ ಪರೀಕ್ಷೆ ಮಾಡಲು
ಸುರಸುಂದರಿಯ ಎದೆ ಮೇಲೆ
ತಲೆಯನ್ನಿಟ್ಟು
ಆನಂದದಿಂದ ಆ ಪರೀಕ್ಷೆಯಲ್ಲಿ ಫೇಲಾದ


ನನಗೆ ಅತ್ಯಂತ ಸಂಕೋಚದ
ನೆನಪು ಯಾವುದೆಂದರೆ
ನಾನು ನನ್ನ ಪ್ರೀತಿಯ ತಂದೆಗೆ
'ಇನ್ನು ನನಗೆ ಸ್ನಾನ ಮಾಡಿಸಬೇಡ'
ಎಂದು ಲಂಗದಿಂದ
ಸೀರೆಗೆ ಜಾರಿದ್ದು


ನನ್ನ ನಲ್ಮೆಯ ತರುಣ
ನನ್ನ ಸ್ತನವ ಸ್ಪರ್ಶಿಸಲು ಬಿಚ್ಚಿದ
ಹತ್ತು ಬೆರಳಿನ ಹಸ್ತದ
ಬೆಂಕಿ
ಸುಡದೆ ಸೃಷ್ಟಿಸುವುದು ಎಂಥ ವಿಸ್ಮಯ!


ಮಲೆನಾಡಿನಲ್ಲಿ ಹತ್ತು ವರ್ಷಕ್ಕೆ ಹತ್ತು ಮಕ್ಕಳು
ಮಾಡಿದ ಶಿವಪ್ಪ ಮಾಸ್ತರು ವರ್ಗವಾಗುವಾಗ
ಹೆಂಡತಿಯನ್ನು "ಎಲ್ಲಿಗೆ ವರ್ಗವಾಗೋಣ?" ಎಂದಾಗ
ಆಕೆ "ಮೊಳಕೆ ಕೂಡ ಹೊರಡದ ಜಾಗಕ್ಕೆ"
ಎಂದು ಮಂಕಾಗಿ ನಕ್ಕಳು


ಮುನಿದು ನಕ್ಕರೆ, ಮುಟ್ಟಿ ಬೆಚ್ಚಿಸಿದರೆ
ಹೆಡೆ ತೆರೆದು ಕೂರುವ
ನನ್ನವನ ಅಂತರಂಗವ
ಅರ್ಥ ಮಾಡಿಕೊಳ್ಳುವುದೇ
ಮಿಥುನ


ಎಂಭತ್ತರ ಮುದುಕನೊಬ್ಬನಿಗೆ ಬೈದು
"ಇನ್ನೂ ಯೋನಿಯ ಚಿಂತೆಯೇ?" ಎಂದರೆ
"ನನ್ನಮ್ಮ ನನ್ನನ್ನು ಕಿವಿಯಿಂದ ಹಡೆದಿದ್ದರೆ
ಆ ಚಿಂತೆ ಇರುತ್ತಿರಲಿಲ್ಲ" ಅಂದ


ಹುಡುಗನ ದೇಹ ಹುಡುಗಿಗೆ
ಹುಡುಗಿಯ ವಂಕಿಗಳು ಹುಡುಗನಿಗೆ
ಉತ್ಸಾಹ ಹುಟ್ಟಿಸದ ದಿನವೇ
ಪ್ರಳಯ


ಕಾಮುಕನ ಆಲಿಂಗನ
ಕೊಂಚ
ಅಸಹ್ಯವಾದರೂ
ಅದೇ ವಾಸಿ

೧೦
ವೇಶ್ಯೆಯ ಅಂಶವಿಲ್ಲದ
ಯಾವ ಬೆಡಗಿಯೂ
ನೇರವಾಗಿ
"ನಿನ್ನನ್ನು ಪ್ರೇಮಿಸುವೆ"
ಎಂದು ಹೇಳುವುದಿಲ್ಲ