Sunday, February 24, 2008

ಒಂದು ನೀತಿ ಕಥೆ.

ಭರತ ಖಂಡದ ಸಂಪತ್ತಷ್ಟೂ ಅಲ್ಲೇ ಕಾಲ್ಮುರಿದು ಬಿದ್ದಂತೆ ಕಾಣುತ್ತಿದ್ದ ಅರಮನೆ. ರಾಜಾಸ್ಥಾನ ತುಂಬಿ ತುಳುಕುತ್ತಿತ್ತು. ಚಕ್ರವರ್ತಿಯ ವಿಶೇಷ ಸಭೆ. ಅಂದು ನ್ಯಾಯಾದಾನ ನಡೆಯುವ ದಿನ.ರಾಜ್ಯದ ಯಾರೇ ಬೇಕಾದರೂ ರಾಜನೆದುರಿಗೆ ಬಂದು ತಮ್ಮ ಅಹವಾಲು ತೋಡಿಕೊಳ್ಳಬಹುದಿತ್ತು, ತಮಗಾದ ಮಿಸ್ಟೀಕಿಗೆ ನ್ಯಾಯ ಪಡೆಯಬಹುದಿತ್ತು. ಭಟರು ಹಿಡಿದು ತಂದವರು ತಪ್ಪಿತಸ್ಥರೆಂದು ಸಾಬೀತಾದಲ್ಲಿ, ಅವರಿಗೆ ಶಿಕ್ಷೆಯೂ ಗ್ಯಾರೆಂಟಿ.

ಈ ಬಾರಿಯೂ ಎಂದಿನಂತೆ ಜನಸಾಗರ ಹರಿದು ಬಂದಿತ್ತು. ವಂದಿಮಾಘದರು ರಾಜನ ಬಿರುದುಬಾವಲಿಗಳನ್ನು ಹಾಡಿ ಹೊಗಳುತ್ತ ಆಸ್ಥಾನಕ್ಕೆ ಬರಮಾಡಿಕೊಳ್ಳುತ್ತಿದ್ದರೆ, ಜನರ ಉಘೇ ಉಘೇ ಎನ್ನುವ ಘೋಷ ಸುತ್ತೆಲ್ಲ ಮೊಳಗುತ್ತಿತ್ತು. ಕಾನೂನು ತಜ್ಞರು ರಾಜ ಸಿಂಹಾಸನದ ಇಕ್ಕೆಲಗಳಲ್ಲೂ ಸಾಲಾಗಿ ಆಸೀನರಾಗಿದ್ದರು. ರಾಜನು ತನ್ನ ಶ್ವೇತಛತ್ರದಡಿಯಲ್ಲಿನ ಐವರಿ ಸಿಂಹಾಸನದಲ್ಲಿ ಆಸೀನನಾಗುತ್ತಿದ್ದಂತೆ ಜನರೆಲ್ಲ ಆತನಿಗೆ ನಮಸ್ಕರಿಸಿ ತಾವೂ ಸೆಟ್ಲಾದರು.

ರಾಜ ತನ್ನ ಬುದ್ಧಿಮತ್ತೆಯಿಂದ ಫಾಸ್ಟಾಗಿ ನ್ಯಾಯ ತೀರ್ಮಾನ ಮಾಡುತ್ತಿದ್ದರೆ, ನೆರೆದವರೆಲ್ಲ ಮೂಗಿನ ಮೇಲೆ ಬೆರಳಿಟ್ಟು,ಆತನ ಪಾಂಡಿತ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದರು. ಅಲ್ಲಿ, ನ್ಯಾಯ ಪಡೆಯಲು ಬರುತ್ತಿದ್ದವರಿಗಿಂತ, ಚಕ್ರವರ್ತಿಯ ಜಾಣ್ಮೆಯನ್ನು ನೋಡಲು ಬರುತ್ತಿದ್ದವರೇ ಹೆಚ್ಚು.

ಅಂದು ಮಧ್ಯಾಹ್ನದ ಸಮಯ, ಆಗಲೇ ನೂರಾರು ತೀರ್ಮಾನಗಳನ್ನು ಚಕ್ರವರ್ತಿ ನೀಡಿಯಾಗಿತ್ತು. ಆತ ಲಂಚಿಗೆ ತೆರಳಬೇಕು ಅನ್ನುವಷ್ಟರಲ್ಲಿ ರಾಜ ಭಟರು ಮಧ್ಯ ಏಜಿನ ಹೆಣ್ಣುಮಗಳೊಬ್ಬಳನ್ನು ಆತನ ಮುಂದೆ ತಂದು ನಿಲ್ಲಿಸಿದರು. ರಾಜ, "ಏನೀಕೆಯ ಸಮಸ್ಯೆ" ಎಂದು ಕೇಳಲು ಆಕೆಯ ಹಿಂದಿದ್ದ ಹಿರಿಯರೊಬ್ಬರು ಮುಂದೆ ಬಂದು ನಿಂತು, "ಈಕೆ ನಮ್ಮ ಹಳ್ಳಿಯಲ್ಲಿ ಪ್ರಾಸ್ಟಿಟ್ಯೂಷನ್ ನಡೆಸುತ್ತಿದ್ದಾಳೆ ಮಹಾರಾಜ. ನಮ್ಮ ಊರಿನ ಮದುವೆಯಾದ ಗಂಡಸರನ್ನೂ ತನ್ನತ್ತ ಸೆಳೆದುಕೊಂಡು ಸಂಸಾರಗಳಲ್ಲಿ ಒಡಕುಂಟು ಮಾಡುತ್ತಿದ್ದಾಳೆ, ಇವಳಿಂದಾಗೆ ಹಳ್ಳಿಯ ನೆಮ್ಮದಿಯೇ ಹಾಳಾಗಿ ಹೋಗಿದೆ" ಎಂದು ಅಲವತ್ತುಕೊಂಡರು.

ಚಕ್ರವರ್ತಿಯು ಆಕೆಯತ್ತ ಕೆಂಗಣ್ಣ ಬೀರಲು, ಅವಳು ತಲೆ ತಗ್ಗಿಸಿ ನಿಂತಳು. ಆಕೆಯ ಚರ್ಯೆಯಿಂದಲೇ ರಾಜನಿಗೆ ಆಕೆ ತಪ್ಪು ಮಾಡಿರುವುದು ಹೌದು ಎಂದು ಅರಿವಾಯಿತು. ಆದರೂ ಆಕೆಯನ್ನೇ ಕೇಳೋಣ ಎಂದು, "ಎಲೈ ಸ್ತ್ತ್ರೀಯೇ, ನಿನ್ನ ಬಗ್ಗೆ ಈ ಮಹನೀಯರು ಮಾಡುತ್ತಿರುವ ಆಪಾದನೆಗಳ ಬಗ್ಗೆ ನಿನ್ನ ಒಪೀನಿಯನ್ ಏನು" ಎಂದನು. ಆಕೆ , ಮರು ಮಾತಿಲ್ಲದೇ ತಲೆ ಮತ್ತೂ ತಗ್ಗಿಸಿದಳು. ವೇಶ್ಯಾವಾಟಿಕೆ ಆ ರಾಜ್ಯದಲ್ಲಿ ಈ ಚಕ್ರವರ್ತಿಯ ಅಪ್ಪನ ಕಾಲದಲ್ಲೇ ನಿಷೇಧಿತವಾಗಿತ್ತು. ಆನಂತರ ಇಲ್ಲಿಯ ತನಕ ಒಂದೇ ಒಂದು ಅಂತಹ ಘಟನೆ ನಡೆದ ವರದಿಯೂ ಆಗಿರಲಿಲ್ಲ. ಇವನ ಕಾಲದಲ್ಲಿ ಮೊದಲ ಬಾರಿಗೆ ಇಂತಹ ಕೇಸೊಂದು ಬಂದಿತ್ತು. ಅದಕ್ಕಾಗಿಯೇ, ಒಮ್ಮೆಗೇ ಏನನ್ನೂ ಹೇಳಲು ಆತನಿಗೆ ಸಾಧ್ಯವಾಗಲಿಲ್ಲ. ಯಾವ ತರಹದ ಶಿಕ್ಷೆ ನೀಡಬೇಕು ಅನ್ನುವುದೂ ಹೊಳೆಯಲಿಲ್ಲ. ನ್ಯಾಯದಾನ ನೀಡುವಲ್ಲಿ ತೊಡಕುಂಟಾಗುವ ಪರಿಸ್ಥಿತಿ ಬಂತು.

ಆತ ಅರ್ಥಗರ್ಭಿತವಾಗಿ ನ್ಯಾಯಾಂಗ ಪಂಡಿತರುಗಳನ್ನು ನೋಡಿದ. ಅವರಿಗೂ ವಿಷಯದ ಬಿಸಿ ತಟ್ಟಿತು. ಚಕ್ರವರ್ತಿ ನ್ಯಾಯಾಂಗ ಸಂಬಂಧೀ ಗ್ರಂಥ ತನ್ನಿ ಎಂದು ಅವರುಗಳಿಗೆ ಸನ್ನೆ ಮಾಡಿದ .ಭಟನೊಬ್ಬನನ್ನು ಕೂಡಲೇ ಅರಮನೆಯ ಹಿಂದಿರುವ ವಿಶಾಲ ಗ್ರಂಥಾಲಯಕ್ಕೆ ಕಳುಹಿಸಲಾಯಿತು.ಸಬೆಯ ತುಂಬ ಗೌಜಿ ಗದ್ದಲ. ಎಲ್ಲರೂ ಗುಸು ಗುಸು ಮಾತಾಡಿಕೊಳ್ಳಲಾರಂಭಿಸಿದರು. ಆಕೆಗೆ ಏನು ಶಿಕ್ಷೆ ಸಿಗಬಹುದೆಂಬ ಕುತೂಹಲ ಎಲ್ಲರಿಗೂ. ಚಕ್ರವರ್ತಿ ಒಮ್ಮೆ ಸುತ್ತಲೂ ನೋಡಿದ.. ಎಲ್ಲರೂ ಸುಮ್ಮನಾದರು. ಅದೇ ಹೊತ್ತಿಗೆ ಚಕ್ರವರ್ತಿಗೆ ಕಿವಿ ತುರಿಸಿದಂತಾಯಿತು. ಪಕ್ಕದಲ್ಲಿದ್ದ ಸೇವಕನಿಗೆ ಕಿವಿಯ ಕೊಳಕು ತೆಗೆಯೋ ತಾಮ್ರದ ಕಡ್ಡಿ ತರಲು ಹೇಳಿದ ಆತ. ಅವನು ಅತ್ತ ತೆರಳಿ ನಿಮಿಷವೂ ಆಗಿಲ್ಲ, ತುರಿಕೆ ತಡೆಯಲಾರದೇ ಸಿಂಹಾಸನದ ಮೂಲೆಯಿಂದ ಮರದ ಸಣ್ಣ ಚಕ್ಕೆಯೊಂದನ್ನು ಎತ್ತಿ ಕಿವಿಗೆ ಹಾಕಿದ.

ಅದೇ ಹೊತ್ತಿಗೆ ಕೆಳಗೆ ಮೌನವಾಗಿ ನಿಂತಿದ್ದ ಆ ಮಹಿಳೆ , "ಮಹಾರಾಜಾ, ನಾನು ನಿಮ್ಮೊಡನೆ ಎರಡು ಮಾತಾಡಬಹುದೇ " ಎಂದು ಮೆಲ್ಲನೆ ವಿನಂತಿಸಿದಳು. ಚಕ್ರವರ್ತಿಗೆ ಸರ್ಪ್ರೈಸ್ ಅನಿಸಿದರೂ, "ಹುಂ, ಹೇಳುವಂತಳಾಗು" ಅಂದನು. ಆಕೆ ನಿಧಾನವಾಗಿ,
"ರಾಜಾ, ನಿಮಗೆ ಕಿವಿ ತುರಿಕೆಯಾಗಿ, ತುರುಸಿಕೊಳ್ಳಲು ಏನನ್ನೋ ತರಿಸಿಕೊಳ್ಳುವುದರೊಳಗಾಗಿ ಸಿಂಹಾಸನದ ಮರದ ಚೂರನ್ನು ಕಿತ್ತು ಕಿವಿಗಿಟ್ಟುಕೊಂಡಿರಿ. ನನ್ನ ಗಂಡ ಸೈನ್ಯದಲ್ಲಿದ್ದ.. ಯುದ್ಧವೊಂದರಲ್ಲಿ ಸತ್ತು ಒಂಬತ್ತು ವರುಷಗಳಾದವು, ನನ್ನ ಪರಿಸ್ಥಿತಿಯನ್ನೊಮ್ಮೆ ನೀವು ಥಿಂಕ್ ಮಾಡಿ ನೋಡಿ" ಎಂದಳು. ಚಕ್ರವರ್ತಿ, ಮಾತೇ ಬರದೇ ಆಕೆಯನ್ನು ನೋಡುತ್ತ ಕುಳಿತ.

Tuesday, February 5, 2008

ಚಂದ್ರ ಮಂಚಕೆ....

ಚಂದ್ರಮಂಚಕೆ ಬಾ, ಚಕೋರಿ!
ಜೊನ್ನ ಜೇನಿಗೆ ಬಾಯಾರಿದೆ
ಚಕೋರ ಚುಂಬನ!
ಚಂದ್ರಿಕಾ ಮಧುಪಾನ ಮತ್ತ
ಪೀನ ಕುಂಭ ಪಯೋದವಿತ್ತ
ವಕ್ಷ ಪರಿರಂಭನ ನಿಮಿತ್ತ
ನಿರಾವಲಂಬನ!
ಬಾ, ಚಕೋರಿ! ಬಾ, ಚಕೋರಿ!
ಜಾತಕದೊಲು ಬಾಯಾರಿದೆ
ಚಕೋರ ಚುಂಬನ!

ಚರಣನೂಪುರ ಕಿಂಕಿಣೀ ಕ್ವಣ
ಮದನ ಸಿಂಜಿನೀ ಜನಿತ ನಿಕ್ವಣ:
ಚಿತ್ತ ರಂಜನಿ, ತಳುವದೀ ಕ್ಷಣ
ಚಂದ್ರಮಂಚಕೆ ಬಾ, ಚಕೋರಿ!
ಬಾ, ಚಕೋರಿ! ಬಾ, ಚಕೋರಿ!
ಜಾತಕದೊಲು ಬಾಯಾರಿದೆ
ಚಕೋರ ಚುಂಬನ!

ತೆರೆಯ ಚಿಮ್ಮಿಸಿ, ನೊರೆಯ ಹೊಮ್ಮಿಸಿ,
ಕ್ಷೀರಸಾಗರದಲ್ಲಿ ತೇಲುವ
ಬಾಗುಚಂದ್ರನ ತೂಗುಮಂಚಕೆ
ಬಾ, ಚಕೋರಿ! ಬಾ, ಚಕೋರಿ!
ಎದೆ ಹಾರಿದೆ ಬಾಯಾರಿದೆ
ಚಕೋರ ಚುಂಬನ!

ನಿಕುಂಜ ರತಿವನ ಮದನಯಾಗಕೆ
ಅನಂಗ ರಕ್ತಿಯ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ
ಇಕ್ಷು ಮಂಚ ರಸಾಗ್ನಿ ಪಕ್ಷಿಯ
ಅಂಚಂಚು ಚುಂಬನ!
ಬಾ, ಚಕೋರಿ! ಬಾ, ಚಕೋರಿ!
ಚಂದ್ರಮಂಚಕೆ ಬಾ, ಚಕೋರಿ!

ಅದ್ಭುತ ಸಾಲುಗಳಲ್ಲವೇ? ಕುವೆಂಪು ಎಂಬ ರಸಋಷಿಯ ಅಕ್ಷರ ಮಾಯಾಜಾಲಕ್ಕೆಮೋಹಗೊಳ್ಳದ ಮನಸ್ಸೇ ಇಲ್ಲವೇನೋ.. ಆದರೆ, ಕಂಗ್ಲೀಷು ಯುಗದ ಈಗಿನ ಕಾಲದಲ್ಲಿ ಹೀಗೆಲ್ಲ ಚಂದ್ರಮಂಚಕ್ಕೆ ಕರೆದರೆ ಚಕೋರಿಗೆ ಡಿಕ್ಷನರಿಯೇ ತಲೆದಿಂಬಾಗಬೇಕೇನೋ.!
ಈ ಮಧುರ ಗೀತೆಯನ್ನು ಕಳಿಸಿದ್ದು ಗೆಳೆಯ ಅರುಣ. ಥ್ಯಾಂಕ್ಸ್!