Thursday, June 28, 2007

ಹೋಯ್ತು ಪಟೇಲ್ರೇ, ಹೋಯ್ತು...

ಪಟೇಲರಿಗೆ ಸ್ವಲ್ಪ ಖಯಾಲಿ ಜಾಸ್ತಿ. ನೋಡೋಕು ಕಟ್ಟು ಮಸ್ತು ಆಳು. ಅವರ ಅಂತಸ್ತು - ದುಡ್ಡಿನ ಬಲದ ಕಾರಣ ಹಿಂದೆ ಬರೋ ಅಂತವರೂ ಬೇಕಷ್ಟಿದ್ದರು. ಸುಮಾರು ಎಕರೆಗಟ್ಟಲೆ ಗದ್ದೆ, ತೋಟ ಎಲ್ಲ ಇದೆ ಅವರಿಗೆ. ರಾತ್ರಿ ಮಾಳ*ಕಾಯಲು ಹೋಗುವುದು ಅಂದರೆ ಭಾರಿ ಇಷ್ಟ . "ಜೊತೆಗೆ" ಸರಿಯಾದವರು ಇದ್ದರಾಯಿತು. ಯಾರಾದರೂ ಸಿಕ್ಕೇ ಸಿಗುತ್ತಾರೆ.

ಆವತ್ತೂ ಯಾರೋ ಒಬ್ಬಾಕೆ ಸಿಕ್ಕಿದ್ದಳು. ಮಾಳ ಹತ್ತಿ ಕೂತರು. ಮುಂದಿನ ಕಥೆ ಮಮೂಲಿ..

ಕತ್ತಲ ರಾತ್ರಿಯಲ್ಲಿ ಆಕೆ ಚೀರಿದಳು ಸಣ್ಣಗೆ..

"ಹೋಯ್ತು ಪಟೇಲ್ರೇ, ಹೋಯ್ತು..."

ಏನೂ ಮಾಡೂಕಾಗುದಿಲ್ಲ,...ಹೋಗುದ್ ಹೋಗುದೇ ಅಂದ್ರು ಪಟೇಲ್ರು. ಪಾಪ ಅಭ್ಯಾಸವಿಲ್ಲ ಅಂದುಕೊಂಡರು.

ಇಲ್ಲ.. ಹೋಯ್ತು ಹೋಯ್ತು.. ಅಂತ ಆಕೆ ಇನ್ನೊಮ್ಮೆ ಹೇಳುವುದರೊಳಗೇ ಮಾಳ ಮುರಿದುಕೊಂಡು ಬಿತ್ತು.

ಕೆಳಗೆ ಬಿದ್ದ ಪಟೇಲರು, ಬೆನ್ನು ಹಿಡಕೊಂಡು ಹೇಳಿದರಂತೆ,

"ಹೋಗಿದ್ದು ಮಾಳದ ಕಂಬ ಅಂತ ಸಮಾ ಹೇಳೂಕೆಂತ ಆಗಿತ್ತು ನಿಂಗೆ" ಅಂತ.

(* ಮಾಳ ಎಂದರೆ ಹಳ್ಳಿಗಳಲ್ಲಿ ಗದ್ದೆಗಳ ನಡುವೆ ಬಿದಿರು ಕೋಲು- ಅಡಿಕೆ ದಬ್ಬೆಗಳಿಂದ ಮಾಡಿದ ಸಣ್ಣ ರಚನೆ. ಹಂದಿ - ಇತ್ಯಾದಿ ಪ್ರಾಣಿಗಳು ಬೆಳೆ ಹಾಳು ಮಾಡದಂತೆ ರಾತ್ರಿ ಇಡಿ ಕೂತು ಕಾವಲು ಕಾಯುವ ಉದ್ದೇಶಕ್ಕಾಗಿ ಮಾಡಿರುವಂತಹದು.)

Wednesday, June 20, 2007

ಈಗ ಡುಂಡೀರಾಜ್ ಸಮಯ..!

ಹನಿಗವನಗಳ ರಾಜ ಶ್ರೀ ಎಚ್. ಡುಂಡೀರಾಜರ ಒಂದಷ್ಟು ಪೋಲೀ ಹನಿಗಳು:

ಯೋಜನೆ

ನಾವಿಬ್ಬರು
ನಮಗಿಬ್ಬರು
ಮೂರಾಗದಂತೆ ರಬ್ಬರು

ಮಗು

ಎಪ್ಪತ್ತು ವರುಷದ ಮುದುಕ
ಅಪ್ಪನಾದನಂತೆ
ವಿಚಿತ್ರ! ಆದರೂ ನಿಜ.
ಮುದ್ದು ಮುದ್ದಾದ
ಗಂಡು ಮಗು
ಹೆಸರು ವಯಾಗ್ರಜ!

ಆ-ಶ್ರಮ

ಕಟ್ಟಾ ಬ್ರಹ್ಮಚಾರಿಯಾಗಿದ್ದವ
ಪ್ರಸ್ತದ ಮರುದಿನ
ಏದುಸಿರು ಬಿಡುತ್ತಾ ಹೇಳಿದ-
ಅಬ್ಬಾ! ಎಂಥಾ ಶ್ರಮ
ಈ ಗೃಹಸ್ಥಾಶ್ರಮ!

ಅಭಿಪ್ರಾಯ

ಪಾನ ನಿರೋಧ
ಬೇಕೇ? ಬೇಡವೇ?
ಎನ್ನುವ ಚರ್ಚಾಗೋಷ್ಠಿಯಲ್ಲಿ
ಹೇಳಿದನೊಬ್ಬ ಮೆಲುದನಿಯಲ್ಲಿ
ಪಾನ
ನಿರೋಧ
ಎರಡೂ ಇರಲಿ.

ಬದಲಾವಣೆ

ಕಾಶಿ, ರಾಮೇಶ್ವರ
ಎನ್ನುತ್ತಿದ್ದ ತಾತ
ಶುರುಮಾಡಿದ್ದಾನೆ ಈಗ
ಹೊಸ ವರಾತ:
ನೋಡಬೇಕಂತೆ ಸಿಮ್ಲಾ,
ಕಾಶ್ಮೀರ, ಆಗ್ರ
ಎಲ್ಲೋ ಸಿಕ್ಕಿರಬೇಕು
ವಯಾಗ್ರ!

ಲಿಂಗ

ನಲ್ಲ ಪುಲ್ಲಿಂಗ
ನಲ್ಲೆ ಸ್ತ್ರೀಲಿಂಗ
ಏಕಾಂತದಲ್ಲಿ
ಭೇದವೆಲ್ಲಿ?
ಇಬ್ಬರೂ ಒಂದೇ
ಡಾರ್ಲಿಂಗ!

ಹುಟ್ಟು

ಸರತಿ ಸಾಲು
ಶುರುವಾದದ್ದು
ದ್ವಾಪರ ಯುಗದಲ್ಲಿ
ಪಾಂಡುಪುತ್ರರಿಗೆ
ದ್ರೌಪದಿ ನುಡುದಳು-
ಸ್ವಾಮಿ, ಕ್ಯೂ ನಿಲ್ಲಿ.

ಕಿವಿ ಮಾತು

ಆಗಿರಬಹುದು ವೇದಿಕೆಯಲ್ಲಿ
ನೀವು ಜನಪ್ರಿಯ ಕವಿ ಡುಂಡಿ
ಬೆಡ್‍ರೂಮಿನಲ್ಲಿ ಚುಟುಕು ಬೇಡ
ಎಂದಳು ಹೆಂಡತಿ ಕಿವಿ ಹಿಂಡಿ!

ಕದನ ವಿರಾಮ

ಗಂಡ ಹೆಂಡಿರ ಜಗಳ ಉಂಡು ಮಲಗುವ ವರೆಗೆ
ಆಮೇಲೆ ಕತ್ತಿ ಒರೆಗೆ!

ಮುಂದೆ

ಮೊದಲು ಎಲ್ಲರೂ ಮುಂದೆ ಬರುತ್ತಾರೆ
ಸಲಿಗೆ ಕೊಟ್ಟರೆ ಮುಂದುವರಿಸುತ್ತಾರೆ
ಅಕಸ್ಮಾತ್ ಮುಂದೆ ಬಂದರೆ
ಮುಂದೆ ಯಾರು ವರಿಸುತ್ತಾರೆ??

ಪಥ್ಯ

ಒಂದೊಂದು ರೋಗಕ್ಕೆ ಒಂದೊಂದು ಮದ್ದು; ಒಂದೊಂದು ಪಥ್ಯ
ಲೈಂಗಿಕ ರೋಗಕ್ಕೆ ಒಂದೇ ಮದ್ದು- ದಾಂಪತ್ಯ!

ಫ್ಯಾಷನ್

ಏನು ಪ್ರಯೋಜನ
ಇಂಥಾ ಬಟ್ಟೆ ತೊಟ್ಟು?
ಬೇಡವೆಂದರೂ ಎದ್ದು
ತೋರುವುದು- ತೊಟ್ಟು!

ಭಾವೈಕ್ಯ

ಭಾವೈಕ್ಯ ಭಾವೈಕ್ಯ
ಎಲ್ಲಿದೆ ಸ್ವಾಮಿ ಭಾವೈಕ್ಯ?
ಮನೆಗೆ ಹೋಗಿ ನೀವೇ ನೋಡಿ:
ಅಕ್ಕನ ಜೊತೆ ಭಾವ ಐಕ್ಯ!

[ಇಲ್ಲಿಯ ಕೆಲ ಹನಿಗಳನ್ನು ನಮಗಾಗಿ ಕಳುಹಿಸಿಕೊಟ್ಟ ಚಿನ್ಮಯ್ ಶಾಸ್ತ್ರಿ ಅವರಿಗೆ ಧನ್ಯವಾದಗಳು.]

Wednesday, June 6, 2007

ಅವಸ್ರಾಗೋತು ದೀಪು..

ಗೆಳತಿ. ಅವಳ ಊರಿನ ಮೂಲಕ ನಾನು ಎಲ್ಲಿಗೇ ಹೋಗುವುದಿದ್ದರೂ ಅಲ್ಲೊಂದು stop ಇದ್ದೇ ಇರುತ್ತದೆ. ಅವಳು ಮನೆಯಲ್ಲಿರಲಿ, ಇಲ್ಲದಿರಲಿ. ಸಾಮಾನ್ಯವಾಗಿ ಎಲ್ಲಿಗೋ ಹೊರಟುಕೊಂಡೇ ಅಲ್ಲಿಗೆ ಹೋಗುವುದರಿಂದ ಅಲ್ಲಿ ಊಟಕ್ಕಾಗಲೀ ರಾತ್ರಿ ಉಳಿಯುವುದಕ್ಕಾಗಲೀ ಪುರುಸೊತ್ತೇ ಇರುವುದಿಲ್ಲ.
ಒಂದು ಸ್ಟ್ರಾಂಗ್ ಕಾಪಿ, ಆಯಾ ಸೀಸನ್ನಿನ ಚಿಪ್ಸೋ ಚಕ್ಲಿನೋ ಒಂದಿಷ್ಟು, ಬಾಯ್ತುಂಬಾ ಮಾತು, ಕಣ್ಣೀರು ಬರುವಷ್ಟು ನಗು. ಇದು ಎಷ್ಟೋ ವರ್ಷದಿಂದ ನಡೆದುಕೊಂಡು ಬಂದಿದ್ದು.
ಒಮ್ಮೆ ಹೀಗಾಯಿತು:
ಬೇರೆಲ್ಲಿಗೋ ಊಟಕ್ಕೆ ಹೊರಟವನು ಸುಮಾರು ಹನ್ನೊಂದುವರೆಯ ಹೊತ್ತಿಗೆ ಅವರ ಮನೆಗೆ ಹೋದೆ. ಸ್ವಲ್ಪ ಹೊತ್ತು ಹರಟಿ, ಕಾಪಿ ಕುಡಿದು ಹೊರಟೆ. ನನ್ನನ್ನು ಕಳಿಸಲು ಕಂಪೌಡ್ ಗೇಟಿನ ತನಕ ಬಂದ ಗೆಳತಿ ತುಂಬಾ ಬೇಸರದಿಂದ ಹೀಗೆಂದಳು:

"ದೀಪು, ಇವತ್ತು ಬರ್ತಿ ಅವಸ್ರಾಗೋತು. ನೀ ಹೊಕ್ರು ಹೊಕ್ಕಂಗೆ ಆಗಲ್ಲೆ! ಇನ್ನೊಂದಿನ ಪುರ್ಸೊತ್ ಮಾಡ್ಕ್ಯಂಡ್ ಬಾ.. ಅತಾ?... "

ಚೀಪಲ್ಕೊಡ್ತಾರೆ....

ಅಲ್ರೀ, ನಿನ್ನೆ ನಾನು ಕರೀ೦ ಸಾಯಬ್ರದ್ದು ನೋಡ್ಕ೦ಡು ಬ೦ದಿದ್ದೆ ಬಾಯವ್ರೆ. ನಿನ್ನೆ ನೋಡದಾಗ ಚೊಲೋನೇ ಅನ್ನಸ್ತು, ಆದ್ರೂ ಇರ್ಲಿ ಅ೦ತ ಇವತ್ತು ರಾಯರದ್ದೂ ನೋಡ್ಕ೦ಡು ಬ೦ದೆ."ಹ್ಯಾ೦ಗದೆ? ಯಾರದ್ದು ಚೊಲೋ ಅದೆ ಹಾ೦ಗಾದ್ರೆ?"ಖರೇ ಹೇಳಬೇಕು ಎರಡೂ ಚೊಲೋನೇ ಅದೆ. ಕರೀ೦ಸಾಯಬ್ರದ್ದು ಚೊಲೋ ಉದ್ದ೦ದು, ಆದ್ರೆ ಬಣ್ಣ ಸ್ವಲ್ಪ ಡಲ್ಲು."ರಾಯರದ್ದು ಹೆ೦ಗದೆ?"ರಾಯರದ್ದು ಸ್ವಲ್ಪ ಗಿಡ್ಡಾ, ಆದ್ರೆ ಕೆ೦ಪ್ ಕೆ೦ಪಗದೆ. ಬಾಳ್ ಚ೦ದ ಅದೆ ನೋಡ್ಲಿಕ್ಕ೦ತುವಾ."ಹ೦ಗರೆ ನೀವು ಯಾರದ್ದು ಅಡ್ಡಿಲ್ಲ ಮಾಡದ್ರಿ?"ಇಬ್ರದ್ದೂ ಸಮಾ ಬೆಳಕಲ್ಲಿ ಕಯ್ಯಲ್ಲಿ ಹಿಡದು ನೋಡಿದೇನೆ. ರಾಯರದ್ದೇ ಅಡ್ಡಿಲ್ಲಾ ಮಾಡದ್ನೆ, ಯ೦ತಕ್ಕೆ ಅ೦ದ್ರೆ ರಾಯರದ್ದು ಕೆ೦ಪಗೂ ಅದೆ ಮತ್ತೆ ಅವ್ರು ಚೀಪಲ್ಕೊಡ್ತಾರೆ.


{ಹೆ೦ಗಸ್ರಿಬ್ಬರ ಮಾತ್ಕತೆ ಕಿರಾಣಿ ಅ೦ಗಡಿಲ್ಲಿ ಬಿಟ್ಟು ಬೇರೆ ಎಲ್ಲೇ ಅದ್ರೂ ನಾನೂ ನಿಮ್ಮಾ೦ಗೇ ಅ೦ದ್ಕತ್ತಿದ್ದೆ. ಅವ್ರು ಎ೦ತದ್ರ ಬಗ್ಗೆ ಮಾತಾಡಿದ್ದು ಅ೦ತಾ ತಿಳಿದೇ ಹೋದ್ರೆ ಕಮೆಂಟು ಬರೀರಿ, ನಿಮ್ಮ ಸಮಸ್ಯೆ ಪರಿಹರಿಸಲಾಗುವುದು}

Saturday, June 2, 2007

ಬಾಳಿಗೆ ೨೦ ರುಪಾಯಿ

ಈಗತಾನೆ ತೇಜು ಕೊಟ್ಟು ಕಳುಹಿಸಿದ್ದ CD ನೋಡುತ್ತಿದ್ದೆ. ಅದರಲ್ಲಿ ಕೋಡನಕಟ್ಟೆಯ (ಕ್ವಾಣನ್‘ಕಟ್ಟೆ ಹೇಳೇ ಅಭ್ಯಾಸ, ಇರ್ಲಿ..) ದೇವಸ್ಥಾನದ ಮುಂದೆ, ಬಸ್‘ಸ್ಟ್ಯಾಂಡಿನ್ ಬಳಿಯ ಹುಣಸೇ ಮರ ನೋಡಿ ಇದರ ನೆನಪಾಯ್ತು.

ಸುಮಾರು ವರ್ಷಗಳ ಹಿಂದಿನ ಕತೆ. ಕೋಡನಕಟ್ಟೆಯ ಕಲ್ಯಾಣಮಂಟಪದ ಎದುರಿಗೆ (ಹೊಸಬಾಳೆಗೆ ಹೋಗುವ ಒಳದಾರಿ ಶುರುವಾಗುವುದು ಇಲ್ಲಿಂದಲೇ ಎಂದರು ತಪ್ಪಿಲ್ಲ!) ಮೂರು ನಾಲ್ಕು ಹುಣಸೇ ಮರಗಳಿದ್ದವು. ಈಗಲೂ ಇರಬಹುದು! ಸೈಕಲ್ಲು, ಬೈಕು ಆಗೆಲ್ಲಾ ಸ್ವಲ್ಪ ಕಡಿಮೆಯೇ ಇದ್ದ ಕಾರು ಇತ್ಯಾದಿಗಳನ್ನು ನಿಲ್ಲಿಸಲಾಗುತ್ತಿತ್ತು. ಹೀಗೆ ಒಂದು ಮದುವೆಯ ಊಟದ ನಂತರ ಆ ಜಾಗದಲ್ಲಿ ಕತೆ ನಡೆಯುತ್ತಿತ್ತು.
ನೆನಪಿನಲ್ಲಿರುವವರೆಂದರೆ, ಹಳೆಮನೆ ನರಹರಿಯಣ್ಣ ಹಾಗೂ ದೊಡ್ಡೇರಿ ರವಿ ಮಾವ. ಆಗೆಲ್ಲಾ ಹೊಸತಾಗಿದ್ದ ಬಾಳೆ ಲೆಕ್ಕದ ಊಟದ ಕಡೆಗೆ ಮಾತು ಹರಿಯಿತು.
ಮುಂದಿನದನ್ನು ಸಂಭಾಷಣೆಯ ರೂಪದಲ್ಲೇ ಓದಿ.
"ಹೋಯ್.. ಈಗೆಲ್ಲ ಇಲ್ಲು ಬಾಳೆ ಲೆಕ್ಕ ಮಾಡ್ಬುಟಿದ.. ಎಷ್ಟ್ ಜನ ಊಟ ಮಾಡ್ತ್ವ.. ಅದ್ರಮೇಲೆ ದುಡ್ಡು..
ಅಂದಾಜ್ ಎಷ್ಟ್ ಜನ ಬರ್ಗು ಅಂತ ಮೊದ್ಲೆ ಹೇಳಿರ್ ಆತು ಅಷ್ಟೆ.."

"ಯಾವಾಗಿಂದ ಶುರ್ಮಾಡಿದ್ವೊ ಮಾರಾಯ.. ಗೊತ್ತೇ ಇರ್ಲೆ.. ಮತ್ತೆ.. ಹುಡ್ರ್ ಬಾಳಿಗೆ ಬೇರೆ ಲೆಕ್ವಾ??"

"ಅದ್ನೆಲ್ಲಾ ಒಟ್ಟಿಗೆ ಲೆಕ್ಕಕ್ ಹಿಡಿತ್ವಡ... ಕೆಲ್ಸ್‘ದವ್ರಿಗ್ ಕೊಟ್ಟಿದ್ದು.. ಹೊರ್ಗಿದ್ದವ್ರಿಗೆ.. ಹುಶಾರಿಲ್ದಿದ್ದವ್ರಿಗೆ ಅಂತ ಅಚಿಚೆ ಮನೆವ್ರು ಪ್ಲೇಟಲ್ ಹಾಕ್ಯಂಡ್ ತಗಂಡೋಗಿದ್ದು.. ಎಲ್ಲದು ಲೆಕ್ಕ ಅಂತಾತು"

"ಓಹಾ! ಅಲ್ಲ.. ಅದ್ನೇ ಕೇಳಿದೆ.. ಅದ್ಕೇನಾರು ಕಮ್ಮಿ ರೇಟಿದ್ದ ಅಂತ..??"

"ಹಂಗೆಲ್ಲ ಎಂತು ಇಲ್ಯೋ...

ನಿಂಗವ್ ಒಂತುತ್ತುಣ್ಣಿ, ಎರಡ್ತುತ್ತುಣ್ಣಿ..
ಹತ್ತುತ್ತುಣ್ಣಿ ಐವತ್ತುತ್ತುಣ್ಣಿ..
ಕುಂತುಣ್ಣಿ ಇಲ್ಲ ನಿಂತುಣ್ಣಿ..
ಬಾಳಿಗ್ ೨೦ ರುಪಾಯಿ.."