ಕತ್ತಲೆತ್ತಲಡಗಿತೋ
ಗೊತ್ತೇ ಆಗಲಿಲ್ಲವಲ್ಲೋ ಸಖ,
ಬೆತ್ತಲಲ್ಲಿತ್ತೋ ಸುಖ, ಈಗ
ಮೆತ್ತ ಮರೆಯಾಯ್ತೋ ||೧||
ಸುತ್ತ ಕವಿದಿತ್ತೋ, ಮೈಗೆ
ಮೆತ್ತಿಕೊಂಡಿತ್ತೋ ಸಖ, ನೀ-
ನಿತ್ತ ಮುತ್ತಲಿತ್ತೋ
ಮತ್ತು, ಈಗಲೆತ್ತ ಕಳೆಧೋಯ್ತೋ? ||೨||
ಸುತ್ತಿಕೊಂಡಿತ್ತೋ ದೇಹ, ನಿನ-
ಗೊತ್ತಿಕೊಂಡಿತ್ತೋ ಸಖ
ಚಿತ್ತ ಸೂರೆಗೊಂಡಿತ್ತೋ, ಪ್ರೀತಿ
ಚಿತ್ತೆ ಮಳೆಹಾಂಗ ಸುರಿದಿತ್ತೋ ||೩||
ಗತ್ತಿನಿಂದೆಂಬಂತೆ ನೀ
ಒತ್ತರಿಸಿ ಬಂದ ಚಣ
ಬತ್ತಿದಾ ತಿತ್ತಿಯಲಿ ಉತ್ತಿದಂಗಿತ್ತೋ ಒಲವ
ಬಿತ್ತಿದಂಗಿತ್ತೋ ||೪||
ಸತ್ತ ರಾತ್ರಿಯ ಹೆಣ ಕಾಯ್ವ
ಗುತ್ತಿಗೆಯ ಪಡೆದ ರವಿ
ಅತ್ತ ಮೂಡಿರುವಾಗಲಿತ್ತ ಕಾಲ
ಕತ್ತಿ ಮಸೆದಿತ್ತೋ, ಹೊಂಚು ಹಾಕಿ ಕಾದಿತ್ತೋ ||೫||
ಜತ್ತುಕವು ಈ ಸುಖವು,
ಮುತ್ತುಗದ ಹೂವಂತೆ ಬಾಡುವುದು ಬಲುಬೇಗ
ಮತ್ತೆ ಉಳಿಯುವುದು ಬರಿ ಹಾಸಿಗೆಯ ಸುಕ್ಕು;
ಗೊತ್ತಿನಂದದಿ ಇರುಳ ಸುಖದ ಕುರುಹಾಗಿ. ||೬||