ಕೀಲಿಕೈ ಎಲ್ಲಿಹುದು?
-ಕುವೆಂಪು
ಕೀಲಿಕೈ ಎಲ್ಲಿಹುದು ಬಾಗಿಲನು ತೆರೆಯೆ?
ಓ ದ್ವಾರಪಾಲಕನೆ, ಎಲ್ಲಿ ಹೋಗಿರುವೆ?
ದೂರದಿಂ ಬಂದಿಹೆನು; ಬಲು ಬಳಲಿ ನೊಂದಿಹೆನು;
ಕತ್ತಲಲಿ ಸೋತಿಹೆನು ದಾರಿ ನಡೆದು!
ಮುಳ್ಳುಕಲ್ಲನು ತುಳಿದು, ಹಳ್ಳಕೊಳ್ಳವ ಕಳೆದು,
ತುಂಬಿ ಹರಿಯುವ ಹೊಳೆಯ ಹಾದುಬಂದೆ!
ಮುಂಗಾರುಮಳೆಗರೆದು ಚಳಿಯ ತಣ್ಪೇರುತಿದೆ;
ಮೈಗಂಟಿಕೊಂಡಿರುವುದುಟ್ಟ ಸೀರೆ!
ಕೇಶಪಾಶವು ತೊಯ್ದು ಮುಡಿಗೆದರಿಕೊಂಡಿಹುದು;
ಕಂಪಿಪುದು ಕೋಮಲೆಯ ಕುಸುಮ ಕಾಯ!
ಬಿರುಗಾಳಿ ಬೀಸುತಿದೆ; ಕುಡಿಮಿಂಚು ತಳಿಸುತಿದೆ;
ಸಿಡಿಲೆರಗಿ ಬಾನೆಲ್ಲ ಕೆರಳಿರುವುದು!
ಹೊರಗೆಲ್ಲಿಯೂ ಮಲಗೆ ಬೆಚ್ಚನೆಯ ತಾವಿಲ್ಲ;
ತಿಮಿರ ಭಯ ಹೃದಯದೊಳು ಹರಿಯುತಿಹುದು!
ಮಲಗಿರುವನೆನ್ನಿನಿಯನೊಳಗೆ ಬಿಸುಸಜ್ಜೆಯಲಿ;
ಕರೆದರೂ ಕೇಳಿಸದು. ಗುಡುಗುತಿಹುದು!
ಚಳಿಯಿಂದ ಪಾರಾಗುವೆನು ರಮಣನೆಡೆ ಸೇರಿ:
ತೊಯ್ದುಡುಪಿಗಿಂತ ನಗ್ನತೆಯೆ ಲೇಸು!
ಕತ್ತಲಲಿ ಬಂದಿರುವೆ; ತಾಯ್ಮನೆಯನಗಲಿರುವೆ;
ತೊಯ್ದು ಮಳೆಯಲಿ ಕದವ ತಟ್ಟುತಿರುವೆ!
ಬಾಗಿಲನು ಕಾಯದೆಯೆ ನೀನೆಲ್ಲಿ ಹೋಗಿರುವೆ?
ಓ ದ್ವಾರಪಾಲಕನೆ, ಬೇಗ ಬಾರೈ.