ಆಹ್ವಾನ ದೊರೆತಾಯ್ತು
ತಡವೇಕೆ ಇನ್ನ? ಎನ್ನ ಮನದನ್ನ..
ಸವಿಯ ಕುಂಭವ ನೀನು ಮನಸಾರೆ ಮುತ್ತು,
ಪಡೆ ಮನದಣಿಯೆ ಮತ್ತು
ಬಾಯ್ತುಂಬ ಸುಖದ ಕೈತುತ್ತು
ತುಂಬಿಹುದು ಎದೆ ತುಂಬ
ಪ್ರೀತಿ ಅಮೃತ ಧಾರೆ
ಕ್ಷಣ ಕ್ಷಣಕೂ ತಲ್ಲಣ,
ಮಧುರ ಪೇಮದ ಸಿಂಚನ-
ಹನಿ ಹನಿಯಾಗಿ ನೀ ಈ ಪ್ರೀತಿ ರಸ ಹೀರೆ.
ನನ್ನಯ ಎದೆಯರಸ,
ಮಧುರವೀ ರಸನಿಮಿಷ
ಈ ಮೊಗ್ಗಿನಾ ಮಧುವ
ಮೆಲ್ಲ ಮೆಲ್ಲನೆ ಮೆಲ್ಲು
ತನುವ ಮೊಗ್ಗಿದು, ಮನದ ಹೂವರಳಿಸುವುದು
ನನ್ನ ತನು-ಮನಗಳೆರಡನ್ನೂ
ಒಟ್ಟೊಟ್ಟಿಗೇ ಗೆಲ್ಲು
ತಣಿವಾಗಿ ದಣಿ ದಣಿದು
ಮುದವಾಗಿ ಮಣಿ ಮಣಿದು
ಸಾಮೀಪ್ಯದಾ ಸೋನೆ ಸುರಿದು ತೇಲೋಣ
ಸಂತೃಪ್ತಿಯಲಿ.. ಮತ್ತೊಂದು ಜಗದಲ್ಲಿ..
ನಮ್ಮ ತೋಳ್ತೆಕ್ಕೆಯಲಿ..
* *
ಇದು ಅಧಿಕೃತವಾಗಿ ಮೋಟುಗೋಡೆಗೆ ಬಂದ ಮೊದಲ ಮಹಿಳಾ ಎಂಟ್ರಿ! ಇದನ್ನು ಬರೆದು ಕಳುಹಿಸಿರುವುದು ಸಹಬ್ಲಾಗಿಣಿಯೊಬ್ಬರು. ತಮ್ಮ ಹೆಸರನ್ನು ಅನಾಮಿಕವಾಗಿಡುವಂತೆ ಸೂಚಿಸಿದ ಅವರಿಗೆ ಥ್ಯಾಂಕ್ಸ್ ಹೇಳುತ್ತಾ, ಈ ಪ್ರಕ್ರಿಯೆ ಮುಂದುವರೆಯಲಿ ಅಂತ ಹಾರೈಸುತ್ತೇವೆ.