Thursday, April 28, 2011

ರಾಗ - ವಿರಾಗ

  • ಪು.ತಿ. ನರಸಿಂಹಾಚಾರ್

ತೊಡೆಗೆ ತೊಡೆ ಮಸೆವಂತೆ ಕುಳ್ಳಿರು
ತೇನ ಬಯಸುವೆ ರಾಗಿಣಿ?
ಎಲೆ ಬೆಡಗಿ, ಚಿಂದುಳ್ಳ ಹೆಣ್ಣೇ
ನನ್ನ ಜೀವ ವಿರಾಗಿಣಿ -

ತಿರುಗಿಸುವೆ ಮೊಲೆಕೋಡ ನನ್ನೆಡೆ
ಕೋರೆ ನೋಟದಿ ಚುಚ್ಚುವೆ
ತುಟಿ ಕೊನೆಗೆ ನಗೆತಂದು ಚಿವುಟುವೆ
ಸೆರಗ ಸೋಕಿಸಿ ಬೆಚ್ಚುವೆ.

ಓರೆ ಕುಳಿತಂಚಿಗೆಯೆ ಸರಿಯುವೆ
ಕುಲುಕೆ ರಥ ಮೈಲಟಿಸುವೆ
ಮನ್ನಿಸೆನ್ನುವ ತೆರದಿ ಸುಲಿಪಲ್
ತೋರಿ ನಾಣನು ನಟಿಸುವೆ

ಆವ ಭಾರಕೊ ಕುಸಿದ ರೆಪ್ಪೆಯ -
ನೆತ್ತಿ ನೀನಾಕಳಿಸುವೆ
ಮೈಯ ಮುರಿಯುವೆ ತೋಳ್ಗಳೆತ್ತುವೆ
ಹೆಡೆ ಜಡೆಗೆ ಬೆರಳೊತ್ತುವೆ.

ಹೊತ್ತು ಕಟ್ಟಿದೆ ವರುಷ ವರುಷವ
ಪೇರಿಸುತಲೀ ಕೋಟೆಯ
ಒಳಗೆ ನೆಮ್ಮದಿ ಜೀವ - ನಗುತಿದೆ
ಕಾಮನೆಸುಗೆ ಭರಾಟೆಯ.

ಇದ್ದಕಿದ್ದವೋಲೇಕೆ ಸರಿವೆಯೆ
ಬೇರೆಡೆಗೆ ಎಲೆ ಕಾಮಿನಿ?
ಇದ್ದರೂ ನೀನೆದ್ದು ಹೋದರು
ಒಂದೆ ಎನಗೆ ವಿಲಾಸಿನಿ.

ಪರನಾರಿ ಸೋದರತೆ ಮನಸಿಗೆ
ತಟ್ಟೆ ಗುರು ನಿರಪೇಕ್ಷೆಯೋ
ಸೋಂಕನೆಲ್ಲವ ಸ್ತಬ್ಧಗೊಳಿಸುವ
ಮುಪ್ಪೊ? ಹೆಣ್ಣಿನುಪೇಕ್ಷೆಯೋ?

Wednesday, April 20, 2011

ಸುಭಾಷಿತ ಸರಣಿ-೧

ಬಿಲ್ಹಣ ಕವಿ ತನ್ನ ವಿದ್ಯಾಭ್ಯಾಸ ಮುಗಿದ ಬಳಿಕ ಪಾಂಡಿತ್ಯ ಪ್ರದರ್ಶನಕ್ಕೆಂದು ರಾಜನ ಬಳಿಗೆ ಹೋದನಂತೆ. ಆದರೆ ಭಟರು ಬಿಲ್ಹಣನನ್ನು ಒಳಗೆ ಬಿಡಲು ಸುತಾರಾಂ ಒಪ್ಪಲಿಲ್ಲ. ಕಾರಣ ಆತ ಎಂದಿಗೂ ಆಸ್ಥಾನಕ್ಕೆ ಬಂದವನಲ್ಲ. ಈ ಹಿಂದೆ ಆಸ್ಥಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡವನಲ್ಲ. ಭಟರಿಗೆ ಆತನ ಪರಿಚಯವಿಲ್ಲ. ಹೀಗಾಗಿ ಅರಮನೆಯ ಹೊರಗೆ ನಿಂತುಕೊಂಡೇ ಇದ್ದನಂತೆ.


ಆದರೆ ಆಸ್ಥಾನದ ಕಾಯಂ ಪಂಡಿತರು ಮಾತ್ರ ಸರಾಗವಾಗಿ ಆಸ್ಥಾನಕ್ಕೆ ಹೋಗಿ ತಮ್ಮ ಪಾಂಡಿತ್ಯ ಪ್ರದರ್ಶಿಸಿ ರಾಜನಿಂದ ಬಿರುದು, ಸರ, ಚಿನ್ನದ ನಾಣ್ಯಗಳನ್ನು ಪಡೆದು ವಾಪಸ್ ಆಗುತ್ತಿದ್ದರು. ಬಿಲ್ಹಣ ನೋಡುವಷ್ಟು ನೋಡಿದ. ಆತನಿಗೆ ತಡೆಯಲಾಗಲಿಲ್ಲ. ಆತ ಭಟರಿಗೆ ಹೇಳಿದನಂತೆ. “ನೋಡಿ, ನೀವು ನನಗೆ ರಾಜನ ಬಳಿಗೆ ಹೋಗಲು ಬಿಡುತ್ತಿಲ್ಲ. ನನಗೆ ಬೇಸರವಿಲ್ಲ. ಆದರೆ ನನ್ನ ಚಿಕ್ಕದೊಂದು ಕೆಲಸ ಮಾಡಿ ಕೊಡಬಹುದೆ? ನಾನು ನನ್ನ ರಚನೆಯೊಂದನ್ನು ಬರೆದುಕೊಡುತ್ತೇನೆ. ಅದನ್ನು ರಾಜನಿಗೆ ಒಯ್ದು ತೋರಿಸಿ. ಆಮೇಲೆ ರಾಜ ಕರೆದರೆ ನಾನು ಬರುತ್ತನೆ. ಇಲ್ಲದಿದ್ದರೆ ಹೊರಟು ಹೋಗುತ್ತೇನೆ”. ಭಟರು ಬಿಲ್ಹಣ ಬರೆದುಕೊಟಿದ್ದನ್ನು ರಾಜನಿಗೆ ಒಯ್ದು ತೋರಿಸುತ್ತಲೇ, ರಾಜ ಅದನ್ನು ಓದಿ ಸಿಂಹಾಸನದಿಂದ ಎದ್ದು ಓಡೋಡಿ ಅರಮನೆಯ ಹೊರಗೆ ಬಂದು ಬಿಲ್ಹಣನನ್ನು ಅಪ್ಪಿಕೊಂಡು ಸ್ವತಃ ಆಸ್ಥಾನದ ಒಳಗೆ ಕರದೆಕೊಂಡು ಹೋದನಂತೆ. ಬಿಲ್ಹಣ ಹಾಗಾದರೆ ಏನು ಬರೆದಿದ್ದ? ಅದು ಹೀಗಿದೆ.

ರಾಜದ್ವಾರೆ ಭಗಾಕಾರೆ
ವಿಷಂತಿ ಪ್ರವಿಷಂತಿ ಚ
ಶಿಶ್ನವತ್ ಪಂಡಿತಾಸರ್ವೇ
ಬಿಲ್ಹಣೋ ವೃಷಣಾಯತೇ.


(ಅರ್ಥ – ಭಗ (ಯೋನಿ) ಯಾಕಾರದಲ್ಲಿರುವ ರಾಜದ್ವಾರದಿಂದ ಪಂಡಿತರು ಶಿಶ್ನದ ಹಾಗೆ ಒಳಗೆ ಹೊರಗೆ ಸಂಚರಿಸುತ್ತಿದ್ದಾರೆ. ಆದರೆ ಬಿಲ್ಹಣ ಮಾತ್ರ ವೃಷಣದ ಹಾಗೆ ಹೊರಗೆಯೇ ನಿಂತಿದ್ದಾನೆ)

ಕಳಿಸಿದ್ದು:ಸುಘೋಷ್ ನಿಗಳೆ