'ದೇಹವೀಣೆ' ಸಂವಾದದ ಮಾದರಿಯಲ್ಲಿರುತ್ತದೆ. ಓದುಗರ ಸಂದೇಹ, ಆತಂಕ, ಚಿಂತೆ, ವ್ಯಾಕುಲತೆ ಇತ್ಯಾದಿ ಮನೋಗ್ಲಾನಿಗಳಿಗೆ ಸಮಾಧಾನವನ್ನು ನೀಡುವ ಪ್ರಯತ್ನವನ್ನು ಇದು ಮಾಡುತ್ತದೆ. ತುಂಬಾ ಜವಾಬ್ದಾರಿಯನ್ನು ಬೇಡುವ ಇಂಥದೊಂದು ಬ್ಲಾಗ್ ನಡೆಸಲು ನಿನಗಿರುವ ಯೋಗ್ಯತೆ ಏನು ಎಂದು ನೀವು ಕೇಳಬಹುದು. ನನಗೆ ಗೊತ್ತಿದೆ; ಇದು ತುಂಬಾ ರಿಸ್ಕ್. ಈ ರಿಸ್ಕ್ ತೆಗೆದುಕೊಳ್ಳಲು ನಾನು ಸಿದ್ಧವಾಗಿದ್ದೇನೆ. ನಾನು ಮೆಂಟಲ್ ಹೆಲ್ತ್ ಆಪ್ತ ಸಮಾಲೋಚನೆಯಲ್ಲಿ ಡಿಪ್ಲೋಮಾ ಮಾಡಿದ್ದೇನೆ. ಇದೀಗ 'ಲೈಂಗಿಕ ಸಮಸ್ಯೆಗಳು' ಎಂಬ ವಿಷಯದಲ್ಲಿ ಆಪ್ತ ಸಮಾಲೋಚನೆ ತರಬೇತಿ ಪಡೆಯುತ್ತಿದ್ದೇನೆ. ಅಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳ ವೈವಿಧ್ಯತೆಯನ್ನು ಕಂಡು, ಕೇಳಿ ಬೆರಗಾಗಿದ್ದೇನೆ. ಅದರ ಹಿನ್ನೆಲೆಯಲ್ಲಿ ನಾನು ಈ ಬ್ಲಾಗ್ ಆರಂಭಿಸುತ್ತಿದ್ದೇನೆ.
ಇದು ಲೈಂಗಿಕ ಶಿಕ್ಷಣವನ್ನು ತಿಳಿಸುವ, ಹೇಳುವ ಎಲ್.ಕೆ.ಜಿ ಕ್ಲಾಸ್. ಲೈಂಗಿಕ ಶಿಕ್ಷಣ ಎಂದರೆ ಗಂಡು ಹೆಣ್ಣಿನ ಮಿಲನವನ್ನು ಹಸಿ ಹಸಿಯಾಗಿ ಹೇಳುವುದು ಎಂದು ಅನೇಕರು ತಿಳಿದಿದ್ದಾರೆ. ಅದಕ್ಕಾಗಿಯೇ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕೊಡುತ್ತೇವೆಂದು ಸರಕಾರ ಅಂದಾಗ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದು ತಪ್ಪು. ಲೈಂಗಿಕ ಶಿಕ್ಷಣವೆಂದರೆ ಸ್ತೀ ಮತ್ತು ಪುರುಷ ದೇಹ ರಚನೆಗಳನ್ನು ತಿಳಿಸಿಕೊಡುವುದು. ಒಂದು ರೀತಿಯಲ್ಲಿ ಇದು ಬಯಾಲಾಜಿಯ ಕ್ಲಾಸಿದ್ದಂತೆ. ಪರಸ್ಪರ ಆಕರ್ಷಣೆ ಮತ್ತು ಅದರಿಂದಾಗುವ ತೊಂದರೆಗಳು, ಅದಕ್ಕಿರುವ ನಿವಾರಣೋಪಾಯಗಳ ಬಗೆಗೆ ತಿಳಿಸಿಕೊಡುವುದೇ ಲೈಂಗಿಕ ಶಿಕ್ಷಣದ ಉದ್ದೇಶವಾಗಿದೆ.
ಮೇಲಿನ ಎಲ್ಲಾ ಅಂಶಗಳನ್ನು ಮನದಲ್ಲಿಟ್ಟುಕೊಂಡು ಈ ಬ್ಲಾಗನ್ನು ಆರಂಭಿಸಲಾಗಿದೆ. ಇದನ್ನು ಆರೋಗ್ಯಕಾರಿಯಾಗಿ ಮುನ್ನಡೆಸುವ ಜವಾಬ್ದಾರಿಯಲ್ಲಿ ನಿಮ್ಮ ಪಾಲು ಬಹು ದೊಡ್ಡದು. ಬನ್ನಿ, ನಿಮ್ಮ ಸಲಹೆ, ಸಂದೇಹಗಳನ್ನು ನಮ್ಮೊಡನೆ ಹಂಚಿಕೊಳ್ಳಿ; ಸಂವಾದದಲ್ಲಿ ಭಾಗವಹಿಸಿ. ನಿಮ್ಮ ಸಂದೇಹಗಳಿಗೆ ನಮ್ಮ ಪರಿಣಿತ ಪಡೆಯ ಸಹಾಯದಿಂದ ಉತ್ತರಿಸುವ ಪ್ರಯತ್ನ ಮಾಡಲಾಗುವುದು.
ಕನ್ನಡದ ಮಟ್ಟಿಗೆ ಬಹುಶಃ ಇದೊಂದು ಹೊಸ ಪ್ರಯತ್ನ. ಪ್ರಶ್ನೋತ್ತರ ಕಾಲಮ್ಮುಗಳು, ಸಮಾಲೋಚನಾ ಮಾದರಿಯ ಲೇಖನಗಳು ಪತ್ರಿಕೆಗಳಲ್ಲಿ ಇರುವುದು ನೋಡಿದ್ದೀವಿ. ಆದರೆ ಇಂಟರ್ನೆಟ್ ಲೋಕದಲ್ಲಿ, ಕನ್ನಡದಲ್ಲಿ, ಇಂಥದೊಂದು ಪ್ರಯತ್ನ ಬಹುಶಃ ಇನ್ನೂ ಆಗಿರಲಿಲ್ಲ. ಇಂಟರ್ನೆಟ್ಟಿನಂತಹ ಮುಕ್ತ ವೇದಿಕೆ ಇಂತಹ ಪ್ರಯತ್ನಕ್ಕೆ ಅನುಕೂಲವೂ ಹೌದು, ಅನನುಕೂಲವೂ ಅಲ್ಲವೇನಲ್ಲ.
'ದೇಹವೀಣೆ' ಬ್ಲಾಗಿನಲ್ಲಿ ನಿಮ್ಮ ಸಂದೇಹಗಳಿಗೆ ಸ್ಪಂದಿಸಲು ಒಬ್ಬ ಗೈನಕಾಲಾಜಿಸ್ಟ್, ಒಬ್ಬ ಯೂರಲಾಜಿಸ್ಟ್, ಇನ್ನೊಬ್ಬ ನರರೋಗತಜ್ನ ಹಾಗು ಒಬ್ಬ ಸೈಕಾಲಾಜಿಸ್ಟ್ -ಇರುತ್ತಾರಂತೆ. "ಸ್ವಸ್ಥ ಸಮಾಜದ ಸೃಷ್ಟಿಗೆ ಅರೋಗ್ಯವಂತ ಮನಸ್ಸುಗಳ ಅವಶ್ಯಕತೆ ತುಂಬಾ ಇದೆ. ಅದನ್ನು ನಾವೆಲ್ಲಾ ಸೇರಿಯೇ ಕಟ್ಟುವ ಪ್ರಯತ್ನ ಮಾಡೋಣ" -ಎಂಬುದು 'ದೇಹವೀಣೆ'ಯ ಆಶಯ.
'ದೇಹವೀಣೆ'-ಯ ಸ್ವರ ಕೇಳಲು, ಸೋ-ಗೂಡಿಸಲು ಮುಂದಾಗೋಣ.
URL: http://www.dehaveene.blogspot.com/