Tuesday, October 13, 2009

ತುಂಟಿ ನೀಲು -೨

ಲಂಕೇಶರ ನೀಲು ಕಾವ್ಯದ ಮುಂದಿನ ಕಂತು ಇಲ್ಲಿದೆ.

೧೧
ಹುಣಸೆ ಕಾಯಿಗಾಗಿ ಟೊಂಗೆಗೆ ಹಾರುವ ಮುನ್ನ
ಹದಿ ಹರೆಯದ ಮೊಗ್ಗು ಮೊಲೆಯವಳ
ಪುಟ್ಟ ಚರಿತ್ರೆ
ಶುರುವಾಗಿರುತ್ತದೆ

೧೨
ಪ್ರಾಣಿಲೋಕದಲ್ಲಿ
ಹಾದರ ಮತ್ತು ಸೂಳೆಗಾರಿಕೆ
ಪ್ರಾಣಿಗಳ ಪ್ರೇಮದೊಂದಿಗೆ
ಹದವಾಗಿ ಬೆರೆತು
ಬೆದೆಯಾಗಿದೆ

೧೩
ತಣ್ಣಗೆ ಬೆಳೆಯುತ್ತಿದ್ದ
ನಮ್ಮ ಕೇರಿಯ ಕಿಶೋರಿ
ಇದ್ದಕ್ಕಿದ್ದಂತೆ ಕಾಮ ಕೆರಳಿ
ಅದನ್ನು ವ್ಯಕ್ತಪಡಿಸಿದ್ದು
ಅವನತ್ತ ಕೊಂಕುನಗೆ ಬೀರಿ

೧೪
ಮಗುವಿನ ಸ್ಥಿತಿಯಿಂದ ಹೆಣ್ಣಿನ ಸ್ಥಿತಿಗೆ
ಬದಲಾಗುತ್ತಿರುವ ಹುಡುಗಿಯ
ನಡು ಮತ್ತು ಎದೆಯಲ್ಲಿ
ಪ್ರಕೃತಿಯ ಕದನ

೧೫
ಕಾಮೋದ್ವೇಗದ ತರಬೇತಿ
ಹೆತ್ತವರಿಂದ ಆದದ್ದು
ಕೇವಲ
ಗೊಡ್ಡು ಊಹೆ

೧೬
ನೀನು ನನಗೆ ಮುತ್ತಿಡುವಾಗ
ನಿನ್ನ ಬೆರಳು ಮುಟ್ಟಿರುವ ನೆಲ
ನಮ್ಮಂಥ ಎಷ್ಟು ಜನರ
ರೋಮಾಂಚನದಿಂದ ಎಷ್ಟು ಸಲ
ನಡುಗಿರಬಹುದು
ಎಂಬ ಸಣ್ಣ ಆತಂಕ

೧೭
ಕಾಮಿನಿಯ ವರ್ಣಿಸಿದ ಕವಿ
ತನ್ನ ಸಕಲ ವರ್ಣಗಳಿಂದ ಕೂಡ
ಆಕೆಯ
ಲಜ್ಜೆಯ ಕೋಮಲತೆಯ ವರ್ಣಿಸಿಲಾಗದೆ
ಅಸಹಾಯಕನಾದ

೧೮
ಯಾವನ ಹೊಟ್ಟೆ ತುಂಬಿದೊಡನೆ
ಹೃದಯ ಹರೆಯದ ಹುಡುಗಿಯರ
ನಡುವೆ
ಸಂಚರಿಸುವುದೋ
ಆತ ಹುಟ್ಟು ಪೋಲಿ

೧೯
ದಶಕಗಳಿಂದ ನನ್ನನ್ನು ಪ್ರೀತಿಸಿರುವ
ನನ್ನ ಇನಿಯ
ನನ್ನ ಸ್ತನಗಳಲ್ಲಿ ಮುಖ ಇಟ್ಟು
ಅನ್ಯರ ಪಿಸುಮಾತುಗಳಿಗಾಗಿ ಆತಂಕಗೊಂಡು
ಕಂಪಿಸುವನು

೨೦
ದೈವಿಕ ಪ್ರೇಮದ ಕೃತಕತೆ
ಮತ್ತು ದೈಹಿಕ ಪ್ರೇಮದ
ತೆವಲಿನ ನಡುವೆ
ಅಪ್ಪಟ ಸ್ಪಂದನದ ಆಶೆಯ
ಅರ್ಥವಿರುವಂತಿದೆ

4 comments:

sunaath said...

ಹುಡುಗಿ ಬಾಲ್ಯಾವಸ್ಥೆಯಲ್ಲಿಯೇ ಮೈನೆರೆಯುವದು ಒಂದು ದುರಂತ. ಇನ್ನೂ ಹಾಲುಹಲ್ಲು ಬಿದ್ದಿರದ ಅವಳ ಮೊಗ್ಗುಮೊಲೆಗಳನ್ನು ವಯಸ್ಕ ಗಂಡಸರು ದಿಟ್ಟಿಸುತ್ತ fantasize ಮಾಡುವದು ನಾಚಿಕೆಗೇಡು. ಹುಡುಗಿಯ ಬಗೆಗೆ ಹೇಗೆ ಬರೆಯುತ್ತೀರೋ, ಅದೇ ರೀತಿ ಹುಡುಗನ ಬಗೆಗೆ ಏಕೆ
ಬರೆಯುವದಿಲ್ಲ? ನಮ್ಮ ಜಾನಪದರು ಇಂತಹ ಲಿಂಗಭೇದವನ್ನು ಎಂದೂ ಮಾಡಿಲ್ಲ. ಉದಾಹರಣೆಗೆ ಈ ಗಾದೆಮಾತನ್ನು ನೋಡಿರಿ:
"ಮೀಸೆ ಬಂದಾಗ ದೇಶ ಕಾಣೋದಿಲ್ಲ;ಮೊಲೆ ಬಂದಾಗ ನೆಲ ಕಾಣೋದಿಲ್ಲ."
ಈ ಗಾದೆಮಾತಿನಲ್ಲಿ gender discrimination ಇಲ್ಲ. Right?

umesh desai said...

ಸುನಾಥ ಕಾಕಾರ ಕಾಮೆಂಟು ಓದ್ದೆ ಆದ್ರೆ ಒಣಾ ಹುಡುಗ್ರ ಬಗ್ಗೆ ಬರೆದ್ರ ಅದು "ನೀಲು" ಅನಿಸ್ಕೋದಿಲ್ಲ ಅದಕ್ಕ ಲಂಕೇಶ
"ಮೊಲೆಯೊಡತಿ"ಯರನ್ನು ಆರಿಸಿಕೊಂಡಿದ್ದು....!

ಸುಶ್ರುತ ದೊಡ್ಡೇರಿ said...

@ sunaath,

ಕಾಕಾ, ಆಶ್ಚರ್ಯ ಮತ್ತು ಆಘಾತ ಆಯ್ತು ನಿಮ್ಮ ಪ್ರತಿಕ್ರಿಯೆ ನೋಡಿ. ಲಂಕೇಶರು ಅದರಲ್ಲಿ ಏನನ್ನೂ fantasize ಮಾಡಿದಾರೆ ಅಂತ ನಂಗೆ ಅನ್ನಿಸ್ತಿಲ್ಲ. ಮತ್ತೆ ನೀಲು ಕಾವ್ಯದಲ್ಲಿ gender discrimination ಇದೆ ಅಂತೀರಾ?! ಅವನ್ನು ಹೆಣ್ಣುಮಕ್ಕಳೂ ಇಷ್ಟ ಪಡ್ತಾರೆ. ಉದಾಹರಣೆಗೆ ಬಾಗೇಶ್ರೀ ಬರೆದದ್ದು ಓದಿ.

ನೀವು ಅಷ್ಟೆಲ್ಲ harsh ಆದದ್ದು ಯಾಕೆ ಅಂತ ಗೊತ್ತಾಗ್ಲಿಲ್ಲ..

sunaath said...

ಸುಶ್ರುತ,
ಬಾಗೇಶ್ರೀಯವರ ಲೇಖನದ ಲಿಂಕ್ ಕೊಟ್ಟಿದ್ದಕ್ಕಾಗಿ ಸಾವಿರ ಧನ್ಯವಾದಗಳು. ತುಂಬಾ ಚೆನ್ನಾಗಿ ಬರೆದಿದ್ದಾರೆ.
ಇನ್ನು ನನ್ನ ನಿಲುವು ಕಾವ್ಯಕ್ಕೆ ಸಂಬಂಧಿಸಿದ್ದಲ್ಲ; ವಾಸ್ತವತೆಗೆ ಸಂಬಂಧಿಸಿದ್ದು. ನಮ್ಮ ನಗರಗಳಲ್ಲಿ ಮತ್ತು ಹಳ್ಳಿಗಳಲ್ಲಿ ಬಾಲೆಯರು ಹೇಗೆ ಮುಖ ಕೆಳಗೆ ಹಾಕಿಕೊಂಡು ಹೋಗುತ್ತಾರೆ ಮತ್ತು ಅವರನ್ನು ವಯಸ್ಸಾದ ಗಂಡಸರೂ ಸಹ ಹೇಗೆ ಕೆಕ್ಕರಿಸಿ ನೋಡುತ್ತಾರೆ ಎನ್ನುವದು ನಿಮಗೂ ತಿಳಿದಿರುವ ಸಂಗತಿಯೇ. ಹೀಗಾಗಿ ನಾನು ’ಮೊಗ್ಗಿನ ಮೊಲೆ’ಗಳ reference ಬಂದಾಗೆಲ್ಲ excessively sensitive ಹಾಗೂ harshly critical ಆಗಿಬಿಡುತ್ತೇನೆ.
ಉತ್ತಮವಾದ ಕವನಕ್ಕೆ ಈ ತರಹದ ಪ್ರತಿಕ್ರಿಯೆಯನ್ನು ತೋರಿದ್ದಕ್ಕೆ ನನಗೇ ಬೇಜಾರಾಗುತ್ತಿದೆ. ಕ್ಷಮಿಸಿ.