- ಬಿ.ಆರ್. ಲಕ್ಷ್ಮಣರಾವ್
ನೋಡಿದ, ಅವನು ಹೀಗೆ ನೋಡಿದ:
ಒಣಬೇರಿಗೆ ನೀರೂಡುವ ಹಾಗೆ ನೋಡಿದ
ಕೂಡಿದ, ನನ್ನ ಹೀಗೆ ಕೂಡಿದ:
ಹೊಸ ಚೇತನ ನನ್ನಲಿ ಹರಿವಂತೆ ಕೂಡಿದ
ನರಳಿದೆ, ಆಹಾ! ಹೇಗೆ ನರಳಿದೆ?
ಮೈಯ ತುಂಬ ಚಿಗುರು ನಿಮಿರಿದಂತೆ ನರಳಿದೆ
ಅರಳಿದೆ, ಹಿಗ್ಗಿ ಹೇಗೆ ಅರಳಿದೆ?
ಹೂವಿನೋಕುಳಿಯಲ್ಲಿ ಮಿಂದ ಹಾಗೆ ಅರಳಿದೆ.
ಸುರಿಸಿದ, ಒಲವ ಹೇಗೆ ಸುರಿಸಿದ?
ಆಗುಂಬೆಯ ಹುಚ್ಚುಮಳೆಯ ಹಾಗೆ ಸುರಿಸಿದ
ಫಲಿಸಿತು, ನನ್ನೊಳೇನು ಫಲಿಸಿತು?
ಜೊಂಪೆ ಜೊಂಪೆ ಹಣ್ಣು ತೂಗಿ ಜೀವ ಫಲಿಸಿತು.
ತುಂಬಿತು, ಎದೆಯೊಳೇನು ತುಂಬಿತು?
ನೂರು ಹಕ್ಕಿ ಹೈಕಳುಗಳ ಹಾಡು ತುಂಬಿತು
ಆದೆನು, ನಾನು ಏನಾದೆನು?
ಸುತ್ತ ತಂಪು ನೆರಳು ಹರಡಿ ಧನ್ಯಳಾದೆನು.
ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ.
[ಪ್ಲೀಸ್ ನೋಟ್: ಈ ಹಿಂದೆ ಇಲ್ಲಿ ಪ್ರತಿಭಾ ನಂದಕುಮಾರರ ಒಂದು ಕವಿತೆಯನ್ನು ಪೋಸ್ಟ್ ಮಾಡಿದ್ದೆ. ಅದರಲ್ಲಿ, ನಾವು 'ಅಶ್ಲೀಲ' ಎಂದು ಪರಿಗಣಿಸುವ ಎಲ್ಲಾ ಶಬ್ದಗಳೂ ಬಳಕೆಯಾಗಿದ್ದರೂ ಆ ಕವಿತೆ ಅಶ್ಲೀಲತೆಯ ಸೋಂಕಿನಿಂದ ದೂರವಿತ್ತು. ಬಿ.ಆರ್.ಎಲ್.ರವರ ಈ ಕವಿತೆ 'ಪ್ರೀತಿ' ಎಂಬ ಶೀರ್ಷಿಕೆ ಹೊಂದಿದೆಯಾದರೂ ಇದು ಪ್ರಣಯದ ಬಗ್ಗೆ ಬರೆದಿರುವ ಕವಿತೆ. ಯಾವುದೇ ಅಶ್ಲೀಶ ಶಬ್ದವನ್ನೂ ಬಳಸದೆಯೂ 'ಹೇಳಬೇಕಾದ್ದನ್ನೆಲ್ಲ' ಹೇಳಿರುವುದು ಇಲ್ಲಿ ಗಮನಾರ್ಹ. ಪ್ರೀತಿಯ ದಿನದ ಪ್ರೀತಿಯ ಪೋಸ್ಟಿಂಗ್ -ಸು]
2 comments:
ಲಕ್ಷ್ಮಣರಾಯರ ಮುಂದೆ ಬೇರೊಬ್ಬ ಪ್ರೇಮಕವಿಯಿರುವರೇ ಈ ಕಾಲದಲ್ಲಿ?? Great!!!!
@ parisarapremi
100% ಸರಿಯಾಗಿ ಹೇಳಿದ್ರಿ ಪರಿಸರ ಪ್ರೇಮಿಗಳೇ..
Post a Comment