ಸುಮಾರು ಎರಡು ಶತಮಾನಗಳಷ್ಟು ಹಳೆಯ ಕಾಲದ (೧೮೯೩) ಕತೆಯನ್ನೊಳಗೊಂಡಿರುವ, ಸಹ್ಯಾದ್ರಿಯ ದಟ್ಟ ಕಾನನದ ನಡುವೆ ಜರುಗುವ 'ಮಲೆಗಳಲ್ಲಿ ಮದುಮಗಳು' ಎಂಬೀ ಬೃಹತ್ ಕಾದಂಬರಿ, ಆ ಕಾಲದ ಜನರ ಮುಗ್ಧ ಜೀವನಕ್ಕೆ, ಅದರಲ್ಲಿದ್ದ ಸ್ನಿಗ್ಧ ಸೌಂದರ್ಯಕ್ಕೆ ಹಿಡಿದ ಕನ್ನಡಿ. "ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ.. ಇಲ್ಲಿ ಯಾವುದಕ್ಕೂ ಮೊದಲಿಲ್ಲ, ಯಾವುದಕ್ಕೂ ಕೊನೆಯಿಲ್ಲ.. ಇಲ್ಲಿ ವೇಗವೂ ಸಾವಧಾನದ ಬೆನ್ನೇರಿದೆ.." ಎಂದೆಲ್ಲ ಕುವೆಂಪು ಕಾದಂಬರಿಯ ಮೊದಲಿಗೇ ಬರೆದುಕೊಂಡಿದ್ದಾರೆ. ಕನ್ನಡದ 'ಕ್ಲಾಸಿಕ್'ಗಳಲ್ಲೇ ಕ್ಲಾಸಿಕ್ ಕಾದಂಬರಿ ಇದು.
'ಮಲೆಗಳಲ್ಲಿ..' ಕಾದಂಬರಿಯಲ್ಲಿ, ಯಾವ ರೋಮಿಯೋ-ಜ್ಯೂಲಿಯಟ್ ಜೋಡಿಗೂ ಕಮ್ಮಿಯಿಲ್ಲದಂತಹ ಜೋಡಿಯೊಂದಿದೆ. ಅದೇ ಐತ-ಪೀಂಚಲು ಜೋಡಿ! ಆಗಿನ ಕಾಲದ ಗೌಡರ ಜೀತದಾಳುಗಳಾಗಿದ್ದ, ಕಡು ಬಡತನದಲ್ಲೇ ಅತ್ಯಂತ ಸುಖ-ಸಂತಸದ ಬಾಳನ್ನು ಸಾಗಿಸುತ್ತಿದ್ದ ಈ ಆದರ್ಶ ಜೋಡಿ, ತಮ್ಮ ಬಿಡಾರದಲ್ಲಿ ಸಮಾಗಮಗೊಂಡದ್ದನ್ನು ಕುವೆಂಪು ಅದೆಷ್ಟು ಚೆನ್ನಾಗಿ ಬರೆದಿದ್ದಾರೋ ನೀವೇ ಓದಿ ನೋಡಿ:
*
ಪೀಂಚಲು ದೀಪ ಆರಿಸಿ, ಕತ್ತಲೆಯಲ್ಲಿಯೇ ತನ್ನ ಸೀರೆಯನ್ನು ಬಿಚ್ಚಿಟ್ಟು, ಐತನು ಹೊದೆದಿದ್ದ ಕಂಬಳಿಯಡಿ ನುಸುಳಿ, ತನ್ನ ಬತ್ತಲೆ ಮೈಯನ್ನು ಅವನ ಬತ್ತಲೆ ಮೈಗೆ ಒತ್ತಿ, ಚಾಪೆಯ ಮೇಲೆ ಹಾಸಿದ್ದ ಕಂಬಳಿಯ ಮೇಲೆ ಹಾಸಿದ್ದ ತನ್ನದೊಂದು ಹರಕಲು ಸೀರೆಯನ್ನೇ ಮಗ್ಗಲು ಹಾಸಿಗೆಯನ್ನಾಗಿ ಮಾಡಿದ್ದ ಶಯ್ಯೆಯಲ್ಲಿ ಪವಡಿಸಿದಾಗ ಐತನಿಗೆ ಅದು ಹಂಸತೂಲಿಕಾತಲ್ಪವಾಗಿಬಿಟ್ಟಿತ್ತು! ತನ್ನ ಸರ್ವಸ್ವದಿಂದಲೂ ಅವಳ ಸರ್ವಸ್ವವೂ ತಬ್ಬುವಂತೆ ತನ್ನೆರಡು ತೋಳುಗಳಲ್ಲಿ ಅವಳನ್ನು ಬಿಗಿದಪ್ಪಿ, ಕೆನ್ನೆಯ ಮೇಲೆ ಕೆನ್ನೆಯಿಟ್ಟು ಸಮಾಧಿಸ್ತನಾಗಿ ಕರಗಿಯೇ ಹೋದಂತೆ ಸ್ವಲ್ಪ ಹೊತ್ತು ನಿಶ್ಚಲನಾಗಿದ್ದುಬಿಟ್ಟನು. ಆದರೆ ಅವನ ಅಳ್ಳೆ ಹೊಡೆದುಕೊಳ್ಳುತ್ತಾ ಇದ್ದುದು ಅವಳ ಹೊಡೆದುಕೊಳ್ಳುತ್ತಿದ್ದ ಅಳ್ಳೆಗೆ ಆಪ್ಯಾಯಮಾನವಾಗಿ ಅರಿವಾಗುತ್ತಿತ್ತು. ನಾಲ್ಕು ತೊಡೆಗಳೂ ನಾಲ್ಕು ಕೈಗಳೂ ಒಂದನ್ನೊಂದು ಬಿಗಿಯುವುದರಲ್ಲಿ ಸೆಣಸುವಂತಿದ್ದವು. ಅವಳ ಮೆತ್ತನೆಯ ಕುಚಗಳು ತನ್ನ ವಕ್ಷಕ್ಕೆ ಒತ್ತಿದಂತೆಲ್ಲ ಐತನ ಎಡದ ಕೈ ಅವಳ ಬೆನ್ನ ಮೇಲೆ ಆಡುತ್ತಾ ಆಡುತ್ತಾ ಕೆಳಕೆಳಗಿಳಿದು ಅವಳ ಮೃದುಕಠಿಣ ನಿತಂಬಗಳನ್ನು ಸೋಂಕಿ, ಒತ್ತಿ, ಕೈಮುತ್ತನೊತ್ತಿ ಸೊಗಸಿದಾಗ ಅವನ ಪ್ರಜ್ಞೆ, ಜೇನುತುಪ್ಪದ ಕೆರೆಯಲ್ಲಿ ನಾಲಗೆಯಾಗಿ ಮುಳುಗಿ ಲಯವಾಗಿಬಿಟ್ಟಿತು. ಆ ಆನಂದಕ್ಕೆ ಆ ರೋಮಾಂಚನಕ್ಕೆ ಪೀಂಚಲು ಅವಶಳಾಗಿ, ತನ್ನ ಮಾನಸಮಸ್ತದ್ವಾರದ ರತಿಕವಾಟಗಳನ್ನು ಸಂಪೂರ್ಣವಾಗಿ ಅಗಲಿಸಿ ತೆರೆದು, ತನ್ನ ಇನಿಯನ ಮನ್ಮಥಾವಿಷ್ಟ ಪೌರುಷ ಪ್ರವೇಶಕ್ಕೆ ಸುಗಮ ಮಾರ್ಗ ಮಾಡಿಕೊಟ್ಟು, ಆತನ ಸಮಸ್ತ ಪುರುಷಾಕಾರವೂ ತನ್ನೊಳಗೆ ಸಂಮಗ್ನಲಗ್ನವಾಗುವಂತೆ ಸ್ವೀಕರಿಸಿದಳು.
*
ಇನ್ನೇನು ಹೇಳಲಿದೆ? 'ಮಲೆಗಳಲ್ಲಿ..' ಕಾದಂಬರಿಯನ್ನು ಇನ್ನೂ ಓದದವರು ದಯವಿಟ್ಟು ಓದಿ. ಓದಿದವರು ಮತ್ತೊಮ್ಮೆ ಓದಿ!
[ಕುವೆಂಪುರವರ 'ಚಂದ್ರಮಂಚಕೆ ಬಾ ಚಕೋರಿ..' ಹಾಡನ್ನು ಸಧ್ಯದಲ್ಲೇ ನಿರೀಕ್ಷಿಸಿ!]