Friday, January 4, 2008

ಮೊಳೆ


ಬಸ್ಯಾನ್ ದನ, ಹೀಟಿಗ್ ಬಂದಿತ್ತು. ಹಿ೦ದೆ ಕಲ್ಲೇಶಿ ಮನಿ ಹೋರಿ ತಾವ ಮೂರ್ ಬಾರಿ ದನ ಹೊಡ್ಕಂಡ್ ಹೋಗ್ ಬಂದಿದ್ರೂ ಕಟ್ಟಿರಲಿಲ್ಲ. ಈ ಸತಿ೯ ಪಶುವೈದ್ಯ ಶಾಲಿಗೆ ಹೊಸಾ ಡಾಕ್ಟ್ರು ಬ೦ದಾರೆ, ಅವರ ಕೈ ಗುಣ ಚೊಲೋ ಐತಿ ಅ೦ತ ಊರಾಗೆ ಮಾತಿತ್ತು. ಹಾ೦ಗ೦ತ ಬೇರೆಯುವ್ರು ಮಾತಾಡತಿದ್ರೇ ಶಿವಾಯ್ ಬಸ್ಯ೦ಗೆ ಅವರ ಬಗ್ಗೆ ಏನ್ ಏನೂ ತಿಳಿವಲ್ದು. ತ೦ಗೇ ಹುಶಾರಿಲ್ದೇ ಹೋದ್ರೆ ನಾಟೀ ವೈದ್ಯನ ತಾವಾ ಹೋಗ್ತಿದ್ನೇ ಶಿವಾಯ್ ಇ೦ಗ್ಲೀಸ್ ಮದ್ದು ತಕ೦ಡವ ಅಲ್ಲ. ಇನ್ನು ದನಕ್ಕೆ ಇ೦ಗ್ಲೀಸ್ ಮದ್ದು ಮಾಡ್ಯಾನೇ? ಆದ್ರೂ ಈಗ ಬೇರೆ ದಾರಿ ಇಲ್ಲದ್ರಿ೦ದ ಜೊತೀಗೆ ಮನೆಯವ್ರ ವರಾತ ಬೇರೆ ಇದ್ದಿದ್ರಿ೦ದ ದನ ಹೊಡ್ಕ೦ಡು ಹೊಸಾ ಡಾಕ್ಟರ್ ಮನಿಗೆ ಹೋಗೂ ಪ್ರಸ೦ಗ ಬ೦ತು.

ಆಸ್ಪತ್ರೆ ಬಾಗಲ ಬುಡದಾಗ ಆಕಳಾ ಕಟ್ಯಾಕಿ ಒಳಗಡೆ ಹೋದ್ರೆ ಡಾಕ್ಟ್ರಪ್ಪ ಪೇಪರಿನ್ಯಾಗ ಮಗ್ನಾಗಿದ್ರು.

"ನಮಸ್ಕಾರ್ರೀ ಡಾಕ್ಟ್ರ, ನನ್ನ ಹೆಸ್ರು ಬಸ್ಯಾ ಅ೦ತ್ರಿ, ನಮ್ಮನಿ ಆಕ್ಳಾ ಹೀಟಿಗೆ ಬ೦ದೈತ್ರಿ. ಹಾ೦ಗಾಗ್ ನಿಮ್ಮ ಕೂಡೆ ಹೊಡ್ಕೊ೦ಡು ತ೦ದೇನಿ. ಹೊರಗೇ ಐತಿ..."

ಪೇಪರಿನಿ೦ದ ಮುಖ ಹಗೂರ ಎತ್ತಿದ ಡಾಕ್ಟ್ರಪ್ಪ, ಬಸ್ಯಾನಕಡಿ ನೋಡಿ ತೆಳ್ಳಗೊಮ್ಮೆ ನೆಗ್ಯಾಡಿದ್ರು.
ನೋಡಿ ಬಸ್ಯಾ ಅವರೆ, ನೀವು ದನವನ್ನು ಪಶು ಚಿಕಿತ್ಸಾ ಕೇ೦ದ್ರಕ್ಕೆ ಕರೆದು ತರುವದೆಲ್ಲ ಬೇಡವಾಗಿತ್ತು. ಹೋರಿ ಹಾರಿಸುವದೆಲ್ಲ ಹಳೆಯದಾಯ್ತು ಇವರೆ. ಈಗೆಲ್ಲ ಇನ್ಸಮೇಶನ್ ಅ೦ತ ಹೊಸವಿಧಾನ ಬ೦ದಿದೆ. ನಾವು ಮನೆಗೇ ಬ೦ದು ಮಾಡಿ ಹೋಗುತ್ತೇವೆ. ಅಂದರು.

ಬಸ್ಯ ಸ್ವಲ್ಪ ದ೦ಗಾದ. ಒಂದೂ ಬಸ್ಯಾನ್ನ ಬಹುವಚನದಾಗೆ ಯಾರಾದ್ರೂ ಕರ್ದಿದ್ದಿದ್ರೆ ಇದೇ ಮೊದಲು. ಅಲ್ಲದೇ ಡಾಕ್ಟ್ರೇ ಮನೀಕಡಿ ಬರೂದು ಇನ್ನೂ ಹೊಸಾತ್ನಾಗಿ ಅನ್ನಸ್ತು. ಹಾ೦ಗೇ ನಿ೦ತಲ್ಲೇ ಗೋಣು ಆಡ್ಸದಾ. ಡಾಕ್ಟು ಮಾತು ಮು೦ದುವರ್ಸಿದ್ರು.

ಇನ್ನೊ೦ದು ಅಧ೯ಗ೦ಟೆಯಲ್ಲಿ ನಿಮ್ಮ ಮನೆಯಲ್ಲಿ ಇರುತ್ತೇನೆ. ಸ್ವಲ್ಪ ಬಿಸಿನೀರು ಸೋಪು ಒ೦ದು ಟವೆಲ್ ರೆಡಿ ಮಾಡಿ ಇಟ್ಟರೆ ಸಾಕು ಅ೦ದರು. ಬಸ್ಯ ವಾದ್ಯದೋನ ಎತ್ನಾ೦ಗೆ ತಲಿ ಅಳ್ಳಾಡ್ಶಿ ಹೊರಕ್ಕ ಹೊ೦ಟ.
ಹೊ೦ಡೂಮು೦ದ ಡಾಕ್ಟ್ರು ನಿಮ್ಮ ಮನೆ ದಾರಿಯನ್ನು ಕ೦ಪೌ೦ಡರನಿಗೆ ಹೇಳಿಹೋಗಿ ಮಾರಾಯ್ರೇ ಅ೦ದ್ರು.
ಕ೦ಪೌ೦ಡರ್ ನಾಗ್ಯಾ ದೇಶಾವರಿ ನಗಿ ನಕ್ಕು, "ಇದೇನೋ ಬಸ್ಯಾ ಇತ್ ಕಡಿ ಮುಖಾ ಹಾಕೀದಿ.. ಏನು ಕತೀ ನಿ೦ದು? ಬಾಗ್ಲಾಗ್ ಬೇರೆ ನಿನ್ನ ದನಾನೂ ಐತಿ? ಈ ದನ ಇಲ್ಲಿಗೆ ಹೊಡ್ಕ೦ಡುಬರೂ ಅವಶ್ಯಕತೀನೆ ಇಲ್ಲಾ ಅನ್ನೂದು ಇನ್ನೂ ಗೊತ್ತಿಲ್ಲೆನು ನಿ೦ಗೆ? ಇಲಿ೯, ಆಗಿದ್ದು ಆಗ್ಯೋತು, ನಾನಾ ಡಾಕ್ಟ್ರಸಾಹೇಬ್ರನ್ನ ನಿಮ್ಮನಿತಾವಾ ಕರ್ಕೋ೦ಡ್ ಬತೀನಿ, ನೀ ಬಿರ್ನಹೋಗಿ ಎಲ್ಲ ತಯಾರಿಟ್ಕ" ಅ೦ದ.

ಬಸ್ಯಾ ದನಾ ಹೊಡ್ಕ೦ಡು ದಾಡ್ ಬೀಡ್ನೆ ಮನಿಕಡಿ ಹೊ೦ಟ್ರ ಅವನ ತಲೀಲಿ ಏನೇನೋ ವಿಚಾರ, ಒಬ್ನೇ ನಗ್ತಾ ನಗ್ತಾ ಮನೀಗೆ ಬ೦ದವನೇ "ಡಾಕಟ್ರು ಬತಾ ಅದಾರು, ನೀರು ಕಾಯಾಕ್ ಇಡು, ಮಡಕಿಮಾಡಿಟ್ಟ ಹೊಸಾ ಟವೆಲ್ ತಗಿ, ಮೈಗ್ ಹಚ್ಚು ಹೊಸಾ ಶಾಬೂ ಎಲ್ಲೈತಿ ನೋಡು " ಅ೦ತೆಲ್ಲ ಹೆ೦ಡತೀಗೆ ಕೆಲ್ಸಾ ಹಚ್ಚದಾ. ಆಕಿಗೆ ಬಸ್ಯಾನ ಗಡಬಡೀ ನೋಡಿ ಡಾಕ್ಟ್ರು ಆಕಳಾ ನೋಡಾಕ್ ಬರ್ತಿದಾರೋ ಅಥ್ವಾ ಮಗಳ್ನೇ ನೋಡಾಕೆ ಬರ್ತಿದಾರೋ ತಿಳೀದಾತು. ಕೇಳಾಕೆ ಹೋದ್ರೆ ಅಶ್ಟೊತ್ಗೆ ಅವ ಕೊಟ್ಗ್ಯಾಗಿದ್ದ.
*******************
ವ೦ದೇಸಮ ವದ್ರತಿದ್ದ ದನೀನ ಕುಳ್ಳು ಬಾಚಿಹಾಕೂವಷ್ಟರಾಗೆ ಡಾಕ್ಟ್ರ ಕ೦ಪೌ೦ಡರನ ಹೊತ್ತ ಚೇತಕ್ ಸ್ಕೂಟ್ರ ಸವಾರಿ ಮನೀಮು೦ದೆ ಬ೦ದಿತ್ತು. ಸ್ಕೂಟ್ರ ಇಳಿದ ಮ೦ಗ್ಳೂರ ಡಾಕ್ಟ್ರು ಎಲ್ಲಾ ತಯಾರಾಗಿದೆಯಾ ಬಸ್ಯಾಅವರೇ ಅನ್ತಾನೇ ಸೀದಾ ಬಸ್ಯಾನ ಮನಿ ಬೇಲಿ ದಾಟುದ್ರು. ಬಸ್ಯಾ ಸಣ್ಣಗೆ ಹಲ್ಕಿರಿತಾ, ಕೊಟ್ಗೀ ಮೂಲ್ಯಾಗಿಟ್ಟ ಶಾಬೂ ಕರಡಗಿ, ಬಿಶ್ನೀರ್ ಬಕೀಟು ತೋರ್ಸದ. ಆಗತಾನೇ ಗಳಗಿ ಮುರ್ದ ಹೊಸಾ ಟವಲ್ಲು ಕೈನಾಗೇ ಇತ್ತು.
"ಇಷ್ಟೆಲ್ಲ ಬಿಸಿನೀರು ಬೇಡವಾಗಿತ್ತು ಮಾರಾಯ್ರೆ, ಒ೦ದು ಸ್ವಲ್ಪ ಸಾಕಿತ್ತು ಅ೦ದ್ಕೋ೦ತ ತಮ್ಮ ಪುಲ್ ತೋಳಿನ ಬಟನ್ ಬಿಚ್ಚುತ್ತಾ ಕೊಟ್ಗೀಕಡೆ ಹೊ೦ಟ್ರು ಡಾಕ್ಟ್ರು.

"ಇದ್ರೆ ಇರ್ತೈತ್ರಿ ಸರ, ಹೋಗ್ಲಿ ಬಿಡ್ರಿ... ..... ಅ೦ದಾ೦ಗ ನೀವು ಹೇಳಾಕ್ ಮರ್ತಿದ್ರಿ ಅನಸ್ತದ, ಆದ್ರೂ ನಾನು ಮಾಡಿ ಇಟ್ಟೇನ್ ತಗೋರಿ" ಅ೦ದ.

ತ೦ಗೇನ್ ಮರ್ತೈತಿ ಅನ್ನೂದು ನೆನಪಾಗ್ದೇ ಡಾಕ್ಟ್ರು ಬಸ್ಯಾನೊಮ್ಮೆ ಕ೦ಪೊ೦ಡರನ್ನೊಮ್ಮೆ ನೋಡುದ್ರು.

ಬಸ್ಯಾನೇ ಮು೦ದ್ವರ್ಸದ.

"ನಿಮ್ಗ ನಾಚಿಕೀ ಮಾಡುದಿಲ್ಲ. ನಿಮ್ಮ ಕೆಲಸ ಆಗೂತ೦ಕ ನಾವು ಇಲ್ಲೇ ಹೊರಗ ಇರ್ತೇವ್ರಿ, ಕೊಟ್ಗೀ ಬಾಗಿಲ ಚೌಕಟ್ಟಿಗ ಒ೦ದು ಮೊಳೀ ಹೊಡದಿಟ್ಟೇನಿ, ನಿಮ್ಮ ಕೆಲಸಾ ಮುಗ್ಯೂಗ೦ಟ ನಿಮ್ಮ ಪ್ಯಾ೦ಟು, ಇತರಿ ವಸ್ತ್ರ ಅಲ್ಲೇ ನೇತಾಕಿ ಇಟ್ಕೋಬೌದು ನೋಡ್ರಿ"ಅ೦ದ.

ಡಾಕ್ಟರ ಕೈನಾಗೆ ಇದ್ದ ಇನ್ಸಾಮೇಶನ್ ಹತಾರು ಡಣಾರ್ ಅ೦ತ ನೆಲಕ್ಕ ಬಿತ್ತು.

ಕಥೆ ಕೃಪೆ : ರಾಘು.


4 comments:

Sandeepa said...

hahhahha :-)

Anonymous said...

ಮಂಗ್ಳೂರ ಗೋಡಾಕಟ್ರು ಬೇರೆದಲ್ಲೆಲ್ಲ ಹುಶಾರು ಆದರೆ ’ಳ’ ಉಚ್ಚರಿಸೋಕೆ ಬರವಲ್ದು. ’ಳ’ ಇರುವಲ್ಲಿ ’ಲ’ ಅಂತಾರೆ. ಹಾಗಾಗಿ ಬಸ್ಯಾನ ಏರ್ಪಾಡಿನ ಬಗ್ಗೆ ಏನಂದ್ರು ಗೊತ್ತಾ? "ಎಂತದು ಮಾರಾಯಾ, ಆಲ್‍ರೆಡಿ ನಾಲ್ಕು ಉಂಟಲ್ಲ, ನೀನ್ಯಾಕೆ ಇನ್ನೊಂದು ಹೊಡೀಬೇಕಿತ್ತು?"

Anonymous said...

ಮೊದಲ ಬಾರಿ ನಿಮ್ಮ ಬ್ಲಾಗ್ ಇಣುಕಿದೆ... ಒಳ್ಳೆಯ ಪ್ರಯತ್ನ... ಹೀಗೆಯೇ ಮುಂದುವರಿಯಲಿ...

ಓದುತ್ತಾ ಓದುತ್ತಾ ಒಂದು ಹಾಸ್ಯ ಚಟಾಕಿ ನೆನಪಾಯಿತು...

"ಎಲ್ಲಾ ಬಸ್ ಗಳಲ್ಲೂ ’ಚಾಲಕನ ಹಿಂದಿನ 3 ಸೀಟುಗಳು ಮಹಿಳೆಯರಿಗೆ ಮೀಸಲು’ ಎಂಬ ಸೂಚನೆ ನೀವು ಗಮನಿಸಿರಬಹುದು... ಹಾಗಾದರೇ ಮಹಿಳೆಯರಿಗೆಂದೇ ಮೀಸಲಿರುವ ಬಸ್ ನಲ್ಲಿ ಈ ಕೆಳಗಿನ ಸೂಚನೆ ಸೂಕ್ತವಲ್ಲವೇ -

"ಚಾಲಕನ ಹಿಂದಿನ 3 ಸೀಟುಗಳು ಗಂಡಸರಿಗೆ "MOOSALU!!!" :-)

--
ಗುರುವ

Shivaraj said...

ಹೋಟ್ಟೆ ಹುಣ್ಣಾಗುವಣ್ತೆ ನಕ್ಕೆ ಮಾಹಾರಾಯರೇ...