Monday, June 30, 2008

ಸಖಿಯ ಸ್ವಗತ

ಕತ್ತಲೆತ್ತಲಡಗಿತೋ
ಗೊತ್ತೇ ಆಗಲಿಲ್ಲವಲ್ಲೋ ಸಖ,
ಬೆತ್ತಲಲ್ಲಿತ್ತೋ ಸುಖ, ಈಗ
ಮೆತ್ತ ಮರೆಯಾಯ್ತೋ ||೧||

ಸುತ್ತ ಕವಿದಿತ್ತೋ, ಮೈಗೆ
ಮೆತ್ತಿಕೊಂಡಿತ್ತೋ ಸಖ, ನೀ-
ನಿತ್ತ ಮುತ್ತಲಿತ್ತೋ
ಮತ್ತು, ಈಗಲೆತ್ತ ಕಳೆಧೋಯ್ತೋ? ||೨||

ಸುತ್ತಿಕೊಂಡಿತ್ತೋ ದೇಹ, ನಿನ-
ಗೊತ್ತಿಕೊಂಡಿತ್ತೋ ಸಖ
ಚಿತ್ತ ಸೂರೆಗೊಂಡಿತ್ತೋ, ಪ್ರೀತಿ
ಚಿತ್ತೆ ಮಳೆಹಾಂಗ ಸುರಿದಿತ್ತೋ ||೩||

ಗತ್ತಿನಿಂದೆಂಬಂತೆ ನೀ
ಒತ್ತರಿಸಿ ಬಂದ ಚಣ
ಬತ್ತಿದಾ ತಿತ್ತಿಯಲಿ ಉತ್ತಿದಂಗಿತ್ತೋ ಒಲವ
ಬಿತ್ತಿದಂಗಿತ್ತೋ ||೪||

ಸತ್ತ ರಾತ್ರಿಯ ಹೆಣ ಕಾಯ್ವ
ಗುತ್ತಿಗೆಯ ಪಡೆದ ರವಿ
ಅತ್ತ ಮೂಡಿರುವಾಗಲಿತ್ತ ಕಾಲ
ಕತ್ತಿ ಮಸೆದಿತ್ತೋ, ಹೊಂಚು ಹಾಕಿ ಕಾದಿತ್ತೋ ||೫||

ಜತ್ತುಕವು ಈ ಸುಖವು,
ಮುತ್ತುಗದ ಹೂವಂತೆ ಬಾಡುವುದು ಬಲುಬೇಗ
ಮತ್ತೆ ಉಳಿಯುವುದು ಬರಿ ಹಾಸಿಗೆಯ ಸುಕ್ಕು;
ಗೊತ್ತಿನಂದದಿ ಇರುಳ ಸುಖದ ಕುರುಹಾಗಿ. ||೬||

6 comments:

Girish Bhat said...

ಸಕತ್ತಾಗಿದೆ....

Parisarapremi said...

sushruthana rachane na?? i mean, kavana...

Vijaya said...

isnt that simple awesome ...
naanu 2-3 sala bandu ee kavana odde ... its not easy to think and write from a girl's perspective like this ... too good Sush!!!

sunaath said...

ಕವನ ಭಾಳಾ ಚೆನ್ನಾಗಿದೆ. ೪ನೆಯ stanzaದಲ್ಲಿ 'ಬತ್ತಿದಾ ತತ್ತಿ'ಎಂದು ನೀವು ಹೇಳಿದ್ದು ಸರಿಯಲ್ಲ. ಬಹುಶಃ ನಿಮಗೆ ಅನುಭವ ಇಲ್ಲ? 'ಮತ್ತಿನಾ ಹೋರಿ ತಾನು ಬಿತ್ತಿದಾ....' ಎಂದು ಬದಲಾಯಿಸುವದು ಸರಿಯಾದೀತೆ?
ಕೊನೆಯ ನುಡಿಯನ್ನು ಓದುವಾಗ, ಬೇಂದ್ರೆಯವರ ಕವನದ ಒಂದು ಸಾಲು ನೆನಪಿಗೆ ಬಂದಿತು. ಅದು ಹೀಗಿದೆ:
"ಅಮೃತಂತ ಬಾಯಿ ಚಪ್ಪರಿಸತಾವ ಕೇಳಿ ಕಣ್ಣು ಮಿಟಕತದ ರಾತ್ರಿ".

Sushrutha Dodderi said...

giri, vijaya-
Thanx. :-)

parisarapremi-
ಹೌದು ಸ್ವಾಮೀ, ನಂದೇ ರಚನೆ! ;)

sunaath,
ಬತ್ತಿದಾ ತತ್ತಿ ಅಲ್ಲ, ತಿತ್ತಿ (ಚರ್ಮ). ಬತ್ತಿ (ಬಾಡಿ) ಹೋದಂತಾಗಿದ್ದ ತೊಗಲು ಪ್ರೀತಿಬೀಜ ಬಿತ್ತಲ್ಪಟ್ಟು ಚಿಗುರಿತು ಅನ್ನೋ ಭಾವದಲ್ಲಿ ಬರೆದೆ.. ನೀವು ಸೂಚಿಸಿದ ಸಾಲೂ ಚೆನ್ನಾಗಿದೆ; ಹೊಂದುತ್ತದೆ.

ಮತ್ತೆ, ನೀವಂದಿದ್ದು ಸರಿ: ಅನುಭವ ನಿಜಕ್ಕೂ ಇಲ್ಲ! ;)

ಧನ್ಯವಾದ ಕಾಕಾ..

sunaath said...

ಸುಶ್ರುತ,
ತತ್ತಿ ಎಂದು ತಪ್ಪಾಗಿ ಓದಿಕೊಂಡಿದ್ದೆ. ಸರಿದೋರಿದ್ದಕ್ಕಾಗಿ ಧನ್ಯವಾದಗಳು.
ಮತ್ತೊಂದು ಮಾತು ಹೇಳಲೆ?
ನಿಮ್ಮ ಈ ಕವನ,ಚಿತ್ತಾಳರ ಕಾಮಸೂತ್ರ ಕವನಕ್ಕಿಂತ ಎಷ್ಟೊ ಪಟ್ಟು ಚೆನ್ನಾಗಿದೆ.ಅವರ ಕವನದಲ್ಲಿ ರತಿಕ್ರೀಡೆಯ ವರ್ಣನೆಯನ್ನು ಶಿಷ್ಟ ಭಾಷೆಯಲ್ಲಿ ಬರೆಯಲಾಗಿದೆ ಅಷ್ಟೆ. ನಿಮ್ಮ ಕವನದಲ್ಲಿ ರತಿಭಾವನೆ ಮೂಡಿ ಬಂದಿದೆ. ಭಾಷೆ ಭಾವಕ್ಕೆ ಅನಿವಾರ್ಯ.
-ಕಾಕಾ