Thursday, October 16, 2008

ಪ್ರಕೃತಿಯ ಶಾಪ - ೧

ಎರಡನೆಯ ಪಾಠಕ್ಕೆ ಸಿದ್ಧರಾಗಿಪ್ಪಾ.. ಇವತ್ತು ಒಂದು ಕಾಯಿಲೆಯ ಬಗ್ಗೆ ತಿಳಿದುಕೊಳ್ಳೋಣ. (ಇದನ್ನು ಕಾಯಿಲೆಯೆಂದು ಕರೆಯುವುದೋ ಇಲ್ಲವೋ ಎಂಬುದೇ ಇನ್ನೂ ವೈದ್ಯಲೋಕ ತೀರ್ಮಾನಿಸಿಲ್ಲ.)

ಕ್ರಿಸ್ತವರ್ಷ 1600ರ ಆಸುಪಾಸಿನಲ್ಲಿ ವೆಕರ್ ಎಂಬಾತ ಆ ಕಾಲದ ವೈದ್ಯರನ್ನು ಬೆರಗುಗೊಳಿಸಿದ್ದು ತನ್ನ ದೇಹಾಂಗದ ಸ್ಥಿತಿಯ ವರದಿಯಿಂದ. ಆತನಿಗೆ ಎರಡು ಶಿಶ್ನವಿತ್ತು!! ಅಲ್ಲಿಯವರೆಗೂ ವೈದ್ಯಜಗತ್ತು ಮನುಷ್ಯರಲ್ಲಿ ಎರಡು ಶಿಶ್ನವಿದ್ದ ವ್ಯಕ್ತಿಯನ್ನು ಕಂಡರಿತಿರಲಿಲ್ಲ.

ಆತನ ಕೆಲಸ ಕಾರ್ಯಗಳಾದರೂ ಹೇಗೆ? ಬೇರೆ ಅಂಗಗಳ ಕೆಲಸಗಳು, ವಿನ್ಯಾಸಗಳು ಹೇಗೆ, ಏನು ಎತ್ತ ಎಂಬುದನ್ನು ಯೋಚಿಸಿ, ಸಂಶೋಧಿಸಿದಾಗ ಅವರಿಗೆ ಅನೇಕ ಹೊಸ ವಿಷಯಗಳು ತಿಳಿದವು. ಮೂತ್ರಪಿಂಡವಾಗಲೀ, ಗುದದ ಅಂಗಗಳಾಗಲೀ ಎಲ್ಲದರ ಕೆಲಸವೂ ನಕಲಾಗಬೇಕಾಗಿತ್ತು. ಮತ್ತೊಂದು ಸಮಸ್ಯೆಯೆಂದರೆ ಆತನ ಬೆನ್ನುಹುರಿಯು (spinal cord) ಒಡೆದಿತ್ತು. ಸ್ಪೈನಾ ಬಿಫಿಡಾ ಎಂಬುದು ಈ ಸ್ಥಿತಿಯ ಹೆಸರು.

ಮೂತ್ರವಿಸರ್ಜನೆಯನ್ನು ಎರಡು ಶಿಶ್ನದಿಂದಲೂ ಮಾಡಬಹುದಾಗಿತ್ತು. ಆದರೆ ಲೈಂಗಿಕ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಗರ್ಭದಲ್ಲಿದ್ದಾಗಲೇ ಏನಾದರೂ ಏಟು ಬಿದ್ದೋ, ಹಾರ್ಮೋನುಗಳ ವ್ಯತ್ಯಾಸವಾಗೋ, ಅಥವಾ ಜೀನ್‍ಗಳಿಂದಲೋ ಇಂಥಾ ಸ್ಥಿತಿಯನ್ನು ತಲುಪಿದ ಎಂದು ಹೇಳಲಾಗಲಿಲ್ಲ. ಯಾಕೆಂದರೆ ವೆಕರ್ ಈ ವರದಿ ನೀಡಿದ ಮೊದಲ ವ್ಯಕ್ತಿ!

ವಿಶ್ವದಾದ್ಯಂತ ಇಂತಹ ಕೆಲವೇ ಕೇಸುಗಳು ವರದಿಯಾಗಿದ್ದು, ಐವತ್ತು ಲಕ್ಷ ಜನರಿಗೆ ಒಬ್ಬರಿಗೆ ಈ ದೇಹ ಲಕ್ಷಣವು ಒದಗುವುದೆನ್ನಲಾಗಿದೆ.

ವಿಶೇಷವೆಂದರೆ, ಅನೇಕ ಹಾವುಗಳು, ಕ್ರಸ್ಟೇಶಿಯಾಗಳು, ಮತ್ತು ಎಲ್ಲಾ ಕೊಆಲಾ ಕರಡಿಗಳಿಗೆ ಈ ಎರಡು ಶಿಶ್ನವುಳ್ಳ ಸ್ಥಿತಿಯು ಕಂಡುಬರುತ್ತೆ. ಮನುಷ್ಯನಲ್ಲಿ ಮಾತ್ರ ಇದು ಒಂದು ಕಾಯಿಲೆಯೇ ಸರಿ. ಈ ಕಾಯಿಲೆಗೆ ಡೈಫಾಲಿಯಾ ಟೆರಾಟಾ ಎನ್ನುತ್ತಾರೆ.

ಇದು ಎಂಥಾ ಶಾಪವಲ್ಲವೇ?

ಮುಂದಿನ ಪಾಠದಲ್ಲಿ ಬೇರೊಂದು ಶಾಪದ ಬಗ್ಗೆ ತಿಳಿದುಕೊಳ್ಳೋಣ.

-ಅ
16.10.2008
2.20PM

3 comments:

sunaath said...

ಒಂದು ಸಂದೇಹ:
ಎರಡು ಜನನಾಂಗಗಳ ಸಮಸ್ಯೆ ಗಂಡಸರಿಗೆ ಮಾತ್ರವೋ ಅಥವಾ ಹೆಂಗಸರಿಗೂ ಬರುತ್ತದೆಯೋ?
ಹೆಂಗಸರಿಗೂ ಇಂತಹ ಸಮಸ್ಯೆ ಬರಬಹುದಾದರೆ (?!),
ಮಿ. ವೆಕರ್‌ನಿಗೆ ಜೋಡಿ ಹುಡುಕಿಕೊಳ್ಳುವದು ಸಮಸ್ಯೆ ಆಗಲಿಕ್ಕಿಲ್ಲ!

ಸಂಭವಾಮಿ ಯುಗೇ ಯುಗೇ said...

ಲೇಖನ ಚೆನ್ನಾಗಿದೆ. ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿ

Anveshi said...

ನಾನೂ ಗೋಡೆ ಹಾರಿದಾಗ ಬಿದ್ದದ್ದು ಮೋಟುಗೋಡೆಯಾಚೆಗೇ....!!!!

ದೀಪಾವಳಿ ಶುಭಾಶಯಗಳು