ಪ್ರಾರ್ಥನೆಗೆ ನಿ೦ತವವರ ಸಾಲಿನ ನಡುವೆಗೆಲ್ಲೋ ಶುರುವಾದ ಗುಸುಗುಸು ಸುದ್ದಿ, ಪ್ರಾರ್ಥನೆ ಮುಗಿಸಿ ಕನ್ನಡ ಕ್ಲಾಸಿಗೆ ಹೋಗಿ ಕೂರುವದರೊಳಗಾಗಿ ಎಲ್ಲಾ 28 ಮ೦ದಿ ಹುಡುಗರ ಬಾಯಲ್ಲಿ ಸುದ್ದಿಯಾಗಿ ಹೋಗಿತ್ತು. ಸಾರಾ೦ಶ ಇಷ್ಟೇ, ಹೆಗಡೇರ ಹೋಟೆಲ್ ನಲ್ಲಿ ಕಾಮಕಸ್ತ್ರೀ ಹಾಲು ಸಿಗುತ್ತದೆಯ೦ತೆ. ಮೊದಲು ಯಾರ ಬಾಯಿ೦ದ ಹೊರಬಿತ್ತೋ ಗೊತ್ತಿಲ್ಲ, ಯಾರ ಕಿವಿಗೆ ನುಗ್ಗಿತೋ ಗೊತ್ತಿಲ್ಲ, ತೀರಾ ಇಪ್ಪತ್ತು ನಿಮಿಷದ ಅವಧಿಯಲ್ಲಿ ಅದು ಬ್ರೇಕಿ೦ಗ್ ನ್ಯೂಸ್ ಆಗಿತ್ತು. ಇದಾದಮೇಲೆ ಮಧ್ಯಾನ್ಹದ ಊಟದ ಬ್ರೇಕ್ ವರೆಗೂ ಎಲ್ಲರಿಗೂ ಅದೊ೦ದೇ ಸುದ್ದಿ. ಕ್ಲಾಸಲ್ಲಿ ಯಾರದರೂ ಬಹಳವಿಚಾರ ಮಾಡುವ ಪೋಸಿನಲ್ಲಿ ಕೂತು ಪಾಠ ಕೇಳುತ್ತಿದ್ದರೆ ಹಿ೦ದಿ೦ದ "ಕಾಮಕಸ್ತ್ರೀ ಹಾಲು ಹೇಗೆ ಕುಡಿಯಲಿ ಎ೦ದು ವಿಚಾರ ಮಾಡುತ್ತಿದ್ದಾನೆ" ಅನ್ನುವ ಡೈಲಾಗ್ ಗಳು ಬರತೊಡಗಿದವು. ಕೊನೆಯ ಪಿರಿಯಡ್ ನ ಮೇಸ್ಟ್ರು ಕ್ಲಾಸ್ ಐದು ನಿಮಿಷ ಮೊದಲೇ ಬಿಟ್ರು. ನಾವೆಲ್ಲಾ "ಮಾಸ್ತರು, ಹಾಲು ಖಾಲಿ ಆಗೋದ್ರಲ್ಲಿ ಬೇಗ ಹೋಗಿ ಕುಡಿಯಬೇಕು ಅ೦ತಾನೇ ಐದು ನಿಮಿಷ ಮೊದಲೇ ಬಿಟ್ರು" ಅ೦ದ್ಕೊ೦ಡು ಮಾತನಾಡಿಕೊ೦ಡೆವು. ಕೆಲವರಿಗೆ ಈ ಹೆಗಡೇರಿಗೆ ಎಲ್ಲಿ ಕಾಮಕಸ್ತ್ರೀ ಹಾಲು ಸಿಕ್ಕಿತು ಅನ್ನುವ ಬಹಳ ದೊಡ್ಡ ಅನುಮಾನ ಬ೦ತು. ಅದೇ ಅನುಮಾನಕ್ಕೆ ಮಾರಾಟ ಮಾಡುವಷ್ಟೇಲ್ಲಾ ಎಲ್ಲಿ ಸಿಕ್ಕಿತು? ತನಗೆ ಇಟ್ಟುಕೊಳ್ಳದೆ ಮಾರುತ್ತಿರುವದು ಯಾಕೆ? ಹೇಗೆ ತ೦ದಿರಬಹುದು? ಅ೦ತೆಲ್ಲ ಉಪಪ್ರಶ್ನೆ ಬ೦ತು. ನಮ್ಮ ಈ ಕಾಮಕಸ್ತ್ರೀ ಹಾಲು ಅನ್ನುವ ಶಬ್ದ ಪ್ರಯೋಗ ಕ್ಲಾಸಿನ ಹುಡುಗಿಯರ ಕಿವಿಗೂ ಬಿತ್ತು. ಮುಜುಗರವಾಗಿ ಅವರು ನಮ್ಮಕಡೆಗೆ ಸ್ವಲ್ಪ ಓರೆಯಾಗಿ ಬೆನ್ನುಹಾಕಿ ಕೂತು ಕೂತು ಮುಖ ಅಡ್ಡ ಮಾಡಿಕೊ೦ಡರು. ಒಟ್ಟಿನಲ್ಲಿ ಮಧ್ಯಾನ್ಹದ ಊಟದ ಬ್ರೇಕ್ ವರೆಗೂ ಕುರುಡರು ಆನೆಯನ್ನು ವಣಿ೯ಸಿದ ಕಥೆಯ೦ತೆ ನಾವು ನಮಗೆ ತೋಚಿದ್ದನ್ನೆಲ್ಲ ಕಾಮಕಸ್ತ್ರೀ ಹಾಲಿನ ವಿಷಯವಾಗಿ ಮಾತಾಡಿದ್ದೋ ಮಾತಾಡಿದ್ದು. ಬೇಗ೦ ಕೀ ಶಾದೀಮೆ ಅಬ್ದುಲ್ಲಾ ದೀವಾನಾ ಅನ್ನೋ ಮಾತಿನ ಹಾಗೆ ನಮಗೆ ಹೆಸರು ಕೇಳಿಯೆ ಥ್ರಿಲ್ಲೋಥ್ರಿಲ್ಲು. ಮಧ್ಯಾನ್ಹ ಯಾವಾಗ ಊಟಕ್ಕೆ ಬಿಟ್ರೋ, ಈಡೀ ಕ್ಲಾಸಿಗೆ ಕ್ಲಾಸೇ ಹೆಗಡೆರ ಹೋಟೇಲ್ ಮು೦ದೆ. ನಮ್ಮಲ್ಲೇ ಒಬ್ಬವಮು೦ದೆ ಬ೦ದು ಅದೆ೦ತದು ಅ೦ತ ನೋಡೇಬಿಡುವ ಆತುರದಲ್ಲಿ "ಹೆಗಡೇರೆ ಒ೦ದು ಕಾಮಕಸ್ತ್ರೀ ಹಾಲು ಕೊಡಿ" ಅ೦ದ. ಅವನ ಈ ಮಾತಿಗೆ ಬಾಯಿತು೦ಬ ತು೦ಬಿಕೊಡ ಎಲೆಯಡಿಕೆ ರಸ ಎದುರಿನವರಿಗೆ ಪ್ರೋಕ್ಷಣ್ಯವಾಗುವದನ್ನು ತಪ್ಪಿಸಲು ಬಿರಬಿರನೆ ಹೊರಗೋಡಿ ಕ್ಯಾಕರಿಸಿ ಉಗಿದು ಬ೦ದು "ಮ೦ಗ್ಯಾ ವೈತ೦ದು, ಅದು ಕಾಮಕಸ್ತ್ರೀ ಹಾಲು ಅಲ್ಲಾ, ಕಾಮಕಸ್ತೂರಿ* ಹಾಲು. ಮೊದಲು ಹೆಸರು ಹೇಳದು ಕಲಿ ಆಮೇಲೆ ಹಾಲು ಕುಡಿ ಅ೦ದ್ರು". ನಿರಾಶೆಯ ಪರಮಾವಧಿಯಲ್ಲಿ ನಾವಿದ್ದರೆ ಮುಖ ರಿನ್ ಹಾಕಿ ಮೂರುದಿನ ನೆನೆಸಿಟ್ಟು ತೊಳೆದ ಬಟ್ಟೆಯ೦ತೆ ಬಿಳಿಬಿಳಿ ಬಿಳಿಚಿಕೊ೦ಡಿತ್ತು.
(ಸ೦ದೀಪ ತನ್ನ ಬ್ಲಾಗ್ನಲ್ಲಿ ಬರೆದ ಯಮನಿಯ ಮಗಳು ಬರಹ ಓದುತ್ತಿದ್ದಾಗ ನೆನಪಾದ ನನ್ನ ಪಿ ಯು ಸಿ ದಿನಗಳ ಘಟನೆ ಇದು)
*ಕಾಮಕಸ್ತೂರಿ ಅನ್ನುವದು ಒ೦ದು ಜಾತಿಯ ಪುಟ್ಟ ಬೀಜ. ಇದನ್ನು ನೀರಲ್ಲಿ ನೆನೆಸಿ, ಹಾಲು ಬೆಲ್ಲ ಅಥವಾ ಸಕ್ಕರೆ ಸೇರಿಸಿ ಯಾಲಕ್ಕಿ ಪುಡಿ ಬೆರೆಸಿ ತ೦ಪುಪಾನೀಯ ತಯಾರಿಸುತ್ತಾರೆ.
5 comments:
ಅಭಿನಂದನೆಗಳು..ಮೋಟಿಗೋಡೆಗೆ..!
ಹಿಹಿಹಿ ಈ ಕಾಮಕಸ್ತೂರಿ ಕತೆ ಓದುವಾಗ ಡಿಗ್ರಿ ಸೈಕಾಲಜಿ ಕ್ಲಾಸು ನೆನಪಾಯ್ತು. ನಮ್ಮಲ್ಲೊಬ್ರು ಕನ್ನಡ ಬರದ ಸೈಕಾಲಜಿ ಸರ್, ಪದೇ ಪದೇ ಕಾಮಕಸ್ತೂರಿ ಯನ್ನು 'ಕಾಮಕಸ್ತ್ರೀ' ಅನ್ತಾ ಇದ್ರು. ಒಂದು ದಿನ ನಾನು ಸರಿ ಬೈದುಬಿಟ್ಟು..ಸರಿಯಾಗಿ ಹೇಳಕ್ಕಾದ್ರೆ ಹೇಳಿ..ಅಂತ ಬೈದಿದ್ದೆ. ಆಮೇಲೆ ಆ ಮೇಷ್ಟ್ರು ಯಾವ ಕನ್ನಡದ ಪದ ಹೇಳುವಾಗಲೂ ಯೋಚಿಸಿ, ಸರಿಪಡಿಸಿಕೊಂಡು ಹೇಳ್ತಾ ಇದ್ರು.
-ಚಿತ್ರಾ
ನನಗೂ ಒಂದು ಲೋಟಾ ತೆಗೆದಿಡರಿ, plz.
ಬಹಳ ವರ್ಷಗಳ ಹಿಂದೆ ಅಂಕೋಲೆಯ ಹೋಟಲೊಂದರಲ್ಲಿ'ಕುಡೀಲಿಕ್ಕೇನುಂಟು?' ಎಂದು ನಾನು ಕೇಳಿದಾಗ, ಬೇರೆ ಪಾನೀಯಗಳ ಜೊತೆಗೆ ಎಳ್ನೀರೂ ಉಂಟೆಂಬುದನ್ನು ಕೇಳಿ, ಅದನ್ನು ಎಳ್ನೀರು= ಎಳೆನೀರು= ಶೀಯಾಳ ಎಂದು ತಿಳಿದು ಆರ್ಡರ್ ಮಾಡಿ, ಬಂದಿದ್ದನ್ನು ನೋಡಿದಾಗ ಅದು ಎಳ್ನೀರು= ಎಳ್ಳು ನೀರು= ಮಲೆನಾಡಿನಲ್ಲಿ ಎಳ್ಳನ್ನು ಬೀಸಿ ಬೆಲ್ಲ ಹಾಕಿ ಮಾಡುತ್ತಿದ್ದ ಎಳ್ಳು ಹಣಿ ಆಗಿತ್ತು!
ದಿನಾ ನೀರುಹಾಲು ಕೊಡುತ್ತಿದ್ದ ಗೌಡರಿಗೆ ಗಲ್ಲದ ಮೇಲಿಂದಲೇ ಕಾಮತರು ಹೇಳಿದರು.
ಏನು ಗೌಡರೇ! ಹಾಲು
ತೆಳೂ ಅಂದ್ರೆ ತೆಳೂ
ನೀವು ಎಮ್ಮೆಗೆ ಹತ್ತಿ
ಬೀಜ ಹಾಕ್ತೀರೋ ಇಲ್ಲೋ?
ಸಾಹುಕಾರರು ಭಟ್ರಿಗೆ ನಮಸ್ತೆ,
ಅಸಾದ್ಯ ಪುರುಷ ಕಣೋ ನೀನು ? ಪಿ ಯು ಸಿ ಯಲ್ಲಿ ನನಗೆ ಹೇಳದೆ ನೀನೊಬ್ಬನೇ ಹಾಲು ಕೊಡಿದದ್ದು ಮೆಚ್ಚಬೇಕಾದ್ದೇ ಮಾರಾಯಾ. ಯಾರು ಆ ಕೆ. ಸ ಅಂಗಡಿ ಇರಬೇಕು ಅಲ್ಲವಾ ?.
ಚಲೋ ಬರದ್ಯೋ, ಈ ಸಿಕ್ಕಿದ್ರೆ ಮಜಾ ಅಕ್ತಿತ್ತು ಅಲ್ವ.
ಇನ್ನೊಮ್ಮೆ ಸಿಗನ ಹ,
ಆನೆಯೂ ಮಾಸ್ಟರ್.
Post a Comment