-ಗೌತಮ್ ಹೆಗಡೆ
ನಯ ನಾಜೂಕು ಇರದ
ಕಾಡುಮೃಗ ನೀನು
ಒಂದು ಸಣ್ಣನೆ ಅಲರಿನಲೆಗೆ
ತತ್ತರಿಸಿ ಕಂಗೆಡುವ
ತೀರ ನಾಜೂಕು ಲತೆ ನಾನು
ನಿನ್ನ ಬಿರುಸಿಗೆ
ಕಾಮನೆಯ ಹೊನಲು
ಧುಮ್ಮಿಕ್ಕುವ ಪರಿಗೆ
ನಿಸ್ಸಹಾಯಕಳು ನಾನು
ನಿರುತ್ತರಿ ನಾನು
ಸಾಧ್ಯವಾದರೆ
ಒಲುಮೆಯೆಂಬ
ತುಂತುರು ತುಂತುರು ಮಳೆಯಾಗು
ಸುರಿಸುರಿದು ಗುಂಗಾಗು
ಕಣ್ಣಿನಲೇ ನಾಲ್ಕು ಮಾತಾಗು
ತೀರ ಸನಿಹವೇ ಕುಳಿತು
ಬಿಸಿಯುಸಿರನಲಿ ಹಿತವಾಗಿ ತಾಕು
ತನುವ ತಾಕುವ ಮುನ್ನ
ಮನವ ತಾಕಿ ಹದಮಾಡು
ದಕ್ಕುವೆ ನಾನಾಗ ನಿನಗೆ
ನಿಜವಾಗಿ
ಸಿಕ್ಕುವೆ ನಾನಾಗ ನಿನಗೆ
ಇಡಿಯಾಗಿ
ಬಾ ಆಗ
ಬಂದೆನ್ನ ಆಳಕಿಳಿದು ಧ್ಯಾನಸ್ಥನಾಗು
ನೀನೇ ನಾನಾಗಿ
ನಾನೇ ನೀನಾಗಿ...