Showing posts with label ಗೌತಮ್ ಹೆಗಡೆ. Show all posts
Showing posts with label ಗೌತಮ್ ಹೆಗಡೆ. Show all posts

Monday, November 15, 2010

ಗೌತಮನ ಕ್ಷಮಾಯಾಚನೆ!

  • ಗೌತಮ್ ಹೆಗಡೆ
ಮೆಲ್ಲಗೆ ಮೊಳಕೆಯೊಡೆದ ಚಿಗುರು ಮೀಸೆ,
ನಿದಿರೆ ಬಾರದ ಇರುಳಿಗೆ
ನಟ್ಟ ನಡುರಾತ್ರಿ ಎಬ್ಬಿಸಿ
ಕಾಡುವ ಹಾಳು ಚೆಂದದ ಕನಸಿಗೆ
ಅರ್ಥವೇನೆಂದು ಪರಧ್ಯಾನದಿ
ಅಲ್ಲಿ, ಮನೆಯೆದುರ ದಾರಿ ತಿರುವಲ್ಲಿ
ಒಂದು ಹಳದಿ ಮಧ್ಯಾಹ್ನದಿ
ಕಣ್ಣ ನೆಟ್ಟು ಕುಳಿತಾಗ ಬಂದವಳು ನೀನು..

ತುಂತುರು ಹನಿ ಸಿಂಚನವಾಗಿ
ಏನೆಲ್ಲ ಪ್ರಶ್ನೆಗಳಿಗೆ ಉತ್ತರವಾಗಿ,
ಅನರ್ಥದರ್ಥ ಹರೆಯಕ್ಕೆ ಅರ್ಥವಾಗಿ..

ಹಾಗೆ ಕಂಡವಳು ಹಾಗೇ ಹೋಗದೆ ಎನ್ನ ಕಂಡು-
ಒರೆನೋಟದಿ ಕಳ್ಳ ಮಂದಹಾಸವಾಗಿಬಿಟ್ಟೆ.
ನಾ ನಿಂತ ನಿಲುವಲ್ಲಿ ಎನ್ನ ಕಳೆದುಕೊಂಡು,
ನಿನ್ನ ಆ ಮಂದಹಾಸ, ಓರೆನೋಟ
ಎನಗೆ ಸಿಕ್ಕ ರಹದಾರಿಯೆಂದುಕೊಂಡು
ಗಡಿ ದಾಟಿಬಿಟ್ಟೆ.

ನಿದಿರೆ ಬಾರದ ರಾತ್ರಿಯೊಳು,
ಹಿಡಿದು ಕನಸಿನ ಜಾಡು,
ತಿರುಗಿ ಬಾರದಷ್ಟು ದೂರ ದೂರ
ಅಡಿಯಿಂದ ಮುಡಿವರೆಗೆ
ಕಡು ಕಷ್ಟ - ಸುಖದ ದಾರಿಯಲಿ
ದಾರಿ ಮುಗಿಯುವನಕ,
ಕನಸು ಕರಗಿ ನೀರಾಗಿ ನನಸಾಗುವನಕ
ಬೆದೆಗೆ ಬಂದ ಹರೆಯಕೆ ಈಡಾಗಿಬಿಟ್ಟೆ.

ಕ್ಷಮಿಸಿಬಿಡು ಎನ್ನದಲ್ಲದ ತಪ್ಪಿಗೆ..
ಪರವಾನಿಗೆಯ ಹಂಗಿರದೆ
ಎನ್ನ ಮಾನಸದೊಳು ನಿನ್ನಲಿ ಅಲೆದುಬಿಟ್ಟೆ..
ಕ್ಷಮಿಸಿಬಿಡು ಎನ್ನದಲ್ಲದ ತಪ್ಪಿಗೆ..

Thursday, May 6, 2010

ಆಹ್ವಾನ

 -ಗೌತಮ್ ಹೆಗಡೆ
 
ನಯ ನಾಜೂಕು ಇರದ 
ಕಾಡುಮೃಗ ನೀನು
ಒಂದು ಸಣ್ಣನೆ ಅಲರಿನಲೆಗೆ 
ತತ್ತರಿಸಿ ಕಂಗೆಡುವ 
ತೀರ ನಾಜೂಕು ಲತೆ ನಾನು

ನಿನ್ನ ಬಿರುಸಿಗೆ 
ಕಾಮನೆಯ ಹೊನಲು 
ಧುಮ್ಮಿಕ್ಕುವ ಪರಿಗೆ 
ನಿಸ್ಸಹಾಯಕಳು ನಾನು
ನಿರುತ್ತರಿ ನಾನು

ಸಾಧ್ಯವಾದರೆ 
ಒಲುಮೆಯೆಂಬ 
ತುಂತುರು ತುಂತುರು ಮಳೆಯಾಗು
ಸುರಿಸುರಿದು ಗುಂಗಾಗು
ಕಣ್ಣಿನಲೇ ನಾಲ್ಕು ಮಾತಾಗು
ತೀರ  ಸನಿಹವೇ ಕುಳಿತು 
ಬಿಸಿಯುಸಿರನಲಿ ಹಿತವಾಗಿ ತಾಕು
ತನುವ ತಾಕುವ ಮುನ್ನ 
ಮನವ ತಾಕಿ ಹದಮಾಡು
ದಕ್ಕುವೆ ನಾನಾಗ ನಿನಗೆ 
ನಿಜವಾಗಿ
ಸಿಕ್ಕುವೆ ನಾನಾಗ ನಿನಗೆ 
ಇಡಿಯಾಗಿ
ಬಾ ಆಗ 
ಬಂದೆನ್ನ ಆಳಕಿಳಿದು ಧ್ಯಾನಸ್ಥನಾಗು 
ನೀನೇ ನಾನಾಗಿ 
ನಾನೇ ನೀನಾಗಿ...

Monday, February 1, 2010

ಮಿದುವ ಹದ ಮಾಡಿದ ಮುತ್ತು..

-ಗೌತಮ್ ಹೆಗಡೆ


ಚುಕ್ಕಿ ಲೆಕ್ಕ ಕಲಿಸುವೆನೆಂದು
ಆಕಾಶ ನೋಡುವ ಕಲೆಯ
ಹೇಳಿಕೊಡುವೆ ಬಾ ಎಂದು
ಹೊಳೆಯ ದಂಡೆಯ ಹುಣಿಸೆ ಮರದ ಕೆಳಗೆ
ಎದೆಯ ತಾಳದ ಲೆಕ್ಕ ತಪ್ಪಿಸಿ
ಗೋವಿಂದ ಕಲೆ ಕಲಿಸಿದವನು ನೀನು... ...

ಅಂದು ಆ ರಾತ್ರಿ
ನನ್ನೇ ಮರೆತ ನಾನಿದ್ದೆ;
ಎನ್ನೊಡನೆ ನೀನಿದ್ದೆ.
ಹೊಳೆ ನೀರ ಸವರಿ ತೇಲಿ ಬರುತಲಿದ್ದ
ತಂಗಾಳಿಯಿತ್ತು
ಏರಿಳಿವ ಎದೆಯ ಗೂಡಿನ ತುಂಬಾ
ಉಸಿರು ಬೆಚ್ಚಗಾಗಿತ್ತು
ತನುವೆಲ್ಲ ಉಪ್ಪು ಹುಳಿ ಖಾರದ
ಹದವಾದ ಪಾಕವಾಗಿತ್ತು
ನಮ್ಮ ನಡುವೆ ಅರ್ಥವಿಲ್ಲದ ಒಂದಡಿಯ ಅಂತರ
ತೀರ ಸಪ್ಪೆಯಾಗಿತ್ತು..
ಮೌನ ಸಾಕಾಗಿತ್ತು
ಮಾತೂ ಬೇಡವಾಗಿತ್ತು

ಸಾಕಾದ ಮೌನ
ಬೇಡವಾದ ಮಾತಿನ ನಡುವೆ
ಕೈಗೆ ಕೈ ಸೋಕಿ ಅಪ್ಪುಗೆ ಹುಟ್ಟಿತ್ತು,
ಜೊತೆ ಜೊತೆಗೆ ಅಸಂಖ್ಯ ಮುತ್ತು..
ಹಣೆಗೊಂದು
ಕಣ್ಣ ಮೇಲೊಂದು
ತುಟಿಗೊಂದು
ನೀಳ ಕೊರಳ ಮೇಲೊಂದು
ನಾಜೂಕಿನ ಮುತ್ತು..
ಮತ್ತೆ ಎದೆಯ ಮಿದುವಿನಲ್ಲೊಂದು
ಅತಿ ಮಧುರ ಮುತ್ತು
ಮಿದುವನ್ನೊಮ್ಮೆ ಹದ ಮಾಡಿ
ಮುತ್ತು ಮುಂದೆ ಹೊರಟಿತ್ತು
ಇಳಿಜಾರ ಹಾದಿಯಲಿ ಜಾರಿ ಜಾರಿ
ಹೊಕ್ಕಳ ಸರಹದ್ದು ದಾಟಿ
ಮುತ್ತು ಇನ್ನೆಲ್ಲೋ ಸೇರಿತ್ತು..

ನಾನರಳಿ ಸುಖದಲ್ಲಿ ನರಳಿ
ಹೂವಾದೆ
ನೀ ತೃಪ್ತ ದುಂಬಿಯಾದೆ
ನಾ ಬಟ್ಟಬಯಲಾದೆ
ನೀ ಖಾಲಿ ಮುಗಿಲಾದೆ...

Saturday, November 7, 2009

ಗೌತಮ ಬರೆದ ಬಾ ಚಕೋರಿ..

'ಗುಡ್ ನೈಟ್' ಕವನಗಳಿಂದ ಬ್ಲಾಗೋದುಗರ ಮೆಚ್ಚುಗೆ ಗಳಿಸಿದ್ದ 'ಅಮ್ಮಾ ಎಂಬ ಮಾತಿಗಿಂತ' ಬ್ಲಾಗಿನ ಗೌತಮ್ ಹೆಗಡೆ, ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ! ತನ್ನ ಪುಟ್ಟಿಗೆ ಗುಡ್ ನೈಟ್ ಹೇಳಿ ಮಲಗಿಸಿದ್ದು ಇನ್ನು ಸಾಕು ಎಂದಂದುಕೊಂಡ ಗೌತಮ್, ಪೆನ್ನಿಗೆ ಕುವೆಂಪುವನ್ನು ಆವಾಹಿಸಿಕೊಂಡು ಒಂದು ಕವನ ಬರೆದಿದ್ದಾನೆ. ಧೈರ್ಯ ಮಾಡಿ, 'ಬಾ ಗೆಳತಿ, ಇನ್ನೂ ತಡವೇಕೆ..' ಎಂದು ತನ್ನ ಗೆಳತಿಗೆ ಆಹ್ವಾನವಿತ್ತಿದ್ದಾನೆ.

ತನ್ನದೇ ಬ್ಲಾಗಿನಲ್ಲಿ ಹಾಕಿಕೊಳ್ಳಲು ಹಿಂಜರಿದು ಮೋಟುಗೋಡೆ ಟೀಮಿಗೆ ಕಳುಹಿಸಿದ ಈ ಕವನವನ್ನು ಗೌತಮ್‌ಗೊಂದು ಥ್ಯಾಂಕ್ಸ್ ಮತ್ತು ಗುಡ್‌ಲಕ್ ಹೇಳುತ್ತಾ ಪ್ರಕಟಿಸುತ್ತಿದ್ದೇವೆ. ಗೌತಮನ ಪ್ರಯತ್ನವನ್ನು ನೀವೂ ಪ್ರೋತ್ಸಾಹಿಸಿ. ;)

* * *

ಇರುಳೆಂಬ ಮಾಯೆ ಬಾನೇರಿದೆ..
ಕಣ್ಣ ಹರವಿನಲಿ ಕಳ್ಳ ಕಾಮನೆಯ
ಪೂರ್ಣ ಶಶಿ ಬಿಂಬ ಮೂಡಿದೆ.
ಬಾ ಗೆಳತಿ,
ಪ್ರಣಯ ಕಡಲೊಳು
ತನುವ ನೌಕೆ ಇಳಿಬಿಟ್ಟು
ಅನಂಗರತಿ ಜೋಡಿಯ
ಅನಾದಿ ಜಾಡಲಿ
ಅನಂಗ ನಾ ರತಿ ನೀನಾಗಿ
ಉಬ್ಬು ತಗ್ಗುಗಳ
ರೋಚಕ ತಿರುವುಗಳ
ಏರಿಳಿವ ದಾರಿಯಲಿ
ತೇಲಿ ತೇಲಿ ಅಲ್ಲಲ್ಲಿ ಮುಳುಗಿ
ಈಜಿ ಈಜಿ ರಸಕಡಲ ಸೀಳಿ
ದೂರ ಗಮ್ಯ ಸೇರುವ.

ಬಾ ಗೆಳತಿ,
ಮನದ ನೂರು ದುಗುಡಗಳೆಲ್ಲ
ಮೊದಮೊದಲೆಂಬ ಭಯವೆಲ್ಲ
ಬೆವರಾಗಿ ಹನಿಯಲಿ.
ಕಿಬ್ಬೊಟ್ಟೆಯಾಳದ ಕನವರಿಕೆಯಲ್ಲ
ಹಿರಿಕಿರಿಯ ಸುಖದ ಝೇಂಕಾರದಲೆಯಾಗಿ ಹೊಮ್ಮಿ
ಸುತ್ತಲ ನೀರವ
ಹಾಗೆ ಸುಮ್ಮನೆ ಕದಡಲಿ.
ರೋಮ ರೋಮದಿ ಮಿಂಚು ಮುಸುಕಿ
ನರನಾಡಿ ಮೆಲುವಾಗಿ ಮೀಟಲಿ.
ನಡೆಯಲಿ ತನು ಮಥನ
ಬಾಳ ನಿಜ ಸುಧೆಗಾಗಿ
ಬಹಿರಂಗ ಅಂತರಂಗದೊಳು ಲೀನವಾಗಿ
ಜೀವರಸ ಚಿಮ್ಮಲಿ.

ಬಾ ಗೆಳತಿ ,
ಇನ್ನೂ ತಡವೇಕೆ?
ಸುಮ್ಮನೆ ಇರುಳು ಸುರಿದು ಸರಿಯುತಿದೆ
ವ್ಯರ್ಥವಾಗಿ.
ಬಾರೆ ಬಾ ಬೇಗನೆ
ಮಣಿಯುವ ಪ್ರಕೃತಿ ಸಹಜಕೆ ತಲೆಬಾಗಿ...