ಸಿದ್ದಪ್ಪ ದೊಡ್ಡ ಬ್ಯುಸಿನೆಸ್ ಮನ್. ದಿನಾ ಸಿಕ್ಕಾಪಟ್ಟೆ ಕೆಲಸ, ಮನೆಗೆ ಬರೋದು ಮಧ್ಯರಾತ್ರಿ ಕಳೆದ ಮೇಲೆಯೇ. ಗಂಡ ದಿನಾ ಹುಚ್ಚಾಪಟ್ಟೆ ಕೆಲಸ ಮಾಡಿ ಸುಸ್ತಾಗಿ ಬರೋದು ನೋಡಿ ಹೆಂಡತಿಗೂ ಬೇಜಾರು. ಆದರೇನು ಮಾಡೋದು?, ದೊಡ್ಡ ಹುದ್ದೆಗೆ ಹೋದ ಮೇಲೆ, ಜವಾಬ್ದಾರಿಗಳೂ ಹೆಚ್ಚುತ್ತವೆಯಲ್ಲ?..
ಸಿದ್ದಪ್ಪನಿಗಿದ್ದ ಏಕೈಕ ಹವ್ಯಾಸ ಅಂದರೆ ಅಪರೂಪಕ್ಕೊಮ್ಮೆ ಗಾಲ್ಫ್ ಆಡೋಕೆ ಹೋಗೋದು. ಅದು ಅವನ ಹೆಂಡತಿಗೂ ಗೊತ್ತು. ಎಲ್ಲಾದರೂ ವೀಕೆಂಡುಗಳಲ್ಲು ಸಿದ್ದಪ್ಪನವರು ಗಾಲ್ಫ್ ಕಿಟ್ ತಗೊಂಡು ಹೊರಬಿದ್ದರೆ ಮತ್ತೆ ಬರೋದು ರಾತ್ರಿಗೇ. ಪಾಪ, ಗಂಡ ಕೆಲ ಬಾರಿ ಶನಿವಾರ ಭಾನುವಾರಗಳಲ್ಲೂ ತನ್ನ ಜೊತೆ ಇರಲ್ಲ ಎಂಬ ಬೇಜಾರು ಇದ್ದರೂ, ವಾರವಿಡೀ ಕೆಲಸ ಮಾಡಿರುತ್ತಾರೆ ಸುತ್ತಾಡಿಕೊಂಡು ಬರಲಿ ಅನ್ನೋದು ಪತಿವೃತಾ ಶಿರೋಮಣಿ ಪತ್ನಿಯ ಅಭಿಪ್ರಾಯ.
ಆದರೆ ಇತ್ತೀಚಿಗೆ ಕೆಲ ದಿನಗಳಿಂದ ಸಿದ್ದಪ್ಪನವರು ಗಾಲ್ಫ್ ಕಡೆಗೂ ತಲೆ ಹಾಕಿರಲಿಲ್ಲ. ದಿನಾ ರಾತ್ರಿ ಎರಡು ಗಂಟೆ ಮೇಲೆಯೇ ಆಗಮನ, ಮತ್ತೆ ಗೊರಕೆ. ಯಾಕೋ ಸಂಸಾರ ಜೀವನದ ಸಾರ ಗಂಡನ ಬೋರಲು ಬಿದ್ದ ಬೆನ್ನು ನೋಡಿಯೇ ಕಳೆದು ಹೋಗುತ್ತಿರುವುದನ್ನ ಅರಿತ ಪತ್ನಿ ಇದಕ್ಕೇನಾದರೂ ಪರಿಹಾರ ಹುಡುಕಬೇಕು ಅಂತ ನಿರ್ಧಾರ ಮಾಡಿದಳು.
ಅವಳ ಲೇಡೀಸು ಕ್ಲಬ್ಬಿನ ಮಿತ್ರೆಯೊಬ್ಬಳು, ನೋಡು ಗಂಡನ ಲೈಫನ್ನ ನೀನೇ ಸರಿ ಮಾಡಬೇಕು.. ಅವರಿಗೆ ಜೀವನದಲ್ಲಿ ಬೇರೇ ಲವಲವಿಕೆಯ ವಿಚಾರಗಳು ಇರುತ್ತವೆ ಅನ್ನೋದನೂ ತೋರಿಸಬೇಕು ಅಂದಳು ಮತ್ತು ಅದಕ್ಕೆ ಸರಿಯಾದ ಸಲಹೆಗಳನ್ನೂ ಕೊಟ್ಟಳು- ಸಿದ್ದಪ್ಪಾವ್ರನ್ನ ಮೊದಲು ಈ ಪಬ್ಬು ಗಿಬ್ಬಿಗೆ ಕರ್ಕೊಂಡು ಹೋಗು, ಅಲ್ಲೆಲ್ಲ ಹುಡುಗ್ರು - ಹುಡ್ಗೀರು ಅವರ ಕುಣಿತ-ಕುಡಿತ ಇದೆಲ್ಲ ನೋಡಿ ಅವರಿಗೊಂದು ಹುಮ್ಮಸ್ಸು ಬರಬೋದು, ಅವರಿಗೂ ಸ್ವಲ್ಪ ತಗೋಳೋ ಹಾಗೆ ಮಾಡು, ಮೊದಲಿಗೆ ಸ್ವಲ್ಪ ಕಷ್ಟ ಅನ್ನಿಸಿದ್ರೂ ಆಮೇಲಾಮೇಲೆ ಅಭ್ಯಾಸ ಆಗತ್ತೆ ಅಂತ.
ಜೈ ತಗಳಪ, ಸಿದ್ದಪ್ಪನವರು ಈ ಶುಕ್ರವಾರ ಮನೆಗೆ ಬರೋದನ್ನೇ ಕಾಯ್ತಿದ್ದ ವೈಫು, ಲಕಲಕ ಡ್ರೆಸ್ಸು ಮಾಡಿಕೊಂಡಿದ್ದಳು. ಸಿದ್ದಪ್ಪಾವರು ಏನಿದು ವಿಚಾರ ಅಂತ ಕೇಳೋಕೆ ಮುನ್ನವೇ, ಅವರ ಟೈ ಕಿತ್ತು ಹಾಕಿ ಎಳಕೊಂಡು ಹೊರಟೇ ಬಿಟ್ಟಳು. ದಾರಿಯಲಿ ಸಿಕ್ಕಿದ ಯಾವುದೋ ಕ್ಯಾಬು ಹತ್ತಿ ಮೊದಲೇ ತಿಳಕೊಂಡಿದ್ದ ನಗರದ ಉತ್ತಮ ಪಬ್ಬೊಂದರ ಹೆಸರನ್ನ ಡ್ರೈವರಿಗೆ ವದರಿದಳು. ಅದನ್ನ ಕೇಳಿದ್ದೇ ಸಿದ್ದಪ್ಪನವರು ಆಘಾತಕ್ಕೊಳಗಾಗಿ ಎಲ್ಲಿಗೆ ಹೊರಟಿದ್ದೇವೆ ಎಂದು ಕೇಳಿದಾಗ , ಹೀಗೀಗೆ, ಸುಮ್ಮನೇ ರಿಲ್ಯಾಕ್ಸ್ ಆಗೋಕೆ.. ಅಂತೆಲ್ಲ ಶಾರ್ಟ್ ಅಂಡ್ ಸ್ವೀಟ್ ಆಗಿ ವಿಚಾರ ತಿಳಿಸಿ ಸುಮ್ಮನಾದಳು. ಪಕ್ಕದಲ್ಲಿ ಕೂತಿದ್ದ ಸಿದ್ದಪ್ಪನವರು ಸಿಕ್ಕಾಪಟ್ಟೆ ಕೊಸರಾಡುತ್ತಿದ್ದರೂ, ಅಸಮಾಧಾನದಲ್ಲಿ ಗೊಣಗಾಡುತ್ತಿದ್ದರೂ ಈಕೆ ಕ್ಯಾರೇ ಅನ್ನಲಿಲ್ಲ.
ಝಗಮಗ ಮಿಂಚುತ್ತಿದ್ದ ಪಬ್ಬಿನ ಹೊರಗೆ ನಿಂತ ಸಿದ್ದಪ್ಪನವರು ಅಲ್ಲಿಂದ ವಾಪಾಸು ಹೋಗೋಕೆ ಹವಣಿಸುತ್ತಿದ್ದಾಗಲೇ ಅವರ ಧರ್ಮಪತ್ನಿ ಅವರನ್ನು ಒಳಗೆಳೆದುಕೊಂಡು ಹೊರಟೇ ಬಿಟ್ಟಳು, ಹೊಸ ಕನಸುಗಳ ಲೋಕ ತೆರೆದೇ ಬಿಟ್ಟಿದೆ ಎಂಬ ಆಸೆಯಲ್ಲಿ. ಅಷ್ಟರಲ್ಲಿ ಒಂದು ಅಚ್ಚರಿ ಸಂಭವಿಸಿತು.ಬಾಗಿಲಲ್ಲೇ ಇದ್ದ ದಪ್ಪ ಮೀಸೆಯ ಟೊಪ್ಪಿವಾಲ ಸಿದ್ದಪ್ಪರನ್ನ ನೋಡಿ, ಟಪ್ ಅಂತ ಕಾಲೆತ್ತಿ ಸೆಲ್ಯೂಟ್ ಹೊಡೆದು, ವೆಲ್ಕಂ ಸಿದ್ದಪ್ಪಾ ಸರ್ ಅಂದುಬಿಡಬೇಕೇ?!
ಹೆಂಡತಿಗೆ ಸಣ್ಣಗೆ ಆಘಾತ! ಸಿದ್ದಪ್ಪನವರು ಕೂಡಲೇ , ಹೆ ಹೆ ಇವನು ಕಣೇ.. ಇವನು ಸೋಮ ಅದೇ ನಾನು ಗಾಲ್ಫ್ ಆಡ್ತೀನಲ್ಲ, ಅಲ್ಲಿ ಕೆಲ್ಸ ಮಾಡೋನು.. ಇಲ್ಲೇನೋ ಟೆಂಪರರಿ ಕೆಲಸ ಮಾಡ್ತಾ ಇರಬೇಕು ಅಂತ ಒಳ ಹೊರಟರು. ವೈಫು ಮೇಡಂಗೆ ಕೊಂಚ ಇರಿಸುಮುರಿಸಾದರೂ, ಅವರೂ ಒಳ ನಡೆದರು.
ಅಲ್ಲಿನ ಆಧುನಿಕ ಅಮರಾವತಿಯನ್ನ ನೋಡಿ ಪಾಪ ಸಿದ್ದಪ್ಪನವರ ಹೆಂಡ್ರು ಒಮ್ಮೆಗೆ ಕಂಗಾಲಾದರು! ಕಿವಿ ಹರಿದು ಹೋಗೋ ಹಾಗಿನ ಸದ್ದು, ತುಂಡು ಲಂಗದ ಲಲನೆಯರು, ಬೀರು ಬಾಟಲಿಗಳ ಠಣಠಣ ಸದ್ದಿಗೆ ದಿಕ್ಕು ತಪ್ಪಿದ ಹರಿಣದಂತೆ ಆಕೆ ತೆಪ್ಪಗಾದರು. ಆದರೆ ಸಿದ್ದಪ್ಪನವರೇನೂ ತಲೆಕೆಡಿಸಿಕೊಳ್ಳದೇ, ಆರಾಮಾಗಿದ್ದಂತೆ ಕಂಡು ಬಂದಿದ್ದು, ಆಕೆಯನ್ನ ಮತ್ತಷ್ಟು ಹೈಲು ಮಾಡಿತು.
ಅಷ್ಟರಲ್ಲಿ ಅಲ್ಲಿಗೆ ಬಂದ ವೈಟರ್ ಭೂಪತಿ, ಸರ್, ನಿಮ್ಮ ಮಾಮೂಲಿ ಬ್ರಾಂಡ್ ತರಲೋ, ಅಥವ ಹೊಸದೇನಾದರೂ ಬೇಕೋ ಸಿದ್ದಪ್ಪನವರೇ ಅಂದುಬಿಡೋದೇ?!
ಈಗ ಸಹಧರ್ಮಿಣಿಯವರ ತಲೆಯೊಳಗಿನ ಟ್ಯೂಬ್ ಲೈಟ್ ಪಕಪಕ ಅನ್ನಲಾರಂಭಿಸಿತ್ತು ನಿಧಾನಕ್ಕೆ . ಆದರೆ ಅವಳೇನೋ ಕೇಳೋ ಮೊದಲೇ "ಇವ್ನು ನಾನು ಗಾಲ್ಫ್ ಆಡ್ತೀನಲ್ಲ, ಅಲ್ಲಿರೋ ಬಾರ್ ನ ಕೆಲಸಗಾರ. ಅಲ್ಲಿ ಅಪರೂಪಕ್ಕೆ ಗೆಳೆಯರಿಗೆ ಕಂಪನಿ ಕೊಡೋಕೆ ಕುಡೀತೀನಿ, ಸೋ. ಇವನಿಗೆ ನಾನು ಕುಡಿಯೋ ಬ್ರಾಂಡು ಗೊತ್ತು ಬಿಡು ಅನ್ನುತ್ತಲೇ ಗೋಬಿ ಮಂಚೂರಿಗೂ ಆರ್ಡರ್ ಮಾಡಿಬಿಟ್ಟರು.
ಟ್ಯೂಬ್ ಲೈಟಿಗೆ ಮತ್ತಷ್ಟು ವೋಲ್ಟೇಜ್ ಹರಿಯೋಕೆ ಶುರುವಾಗಿ ಇನ್ನೆರಡು ಬಾರಿ ಪಕ್ ಪಕ್ ಅಂತು.
ಸಿದ್ದಪ್ಪನವರ ಬಳಿ ಕ್ಲಾರಿಫಿಕೇಷನ್ ಕೇಳೋಕೆ ಮೊದಲೇ, ಅಲ್ಲಿಗೆ ಸಡನ್ನಾಗಿ ಬಂದ ಮಿನಿಲಂಗದ ಚೆಲುವೆಯೊಬ್ಬಳು, ಏನ್ ಸಿದ್ದಪ್ಪಾ ನನ್ ಮರ್ತೇ ಬಿಟ್ಟೆ ಅಂತ ಅಂದ್ಕೊಂಡಿದ್ನಪಾ ಅಂತ ಮಾದಕವಾಗಿ ನಕ್ಕು, ಎದೆಯಲುಗಿಸಿದಳು.
ಟ್ಯೂಬ್ ಲೈಟ್ ಹತ್ತಿಕೊಂಡು, ಝಗ್ಗನೆ ಬೆಳಕಾಯಿತು.
ಸಿಟ್ಟು ನೆತ್ತಿಗೇರಿ ಸಟ್ಟನೆದ್ದು ಹೊರಗೋಡುತ್ತಿದ್ದ ಹೆಂಡತಿಗೆ ಹೇ ಹೇ.. ಅವಳ್ಯಾರೋ ನನಗೆ ಗೊತ್ತಿಲ್ಲ.. ತಪ್ಪಾಗಿ ತಿಳ್ಕೊಂಬಿಟ್ಟಿದಾಳೆ ಅಂತ ಸಿದ್ದಪ್ನೋರು ತೊದಲೋ ಹೊತ್ತಿಗೆ ಆಕೆ, ರಸ್ತೆಗೆ ಬಂದು ನಿಂತಾಗಿತ್ತು..
ಸಿದ್ದಪ್ಪ ಆಕೆಯ ಸೆರಗು ಹಿಡಿದು ಬೇಡಿಕೊಳ್ಳುತ್ತಿದ್ದರೂ ಕೇಳದೇ, ರಸ್ತೆಯಲ್ಲೇ ಅವರ ಜನ್ಮಾ ಜಾಲಾಡೋಕೆ ಶುರು ಮಾಡಿದ ಹೆಂಡತಿ, ಅಲ್ಲೇ ಪಕ್ಕದಲ್ಲಿ ತೂಕಡಿಸುತ್ತ ಮಲಗಿದ್ದ ಆಟೋದವನ್ನ ತಿವಿದು ಒಳಗೆ ಕೂತಾಗಿತ್ತು.
ಸಿದ್ದಪ್ಪನವರು ಅಲ್ಲೇ ಪಕ್ಕಕ್ಕೆ ಹತ್ತಿ ಕೂತು, ಇಲ್ಲ ಕಣೇ .. ಹಾಗಲ್ಲ ಕಣೇ..ಅನ್ನೋದೂ.. ಅವಳು ನಾನು ಬರಲ್ಲ ನಿಮ್ಮ ಜೊತೆಗೆ , ನೀವೂ ನನ್ನ ಹಿಂದೆ ಬರ್ಬೇಡಿ ಇನ್ನು ಅಂತ ಕೂಗೋದೂ ನಡೆದೇ ಇದ್ದಾಗ, ಸರಿಯಾಗಿ ಎಚ್ಚೆತ್ತ ಆಟೋದ ಯಜಮಾನ್ರು,
"ಏನ್ ಸಿದ್ದಪ್ನೋರೇ, ಈ ಸಲ ಮಜಬೂತು ಕಡಕ್ ಹಕ್ಕಿನೇ ಸಿಕ್ಕಿರೋ ಹಾಗಿದೆ" ಅಂದರು.
ಇದೇ ಮುಂದಿನ ಬುಧವಾರ ಸಿದ್ದಪ್ಪನವರ ವೈಕುಂಠ ಸಮಾರಾಧನೆ ಏರ್ಪಡಿಸಲಾಗಿದೆ. ಆಮಂತ್ರಣ ಸಿಗದವರು ಇದನ್ನೇ ವೈಯಕ್ತಿಕ ಕರೆಯೋಲೆ ಎಂದು ಪರಿಗಣಿಸಬೇಕಾಗಿ ಕೋರಿಕೆ.
(ಇಂಗ್ಲೀಷ್ ಬ್ಲಾಗೊಂದರ ಬರಹದಿಂದ ಪ್ರೇರಿತ)
4 comments:
ಶ್ರೀನಿಧಿ,
ಭಾಳಾ ದಿನದ ಮ್ಯಾಲೆ ಬಂದೀರಿ. ಆದರೂ ಮಜಬೂತ ಹಕ್ಕೀನ್ನೇ ಶಿಕಾರಿ ಮಾಡೀರಿ.
LOL...nice read.
ha ha ha.. mast.. :D
ಹ್ಹ ಹ್ಹ ಹ್ಹಾ... ಬಹಳ ಚೆನ್ನಾಗಿದೆ.
Post a Comment