Thursday, April 28, 2011

ರಾಗ - ವಿರಾಗ

  • ಪು.ತಿ. ನರಸಿಂಹಾಚಾರ್

ತೊಡೆಗೆ ತೊಡೆ ಮಸೆವಂತೆ ಕುಳ್ಳಿರು
ತೇನ ಬಯಸುವೆ ರಾಗಿಣಿ?
ಎಲೆ ಬೆಡಗಿ, ಚಿಂದುಳ್ಳ ಹೆಣ್ಣೇ
ನನ್ನ ಜೀವ ವಿರಾಗಿಣಿ -

ತಿರುಗಿಸುವೆ ಮೊಲೆಕೋಡ ನನ್ನೆಡೆ
ಕೋರೆ ನೋಟದಿ ಚುಚ್ಚುವೆ
ತುಟಿ ಕೊನೆಗೆ ನಗೆತಂದು ಚಿವುಟುವೆ
ಸೆರಗ ಸೋಕಿಸಿ ಬೆಚ್ಚುವೆ.

ಓರೆ ಕುಳಿತಂಚಿಗೆಯೆ ಸರಿಯುವೆ
ಕುಲುಕೆ ರಥ ಮೈಲಟಿಸುವೆ
ಮನ್ನಿಸೆನ್ನುವ ತೆರದಿ ಸುಲಿಪಲ್
ತೋರಿ ನಾಣನು ನಟಿಸುವೆ

ಆವ ಭಾರಕೊ ಕುಸಿದ ರೆಪ್ಪೆಯ -
ನೆತ್ತಿ ನೀನಾಕಳಿಸುವೆ
ಮೈಯ ಮುರಿಯುವೆ ತೋಳ್ಗಳೆತ್ತುವೆ
ಹೆಡೆ ಜಡೆಗೆ ಬೆರಳೊತ್ತುವೆ.

ಹೊತ್ತು ಕಟ್ಟಿದೆ ವರುಷ ವರುಷವ
ಪೇರಿಸುತಲೀ ಕೋಟೆಯ
ಒಳಗೆ ನೆಮ್ಮದಿ ಜೀವ - ನಗುತಿದೆ
ಕಾಮನೆಸುಗೆ ಭರಾಟೆಯ.

ಇದ್ದಕಿದ್ದವೋಲೇಕೆ ಸರಿವೆಯೆ
ಬೇರೆಡೆಗೆ ಎಲೆ ಕಾಮಿನಿ?
ಇದ್ದರೂ ನೀನೆದ್ದು ಹೋದರು
ಒಂದೆ ಎನಗೆ ವಿಲಾಸಿನಿ.

ಪರನಾರಿ ಸೋದರತೆ ಮನಸಿಗೆ
ತಟ್ಟೆ ಗುರು ನಿರಪೇಕ್ಷೆಯೋ
ಸೋಂಕನೆಲ್ಲವ ಸ್ತಬ್ಧಗೊಳಿಸುವ
ಮುಪ್ಪೊ? ಹೆಣ್ಣಿನುಪೇಕ್ಷೆಯೋ?

2 comments:

Anonymous said...

wah....!!!!

said...

ಛೇ...ಇಂಥ ಪದ್ಯಗಳನ್ನೆಲ್ಲ 10th ಪಠ್ಯ ಪುಸ್ತಕಗಳಲ್ಲಿ ಹಾಕಿದ್ದಿದ್ರೆ ಒಂದೆರಡು ಮಾರ್ಕ್ಸ್ ಹೆಚ್ಚ ಬರ್ತಿದ್ದವೂ..