- ಬನ್ನಂಜೆ ಗೋವಿಂದಾಚಾರ್ಯ
ತಾಯಿ ಇಲ್ಲ; ತಂದೆ ಇಲ್ಲ
ಇದೂ ಒಂದು ತಬ್ಬಲಿ
ಅವಳು ಸೂಳೆ ಇವ ಮಹರ್ಷಿ
ಇವರ ಕೀರ್ತಿ ಹಬ್ಬಲಿ ||೧||
ಕಚ್ಚೆ ಬಿಗಿದು ನಡೆದನವನು
ತಪಕ್ಕೆಂದು ಕಾಡಿಗೆ
ಸೀರೆ ಕೊಡವಿ ನಡೆದಳವಳು
ದೇವತೆಗಳ ನಾಡಿಗೆ ||೨||
ನೇಸರುದಿಸಿ ಬಲೆಯನೆಸೆದ
ಹಕ್ಕಿ ಕೊರಳ ಹಾಡಿಗೆ
ಹಳತಾದರು ಮಾಸಲಿಲ್ಲ
ಅವಳ ಕಣ್ಣ ಕಾಡಿಗೆ ||೩||
ಅವನು ಅವಳು ನಡೆದರಯ್ಯ
ತಮ್ಮ ತಮ್ಮ ಪಾಡಿಗೆ
ಎಂತೋ ಮುಂದೆ ಸಾಗಬೇಕು
ದಾರಿಗಿಲ್ಲ ಬಾಡಿಗೆ ||೪||
* * *
ಎದೆಯ ಎತ್ತರಕ್ಕೆ ನಾಚಿ
ಸೆರಗು ಸ್ವಲ್ಪ ಜಾರಿದೆ
ಗಮನವಿಟ್ಟು ನಡೆಯಬೇಕು
ದಾರಿಯೂ ಇಳಿಜಾರಿದೆ ||೫||
ತಾಯಿಯಂತೆ ಮಗಳು ಕೂಡ
ಆಹ! ಎಂಥ ರೂಪಸಿ
ಕಾಡು ಜನರ ನಡುವೆ ತಾನು
ಆದರೂನು ರೂಪಸಿ ||೬||
ಹಕ್ಕಿ ಹಾಡು ಕಲಿಸಿತೇನು
ಜಿಂಕೆ ಕಣ್ಣ ಕೊಟ್ಟಿತು?
ಕಾಡು ಮರದ ಕಳಿತ ಹಣ್ಣು
ಮೊಲೆಯ ಮೊಟ್ಟೆಯಿಟ್ಟಿತು? ||೭||
ಕಣ್ವ ಕೂಡ ಕಣ್ಣುಬಿಟ್ಟ
ಯಾರು ಇವಳ ನಲ್ಲನು!
ಇವಳ ಎದೆಯ ಬೆದೆಯ ಸೊದೆಯ
ಯಾರು ಗೆದೆಯಬಲ್ಲನು! ||೮||
* * *
ಗಡ್ಡನೆರೆತ ಮುದುಕ ಇನ್ನೂ
ತೋರಿಸಿಲ್ಲ ಜಾತಕ
ಅವನು ಬರುವ ಮುನ್ನ ಇಲ್ಲಿ
ನಡೆಯಿತೊಂದು ನಾಟಕ ||೯||
ಜಿಂಕೆ ಹೊಡೆಯಬಂದ ರಾಜ
ಜಿಂಕೆ ಕಣ್ಣ ಹೆಣ್ಣಿಗೆ
ಕಣ್ಣು ಹೊಡೆದನಂತೆ ಏಕೊ
ನಂಟುಬಿತ್ತು ಕಣ್ಣಿಗೆ ||೧೦||
ಎದೆಯ ಎತ್ತರಕ್ಕೆ ಸೋತು
ಸೀರೆ ಜಾರಿಬಿಟ್ಟಿದೆ
ಗಮನವಿಟ್ಟು ನಡೆದರೂನು
ಹೇಳದಂಥ ಗುಟ್ಟಿದೆ ||೧೧||
ಕೆನ್ನೆ ತುಂಬ ಕೆಂಪುಕೆಂಪು
ಎದೆಯು ಎದೆಯನಪ್ಪಿದೆ
ಒಳಗು ಹೊರಗು ತಂಪುತಂಪು
ತೊಡೆಯ ತಾಳ ತಪ್ಪಿದೆ ||೧೨||
* * *
ಕಣ್ವ ಕೂಡ ಕಣ್ಣು ಬಿಟ್ಟ
ಏನು ನಡೆದುಹೋಯಿತು
ಮದುವೆಗೆಂದು ತಂದ ದರ್ಭೆ
ಜಾತಕರ್ಮಕಾಯಿತು ||೧೩||
[“ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ” ಪುಸ್ತಕದಿಂದ]
6 comments:
ಏನೆಲ್ಲಾ ಆಗಬಹುದು ನೋಡಿ !
ಚೆನ್ನಾಗಿದೆ:)
ಗೋವಿಂದಾಚಾರ್ಯರ ಕವನ ಚೆನ್ನಾಗಿದೆ.
ವಾಹ್ ವಾಹ್ ವಾಹ್... ಎಂಥಾ ಲಯ, ಎಂಥಾ ನಯ...
ಎದೆಯ ಎತ್ತರಕ್ಕೆ ನಾಚಿ
ಸೆರಗು ಸ್ವಲ್ಪ ಜಾರಿದೆ
ಗಮನವಿಟ್ಟು ನಡೆಯಬೇಕು
ದಾರಿಯೂ ಇಳಿಜಾರಿದೆ
ಕಣ್ವ ಕೂಡ ಕಣ್ಣು ಬಿಟ್ಟ
ಏನು ನಡೆದುಹೋಯಿತು
ಮದುವೆಗೆಂದು ತಂದ ದರ್ಭೆ
ಜಾತಕರ್ಮಕಾಯಿತು
ಬರೆದರೆ ಈ ಥರ ಬರೀಬೇಕು... ಸೂಪರ್...
ಕೆಲವು ಆಚಾರ್ಯರು ತಾವು ‘ಪೋಲಿ’ ಎಂದು ತೋರಿಸಲು ಸಕಲ ಪ್ರಯತ್ನ ಮಾಡುತ್ತಾರೆ. ‘ಕನಕೋಪನಿಷತ್ತು’ ಕೃತಿಯಲ್ಲಿ ಬ.ಗೋ.
ಆಚಾರ್ಯರು ತಾವು ಹೈಸ್ಕೂಲಿನಲ್ಲಿದ್ದಾಗ ಒಬ್ಬಳು ಹುಡುಗಿಯೊಡನೆ ಎಂಥಾ ಪೋಲಿತನ ಮಾಡಿದ್ದೆ ಎಂದು ಬರೆದಿದ್ದಾರೆ. ಎಲ್ಲಿಯ ಕನಕದಾಸರು? ಎಲ್ಲಿಯ ಕನಕೋಪನಿಷತ್ತು? ಎಲ್ಲಿಯ ಆಚಾರ್ಯರ ಪೋಲಿಗಿರಿ? Sheer exhibitionism!
ಯಾವುದೇ ಹೆಣ್ನುಮಗಳಿಗೂ ‘ಸೂಳೆ’ ಎಂದು ಕರೆಯಲು ನನ್ನ ಮನಸ್ಸು ನೋಯುತ್ತದೆ. ಮೇನಕೆ ಹಾಗು ವಿಶ್ವಾಮಿತ್ರರು ಏನು ಮಾಡಿದರು ಎನ್ನುವದರ ವರ್ಣನೆಯು
just Peeping-Tomism!
ಆಚಾರ್ಯರ ಕನಕೋಪನಿಷತ್ತಿನ ‘ಪೋಲಿ ಭಾಗ’ವನ್ನು ನಿಮಗೆ ಕಳುಹಿಸುತ್ತೇನೆ. It is worthy to appear in ಮೋಟುಗೋಡೆ.
aaaaahhhhh kama shastrave shaastra
Post a Comment