Showing posts with label ಕಟ್ಟೆ ಶಂಕ್ರ. Show all posts
Showing posts with label ಕಟ್ಟೆ ಶಂಕ್ರ. Show all posts

Wednesday, June 3, 2009

ಹೀಗೊಂದು ’ವಸ್ತು’ ಸಂಗ್ರಹಾಲಯ

ವಿಷಯ ಏನೂಂತ ಆದಷ್ಟೂ ನೇರವಾಗಿ ಹೇಳಿಬಿಡ್ತೇವೆ. ಸೋಮಾರಿ ಕಟ್ಟೆ ಅಂತ ಒಂದು ಕನ್ನಡ ಬ್ಲಾಗು. ಅದರ ರೂವಾರಿ ಶಂಕರ ಪ್ರಸಾದ್ ಅಲಿಯಾಸ್ ಕಟ್ಟೆ ಶಂಕ್ರು ಅಲಿಯಾಸ್ ಸೋಮಾರಿ ಶಂಕ್ರಣ್ಣ. ಈ ಮನುಷ್ಯನ ಕೈಯಲ್ಲಿ ಯಾವಾಗಲೂ ಒಂದು ಮೊಬೈಲು. ಆ ಮೊಬೈಲಿಗೆ ಒಂದು ಕ್ಯಾಮೆರಾ. ಮನೆಯಿಂದ ಆಫೀಸಿಗೆ ಹೋಗಬೇಕಾದ್ರೆ, ಆಫೀಸಿಂದ ಮನೆಗೆ ಬರ್ಬೇಕಾದ್ರೆ ಅಥ್ವಾ ಹೆಂಡತಿ ಜೊತೆ ಶಾಪಿಂಗ್‌ಗೆ ಹೋಗ್ಬೇಕಾದ್ರೆ, ಹೀಗೆ ಸದಾ ಕಾಲ ಆ ಮೊಬೈಲಿನ ಕ್ಯಾಮೆರಾ ಫೋಟೋ ತೆಗೀಲಿಕ್ಕೆ ಕಾಯ್ತಾ ಇರತ್ತೆ. ರಸ್ತೆಯಲ್ಲಿ ಒಂದು ಹಳದಿ ಬಣ್ಣದ ಸೀರೆಯುಟ್ಟ ಕಪ್ಪು ಆಟೋ ಪಾಸಾದದ್ದು ಕಂಡಿತೋ, ತಕ್ಷಣ ಈ ಕ್ಯಾಮೆರಾ ಅಲರ್ಟ್ ಆಗುತ್ತೆ. ಆ ಆಟೋದ ಹಿಂದೆ ಏನು ಬರೆದುಕೊಂಡಿದೆ ಅಂತ ಗಮನಿಸುತ್ತೆ. ಏನಾದ್ರೂ ಆಣಿಮುತ್ತಿನಂತಹ ಮಜಾ ವಾಕ್ಯ ಬರ್ಕೊಂಡಿರೋದು ಕಾಣಿಸ್ತೋ, ತಕ್ಷಣ ಇದು ಕ್ಲಿಕ್ ಆಗುತ್ತೆ! ನಂತರ ಹಾಗೆ ಕ್ಲಿಕ್ ಆದ ಫೋಟೋ, ಮೊಬೈಲಿನ ಮೆಮೋರಿ ಕಾರ್ಡಿನಿಂದ ಶಂಕ್ರುವಿನ ಲ್ಯಾಪ್‌ಟಾಪಿಗೆ ಬರುತ್ತೆ. ಲ್ಯಾಪ್‌ಟಾಪಿನಿಂದ ಸೋಮಾರಿ ಕಟ್ಟೆ ಬ್ಲಾಗಿಗೆ!

ಇಂತಹ ಪ್ರಕ್ರಿಯೆಗೆ ಒಳಗಾಗಿ ಅದೆಷ್ಟೋ ಬೆಂಗಳೂರ ಆಟೋಗಳು ಈ ಬ್ಲಾಗಿನಲ್ಲಿ ತಮ್ಮ ಬೆನ್ನಿನ ಪ್ರದರ್ಶನ ಕೊಟ್ಟಿವೆ. ನಮ್ಮ ಬ್ಯುಸಿಯ ದಿನಗಳ, ಸೀರಿಯಸ್ ಡಿಸ್ಕಷನ್ನುಗಳ ನಡುವೆ ಒಂದು ಕ್ಷಣ ರಿಲಾಕ್ಸ್ ಆಗಲಿಕ್ಕೆ, ಸಣ್ಣ ನಗೆ ಚಿಮ್ಮಿಸಲಿಕ್ಕೆ ನೆರವಾಗಿವೆ.

ಸರಿ, ಈ ಇಂತಹ 'ಆಟೋರಾಜ', ನಮ್ಮೆಲ್ಲರ ಪ್ರೀತಿಯ ಶಂಕ್ರಣ್ಣ, ಕಂಪನಿಯ ಕೆಲಸದ ಮೇಲೆ ನೆದರ್‌ಲ್ಯಾಂಡ್ಸಿಗೆ ಹೋಗಬೇಕಾಗಿ ಬಂತು. ಅಲ್ಲಿಗೆ ಹೋಗಬೇಕಾದರಾದರೂ ತನ್ನ ಕ್ಯಾಮೆರಾ ಇರುವ ಮೊಬೈಲ್ ಬಿಟ್ಟು ಹೋದನೇ? ಇಲ್ಲ! ಅದರ ಪರಿಣಾಮವಾಗಿ ನೆದರ್‌ಲ್ಯಾಂಡ್ಸ್‌ ದೇಶದ ಅಪ್ರತಿಮ ಟಾಯ್ಲೆಟ್ ಫೋಟೋಗಳು ನಮಗೆ ಸಿಕ್ಕವು!

ಇಷ್ಟೇ ಆಗಿದ್ದರೆ ನಾವು ಇದನ್ನೆಲ್ಲ ಇಲ್ಲಿ ಬರೆಯುತ್ತಿರಲಿಲ್ಲವೇನೋ? ಆದರೆ ಶಂಕ್ರಣ್ಣ ಈಗ ಆಮ್‌ಸ್ಟರ್‌ಡ್ಯಾಮಿನಲ್ಲಿ ತಾನು ಗೆಳೆಯನೊಂದಿಗೆ ಭೇಟಿ ಕೊಟ್ಟ ಒಂದು 'ವಸ್ತು' ಸಂಗ್ರಹಾಲಯದ ಚಿತ್ರಗಳನ್ನು ಮೋಟುಗೋಡೆಗೆ ಕಳುಹಿಸಿಕೊಟ್ಟಿದ್ದಾನೆ. ಶಂಕ್ರಣ್ಣನಿಗೊಂದು ಥ್ಯಾಂಕ್ಸ್ ಹೇಳುತ್ತಾ, ಅಲ್ಲಿಗೆ ಹೋಗಿ 'ಸೇಫಾಗಿ' ವಾಪಸ್ ಬಂದದ್ದಕ್ಕೆ ಅಭಿನಂದನೆ ಹೇಳುತ್ತಾ, ಆ ಫೋಟೋಗಳನ್ನು ಇಲ್ಲಿ ಕೊಡುತ್ತಿದ್ದೇವೆ; ಆನಂದಿಸಿ!