ಜೂನ್! ಶಾಲೆ-ಕಾಲೇಜುಗಳು ಶುರುವಾಗಿವೆ. ಎಂಟನೇ ಕ್ಲಾಸಿನಲ್ಲಿದ್ದ ಹುಡುಗಿಗೆ ಒಂಭತ್ತನೇ ಕ್ಲಾಸಿಗೆ ಭಡ್ತಿ ಸಿಕ್ಕಿದೆ. ಎರಡು ತಿಂಗಳ ಬೇಸಗೆ ರಜೆ ಮುಗಿಸಿ ಬಂದ ಆ ಹುಡುಗಿ, ಅರೆ! ಇದೇನಿದು ಅವಳಲ್ಲಿ ಇಂತಹ ಬದಲಾವಣೆ! ಅಚ್ಚರಿಯಲ್ಲಿ ನಿರುಕಿಸುತ್ತಿದ್ದಾನೆ ಹುಡುಗ: ಬರೀ ಮುಗ್ಧತೆ ಮಿಂಚುತ್ತಿದ್ದ ತನ್ನ ಪ್ರೀತಿಯ ಹುಡುಗಿಯ ಮೊಗದಲ್ಲೀಗ ಏನಿದು ಹೊಸ ಕಳೆ? ಏಕೀ ನಾಚಿಕೆ? ತನಗೂ ನೋಡಲು ಅಂಜಿಕೆ? ರಜೆಯಲ್ಲವಳು ಮೈನೆರದಳೇ?
ಗಂಗಾಧರ ಚಿತ್ತಾಲರ ಮತ್ತೂ ಒಂದು ಕವನ ಮೋಟುಗೋಡೆಯ ಮೆಟ್ಟಿಲೇರುತ್ತಿದೆ. ಕಂಗಳ ಸೆಳೆಯುವ ತರಳೆಯರಿಗೆಲ್ಲ ಹೊಟ್ಟೆನೋವು ಬರಲಿ!
ಕಾಮೋದಯ
ಬೆಳೆದು ನಿಂತಿಹೆ ಹುಡುಗಿ!
ಕಂಡು ಕಂಡವರ ಎದೆ ಸೆಳೆದು ನಿಂತಿಹೆ ಮತ್ತೆ
ಎಳೆತನದ ಹೂವುಕಳೆ ಕಾಣಕಾಣುತೆ ಅಡಗಿ
ಕಾಮೋದಯದ ಉಷೆಯೆ ಮೈದಾಳಿ ಬಂದಂತೆ
ನಯನಾಭಿರಾಮವಾಗಿ!
ಇದು ಒಂದು ಋತುಮಾನ
ಹರೆಯು- ಬಂದರೆ ನೆರೆಯೆ ಬಂದಂತೆ ಮೈಮನಕೆ
ತೊನೆಯುತಿದೆ ಕಣ್ಗಳಲಿ ಬರುವ ಸುಗ್ಗಿಯ ತಾನ!
ನಿಲುವಿನಲಿ ಯಾರನೋ ಕಾದು ನಿಂತಿಹ ಭಾವ
ಸುಳಿವುದವಿರಾಮವಾಗಿ!
ಏ ತರಳೆ! ಏ ಮರುಳೆ!
ಸ್ವಾತಿ ಬರೆ ಮೌಕ್ತಿಕಕೆ ಶುಕ್ತಿ ಬಾಯ್ಬಿಡುವಂತೆ
ಜೀವದಾಳವೆ ಬಾಯ ಬಿಟ್ಟಿರಲು ಬಯಕೆಯಲಿ
ಮುಗ್ದೆ ಚಂಚಲೆಯಾಗಿ ಭುಲ್ಲವಿಸಿ ನಿಂತಿರುವೆ
ಕಾಮವೇ ಪ್ರೇಮವಾಗಿ!