Tuesday, May 26, 2009

ಸಲಿಂಗ ಜೋಡಿ?

ಬೇರೆ ದೇಶದವರಿಗೆ ನಮ್ಮ sentiments-ಅನ್ನು ಅರ್ಥ ಮಾಡಿಸೋದು ಬಹಳ ಬಹಳ ಕಷ್ಟ, ಅಂತೆಯೇ ನಮ್ಮ ದೇಶದವರಿಗೆ ಬೇರೆಯವರ sentiments ಅರ್ಥವಾಗುವುದು ಅಷ್ಟೇ ಕಷ್ಟ. ನನ್ನ ಫ್ರೆಂಚ್ ಟೀಚರು ಈ ಬಗ್ಗೆ ತಮ್ಮ ಒಂದು ಅನುಭವವನ್ನು ಹಂಚಿಕೊಂಡಿದ್ದರು.

ಸುಮಾರು ಇಪ್ಪತ್ತು ವರ್ಷಗಳ ಕೆಳಗೆ ತಮ್ಮ ವಿದ್ಯಾರ್ಥಿ ಬಳಗವೊಂದನ್ನು ಕರೆದುಕೊಂಡು ಫ್ರಾನ್ಸಿನಿಂದ ಬೆಂಗಳೂರಿಗೆ ಬಂದಿದ್ದಾರೆ. ಇಲ್ಲಿ ಇಳಿಯೋಕೆ ಮುಂಚೆ ಮೇಡಮ್ಮು strict ಆಗಿ ಸೂಚನೆ ಕೊಟ್ಟಿದ್ದಾರೆ. ದೀರ್ಘ ಸಂಭಾಷಣೆಯೇ ನಡೆಯಿತು ಆ ಹದಿಹರೆಯ ವಿದ್ಯಾರ್ಥಿಗಳಿಗೂ ಮತ್ತು ಮೇಡಮ್ಮಿಗೂ.

"ನೋಡಿ, ಇಂಡಿಯಾ ದೇಶದಲ್ಲಿ ಪಬ್ಲಿಕ್ಕಲ್ಲಿ ಮುತ್ತು ಕೊಡಬಾರದು!"

"ಅಯ್ಯೋ, ಹೌದಾ? ಆದ್ರೆ, ನನ್ನ ಬಾಯ್‍ಫ್ರೆಂಡಿಗೂ....??"

"ಯಾರೇ ಆಗಲಿ, ಪಬ್ಲಿಕ್ಕಲ್ಲಿ ಉಹ್ಞೂಂ."

"ಸರಿ. :-( "

"ಮತ್ತೆ, ಇಂಡಿಯಾದಲ್ಲಿ ಪಬ್ಲಿಕ್ಕಲ್ಲಿ ಹುಡುಗ ಹುಡುಗಿ ಕೈ ಕೈ ಹಿಡಿದುಕೊಂಡು ಹೋಗಬಾರದು." (ಇದು ಇಪ್ಪತ್ತು ವರ್ಷದ ಹಿಂದಿನ ಬೆಂಗಳೂರಿನ ಮಾತು)

"ಅಯ್ಯೋ, ನನ್ನ ಗರ್ಲ್ ಫ್ರೆಂಡ್ ಕೈ????"

"ಉಹ್ಞೂಂ..."

"ಸರಿ.. :-( "

ಬೆಂಗಳೂರಿನ ಎಂ.ಜಿ.ರಸ್ತೆಗೆ ಬಂದಿದ್ದಾರೆ. ಕಣ್ಣ ಮುಂದೆ ಇಬ್ಬರು ಹೆಣ್ಣು ಮಕ್ಕಳು ತೋಳಿಂದ ಬಳಸಿಕೊಂಡು ಕೈ ಕೈ ಹಿಡಿದು ಫುಟ್‍ಪಾತ್ ಮೇಲೆ ನಡೆದು ಹೋಗುತ್ತಿದ್ದಾರೆ. ಆ ಕಡೆ ಸಿಗ್ನಲ್ಲಿನಲ್ಲಿ ಇಬ್ಬರು ಹುಡುಗರು ಹೆಗಲ ಮೇಲೆ ಕೈ ಹಾಕಿಕೊಂಡು ರಸ್ತೆ ದಾಟುತಿದ್ದಾರೆ. ಒಬ್ಬ ಹುಡುಗ ಕೇಳೇಬಿಟ್ಟ.

"ಮೇಡಂ, ಇಂಡಿಯಾ ದೇಶದಲ್ಲಿ homosexuality ಇಷ್ಟು open ಆಗಿದೆಯಾ??"

ಮೇಡಮ್ಮಿಗೆ ವಿವರಿಸಲು ಸಾಕು ಸಾಕಾಗಿ ಹೋಯಿತಂತೆ!



ಮೊನ್ನೆ ಸದ್ಯ ಅಮೇರಿಕದಲ್ಲಿರುವ ನನ್ನ ಆಪ್ತ ಗೆಳತಿ ಶ್ರೀ ಹೇಳಿದಳು -

"ಇವತ್ತು ನಮ್ಮ ಸಹೋದ್ಯೋಗಿಯೊಬ್ಬಳು ಅತ್ತೆ ಮನೆಗೆ ಹೋಗುತ್ತಿದ್ದೇನೆಂದಳು. ನಾನು ಕೇಳಿದೆ 'ನೀನು ನಿನ್ನ ಗಂಡ ಇಬ್ರೂ ಹೋಗ್ತೀರಾ ಅಂತ' . ಅದಕ್ಕವಳು 'ಇಲ್ಲ, ನಾನು ನನ್ನ ಹೆಂಡತಿ!!' ಎಂದಾಗಿಂದ ತಲೆ ತಿರುಗುತ್ತಾ ಇದೆ!"



ಹಾಗಂತ ಈ 'ಸಂಸ್ಕೃತಿ'ಯು ಇತ್ತೀಚಿನದೇನಲ್ಲ. ಅರಿಸ್ಟಾಟಲ್ ಕೂಡ ಸಲಿಂಗ ಮದುವೆ ಬಗ್ಗೆ ಚರ್ಚಿಸಿದ್ದಾನೆ. ಗ್ರೀಸಿನ ಆ ಗತಕಾಲದ ವೈಭವದಲ್ಲಿ ಸಲಿಂಗ ಮದುವೆಗಳು ಹೇರಳವಾಗಿತ್ತಂತೆ. (ಎಲ್ಲ ಅಂತೆ-ಕಂತೆಗಳು). ಆದರೆ ಅದಕ್ಕೆ ಪೂರಕವಾಗಿ ಹಾರ್ವಾರ್ಡ್ ವಿಶ್ವವಿದ್ಯಾನಿಲಯದವರ ಈ ಉಪನ್ಯಾಸವಿದೆ. ವಿಡಿಯೋದಲ್ಲಿ "ಕೈ ಎತ್ತುವ' ಜನರ ಸಂಖ್ಯೆಯನ್ನು ಗಮನಿಸಿ.



Speaking of homosexuality, ಇದು ಅಸ್ವಾಭಾವಿಕವೇನಲ್ಲ. ನ್ಯಾಷನಲ್ ಜಿಯಾಗ್ರಫಿಯವರು ಪ್ರಾಣಿಗಳಲ್ಲೂ ಸಲಿಂಗ ಕಾಮ ಚಟುವಟಿಕೆಗಳಿರುವುದರ ಬಗ್ಗೆ ಪತ್ತೆ ಮಾಡಿದ್ದಾರೆ. ಮನುಷ್ಯನಲ್ಲಿ ಇದರ ಹಿಂದಿನ ಕಾರಣಗಳನ್ನೂ ಮತ್ತು ಇದರ ಪರಿಣಾಮಗಳನ್ನೂ (ಸಾಮಾಜಿಕವಲ್ಲದ) ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.

-- ಮುಂದುವರೆಯುವುದು --

-ಅ
26.05.2009
12AM

Thursday, May 21, 2009

ಹೊಸ ಸಂಶೋಧನೆಗಳು

ಮಧುಮಂಚದ ಮೇಲೊಂದು ಪ್ರೀತಿಹಾಸಿಗೆ!

ಅದೆಲ್ಲ ಮುಗಿದ ಮೇಲೂ ಸಂಗಾತಿಯನ್ನು ತಬ್ಬಿಕೊಂಡೇ ಮಲಗಿ ನಿದ್ದೆ ಹೋಗುವುದು ತುಂಬಾ ಹಿತವಾದ ಅನುಭವ ಅಲ್ಲವೇ? ಆದರೆ ಹಾಗೆ ಬಳಸಿ ಮಲಗುವುದರಿಂದಾಗಿ ಅವಳ / ಅವನ ಭಾರವನ್ನು ಹೊತ್ತ ನಿಮ್ಮ ತೋಳು-ಮೊಣಕೈಗಳು ಬೆಳಗ್ಗೆ ಏಳುವ ಹೊತ್ತಿಗೆ ನೋಯಲು ಶುರುವಿಡುತ್ತವೆ. ಇದು ರಕ್ತ ಸಂಚಲನೆಯ ಮೇಲೆ, ಮಾಂಸಖಂಡದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, 'Radial Neuropathy' ಎಂಬ ತೊಂದರೆಗೂ ನೀವು ಗುರಿಯಾಗಬಹುದು.

ಇನ್ನು ಆ ತೊಂದರೆಯಿಲ್ಲ! ದಂಪತಿಗಳು ಆಲಂಗಿಸಿಕೊಂಡೇ ನಿದ್ರೆ ಹೋಗುವ ಭಂಗಿಗಳನ್ನು ಅಭ್ಯಸಿಸಿದ Mehdi Mojtabvi, ಇದಕ್ಕೆ ಪರಿಹಾರ ಕಂಡುಹಿಡಿದಿದ್ದಾರೆ. ಇವರು ತಯಾರಿಸಿರುವ 'Love Mattress' ಅತ್ಯುತ್ತಮ ಸಂಶೋಧನೆಯೆಂಬ ಪುರಸ್ಕಾರಕ್ಕೂ ಭಾಜನವಾಗಿದೆ. ಚಂದನೆಯ ಫೋಮ್‌ನಿಂದ ತಯಾರಿಸಲ್ಪಟ್ಟಿರುವ ಈ ಹಾಸಿಗೆಯ ಮಧ್ಯೆ, ನಿಮ್ಮ ತೋಳನ್ನು ಈ ಚಿತ್ರದಲ್ಲಿರುವಂತೆ ಇರಿಸಿ, ಸಂಗಾತಿಯನ್ನು ತಬ್ಬಿಯೇ ಸುಖವಾಗಿ ನಿದ್ರೆ ಮಾಡಬಹುದು. ಅಂದಮೇಲೆ, ನಿಮ್ಮ ಮಧುಮಂಚದ ಮೇಲೆ ಈ 'ಪ್ರೀತಿಹಾಸಿಗೆ'ಯೊಂದು ಇದ್ದರೆ ಸಿಹಿಯಪ್ಪುಗೆಯ ರಾತ್ರಿ ನಿಮ್ಮದಾಗುತ್ತದೆ ಎಂದಾಯ್ತು!

ಲಿಂಕ್ಸ್: http://freshome.com/2007/12/21/love-mattress/
http://gooyadesign.com/
http://www.red-dot.sg/Concept/porfolio/



















* * *

ತುಂಬಾ ಹತ್ತಿರದಲ್ಲೇ ಅದಕ್ಕೊಂದು ಜಾಗ!

ಮಿಲನದ ಕ್ರಿಯೆಯಲ್ಲಿ ಸಂಯಮವೇ ಪ್ರಧಾನವೇನೋ ಸರಿ, ಆದರೆ ಅಲ್ಲುಂಟಾಗುವ ಅಡೆತಡೆ-ಅಡಚಣೆಗಳು ಕೆಲವೊಮ್ಮೆ ಸಂಯಮವನ್ನೂ ಪರೀಕ್ಷಿಸಿಬಿಡುತ್ತವೆ. ಬಹಳಷ್ಟು ಮಂದಿಗೆ ಮಿಲನದ ಸುಸಮಯದಲ್ಲಿ ಕಾಂಡೋಮಿಗಾಗಿ ತಡಕಾಡುವ ಕ್ರಿಯೆ ಕಿರಿಕಿರಿ ಉಂಟುಮಾಡುತ್ತದಂತೆ. ಅದು ಅವರ ಕಾಮದ ಉನ್ಮತ್ತತೆಯನ್ನು ಕಡಿಮೆ ಮಾಡುವುದೂ ಉಂಟಂತೆ. ಮಂಚದ ಪಕ್ಕದ ಕಪಾಟಿನಲ್ಲೋ, ಪ್ಯಾಂಟಿನ ಪಾಕೇಟಿನಲ್ಲೋ, ಹಾಸಿಗೆಯ ಕೆಳಗೆಲ್ಲೋ ಇರುವ ಅದನ್ನು ಹುಡುಕಾಡಿ ತೆಗೆಯುವ ಹೊತ್ತಿಗೆ, ನಿಜ- ಬಹಳಷ್ಟು ಸಮಯವೇ ಬೇಕು. ಅದು ಆ ಕ್ಷಣಗಳಲ್ಲಿ ದುಬಾರಿಯೂ ಹೌದು!

Swanky or Spanky ಎಂಬ ಲಂಡನ್ನಿನ ಗಾರ್ಮೆಂಟ್ಸ್ ಕಂಪನಿ ಇದಕ್ಕೂ ಪರಿಹಾರ ಕಂಡುಹಿಡಿದಿದೆ! 'ಸೇಫ್ ಸೆಕ್ಸ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಉತ್ಪನ್ನ' ಎಂದು Swanky or Spanky ಹೇಳಿಕೊಂಡಿದೆ. ಇದು ಹೊರತಂದಿರುವ ಒಳ ಉಡುಪಿನಲ್ಲಿ (ಬ್ರೀಫ್ಸ್ / ಬಾಕ್ಸರ್ ಬ್ರೀಫ್ಸ್ / ಪ್ಯಾಂಟೀಸ್ / ಥಾಂಗ್ಸ್) ಒಂದು ಚಿಕ್ಕ ಪಾಕೀಟು ಇರುತ್ತದೆ. ಈ ಜೇಬಿನ ಅಳತೆ ಒಂದು ಕಾಂಡೋಮ್ ಹಿಡಿಸಲಕ್ಕೆ ಸರಿಯಾಗಿ ಇರುತ್ತದೆ. ಹೀಗೆ ಒಳ ಉಡುಪಿನಲ್ಲೇ ಕಾಂಡೋಮ್ ಇಟ್ಟುಕೊಳ್ಳುವುದರಿಂದ ಇದು ಸೇಫ್ ಸೆಕ್ಸ್‌ಗೆ ಒಂದು ನೆನಪಿನ ಘಂಟೆಯಂತೆಯೂ ವರ್ತಿಸುತ್ತದೆ ಎಂಬುದು ಸಂಶೋಧಕರ ಅಂಬೋಣ.

'ಅವಶ್ಯಕತೆಯೇ ಅನ್ವೇಷಣೆಯ ತಾಯಿ', ಏನಂತೀರಿ? ;)

ಲಿಂಕ್ಸ್: http://www.swankyorspanky.co.uk/
http://inventorspot.com/articles/safe_sex_fashions


Friday, May 8, 2009

ಕಾಮಸೂತ್ರ ಚಾಕೊಲೇಟ್ಸ್!

ಚಾಕ್ಲೇಟು ಅಂದ್ರೆ ಯಾರಿಗೆ ತಾನೆ ಬಾಯಲ್ಲಿ ನೀರೂರೋದಿಲ್ಲ? ಅದು ಕ್ಯಾಡ್ಬರೀಸ್ ಇರಬಹುದು ಅಥವಾ ಅಪ್ಪ ತಂದುಕೊಡುತ್ತಿದ್ದ ಹಸಿರು ಜರಿಯ ಚಾಕ್ಲೇಟ್ ಇರಬಹುದು; ಆದರೆ ಚಾಕ್ಲೇಟಿಗೆ ಹಾತೊರೆಯದ ಜೀವವಿಲ್ಲ. ಕೋಕೋ, ಬಟರ್, ಮಿಲ್ಕ್, ನಟ್ಸ್, ಡ್ರೈ ಫ್ರೂಟ್ಸ್, ಲಿಕ್ಕರ್... ಏನಿಲ್ಲ ಏನಿದೆ ಚಾಕ್ಲೇಟಿನಲ್ಲಿ?

ಆದರೆ ಚಾಕಲೇಟುಗಳು ಇನ್ನು ಬರೀ ಬಾಯಲ್ಲಿ ಸವಿಯಲಿಕ್ಕೆ ಮಾತ್ರ ಮೀಸಲಲ್ಲ; ಕಣ್ಣಲ್ಲಿ ಸವಿದು ನಂತರ ಬಾಯಿಗಿಟ್ಟುಕೊಳ್ಳಬೇಕು! Bon Bon ಎಂಬ ಶಿಕಾಗೋದ ಕಂಪನಿ ಹೊರತಂದಿರುವ ಈ ಹೊಸ ನಮೂನೆಯ ಚಾಕಲೇಟುಗಳ ಕಡೆಗೆ ಒಮ್ಮೆ ಗಮನ ಹರಿಸಿ. ಆದರೆ ನಿಮ್ಮ ಗರ್ಲ್ ಫ್ರೆಂಡಿಗೋ ಬಾಯ್ ಫ್ರೆಂಡಿಗೋ ಇದನ್ನು ಗಿಫ್ಟಿಸುವ ಆಲೋಚನೆ ಇದ್ದರೆ ಮಾತ್ರ ಅದರಿಂದಾಗುವ ಪರಿಣಾಮಗಳಿಗೆ ಮೋಟುಗೋಡೆ ಜವಾಬ್ದಾರಿಯಲ್ಲ ಮತ್ತೆ!







Thursday, April 9, 2009

ಕಂಪ್ಯೂಟರ್ ಕರ್ಮಕಾಂಡ

ನಾನು ಕಂಪ್ಯೂಟರ್ ಸೈನ್ಸು ಹೇಳಿಕೊಡುವ ಮೇಷ್ಟ್ರು. ಚಿಕ್ಕ ಮಕ್ಕಳಿಗೆ ಕಂಪ್ಯೂಟರ್‍ನಲ್ಲಿ ಹಾರ್ಡವೇರ್ ಯಾಕೆ ಇಡುತ್ತಾರೆಂದು ನಾನು ಅದೆಷ್ಟು ಸಲ ತಲೆ ಚಚ್ಚಿಕೊಂಡಿದ್ದೇನೋ ಗೊತ್ತಿಲ್ಲ. Floppy Disk ಎಂದು ಬರೆಯಲು ಅದೆಷ್ಟು ಮಕ್ಕಳು Floppy Dick ಎಂದು ಬರೆಯುತ್ತಾರೆ! ಅದು ಏಕೆಂದೇ ಅರ್ಥವಾಗುವುದಿಲ್ಲ.

ಲ್ಯಾಬಿನಲ್ಲಿ ಎರಡೆರಡು ಮಕ್ಕಳು ಒಂದೊಂದು ಕಂಪ್ಯೂಟರಿನಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಒಬ್ಬನ ಸರದಿಯಿದ್ದಾಗ, ಇನ್ನೊಬ್ಬ ಸುಮ್ಮನೆ ಕುಳಿತಿರುತ್ತಾನೆ. ಅವನ ಸರಿದಿ ಮುಗಿದಾಗಲೂ ಕೊಡದಿದ್ದರೆ ಇವನಿಗೆ ಸಿಟ್ಟು. ಶುರು ಚಾಡಿ. "sir, he is not giving my mouse.." ಎಂದೋ, "sir, he is playing with my mouse.." ಎಂದೋ ಮಕ್ಕಳು ಚಾಡಿ ಹೇಳುವಾಗ, "ಥು ಏನದು ಅಸಹ್ಯ!" ಎಂದು ಬೈದಿದ್ದೇನೆ.

ಅದು ಹಾಳಾಗಿ ಹೋಗಲಿ. ಅನರ್ಥ ಬಂದಿದ್ದು ಹಿಂದೆ ನಾನು ಮೇಷ್ಟ್ರಾಗುವ ಮುಂಚೆ Hardware Engineer ಕೆಲಸ ಮಾಡುತ್ತಿದ್ದಾಗ. ಫೋನು ಮಾಡಿ ತಮ್ಮ ಸಮಸ್ಯೆಗಳನ್ನು ನನ್ನ ಬಳಿ ಹೇಳಿಕೊಳ್ಳುತ್ತಿದ್ದ ಜನರಲ್ಲಿ ಯಾರೋ ಒಬ್ಬ ಪುಣ್ಯಾತ್ಮನಿಗೆ ಮಾಲಪ್ರೋಪಿಸಮ್ಮು. (ಬಿ.ಜಿ.ಎಲ್. ಸ್ವಾಮಿಯವರ ಹಸುರುಹೊನ್ನು ಓದಿದರೆ ಈ ಮಾಲಪ್ರೋಪಿಸಮ್ ಬಗ್ಗೆ ತಿಳಿದೀತು). ಆತ ನನಗೆ ಹೇಳಿದ್ದು ಹೀಗೆ: "I got your number from ......, i want to increase my hard dicks! how much does it cost?"

ರಾಮರಾಮ! ಇದನ್ನು ನನ್ನ ಕೇಳಿದರೆ ಹೇಗೆ? ನಾನೇನು......... ಇರಲಿ. "Sorry??" ಎಂದೆ. ಆತ "I have an old hard dicks, i want a new one with more capacity." ಎಂದ. ನಾನು ನಗಲಾರದೆ, ಅಳಲಾರದೆ, "ok, what is your current configuration?" ಎನ್ನುವಾಗ ನೆಲಕ್ಕುರುಳಿ ಬೀಳುವುದೊಂದು ಬಾಕಿ. ಆತನಿಗೆ ಬೇಕಾಗಿದ್ದುದು Hard Disk ಎಂದು ನಾನು ಬಿಡಿಸಿ ಬೇರೆ ಹೇಳಬೇಕಿಲ್ಲವೆನಿಸುತ್ತೆ.

ಎಸ್.ಪಿ.ರೋಡಿಗೆ ಹೋದಾಗ ಕಂಪ್ಯೂಟರ್ ಅಂಗಡಿಯವನು ನನ್ನನ್ನು ತಬ್ಬಿಬ್ಬಾಗಿಸಿದ್ದ ಒಮ್ಮೆ. "160 GB Hard Disk ಬೇಕಾಗಿತ್ತು." ನಾನು ಕೇಳಿದೆ. ಅವನು, "ಓಹ್, ಬನ್ನಿ. 250 GBದು ತೊಗೊಳಿ, ನಾನು "ಸಾಟಾ" ನೇ ಕೊಡ್ತೀನಿ ಅಂದ.

"ಏನು??????????" ನಾನು ಕೇಳಲು ಹೊರಟೆ. ನನ್ನ ಕಿವಿಗೆ ಅದು ಬೇರೆ ರೀತಿಯೇ ಕೇಳಿಸಿತು.

"ಈಗ ಎಲ್ಲ ಚೇಂಜ್ ಆಗಿದೆ, ಮುಂಚೆ ಥರ ನೀವು ದೊಡ್ಡ ಕೇಬಲ್ ಹಾಕ್ಬೇಕಾಗಿಲ್ಲ. Data Transfer Rate ಕೂಡ ಫಾಸ್ಟು. ಸಾಟಾ ತೊಗೊಳಿ." ಎಂದ.

ನನ್ನ ತಲೆ ತಿರುಗಿತು!

ಅದಕ್ಕೇ ಹೇಳೋದು ತಂತ್ರಜ್ಞಾನದಲ್ಲಿ update ಆಗಿರಬೇಕು ಎಂದು. ಇಲ್ಲವಾದರೆ ಹೀಗೇ ಆಗೋದು. SATA ಎಂದರೆ Serial Advanced Technology Attachment ಎಂದು. ಉಚ್ಚಾರಣೆ ತೊಂದರೆಯಿದ್ದರೆ ಕಷ್ಟ.

-ಅ
10.04.2009
12AM

Monday, April 6, 2009

72 ಸಲ ಪ್ರಯತ್ನಿಸಿಯೂ...

ಮಹಾಭಾರತದಲ್ಲಿ ಕುಂತಿಗೆ ಪಾಂಡುವಿನಿಂದ ಮಕ್ಕಳಾಗದ ಕಾರಣ ಆಕೆ ನಿಯೋಗ ಪದ್ಧತಿಯಿಂದ ಮಕ್ಕಳನ್ನು ಪಡೆಯುವ ಕತೆ ನಮಗೆಲ್ಲಾ ತಿಳಿದದ್ದೇ. ಆದರೆ ಜರ್ಮನಿಯಲ್ಲಿ ನಡೆದ ವಿಚಿತ್ರ ಪ್ರಕರಣವೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ.

ಸೋಪಲಸ್‍ಗೆ ಮದುವೆಯಾಗಿ ವರುಷಗಳಾದರೂ ಮಕ್ಕಳಾಗಿರಲಿಲ್ಲ. ಡಾಕ್ಟರ್ ಬಳಿ ಹೋದಾಗ ಅವನಿಗೆ ತಾನು ನಿಷ್ಪ್ರಯೋಜಕ ಎಂಬುದು ತಿಳಿಯುತ್ತದೆ. ಆಗ ಅವನಿಗೆ ಒಂದು ಉಪಾಯ ಹೊಳೆಯೊತ್ತೆ: ತನ್ನ ಹೆಂಡತಿ ಟ್ರಾಟ್‍ಳನ್ನು ಗರ್ಭಿಣಿಯನ್ನಾಗಿ ಮಾಡಿಕೊಡುವಂತೆ, ಪಕ್ಕದ ಮನೆಯ -ನೋಡಲಿಕ್ಕೆ ತನ್ನಂತೆಯೇ ಇರುವ- ಆಗಲೇ ಎರಡು ಮಕ್ಕಳ ತಂದೆಯಾಗಿರುವ- ಫ್ರಾಂಕ್ ಮಾಸ್‍ನನ್ನು ವಿನಂತಿಸಿಕೊಂಡು ಒಪ್ಪಂದ ಮಾಡಿಕೊಳ್ಳುತ್ತಾನೆ. ಟ್ರಾಟ್‍ ಮೊದಲು ಇದನ್ನು ಪ್ರತಿಭಟಿಸಿದರೂ ನಂತರ ಒಪ್ಪುತ್ತಾಳೆ.

ಸೋಪಲಸ್ ‍ಮಾಸ್‍ಗೆ 2,500 ಡಾಲರ್ ಹಣವನ್ನು ಈ ಕೆಲಸಕ್ಕಾಗಿ ಕೊಡುತ್ತಾನೆ. ಮಾಸ್ ಆರು ತಿಂಗಳ ಕಾಲ, ವಾರಕ್ಕೆ ಮೂರು ರಾತ್ರಿಯಂತೆ, ಒಟ್ಟು 72 ಸಲ ಪ್ರಯತ್ನಿಸುತ್ತಾನೆ. ಮಾಸ್‍ನ ಹೆಂಡತಿ ಗಂಡನ ಇಂತಹ ಕೆಲಸಕ್ಕೆ ಆಕ್ಷೇಪಿಸಿದಾಗ ಅವನು, ’ನನಗೂ ಇವೆಲ್ಲಾ ಇಷ್ಟವಿಲ್ಲ; ಆದರೆ ತಾನು ಕೇವಲ ಹಣಕ್ಕಾಗಿ ಮಾಡುತ್ತಿದ್ದೇನೆ’ ಎಂದು ಸಮಾಧಾನಿಸುತ್ತಾನೆ!

ಆದರೆ ಆರು ತಿಂಗಳ ಪರಿಶ್ರಮದ ನಂತರವೂ ಟ್ರಾಟ್ ಗರ್ಭಿಣಿಯಾಗದೇ ಉಳಿದಾಗ ಸೋಪಲಸ್ ಮಾಸ್‍ನನ್ನು ಒಮ್ಮೆ ಡಾಕ್ಟರ್ ಬಳಿ ಹೋಗಿ ಪರೀಕ್ಷಿಸಿಕೊಂಡು ಬರುವಂತೆ ಸೂಚಿಸುತ್ತಾನೆ. ಮಾಸ್‍ನನ್ನು ಪರೀಕ್ಷಿಸಿದ ಡಾಕ್ಟರ್, ಮಾಸ್ ಸಹ ಸಂತಾನ ಅನುಗ್ರಹಿಸಲು ಅಯೋಗ್ಯ ಎಂಬ ಸತ್ಯವನ್ನು ಘೋಷಿಸುತ್ತಾರೆ.

ಈ ಸುದ್ದಿ ಕೇಳಿ ಮಾಸ್‍ನ ಹೆಂಡತಿಯೊಬ್ಬಳನ್ನು ಬಿಟ್ಟು ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಬಲವಂತ ಮಾಡಿ ಕೇಳಿದಾಗ, ತನ್ನ ಇಬ್ಬರು ಮಕ್ಕಳು ನಿಜವಾಗಿ ಮಾಸ್‍ನ ಸೃಷ್ಟಿ ಅಲ್ಲ ಎಂಬುದಾಗಿ ಅವಳು ಒಪ್ಪಿಕೊಳ್ಳುತ್ತಾಳೆ!

ಈಗ ಸೋಪಲಸ್ ಮಾಸ್‍ನ ಮೇಲೆ ಕರಾರುಭಂಗ ಮಾಡಿದ್ದಕ್ಕಾಗಿ ಕೋರ್ಟಿನಲ್ಲಿ ಕೇಸ್ ಹಾಕಿದ್ದಾನೆ! 2,500 ಡಾಲರ್ ಹಣವನ್ನು ವಾಪಸ್ ಕೊಡಬೇಕೆಂಬುದು ಸೋಪಲಸ್ ಬೇಡಿಕೆ. ಆದರೆ ಮಾಸ್, ತಾನು ಕೇವಲ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಒಪ್ಪಿಕೊಂಡಿದ್ದೆನೇ ಹೊರತು ಗರ್ಭಧಾರಣೆಯ ಬಗ್ಗೆಯೇನು ಖಾತ್ರಿ ಕೊಟ್ಟಿರಲಿಲ್ಲ ಎಂದು ವಾದಿಸುತ್ತಿದ್ದಾನೆ.

ಪಾಪ, ಜಡ್ಜಿನ ಪರಿಸ್ಥಿತಿ ಮಾತ್ರ ಶೋಚನೀಯ!

[ಲಿಂಕ್: http://www.just-whatever.com/; ಥ್ಯಾಂಕ್ಸ್: ರೋಹಿತ್]