- ಪ್ರತಿಭಾ ನಂದಕುಮಾರ್
ಒಳಗೆ ಬಂದದ್ದು ಮೆಲ್ಲಮೆಲ್ಲಗೆ ಮಳ್ಳ ಹೆಜ್ಜೆಗಳಲ್ಲಿ
ಇಂಚಿಂಚೇ ಆಕ್ರಮಿಸುತ್ತ ಸೀಳುತ್ತ ನೆಲ ಮೈಲಿಗಲ್ಲುಗಳನ್ನು
ನೆಡುತ್ತ ಕೊನೆಗೆ ಪೂರ್ಣ ಪೀಠಸ್ಥ ಸ್ಥಾಪಿಸಿ ಚಕ್ರಾಧಿಪತ್ಯ
ಆಳ್ವಿಕೆಗೆ ಬೇರೆಯದೇ ಶಕ
ಎದ್ದು ಹೋಗಿದ್ದು ಮಾತ್ರ ಒಂದೇ ಪಟ್ಟಿಗೆ ಗೂಟ ಕಿತ್ತುಕೊಂಡು
ತೊಡೆಯ ನಡುವಿಂದ ಒಕ್ಕಲೆದ್ದವನಿಗೆ
ಸುದ್ಧೋಧನ ಪ್ರೇರಣೆಯಲ್ಲ
ಹೋಗಿದ್ದು ಬುದ್ಧನಾಗಲಲ್ಲ
ಉಪ್ಪರಿಗೆಯಲ್ಲಿ ತಾಂಬೂಲ ಮೆಲ್ಲುವವಳೊಡನೆ
ಹಜಾರದ ಹಜಾಮಿ ಹಸಿದು ತೆಕ್ಕೆಗೆ ಬಂದರೂ
ಅಳತೆಗೆ ಸಿಕ್ಕುವವಳಲ್ಲ ಲಾಯಕ್ಕಲ್ಲವೇ ಅಲ್ಲ
ಅರೆಬೆಂದ ಕವನ ಒಪ್ಪವಲ್ಲ ಇವಳ ಸುಟ್ಟ ಒಡಲು
ಅವಳು ತನ್ನವಳಾದಷ್ಟು ತಾನು ಅವಳವನಲ್ಲ
ತನ್ನ ವೀರ್ಯದ ಆತ್ಮಕ್ಕೆ ಸಾಟಿಯೇ ಅವಳ ಬಸಿರ ಕಾಮ
ಬೆದೆಗೆ ಬಂದವಳನ್ನು ಬಲೆಗೆ ಸಿಕ್ಕಿಸಿ ಉಜ್ಜಿ ಸಿಪ್ಪೆ ಸಿಗಿದು
ಕತ್ತರಿಸಿ ಬಾಂಡಲೆಯಲ್ಲಿ ಮಸಾಲೆ ಸಹಿತ ಹುರಿದು
ಕರುಳ ಕುದಿತಕ್ಕೆ ಬಲಿಕೊಟ್ಟು ಬಾಯೊಡ್ಡಿ ಚಪ್ಪರಿಸಿ ತೇಗಿ ಆಹಾ
ಜೋತ ಮೊಲೆ ಸೋತ ತುಟಿಯ ಪುಳಕವೇನು ಮಹಾ
ಎಂದು ಹಂಗಿಸಿ ನಿಗುರಿದ ಶಿಶ್ನದಿಂದ ತಿವಿದು ಮೂತಿ
ಎದೆಯ ಹೊಲದ ಬೆಳೆ ಕಿತ್ತು ಕೊಟ್ಟವಳು
ಉಪ್ಪರಿಗೆಯವಳಿಗಿಂತ ಮಿಗಿಲಲ್ಲ
ಕಾದವಳ ಕಾಯದ ಕಿಮ್ಮತ್ತು ಭಾರಿಯಲ್ಲ
ಬರಿ ತೊಗಟೆ ಇವಳು; ಅವಳು ಮುಖಮಲ್ಲು
ತಪ್ಪಿ ಹಾಡಿದರೆ ಸೂಫಿ ಗಜಲು
ಅಲಿಯೂ ಅಲ್ಲಿ ಕಾಫೀರನಾಗಿ
ಬಸಿರ ಕಥಾನಕದಲ್ಲಿ
ಏನೀಗ ಎದ್ದು ಹೋದರೆ?
ಯೋನಿಗೆ ಅಪಚಾರವಾದರೆ
ಉನ್ಮತ್ತ ಮೊಲೆತೊಟ್ಟು ಬಿಟ್ಟು ನಡೆದರೆ
ಏನೀಗ?
ಕಾದಿದ್ದಳು ಯಶೋಧರೆ ರಾಜಮಾರ್ಗದಲ್ಲಿ
ಕುದುರೆ ಸಾರೋಟಿನಲ್ಲಿ ಮಹಾ ನಿರ್ಗಮನಕ್ಕೆ
ಶಂಖವೇ ಭಾರವಾದ ಬಸವನ ಹುಳು
ಸರಿದು ಹೋಯಿತು ಸಂದಿಯಿಂದ ತೆವಳುತ್ತ
[ಪ್ಲೀಸ್ ನೋಟ್: ಈ ಕವಿತೆ, ಸಿದ್ಧಾರ್ಥ ಬುದ್ಧನಾಗಲೆಂದು ಅದೊಂದು ರಾತ್ರಿ ಎದ್ದು ಹೋದ ಬಗ್ಗೆ ಹೆಣೆಯಲ್ಪಟ್ಟಿದೆ]
1 comment:
Modalane saari oadidre gottaglilla.. matte oadidaaga tilitu.. Nice one
Post a Comment