Friday, February 2, 2007

ಓಶೋ ಬಗ್ಗೆ ಒಂಚೂರು...

[ಈಗ ನಾಲ್ಕಾರು ವರ್ಷಗಳ ಕೆಳಗೆ 'ಹಾಯ್ ಬೆಂಗಳೂರ್'ನಲ್ಲಿ "ಸೆಕ್ಸು, ಲೈಫು, ರಜನೀಶು" ಎಂಬ ಶೀರ್ಷಿಕೆಯಡಿ ಒಂದು ಲೇಖನ ಪ್ರಕಟವಾಗಿತ್ತು -ಎರಡು ಕಂತುಗಳಲ್ಲಿ. ಆ ಲೇಖನ ನನಗೆ ತುಂಬಾ ಇಷ್ಟವಾಗಿತ್ತಾದ್ದರಿಂದ ಅದರಿಂದ ಹೆಕ್ಕಿದ ಕೆಲ ಪ್ಯಾರಾಗಳನ್ನು ನೋಟ್ ಮಾಡಿಟ್ಟುಕೊಂಡಿದ್ದೆ. ಅವನ್ನೇ ಜೋಡಿಸಿ ಇಲ್ಲಿ ಕೊಡುತ್ತಿದ್ದೇನೆ.]

ಅವನ ಹೆಸರು ರಜನೀಶ್.

ಜಗತ್ತು ಅವನನ್ನು 'ಓಶೋ' ಅಂತ ಕರೆಯುತ್ತದೆ. ಅವನೊಬ್ಬ ಯೋಗಿಯೋ, ದಾರ್ಶನಿಕನೋ, ಸಾಕ್ಷಾತ್ ದೇವರೋ ಅಥವಾ ಹುಚ್ಚನೋ..? ಒಟ್ಟಿನಲ್ಲಿ ನಮ್ಮಂತ ಚಿಲ್ಲರೆ ಮನುಷ್ಯನಂತೂ ಅಲ್ಲ. ಅವನು ಹೇಳಿದ್ದನ್ನು ನಾವು ಒಪ್ಪುತ್ತೇವೋ ಬಿಡುತ್ತೇವೋ, ಅವನು ಹೇಳಿಕೊಟ್ಟಿದ್ದನ್ನು ಅಳವಡಿಸಿಕೊಳ್ಳುತ್ತೇವೋ ಬಿಡುತ್ತೇವೋ, ಆದರೆ ಅವನನ್ನು ನಾವು ಕಡೆಗಣಿಸಲಿಕ್ಕೆ ಸಾಧ್ಯವಿಲ್ಲ. You can't ignore him. ಆತ ಯಾವ್ಯಾವುದೋ ಸಂದರ್ಭದಲ್ಲೆಲ್ಲಾ ನೆನಪಾಗಿ ಕಾಡಿಬಿಡುತ್ತಾನೆ.

ಓಶೋ ಮಾತನಾಡಲು ಶುರುಮಾಡಿದ ವಿಷಯವೇ ಅಂಥದಿತ್ತು. ಭಾರತದ ಮಟ್ಟಿಗಂತೂ ತೀರ 'ಮುಚ್ಚಿಡಬೇಕಾದಂತಹ ಸಂಗತಿ' ಎಂಬಂತೆ treat ಆಗುವ ವಿಷಯವಾದ 'sex' ಬಗ್ಗೆ ಆತ ಮಾತನಾಡತೊಡಗಿದ. ಅವನನ್ನು ಜಗತ್ತು 'Teacher of Vagina' (ಯೋನಿಗುರು) ಅಂತ ಕರೆಯಿತು. 'ಕಾಮದ ಮೂಲಕ ದೇವರನ್ನು ಕಾಣಿ' ಎಂಬ ವಿಶಿಷ್ಟ ಸಿದ್ಧಾಂತವನ್ನು ರೂಪಿಸಿದವನು ರಜನೀಶ್. ಜನ ಅವನೆಡೆಗೆ ಭಯ, ಕುತೂಹಲ, ಅಚ್ಚರಿ, ಅಪಹಾಸ್ಯಗಳ ದೃಷ್ಟಿಯಿಂದ ನೋಡಿದರು. ಅವನ ನೀಳ ಬಿಳಿ ಗಡ್ಡ ಮತ್ತು ತೀಕ್ಷ್ಣವಾದ ದೊಡ್ಡ ಕಣ್ಣುಗಳೆಡೆಗೆ ಜನ ಇನ್ನಿಲ್ಲದಂತೆ ಆಕರ್ಷಿತರಾದರು. ಅವನ ಉಪನ್ಯಾಸಗಳನ್ನು ಕೇಳಲು ಜನ ಕ್ಯೂ ನಿಂತು ಕಾದರು.

ಅವನ ಒಂದು ಉಪನ್ಯಾಸ ನಡೆಯುತ್ತಿತ್ತು. ರಜನೀಶ್ ಹೇಳುತ್ತಿದ್ದ: 'ಇವತ್ತಿನ ಈ ಜಗತ್ತಿನಲ್ಲಿ ನೀವು ದೇವರನ್ನು ಕಾಣಲಿಕ್ಕೆ ಮಾಡುವ ಹುಚ್ಚು ಪ್ರಯತ್ನಗಳಿಂದ ಯಾವುದೇ ಪ್ರಯೋಜನವೂ ಇಲ್ಲ. ಯಾಕೆಂದರೆ ನಿಮಗೆ ನಿಮ್ಮ ಸ್ವಾರ್ಥವನ್ನು, ಸ್ವಾಭಿಮಾನವನ್ನು ಬದಿಗಿಟ್ಟು ಒಂದು ನಿಮಿಷವೂ ಬದುಕುವುದಕ್ಕೆ ಸಾಧ್ಯವಿಲ್ಲ...' ಜನ convince ಆದಂತೆ ಕಾಣಲಿಲ್ಲ. ತಕ್ಷಣ ಅಲ್ಲಿದ್ದ ಒಬ್ಬನನ್ನು ಕರೆದು ಕೇಳಿದ ಓಶೋ: 'ನೀನು ಯಾರು?' ಅಂತ. ಆ ವ್ಯಕ್ತಿ ತಕ್ಷಣ ಉತ್ತರಿಸಿದ: 'ನಾನು ರಮೇಶ' ಅಂತ. ಮತ್ತೊಬ್ಬನನ್ನು ಕರೆದು ಕೇಳಿದ ಓಶೋ: 'ನೀನು ಯಾರು?' ಆತ ಉತ್ತರಿಸಿದ: 'ನಾನು ಈ ರಾಜ್ಯದ ಮುಖ್ಯಮಂತ್ರಿ'. ಮತ್ತೊಬ್ಬನನ್ನು ಕರೆದು ಅದೇ ಪ್ರಶ್ನೆ ಕೇಳಿದಾಗ ಅವನು ತಾನು ಇಂಥಾ ಕಂಪನಿಯ ಮಾಲೀಕ ಅಂದ.

ಓಶೋ ಹೇಳಿದ: 'ನೋಡಿ, ಇಲ್ಲಿರುವವರಿಗೆ ಯಾರಿಗೂ ತಾವು ಯಾರು ಎಂಬುದೇ ಗೊತ್ತಿಲ್ಲ. ರಮೇಶ ಎಂಬುದು ಕೇವಲ ತನ್ನ ಹೆಸರು ಎಂಬುದರ ಅರಿವಿಲ್ಲ. ತಾನೇ ರಮೇಶ ಅಂದುಕೊಂಡುಬಿಟ್ಟಿದ್ದಾನೆ! ಮುಖ್ಯಮಂತ್ರಿ, ಕಂಪನಿಯ ಮಾಲೀಕತ್ವ -ಇವುಗಳು ಕೇವಲ ತನಗೆ ದೊರಕಿದ ಹುದ್ದೆಗಳು ಎಂಬುದರ ಅರಿವೇ ಇವರಿಗಿಲ್ಲ. ಇಂಥವರು ದೇವರನ್ನು ಕಾಣಲು ಸಾಧ್ಯವೇ? ನಿಮ್ಮೆಲ್ಲರ ಪರಿಸ್ಥಿತಿಯೂ ಇದೇ.

'ದೇವರು ಅಂತ ಕರೆಯಲ್ಪಡುವ ಫೋಟೋದ ಮುಂದೋ, ಮೂರ್ತಿಯ ಎದುರೋ, ಕಲ್ಲಿನ ಸಮ್ಮುಖದಲ್ಲಿ ಮಂಡಿಯೂರಿಯೋ 'ದೇವರೇ ನನಗೆ ಒಳ್ಳೆಯದು ಮಾಡು' ಅಂತಲೇ ಎಲ್ಲರೂ ಬೇಡಿಕೊಳ್ಳುವುದು. ಆದರೆ ಅವನು ದೇವರ ಬಳಿ ಅದೆಷ್ಟೇ ಭಕ್ತಿಯಿಂದ ಬೇಡಿಕೊಳ್ಳುತ್ತಿದ್ದೀನಿ ಅಂತ ಅಂದುಕೊಂಡರೂ, ಆ ಭಕ್ತಿಯನ್ನು ಅವನು ತೋರುವುದು ಕೇವಲ ತನಗಾಗಿ, ತನ್ನವರ ಒಳಿತಿಗಾಗಿ. ಸ್ವಾರ್ಥ ಅವನನ್ನು ಎಂದಿಗೂ ಬಿಡದೇ ಕಾಡುತ್ತದೆ. ಅಂಥವರಿಗೆ 'ನಿಜವಾದ ದೇವರು' ಕಾಣಲು ಸಾಧ್ಯವೇ? ಊಹೂಂ, impossible.

'ಆದ್ದರಿಂದ, ನೀವು ದೇವರನ್ನು ಕಾಣಬಯಸುವಿರೇ ಹೌದಾದರೆ, ನೀವು ಅನುಸರಿಸಿಬಹುದಾದ ಕೆಲವೇ ಕೆಲವೊಂದು ಮಾರ್ಗಗಳಿವೆ... ಅದರಲ್ಲಿ ಒಂದು ಸುಖವಾದ ನಿದ್ರೆ! ನೀವು ಮಾಡುವ ಸುದೀರ್ಘ-ಸುಖ ನಿದ್ರೆಯಲ್ಲಿ, ಒಟ್ಟು ಎಂಟು ಗಂಟೆ ನಿದ್ರೆ ಮಾಡಿದರೆ ಅದರಲ್ಲಿ ಎರಡು ಗಂಟೆ ನಿಜವಾದ ನಿದ್ರೆ ಅಂತ ಒಂದು ಇರುತ್ತದೆ. ಆ ನಿದ್ರೆಯಲ್ಲಿ ಕನಸಿರುವುದಿಲ್ಲ, ಕನವರಿಕೆಯಿರುವುದಿಲ್ಲ, at least ನೀವು ಯಾರೆಂಬುದರ ಅರಿವೇ ನಿಮಗೆ ಇರುವುದಿಲ್ಲ. ವಿಜ್ಞಾನಿಗಳು ಅದನ್ನು small death ಅನ್ನುತ್ತಾರೆ. ಅಂಥಾ ಸಮಯದಲ್ಲಿ, ಹಾಂ, ಅಂತಹ ಸಮಯದಲ್ಲಿ ನೀವು ದೇವರ ಕೈ ಹಿಡಿದು ನಡೆಯುತ್ತಿರುತ್ತೀರಿ...!' ಅಂದ ರಜನೀಶ್. ಜನ ಅವನೆಡೆಗೆ ನಿಬ್ಬೆರಗಾಗಿ ನೋಡುತ್ತಿದ್ದರು. 'ಈಗ ಹೇಳಿ ನೀವು: ಮಲಗಿ ಸುಖವಾಗಿ ನಿದ್ರಿಸುತ್ತಿರುವ ನಿಮ್ಮ ಮಗುವನ್ನು ಬಡಿದು ಎಬ್ಬಿಸುತ್ತೀರಾ? 'ನಾಳೇನೇ history exam ಇದೆ. ಅಲೆಕ್ಸಾಂಡರ್ ಹುಟ್ಟಿದ ದಿನ ಬಾಯಿಪಾಠ ಮಾಡು' ಅಂತ ಗದರಿಸ್ತೀರಾ? ಆ ಅಲೆಕ್ಸಾಂಡರ್ ಎಂಬ ಯುದ್ಧಬಾಕ ಹುಟ್ಟದಿದ್ರೇನೇ ಚೆನ್ನಾಗಿತ್ತು! ಗೊತ್ತಾಯ್ತಲ್ಲ, ಸುಖವಾಗಿ ನಿದ್ರಿಸುವುದನ್ನು ಕಲಿಯಿರಿ ಮೊದಲು' ಅಂದ ರಜನೀಶ್. ಜನ ಬಿಟ್ಟಕಣ್ಣು ಬಿಟ್ಟಂತೆ ನೋಡುತ್ತಿದ್ದರು.

'ಎರಡನೆಯದು ಮಿಲನ ಮಹೋತ್ಸವ. ಕಾಮವೆಂಬುದು ಹೊಲಸು ಎಂಬ ಕಲ್ಪನೆಯನ್ನು ನಿಮ್ಮ ಮನಸ್ಸಿನಿಂದ ಮೊದಲು ಹೊರಹಾಕಿ. ಅದು ನಿಮ್ಮನ್ನು ಮಾನಸೋಲ್ಲಾಸಗೊಳಿಸಿ ದೇವರೆಡೆಗೆ ಕರೆದೊಯ್ಯುವ ಕ್ರಿಯೆ. ಮಲಗುವ ಕೋಣೆಯಲ್ಲಿ ಹಿತವಾದ ಗಾಳಿ ಬೀಸುತ್ತಿರಲಿ. ಹದವಾದ ಬೆಳಕಿರಲಿ. ಕರ್ಪೂರದ ಘಮವಿರಲಿ. ಮೃದುವಾದ ಸಂಗೀತ ಕೇಳಿಬರುತ್ತಿರಲಿ. ಅಂಥದ್ದೊಂದು ಅಪೂರ್ವ ಸನ್ನಿವೇಶದಲ್ಲಿ ನೀವು ಅವಳೊಂದಿಗೆ, ಅವಳು ನಿಮ್ಮೊಂದಿಗೆ ಬೆತ್ತಲಾಗುತ್ತಾ, ಮಗ್ಗುಲಾಗುತ್ತಾ, ಹೊರಳಾಡುತ್ತಾ, ನಲಿದಾಡುತ್ತಾ, ಇಬ್ಬರೂ ಬೆರೆತುಹೋಗುತ್ತಾ, ಬೆಸೆದುಕೊಳ್ಳುತ್ತಾ...ನೀವು ಅನುಭವಿಸುವ ಆ ಸುಖವಿದೆಯಲ್ಲಾ, ಆ ಕಟ್ಟ ಕಡೆಯ ಕ್ಷಣವಿದೆಯಲ್ಲಾ, ಹಾಂ, ಆಗ ನೀವು ದೇವರನ್ನು ಕಾಣುತ್ತೀರಿ. ಆಗ ನೀವು ನೀವಾಗಿರುವುದಿಲ್ಲ. ಅಂತಹ ಕ್ಷಣಗಳಲ್ಲಿ ನಿಮಗೆ ದೇವರ ದರುಶನವಾಗುತ್ತದೆ. ಅಂತಹ ಕ್ಷಣಗಳನ್ನು ಹೆಚ್ಚಿಸಿಕೊಳ್ಳಿ' ಅಂದ ಓಶೋ.

'ಮೂರನೆಯದು, ನೀವು ತುಂಬಾ ಆಶ್ಚರ್ಯವಾಗುವಂತಹ, ತುಂಬಾ ಭಯವಾಗುವಂತಹ ಸನ್ನಿವೇಶದಲ್ಲಿ ಭಾಗಿಯಾದಾಗ. ನೀವು ಭಯಂಕರವಾಗಿ excite ಆಗುತ್ತೀರಿ ನೋಡಿ, ಆಗ ನೀವು ನೀವಾಗಿರುವುದಿಲ್ಲ. ಅದಕ್ಕೆ ನೀವು ಹಿಮಾಲಯ ಪರ್ವತವನ್ನು ಹತ್ತಬೇಕಾಗುತ್ತದೆ. ಅಂಥದ್ದೊಂದು ಪರ್ವತವನ್ನು ಹತ್ತಿ ತುತ್ತ ತುದಿ ತಲುಪಿ, ಒಂದು ಕ್ಷಣ ತಿರುಗಿ ಕೆಳಗೆ ನೋಡುತ್ತೀರಲ್ಲಾ, ಆಗ ಆಗುವ ಭಯ.... ಹಾಂ, ಆಗ ನಿಮಗೆ ದೇವರು ಸಿಗುತ್ತಾನೆ! ವಿಪರೀತ ವೇಗವಾಗಿ drive ಮಾಡುತ್ತಿರುವಾಗ, ಎದಿರುಗಡೆಯಿಂದ ಬಂದ ಲಾರಿಯೊಂದು ನಿಮಗೆ ಗುದ್ದೇಬಿಡುತ್ತದೆ ಅನ್ನುವ ಕ್ಷಣವಿದೆಯಲ್ಲಾ, ಆಗ ನೀವು ನಿಜವಾಗಿಯೂ excite ಆಗಿರುತ್ತೀರಿ. ಆಗ ನೀವು ರಮೇಶನಾಗಿರುವುದಿಲ್ಲ; ದೊಡ್ಡ ಕಂಪನಿಯ manager ಆಗಿರುವುದಿಲ್ಲ; ರಾಜ್ಯದ ಮುಖ್ಯಮಂತ್ರಿಯಾಗಿರುವುದಿಲ್ಲ... ನಿಮ್ಮನ್ನು ಕೇವಲ ಆ ಭಯ, ಆ excitement ಆವರಿಸಿಕೊಂಡಿರುತ್ತದೆ. ಆಗ ನೀವು ದೇವರಲ್ಲಿ ಐಕ್ಯವಾಗಿರುತ್ತೀರಿ. ಅಂತಹ ಸನ್ನಿವೇಶಗಳನ್ನು ಹೆಚ್ಚು ಹೆಚ್ಚು ಮಾಡಿಕೊಳ್ಳುತ್ತಾ ಹೋಗಿ. ಹೆಚ್ಚು ಹೆಚ್ಚು ಅಚ್ಚರಿಗಳಿಗೆ ನಿಮ್ಮನ್ನು ತೆರೆದುಕೊಳ್ಳುತ್ತಾ ಹೋಗಿ. ತನ್ಮೂಲಕ ನೀವು ದೇವರೊಂದಿಗಿರುವ ಅವಕಾಶಗಳು ಹೆಚ್ಚಾಗುತ್ತಾ ಹೋಗುತ್ತವೆ' -ಅಂದ ರಜನೀಶ್.

ಎದುರಿಗೆ ಕುಳಿತಿದ್ದ ಜನ ಚಪ್ಪಾಳೆ ತಟ್ಟಿದರು. ನೀನೇ ದೇವರು ಎನ್ನುತ್ತಾ ಅವನ ಕಾಲಿಗೆರಗಿದರು. ಆತ ಭಾರತದಲ್ಲಿದ್ದಾಗಲಾಗಲೀ, ಬೇರೆ ದೇಶದಲ್ಲಿದ್ದಾಗಾಗಲೀ, ಜನ ಅವನೆಡೆಗೆ ಮುಗಿಬಿದ್ದು ಹೋದರು. ಅವನ ಭಾಷಣವೊಂದನ್ನು ಕೇಳಲು ಸಾಲುಗಟ್ಟಿ ನಿಂತರು. ಹಾಗೆ ನಿಂತ ಜನರನ್ನುದ್ದೇಶಿಸಿ 'ಅಲ್ಲಿ ಪಶ್ಚಿಮದಲ್ಲಿ ಸುಂದರ ಸೂರ್ಯಾಸ್ತವಾಗುತ್ತಿದೆ. ಅದನ್ನು ನೋಡುವುದು ಬಿಟ್ಟು ನನ್ನ ಭಾಷಣಕ್ಕಾಗಿ ವೇದಿಕೆ ನೋಡುತ್ತಿದ್ದೀರಲ್ಲಾ..? ನನ್ನದು ನಾಳೆಯೂ ಇರುತ್ತದೆ. ಆದರೆ ಇವತ್ತಿನ ಸೂರ್ಯಾಸ್ತ ತಪ್ಪಿಸಿಕೊಂಡರೆ, ನೀವು ಅಷ್ಟರಿಂದ ವಂಚಿತರಾದಂತೆಯೇ!' ಅಂತ ವಿಚಿತ್ರವಾಗಿ ಎಚ್ಚರಿಸಿ ಹೇಳಿದವ ರಜನೀಶ್.

ಆತ ಮೂರ್ತಿಪೂಜೆಯನ್ನು ವಿರೋಧಿಸಿದ, ದೇವರನ್ನು ಕಾಣುತ್ತೀನಿ ಅಂತ ತಪಸ್ಸಿಗೆ ಹೊರಟವರನ್ನು ಹೀಯಾಳಿಸಿದ, ಎಂಥಾ ಪರಮ ನಾಸ್ತಿಕನಿಗೂ ದೇವರನ್ನು ತೋರಿಸುತ್ತೀನಿ ಅಂತ ಹೊರಟ. 'ಕಾಮದ ಮೂಲಕ ದೈವದರ್ಶನ' ಎಂಬ ತನ್ನ ಸಿದ್ಧಾಂತ ಸಾಧನೆಗಾಗಿ ತಾನೇ ಅನೇಕ ಸಾಮೂಹಿಕ ವೇಶ್ಯಾವಾಟಿಕೆಗಳನ್ನು ಸೃಷ್ಟಿಸಿದ. ಇಂತಹ ಕಾರಣಗಳಿಗಾಗಿಯೇ ಅಮೆರಿಕಾ ಸರ್ಕಾರದಿಂದ ಬಂಧಿತನಾಗಿ ಜೈಲು ಸೇರಿದ. ಬಿಡುಗಡೆಯಾದ. Aids ನಂತಹ ರೋಗ ಬಂದಾಗ ನಿರೋಧ್ ಬಳಸಿ ಎಂಬ ಹುಚ್ಚು ಸಲಹೆ ನೀಡಿದ. ದುಡ್ಡು ಅವನನ್ನು ಹುಡುಕಿಕೊಂಡು ಬಂತು, ಜನಪ್ರಿಯತೆ, ಹಣ, ಕೀರ್ತಿ ಅವನನ್ನು ಮುಚ್ಚಿಹಾಕಿಬಿಟ್ಟಿತು.

ಒಟ್ಟಿನಲ್ಲಿ ಆತ ಹತ್ತೊಂಬತ್ತನೇ ಶತಮಾನ ಕಂಡ ಒಬ್ಬ ಮಹಾನ್ ದಾರ್ಶನಿಕ ಎಂಬುದು ಮಾತ್ರ ನಿಜ.

4 comments:

ಸಂಧ್ಯಾ ಶ್ರೀಧರ್ ಭಟ್ said...

modala baari osho bagge odiddu... Innu odabekemba kutoohalavaaguttide...

Sandeepa said...

@ಸಂಧ್ಯಾ,
ಖಂಡಿತ ಇನ್ನೂ ಓದಿ. ಏಕೆಂದರೆ ಓಶೋ ಹೇಳಿದ್ದು ಇಷ್ಟೇ ಅಲ್ಲ. ಇನ್ನೂ ತುಂಬಾ ಇದೆ! :)

Sudhindra Malur said...

ಓಶೋ ಬಗ್ಗೆ ಪೂರ್ತಿಯಾಗಿ ತಿಳಿಯುವ ಮುನ್ನ ಅವರ ಧ್ಯಾನಸೂತ್ರ ಎಂಬ ಪುಸ್ತಕವನ್ನು ಮೊದಲು ಓದಿ ತದನಂತರ ಅವರ ಅನೇಕ ಪುಸ್ತಕಗಳನ್ನು ನೀವು ಓದಲು ಸಹಕಾರಿಯಾಗುವುದು .

Unknown said...



ರಜನೀಶ್‌ರನ್ನು ಸಾಮಾನ್ಯವಾಗಿ ಬುದ್ಧಿಜೀವಿಗಳಾದಿಯಾಗಿ ಎಲ್ಲರೂ ತಪ್ಪಾಗಿ ಅರ್ಥ ಮಾಡಿ ಕೊಂಡಿದ್ದಾರೆ. ಅವರ ‘ಸಂಭೋಗದಿಂದ ಸಮಾಧಿಯೆಡೆಗೆ‘ ಕೃತಿಯನ್ನಷ್ಟೇ ಕುರಿತು ಸಾಮಾನ್ಯ ವಾಗಿ ಎಲ್ಲರೂ ಮಾತನಾಡುತ್ತಾರೆ. ಆದರೆ ರಜನೀಶರು ಉಪನ್ಯಾಸ ಮಾಡಿದ ಒಟ್ಟು ಸಮಯ ೫೦೦೦ ಕ್ಕೂ ಹೆಚ್ಚು ತಾಸುಗಳು! ಲೈಂಗಿಕತೆಯನ್ನು ಕುರಿತು ಹೇಳಿದ್ದು ಒಂದೇ ಒಂದು ಪುಸ್ತಕ ದಲ್ಲಿ ಮಾತ್ರ. ಉಳಿದ ೪೯೯೦ ಗಂಟೆಗಳ ಉಪನ್ಯಾಸಗಳಲ್ಲಿ ಪ್ರಪಂಚದ ವಿವಿಧ ಧರ್ಮಗಳನ್ನು ಕುರಿತು ವಿಸ್ತಾರವಾದ ಚರ್ಚೆಯಿದೆ ARUN