Monday, March 26, 2007

ಕಾಮಸೂತ್ರ

  • ಗಂಗಾಧರ ಚಿತ್ತಾಲ

ಅಂದು ಬೆತ್ತಲೆ ರಾತ್ರಿ

ಅರಿವೆ ಇರಲಿಲ್ಲ ಪರಿವೆ ಇರಲಿಲ್ಲ
ಅರೆನಾಚಿ ಮರೆಮಾಚಿ ಸರಿವುದಿರಲಿಲ್ಲ
ಜೀವ ಝಲ್ಲೆನೆ ಪೂರ್ಣ ನಗ್ನರಾಗಿ
ಒಬ್ಬರಲ್ಲೊಬ್ಬರು ನಿಮಗ್ನರಾಗಿ
ಮೊದಲ ನಂದನದಲ್ಲಿ ಸೆಳೆದ ಹಸಿವು
ಮತ್ತೆ ಹೊಡಕರಿಸೆ ನಂದದಲೆ ತುಸುವೂ
ಕೊಂಬೆಕೊಂಬೆಗೆ ತೂಗಿ ಬೀಗಿ ಬಯಕೆಯ ಹಣ್ಣು
ಹೊಡೆಯೆ ಕಣ್ಣು

ತಡೆಯಲಾರದೆ ಬಂದೆವೆದುರುಬದುರು
ಮೈಯೆಲ್ಲ ನಡುಕ, ತುಟಿಯೆಲ್ಲ ಅದುರು
ಅಂದು ಬೆತ್ತಲೆ ರಾತ್ರಿ

ಏನು ಮಿದು ನುಣುಪು ಸರ್ವಾಂಗ ಸ್ಪರ್ಶ
ಉಗುರು ಬೆಚ್ಚಗೆ, ಹಗುರು, ಆಹಾ ಜೀವಂಕರ್ಷ
ಮೈಯ ತಬ್ಬಿತು ಮೈಯ ನಗುವು ಹರ್ಷ

ಗುಬ್ಬಕ್ಕಿ ಮೊಲೆ ಬಂದು ಮುದ್ದಾಡಿದುವು ಎದೆಗೆ
ಮಿದ್ದಿದೊಲು ತೊಡೆ ಬಂದು ತೆಕ್ಕೆಯಿಟ್ಟವು ತೊಡೆಗೆ

ತುಟಿಗೆ ತುಟಿ ಮುಟ್ಟಿಸಿತು ಎಂಥ ಮಾತು
ಕಂಠನಾಳದಲೆಲ್ಲ ನಾಗಸಂಪಗೆಯಂತೆ ಉಸಿರು ಹೂತು
ಬಾಯ್ತುಂಬ ಜೇನು, ಕೈತುಂಬ ಮೊಲೆಹೂ
ಮಗ್ಗುಲು ತಿರುವಿದಲ್ನೆಲ್ಲ ಸುಖದ ಉಲುಹು

ಬೆದೆಯ ಕಾವಿಗೆ ಸಿಕ್ಕು ಮೆತ್ತೆ ಮೆತ್ತೆ
ಬಿಗಿದಪ್ಪಿ ಮುತ್ತಿಟ್ಟು ಮತ್ತೆ ಮತ್ತೆ
ತುಟಿ ತೆರೆದು ಕಟಿ ತೆರೆದು ಎಲ್ಲ ತೆರೆದು
ಒಡಲ ಹೂವನ್ನರಸಿ ಹೊಕ್ಕು ಬೆರೆದು

ಇದು ಬಯಕೆ, ಇದು ಹಸಿವೆ, ಇದುವೆ ದಾಹಾ
ಒಂದೆ ಉಸಿರಿನಲ್ಲಿತ್ತು ಅಯ್ಯೋ ಆಹಾ

ಹೊಲದುದ್ದ ನಡೆದಿತ್ತು ನೇಗಿಲ ಮೊನೆ
ಬಸಿರೆಲ್ಲ ಬಿರಿದು ಜೊಲ್ಲುಕ್ಕಿ ಸುರಿದು
ಬಸಿದು ಹೊರಚೆಲ್ಲಿತ್ತು ಜೀವದ ಸೊನೆ
ಅಂದು ಬೆತ್ತಲೆ ರಾತ್ರಿ

ತೆರೆದೆ ಇದೆ ಬಾಗಿಲವು, ನೇರ ಒಳ ಬಾ ಎಂದೆ
ನನ್ನ ಎದೆಕದವನೂ ತೂರಿ ನೀ ಒಳಬಂದೆ
ಏನು ಸುಮಧುರ ಸಹಜವೀ ಪ್ರವೇಶ

ಬೇಕಾದ್ದ ತಿನು ಎಂದೆ
ನನ್ನ ತೋಳುಗಳಲ್ಲಿ ಇಡಿಯ ನೀನು
ಬೇಕಾದ್ದ ತಕೋ ಎಂದೆ
ನಿನ್ನ ತೋಳುಗಳಲ್ಲಿ ಇಡಿಯ ನಾನು

ಆ ಒಂದು ಗಳಿಗೆಯಲಿ ಏನು ಗೈದರು ಮಾಫಿ
ಕಾಡಿದರು ಬೇಡಿದರು ಹಿಡಿಹಿಡಿದು ಆಡಿದರು ಮಾಫಿ
ಸಂದಿಯಲಿ ಮೂಲೆಯಲಿ ಕೈಹಾಕಿ ಬೆದಕಿದರು,
ಯಾವ ಗುಟ್ಟನು ಕೆದಕಿದರು ಮಾಫಿ

ಬರಿಗೈಲೆ ಬಂದು ಪರೆಕಳಚಿ ನಿಂತು
ಬೇಕಾದ್ದ ತಿನಿಸಿ ಬೇಕಾದ್ದ ತಿಂದು

ಕೊಟ್ಟುದೆನಿತು ನಾವು ಕೊಂಡುದೆನಿತು
ಉಣ್ಣಿಸಿದುದೆನಿತು ಉಂಡುದೆನಿತು
ಕಣ್ಮುಚ್ಚಿಯೂ ಕೂಡ ಕಂಡುದೆನಿತು
ಮಾತಿಲ್ಲದೆಯೂ ಕೂಡ ಅಂದುದೆನಿತು

ಅಂದು ಬೆತ್ತಲೆ ರಾತ್ರಿ

ಒಡಲಿಗೊಡಲನು ಬೆಸೆದು ನಿನ್ನ ಬಳಿ ಸಾರೆ
ಏಕಾಂತ ಸಮ್ಮತಿಯ ಆ ಒಂದು ಕ್ಷಣದಿಂದೆ
ಈ ಜಗತ್ತೇ ಬೇರೆ.

ಯಾವ ಹಿಗ್ಗಿನ ಸೆಲೆಯೋ ನಮಗೆ ಸಿಲುಕಿ
ಇಳೆಯ ಮೂಲಕು ನಮ್ಮ ಬೇರು ನಿಲುಕಿ

ಭೂಗರ್ಭ ಸುರಿದಿತ್ತು ಜೊಲ್ಲುಬಾಯಿ
ನಾವಿಂದು ಮನುಕುಲದ ತಂದೆತಾಯಿ

1 comment:

Sandeepa said...

ವಾಹ್ ವಾಹ್!!!