ಯಾರಿಗೆ ಗೊತ್ತಿತ್ತು? ಇಷ್ಟೆಲ್ಲಾ ಆಗೊತ್ತೇಂತ? ಜನವರಿ ಏಳು, ಎರಡ್ಸಾವ್ರದ ಏಳರ ಸಂಜೆ ಏಳರ ಹೊತ್ತಿಗೆ ಕುಡಿಯುತ್ತಿದ್ದ ಬೈಟೂ ಚಾದಿಂದ ಏಳುತ್ತಿದ್ದ ಹಬೆಯಂತಹ ಹೊಗೆಯನ್ನು ನೋಡುತ್ತಾ ನಾನು-ಸಂದೀಪ-ಶ್ರೀನಿಧಿ ಇಂಥದ್ದೊಂದು ಬ್ಲಾಗು ಮಾಡುವ ಬಗ್ಗೆ ಆಲೋಚಿಸಿದಾಗ ಅದು ಇಷ್ಟೆಲ್ಲಾ ಏಳ್ಗೆ ಸಾಧಿಸಬಹುದೆಂಬ ಕಲ್ಪನೆ ಸಹ ನಮಗಿರಲಿಲ್ಲ. ನಮಗಿದ್ದದ್ದು ಜನ ಇದನ್ನು ಸ್ವೀಕರಿಸುತ್ತಾರೋ ಇಲ್ಲವೋ ಎಂಬ ಆತಂಕ ಒಂದೇ. ಏನಾದರಾಗಲಿ, ನೋಡೇ ಬಿಡುವಾ ಎಂದು ಧೈರ್ಯ ಮಾಡುವ ಹೊತ್ತಿಗೆ ಎರಡನೇ ಸುತ್ತಿನ ಚಾ ಸಹ ಮುಗಿದಿತ್ತು. ಹಬೆ ಗಾಳಿಯಲ್ಲಿ ಲೀನವಾಗಿತ್ತು.
ಮರುದಿನ ಬೆಳಗ್ಗೆ ನಾನು ಇಂಟ್ರೊಡಕ್ಷನ್ ಟೈಪಿಸುವಾಗ ಸಹ ಸಣ್ಣ ಆತಂಕ, ಚಹಾದ ಹಬೆಯಂತೆ ಸುಳಿದಾಡುತ್ತಿದ್ದುದು ಸುಳ್ಳಲ್ಲ. ಬ್ರೀಫಾಗಿ (ಅಂದ್ರೆ ಬರೀ 'ಬ್ರೀಫ್' ಹಾಕ್ಕೊಂಡು ಅಂತ ಅಲ್ಲ!) 'ಇಣುಕಿದಾಗ ಏನು ಕಂಡೀತು?' ಎಂಬುದರ ಬಗ್ಗೆ ಬರೆದೆ. ಸುಮಾರು ಜನ ಹಣುಕಿ ನಮ್ಮ ಪ್ರಯತ್ನಕ್ಕೆ ಶುಭ ಕೋರಿದರು.. ಹುರುಪಿನಲ್ಲಿ ಸುಮಾರು ಪೋಸ್ಟಿಂಗುಗಳನ್ನೂ ಕೊಟ್ಟೆವು. ಆಮೇಲೆ ನಮ್ಮೊಂದಿಗೆ ಮತ್ತೊಬ್ಬ ತಿಣುಕಾಡುವವನಾಗಿ ಹರ್ಷನೂ ಸೇರಿಕೊಂಡ. ಹವ್ಯಕ ಸೊಗಡಿನ ದ್ವಂದ್ವಾರ್ಥದ ಸಂಭಾಷಣೆಯಿಂದ ಹಿಡಿದು ಕೋನಾರ್ಕಿನ ಕ್ಲಿಕ್ಕಿನವರೆಗೆ, ಪೋಲೀ ಜೋಕುಗಳಿಂದ ಹಿಡಿದು ಗಂಗಾಧರ ಚಿತ್ತಾಲರ ಕವನದವರೆಗೆ ನಾವು ಹೆಕ್ಕಿ ಹೆಕ್ಕಿ ಕೊಟ್ಟಿದ್ದನ್ನು ನೀವು ಓದಿದ್ದೀರಿ, ನಕ್ಕಿದ್ದೀರಿ, ಪ್ರತಿಕ್ರಿಯಿಸಿದ್ದೀರಿ.
ನಮ್ಮ ಪ್ರಯತ್ನಕ್ಕೆ ಸಿಕ್ಕ ಪ್ರಶಂಸೆಗೆ ನಾವೇ ದಂಗಾಗುವಂತಾದದ್ದು ಕನ್ನಡದ ಪ್ರತಿಷ್ಠಿತ ವೆಬ್ಸೈಟ್ 'ದಟ್ಸ್ ಕನ್ನಡ' ನಮ್ಮ ಬ್ಲಾಗ್ ಬಗ್ಗೆ ಬರೆದಾಗ! ಅವರು ಬರೆದದ್ದೇ ಬರೆದದ್ದು, ಮೋಟುಗೋಡೆಯನ್ನು ಹತ್ತುವವರ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಜಾಸ್ತಿಯಾಗಿಬಿಟ್ಟಿತು. ಮೇ ೧೮ರ ಅದೊಂದೇ ದಿನ ೧೦೦೦ಕ್ಕೂ ಹೆಚ್ಚು ಹಿಟ್ಟು ಬಿದ್ದಿದ್ದು ನಮಗೆ ಅವಚಿಕೊಳ್ಳಲಾಗದಷ್ಟು ಆಶ್ಚರ್ಯ ತಂದ ಸಂಗತಿ. ಇತ್ತೀಚೆಗೆ 'ಅವಧಿ' ಸಹ ನಮ್ಮ ಪ್ರಯತ್ನವನ್ನು ಶ್ಲಾಘಿಸಿರುವುದು ಇಲ್ಲಿ ಉಲ್ಲೇಖಾರ್ಹ.
ಎಲ್ಲರೂ ಬರೀ ಹೊಗಳಿದ್ದಾರೆ ಅಂತೇನೂ ಇಲ್ಲ. 'ಕಾಂಡಮ್ಡಾಟ್ಸ್' ಎಂಬ, ಮೋಟುಗೋಡೆಯಲ್ಲಿ ಸಹ ಬಳಸಲು ನಾವು ಹಿಂದೆ-ಮುಂದೆ ನೋಡುವಂತಹ ವಿಚಿತ್ರ ಹೆಸರಿಟ್ಟುಕೊಂಡಿರುವ ಮಹನೀಯರು ಅವಾಚ್ಯ ಶಬ್ದಗಳನ್ನು ಬಳಸಿ ಪ್ರತಿಕ್ರಿಯಿಸಿದ್ದರು. ಅವರಿಗೆ ಈಗಾಗಲೇ ನಾವು ಸರಿಯಾಗಿ ಸಮಜಾಯಿಷಿ ನೀಡಿದ್ದೇವೆ. ಉಪ್ಪು , ಹುಳಿ ಖಾರ ಎಲ್ಲದೂ ಬೇಕು ಒಳ್ಳೇ ಅಡುಗೆ ಆಗೋಕೆ!
ನಾವೇನು ಬಹಳ ದೊಡ್ಡ ಸಾಧನೆ ಮಾಡಿದ್ದೇವೆ ಅಂತ ಹೇಳಿಕೊಳ್ಳುತ್ತಿಲ್ಲ; ಆದರೆ ನಮ್ಮ ಇಂತಹ ಒಂದು ಪ್ರಯತ್ನವನ್ನು ನೀವು ಸ್ವೀಕರಿಸಿದಿರಲ್ಲ, ಅದು ನಮಗೆ ತುಂಬಾ ಖುಷಿಯ ವಿಷಯ. ಮೂಡ್ಔಟ್ ಆಗಿದ್ದಾಗ ಇಲ್ಲಿ ಒಂದು ರೌಂಡು ಹಣುಕಿ ಹೋಗಿದ್ದೀರಿ, ಆಫೀಸಿನಲ್ಲಿ ಯಾರಿಗೂ ಕಾಣದಂತೆ ಕದ್ದೂ-ಮುಚ್ಚಿ ನೋಡಿದ್ದೀರಿ, ಯಾರೋ ಬಂದರು ಅಂತ ವಿಂಡೋವನ್ನು ತಕ್ಷಣ ಮಿನಿಮೈಸ್ ಮಾಡಿದ್ದೀರಿ, ಬಂದ ನಗೆಯನ್ನು ಹತ್ತಿಕ್ಕಲಾಗದೇ ಟಾಯ್ಲೆಟ್ಟಿಗೆ ಹೋಗಿ ನಕ್ಕಿದ್ದೀರಿ, ಮಾಡಲೋ ಬ್ಯಾಡೋ ಎಂಬ ಡೈಲೆಮಾದ ನಡುವೆಯೂ ಪ್ರತಿಕ್ರಿಯಿಸಿದ್ದೀರಿ, ನಮ್ಮ ಐಡಿಗಳಿಗೆ ಪರ್ಸನಲ್ ಮೇಲ್ ಕಳಿಸಿ ಪ್ರೋತ್ಸಾಹಿಸಿದ್ದೀರಿ, ಪರಿಧಿ ಮೀರಿ ಬರೆದಾಗ ನಮ್ಮನ್ನು ಎಚ್ಚರಿಸಿದ್ದೀರಿ, ಕೆಲವರು ಈ ಬ್ಲಾಗಿಗೆ 'ಕಾಂಟ್ರಿಬ್ಯೂಟ್' ಮಾಡಿದ್ದೀರಿ... ಎಲ್ಲರಿಗೂ ಎಲ್ಲದಕ್ಕೂ ನಾವು ಋಣಿಗಳು. ಕೆಲವರು ಈ ಬ್ಲಾಗ್ ಓದಿದ್ದರೂ ನಾವು ಕೇಳಿದಾಗ ಹುಸಿನಗೆಯಾಡುತ್ತಾ 'ಹೌದಾ? ಗೊತ್ತೇ ಇಲ್ಲ ನಂಗೆ ಅದರ ಬಗ್ಗೆ!' ಎಂದಿದ್ದೀರಿ... ಹಹ್ಹ, ನಿಮ್ಮ ಸಂಕೋಚ ನಮಗರ್ಥವಾಗುತ್ತದೆ ಬಿಡಿ, ಎನಿವೇ, ನಿಮಗೂ ಥ್ಯಾಂಕ್ಸ್!
ಮೋಟುಗೋಡೆಗೆ ಬಿದ್ದ ಗುದ್ದುಗಳ ಸಂಖ್ಯೆ ಹತ್ತು ಸಾವಿರ ದಾಟುತ್ತಿರುವ ಈ ಸಂದರ್ಭದಲ್ಲಿ ನಿಮಗೆಲ್ಲಾ ಈ ಹೋಟೆಲಿನಲ್ಲಿ ಒಂದು ಚಹ ಕುಡಿಸೋಣ ಎಂದು ಪ್ಲ್ಯಾನ್ ಮಾಡಿದ್ದೇವೆ. ಬರ್ತೀರಾ ತಾನೇ? :)
6 comments:
Hey dostra..
Congrats :)
Great work, idanne innu erisi nillise :D
Nimma pennige vayagra bekagde irli heli haraisutta :)
Cheers
Chin
ಶುಭಾಷಯಗಳು ಮಿತ್ರರೇ.
ಇನ್ನೂ ರಸವತ್ತಾದ ಬರಹಗಳು ಬರಲಿ ಮುಂದೆ ಎಂದು ಹಾರೈಸುವೆ.
ಗೋಡೆ ಬೆಳೆದ ಹಾಗೆ ಇಣುಕುವವರೂ ಜಾಸ್ತಿ ಆಗ್ತಾ ಇರೋ ವಿಚಾರ ತಿಳಿದು ತುಂಬಾ ಸಂತೋಷ ಆಗ್ತಾ ಇದೆ. ಶುಭ ಹಾರೈಕೆಗಳು.
ಇಂತಿ ನಿಮ್ಮ ಇಣುಕು ಅಭಿಮಾನಿ
ಕಮಾನ್ ಕಮಾನ್ ೧೦೦೦೦ ಆಯ್ತಂತೆ ಬನ್ರೋ ೨೦೦೦೦ ಮಾಡೋಣ....ಮಾಡೋದು ಏನು ಮಕ್ಕಳನ್ನಲ್ಲ!!! ಇಣುಕುವವರನ್ನ.... ಇಣುಕುದೇನೂ ಬಾತ್ ರೂಮಲ್ಲ!!!ಮೋಟುಗೋಡೆಯನ್ನಾ......
ಮೋಟುಗೋಡೆಯ ೪ ನಿರ್ಮಾಪಕರಿಗೆ,
ಶುಭಾಷಯಗಳು ಹತ್ತು ಸಾವಿರ ತಲುಪಿದ್ದಕ್ಕಾಗಿ. ಗೋಡೆ ಇನ್ನೂ ಎತ್ತರಕ್ಕೆ ಬೆಳೆಯಲಿ. ಹಾಗೆ ನಮ್ಮಂಥ ಅಭಿಮಾನಿ ಓದುಗರಿಗೆ ಇನ್ನಷ್ಟು ಮಜಾ ಸರಕುಗಳನ್ನು ನೀಡಿ ಪುಕ್ಕಟೆ ಮನೋರಂಜನೆ ನೀಡುವ ನಿಮ್ಮ ಕಾರ್ಯ ಮುಂದುವರಿಯಲಿ.
Motugode ge nanna abhinandane galu...
Post a Comment