ಹೊರಬೈಲು ನಮ್ಮೂರಿನ ಪಕ್ಕದೂರು. ಅಲ್ಲಿ ಕುಟ್ಟು ಭಟ್ರು ಅಂತ ಒಬ್ರಿದಾರೆ. ಅದು ಅವರ ಅಡ್ಡ ಹೆಸರೋ ಅಥವಾ ಅದೇ ಅವರ ಅಂಕಿತನಾಮವೋ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಎಲ್ಲರೂ ಅವರನ್ನು 'ಕುಟ್ಟು ಭಟ್ರು' ಅಂತಲೇ ಕರಿಯೋದು. ಸುಮಾರು ಎಪ್ಪತ್ತು-ಎಪ್ಪತ್ತೈದು ವರ್ಷ ವಯಸ್ಸಿನ 'ಯುವಕ' ಅವರು. ಯುವಕ ಎನ್ನಲು ಕಾರಣ ಅವರ ಚುರುಕುತನ. ತಮ್ಮ ಕೆಂಪು ಟಿವಿಎಸ್ ಚಾಂಪ್ನಲ್ಲಿ ಇವತ್ತಿಗೂ ಅವರು 'ಕುಟುರ್ರ್..' ಎಂದು ಹೋಗುವುದನ್ನು ನೀವು ನಮ್ಮೂರ್ ಕಡೆ ಬಂದರೆ ನೋಡಬಹುದು.
ಕುಟ್ಟು ಭಟ್ರು ಒಮ್ಮೆ ಸಾಗರಕ್ಕೆ ಹೋಗಿದ್ರಂತೆ. ಪ್ಯಾಟೆ ಎಲ್ಲಾ ತಿರುಗಿ, ಸಾಮಾನೆಲ್ಲಾ ಖರೀದಿ ಮಾಡಿದ್ದಾಯ್ತು. ರಾಘವೇಂದ್ರ ಬಸ್ ಬರ್ಲಿಕ್ಕೆ ಇನ್ನೂ ಅರ್ಧ ಗಂಟೆ ತಡ ಇತ್ತು. ಸರಿ ಇನ್ನೇನು ಮಾಡುವುದು? ಸಾಗರದ ಮಾರ್ಕೆಟ್ ರೋಡಿನಿಂದ ಸ್ವಲ್ಪ ಒಳಕ್ಕೆ ಹೋದರೆ ಅಲ್ಲಿ 'ಬೆಲ್ಲದ ಕ್ರ್ಇಷ್ಣಪ್ಪನ ಅಂಗಡಿ' ಅಂತ ಒಂದು ಇದೆ. ಬಹಳ ಹಳೆಯ ಕಾಲದಿಂದಲೂ ಇರುವ ಇದು 'ಸಾಗರೀಕ'ರಿಗೆಲ್ಲ ಚಿರಪರಿಚಿತ. ಪ್ಯಾಟೆಗೆ ಹೋದವರೆಲ್ಲ ಬಸ್ ಬರಲಿಕ್ಕೆ ಸಮಯವಿದೆ ಎಂದಾದರೆ ಸುಸ್ತಾರಿಸಿಕೊಳ್ಳಲಿಕ್ಕೆ ಬೆಲ್ಲದ ಕ್ರ್ಇಷ್ಣಪ್ಪನ ಅಂಗಡಿ ಹೊಕ್ಕುತ್ತಾರೆ. ನಮ್ಮ ಕುಟ್ಟು ಭಟ್ರೂ ಅಲ್ಲಿಗೇ ಹೋದ್ರು.
ಅಲ್ಲಿ ಅದಾಗಲೇ ನಮ್ಮೂರಿನವರೊಬ್ಬರು ಕುಳಿತಿದ್ದರು. ಕುಟ್ಟು ಭಟ್ರು ಅವರ ಪಕ್ಕ ಹೋಗಿ ಕೂತ್ರು. ಆಗ ಬೆಲ್ಲದ ಕ್ರಿಷ್ಣಪ್ಪ ಹಿಂದಿನ ದಿನ ನಡೆದ ಕತೆಯೊಂದನ್ನು ಹೇಳ್ತಿದ್ನಂತೆ:
ಬೆಲ್ಲದ ಕ್ರಿಷ್ಣಪ್ಪನ ಅಂಗಡಿ ಎದುರು ಒಂದು ಪಾತ್ರೆ ಅಂಗಡಿಯಿದೆ. ಅಲ್ಲಿಗೆ ನಿನ್ನೆ ಒಬ್ಬ ಭಜಾರಿ ಹೆಂಗಸು ಹೊಕ್ಕಳಂತೆ. ಭಜಾರಿ ಹೆಂಗಸು ಯಾಕೆಂದರೆ ಅವಳು ತುಂಬಾ ತುಂಬಾ ದಪ್ಪಗಿದ್ದಳಂತೆ. ಎಷ್ಟು ದಪ್ಪಗಿದ್ದಳು ಅಂದ್ರೆ ಅಷ್ಟು ದಪ್ಪಗಿದ್ದಳು. ಅವಳು ಪಾತ್ರೆ ಅಂಗಡಿ ಹೊಕ್ಕಾಗ ಅದರ ಮಾಲೀಕ ಚಾ ಕುಡಿಯಲಿಕ್ಕೋ ಏನಕ್ಕೋ ಹೊರಗಡೆ ಹೋಗಿದ್ದ. ಈ ಹೆಂಗಸು ಯಾರೂ ಇಲ್ಲದ್ದು ನೋಡಿ ಒಂದು ದೊಡ್ಡ ದಬರಿಯನ್ನ ಎತ್ತಿ ತನ್ನ ಲಂಗದೊಳಗೆ ಸೇರಿಸಿಬಿಟ್ಟಳಂತೆ!! ಅಷ್ಟರಲ್ಲಿ ಅಂಗಡಿಯವನು ಬಂದ. ಇವಳು ಏನೂ ಆಗದವಳಂತೆ ಅವನ ಬಳಿ ಯಾವುದೋ ಪಾತ್ರೆಯನ್ನು ಕೇಳಿ, ಅದು ಅವಳ ಚೌಕಾಶಿಯ ಮಿತಿಯೊಳಗೆ ಬಾರದೇ, 'ಸರಿ ಹಾಗಾದ್ರೆ' ಎಂದು ಹೊರಟಳಂತೆ.
ಕ್ರಿಷ್ಣಪ್ಪ ತನ್ನ ಅಂಗಡಿಯಲ್ಲೇ ಕುಳಿತು ಇದನ್ನೆಲ್ಲಾ ನೋಡುತ್ತಿದ್ದನಲ್ಲ, ಅವಳು ಹೊರಡುತ್ತಿದ್ದಂತೆ ಇವನು ಹೋಗಿ ತಡೆದು ನಿಲ್ಲಿಸಿ, ಪಾತ್ರೆ ಅಂಗಡಿಯವನಿಗೆ ವಿಷಯವನ್ನು ಹೇಳಿದನಂತೆ. ಇಬ್ಬರೂ ಸೇರಿ ಸರಿಯಾಗಿ ಗದರಿಸಿದ ಮೇಲೆ (ಅಷ್ಟರಲ್ಲಿ ಒಂದಷ್ಟು ಜನರೂ ಸೇರಿದ್ದರು) ಅವಳು ಕದ್ದುದನ್ನು ಒಪ್ಪಿ ತನ್ನ ಲಂಗದೊಳಗಿಂದ ದಬರಿಯನ್ನು ತೆಗೆದು ಕೊಟ್ಟು ಹೋದಳಂತೆ.
-ಕತೆ ಕೇಳುತ್ತಿದ್ದ ನಮ್ಮ ಕುಟ್ಟು ಭಟ್ರು ಒಂದು ದೀರ್ಘ ನಿಟ್ಟುಸಿರು ಬಿಟ್ಟು ಏನಂದ್ರಂತೆ ಗೊತ್ತಾ? "ಅಲ್ಲ ಮಾರಾಯಾ.. ದಬರಿ ಆಗಿದ್ರಿಂದ ಬಚಾವು.. ಇನ್ನೇನಾದ್ರೂ ಸಣ್ಣ-ಪುಟ್ಟ ಲೋಟವೋ ಚಮಚವೋ ಆಗಿದ್ದಿದ್ರೆ ಸಿಗ್ತಾನೇ ಇರ್ಲಿಲ್ವಲ್ಲೋ ಮಾರಾಯಾ..!!"
['ದಟ್ಸ್ಕನ್ನಡ'ದಲ್ಲಿ ಮೋಟುಗೋಡೆಯ ಒಳಗೆ ಸೇರಿಸಬಹುದಾದಂತಹ ಲೇಖನವೊಂದು ಪ್ರಕಟವಾಗಿದೆ. ಆಸಕ್ತರಿಗಾಗಿ :ಕೊಂಡಿ.]
3 comments:
too good! kuttu bhatru bajari hengasina kathe... eshtu nijavo eshtu sullo aadare ododakkantu maja kodtu!
Barjari iddo Kuttu Bhatru Kathe.
RAGHAVENDRA BUSSU heliddanthu SuUUUPPER!! Keep it UP.
Post a Comment