ಫೋಬಿಯಾ ಎಂದರೆ ಭಯ ಎಂದು ಎಲ್ಲೋ ಒಂದು ಕಡೆ ತಪ್ಪಾಗಿ ಪ್ರಚಾರವಾಗಿಬಿಟ್ಟಿದೆ. ಜನರ ಮನಸ್ಸಿನಲ್ಲಿ ಆ ಹೆಸರನ್ನು ಕೇಳಿದರೇನೇ ಒಂದು ಥರ ಭಯವುಂಟಾಗುತ್ತೆ. ಫೋಬಿಯೋಫೋಬಿಯಾ ಎನ್ನುತ್ತಾರೆ ಇದನ್ನು. ನನಗೆ ಯಾವುದಾದರೂ ಫೋಬಿಯಾ ಇರಬಹುದೇ ಎಂಬ ಭಯ!
ವಾಸ್ತವದಲ್ಲಿ, ಫೋಬಿಯಾ ಪದಕ್ಕೆ ನಾನಾರ್ಥಗಳಿವೆ. ಭಯ ಎಂಬುದೂ ಒಂದು ಅಷ್ಟೆ. ಯಾವುದಾದರೂ ವಸ್ತು, ವ್ಯಕ್ತಿ, ಘಟನೆ ಬಗ್ಗೆ ಅಸಹ್ಯ, ಆತಂಕ, ತಳಮಳ - ಇವಕ್ಕೂ ಫೋಬಿಯಾ ಎಂದೇ ಕರೆಯುತ್ತೆ ಮನಸ್‍ಶಾಸ್ತ್ರ. ಕೆಲವರಿಗೆ ಈ ನಮ್ಮ ಮೋಟುಗೋಡೆಯನ್ನು ಇಣುಕಲು ಕಸಿವಿಸಿಯಾಗುತ್ತೆ. ಇಷ್ಟವಾಗುವುದಿಲ್ಲ. "ಏನಿದು, ಛೀ!" ಎನ್ನುವವರೂ ಇರಬಹುದು. ಮೋಟುಗೋಡೆಯ ವಿಷಯ ಹಾಗಿರಲಿ. ಇನ್ನೂ ಹಲವು ಸುರತ (pornography) ತಾಣಗಳಿರುವ ಕಡೆ ಇಂಥಾ ಜನರು ತಲೆಯೆತ್ತಿಯೂ ನೋಡಲೊಲ್ಲರು. ಎರೋಟೋಫೋಬಿಯಾದ ಲಕ್ಷಣ ಇದು. ಈ ಜನರು ಸುರತ ಸಾಹಿತ್ಯ, ಅಶ್ಲೀಲ ದೃಶ್ಯ, ಲೈಂಗಿಕ ಚರ್ಚೆ - ಇವುಗಳಿಂದ ದೂರ ಇರಲು ಬಯಸುತ್ತಾರೆ.
ಕೆಲವು ವರ್ಷಗಳ ಹಿಂದೆ ನಾನು ಒಂದು ತಕ್ಕಮಟ್ಟಗಿನ "ಖ್ಯಾತ" ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಸಹೋದ್ಯೋಗಿಯೊಬ್ಬರು "ಈ ಆಫೀಸಿನಿಂದ ಆಚೆ ಹೋದರೆ ಸಾಕು ಎನ್ನಿಸುತ್ತೆ ದಿನಾಲೂ ನನಗೆ. ಪ್ರತೀ ಸಲ 'ಬಾಸ್' ನನ್ನ ಕರೆದಾಗಲೂ ಎದೆ ಹೊಡೆದುಕೊಳ್ಳುತ್ತೆ" ಎಂದರು. ನಾನು, "ಅಯ್ಯೋ, ಹೆದರಿಕೊಳ್ಳೋದ್ ಯಾಕೆ? ನೀವೇನ್ ತಪ್ಪು ಮಾಡಿದ್ದೀರಾ?" ಎಂದು ಪ್ರಶ್ನಿಸಿದೆ. "ಅಲ್ಲಾ, ಅದಕ್ಕಲ್ಲಾ, 'boss' is a gay. ನನ್ನೂ ಎಲ್ಲಿ......." ಎಂದು ತಮ್ಮ ಹೋಮೋಫೋಬಿಯಾ ಪ್ರದರ್ಶನ ಮಾಡಿದರು. ಅವರ ಫೋಬಿಯಾ ಅವರನ್ನು ಬಹಳ ಬೇಗ ಅಲ್ಲಿಂದ ರಾಜಿನಾಮೆ ಕೊಡಿಸಿತ್ತು.
ಯಾರೇ ಆಗಲೀ ಕೆಲವು ವಿಷಯಕ್ಕೆ "ಲಜ್ಜೆ"ಯು ಇರಲೇ ಬೇಕು. "... ಕಾಮಾತುರಾಣಾಂ ನ ಭಯಂ ನ ಲಜ್ಜಾ" ಎಂಬ ಸುಭಾಷಿತವೊಂದಿದೆ. ಈ ಲಜ್ಜೆಯೂ ಸಹ ಮನಸ್‍ಶಾಸ್ತ್ರಜ್ಞರಿಗೆ ಫೋಬಿಯಾನೇ. ನೈತಿಕವಾಗಿ ಯೋಚಿಸಿದರೆ ಅದು ಮಾನವನ ಉನ್ನತ ಮಟ್ಟದ ಆಲೋಚನೆ. ಆದರೆ ಮನಸ್‍ಶಾಸ್ತ್ರದ ಪ್ರಕಾರ ಅದೊಂದು ದೌರ್ಬಲ್ಯವಷ್ಟೆ. ಲಜ್ಜೆಯಿರುವವನಿಗೆ, ಅಂದರೆ, ತಾನು 'ತಪ್ಪು' ಮಾಡಿಬಿಡಬಹುದು ಎಂಬ ಸಾತ್ತ್ವಿಕ (?) ಭಯವಿರುವವನಿಗೆ ಹಮಾರ್ಟೋಫೋಬಿಯಾ ಎಂಬ ಸ್ಥಿತಿಯಿದೆಯೆನ್ನುತ್ತಾರೆ. ನಿಮಗೂ ಇದೆಯೇ? ಕಾಮವನ್ನು ಕನಸಿನಲ್ಲಿಯೂ ಬಯಸದವರೂ ಸಹ ಇದ್ದಾರೆ. ಈ ರೀತಿಯ ಉದ್ರೇಕಿತ ಕನಸು ಬಿತ್ತೆಂದರೆ ಮುಗಿಯಿತು, ಯಾವುದೋ ದೊಡ್ಡ ಪಾಪಕೃತ್ಯವೆಸಗಿದ್ದಾರೇನೋ ಎಂದುಕೊಂಡುಬಿಡುತ್ತಾರೆ. ಇವರಿಗೆ ಓನೀರೋಗ್ಮೋಫೋಬಿಯಾ ಇದೆಯೆಂದರ್ಥ.
ತಾವೇ 'ತಪ್ಪು' ಮಾಡಿಬಿಡಬಹುದೆಂಬ ಭಯವೊಂದಾದರೆ ತಮ್ಮ ಮೇಲೆ 'ತಪ್ಪು' ಎಸಗಬಹುದೆಂಬ ಭಯ ಇನ್ನೊಂದು ಬಗೆಯದು. ಸಾಮಾನ್ಯವಾಗಿ ಇದು ಹೆಂಗಸರಿಗೆ ಇರುವ ಭಯ. ಇದಕ್ಕೆ ಸಾಮಾಜಿಕ ಕಾರಣಗಳು ಅನೇಕವಿರಬಹುದು. "ಕೆಟ್ಟ" ಪುರುಷವರ್ಗ ಎಂದು ಸ್ತ್ರೀವಾದಿಗಳು ಸಮಾಜದಲ್ಲಿರುವ ಗಂಡಸರನ್ನೆಲ್ಲಾ ಕಾಮುಕರೆಂದು ದೂರಬಹುದು. ಅದೇನೇ ಇರಲಿ. ಈ "ಕೆಟ್ಟ" ಸಮಾಜದ ಪರಿಣಾಮದಿಂದ ತಮ್ಮ ಮೇಲೆ ಲೈಂಗಿಕ ಅತ್ಯಾಚಾರವಾಗ ಬಹುದೇ? ಎಂಬ ಭಯವುಂಟಾಗುತ್ತಲ್ಲಾ, ಆಗ್ರಫೋಬಿಯಾ ಅಥವಾ ಕಾಂಟ್ರೆಲ್ಟೋಫೋಬಿಯಾ ಇದೆಯಲ್ಲಾ ಇದು ದೂರವಾದರೆ ಸಮಾಜವನ್ನು ತಿದ್ದಲು ಸಹಕಾರಿಯಾದೀತು. ಈ ಫೋಬಿಯಾ ಇರುವ ಹೆಂಗಸರು ಇನ್ನೊಂದು ತಿಳಿದುಕೊಳ್ಳುವುದು ಉಚಿತ. ತಮ್ಮ ಸೌಂದರ್ಯವೇ ಅನೇಕ ಸಲ ತಮ್ಮ ಅಸ್ತ್ರವೂ ಆಗಿರುತ್ತೆ. ತಮಗಿರುವ ಈ ಫೋಬಿಯಾದಂತೆ ಪುರುಷರಿಗೆ ವಿಶೇಷವಾಗಿ ಉಂಟಾಗುವ ಫೋಬಿಯಾಗಳೆಂದರೆ ಕ್ಯಾಲಿಗೈನೀಫೋಬಿಯಾ ಅಥವಾ ವೆನುಸ್ಟ್ರಾಫೋಬಿಯಾ - ಈ ಫೋಬಿಯಾದವರು ಸುಂದರವಾದ ಹೆಣ್ಣುಗಳಿಂದ ಸಾಮಾನ್ಯ ದೂರ ಇರುತ್ತಾರೆ. ಅವರನ್ನು ನೇರವಾಗಿ ನೋಡುವುದಿಲ್ಲ. ಮಾತನಾಡಲು ಹಿಂಜರಿಯುತ್ತಾರೆ; ಗೈನೋಫೋಬಿಯಾ - ಇವರು ಸುಂದರವಾದ ಹೆಣ್ಣೇನು, ಹೆಣ್ಣು ಕುಲದಿಂದಲೇ ದೂರ ಇರಲು ಬಯಸುತ್ತಾರೆ.
ಎಲ್ಲ ಫೋಬಿಯಾಗಳೂ ಶಾಶ್ವತವಲ್ಲ. ಕೆಲವೇ ನಿಮಿಷಗಳು ಇದ್ದು ಮತ್ತೆ ಮಾಯವಾಗಬಹುದು. ಇನ್ನು ಕೆಲವು ದನಗಟ್ಟಲೆ ಜ್ವರದಂತೆ ಕಾಡಬಹುದು. ಮತ್ತೆ ಕೆಲವು ಡಯಾಬಿಟಿಸ್ಸಿನಂತೆ ಸಾಯುವವರೆಗೂ (ಅದು ನಮ್ಮನ್ನು ಸಾಯಿಸುವವರೆಗೂ) ನಮ್ಮೊಡನೆ ಇರಬಹುದು. ಒಬ್ಬರಿಗೆ ಎಷ್ಟು ಫೋಬಿಯಾಗಳು ಬೇಕಾದರೂ ಇರಬಹುದು. ಅನೇಕ ಪುರುಷರಿಗೆ ಸ್ತ್ರೀಯರನ್ನು ಕಂಡರೆ ಮುಜುಗರವಾಗುತ್ತೆ. ಅದೇ ರೀತಿ ಅನೇಕ ಸ್ತ್ರೀಯರಿಗೂ ಸಹ ಪುರುಷರನ್ನು ಕಂಡರೆ ಅಷ್ಟಕ್ಕಷ್ಟೆ. ಬಸ್ಸಿನಲ್ಲಿ ನಾವು ನೋಡುತ್ತಲೇ ಇರುತ್ತೇವೆ, ಗಂಡಸರ ಸೀಟಿನಲ್ಲಿ ಜಾಗ ಖಾಲಿಯಿದ್ದರೂ ಹೆಂಗಸೊಬ್ಬರು ಬಂದು ಕೂರುವುದೇ ಇಲ್ಲ. ಹಾಗೆ ತದ್ವಿರುದ್ಧ ಕೂಡ. ಇದಕ್ಕೆ ಹೆಟಿರೋಫೋಬಿಯಾ ಎನ್ನುತ್ತಾರೆ. ವಿರುದ್ಧ ಲಿಂಗಗಳ ಬಗ್ಗೆ ಇರುವ ಮುಜುಗರ. ಸಾಮಾನ್ಯವಾಗಿ ಅಪರಿಚಿತರಲ್ಲಿ ಇದು ಇರುತ್ತೆ. ನಮ್ಮ ಮನೆಯವರ ಬಗ್ಗೆಯೇ ಈ 'ಭಾವನೆ' ಬರುವುದು ವಿರಳ. (ಒಳ್ಳೆಯ ಭಾವನೆಯಿದ್ದರೆ ಅದಕ್ಕೆ ಫೀಲಿಯಾ ಎಂಬ ಪದವನ್ನೂ, ಕೆಟ್ಟ ಭಾವನೆಯಿದ್ದರೆ ಅದಕ್ಕೆ ಫೋಬಿಯಾ ಎಂಬ ಪದವನ್ನೂ ಸೇರಿಸುವುದು ಮನಸ್‍ಶಾಸ್ತ್ರದ ಗುಣ).
ಬೆತ್ತಲೆ ಸಿನಿಮಾಗಳನ್ನು ನೋಡಲು ಹಿಂಜರಿಯುತ್ತಾರೆ ಅನೇಕ ಸಭ್ಯರು. ಸಿನಿಮಾ ಹಾಗಿರಲಿ, ಚಿತ್ರಪಟವನ್ನೂ ನೋಡಲಾಗುವುದಿಲ್ಲ ಇವರುಗಳಿಗೆ. ಜಿಮ್ನೋಫೋಬಿಯಾ ಅಥವಾ ನ್ಯೂಡೋಫೋಬಿಯಾ ಎಂದರೆ ಇದೇ. ಬೆತ್ತಲೆ ಎಂಬ ಪದವೇ ಇವರಿಗೆ ಅಶ್ಲೀಲ. ಇನ್ನು ಕೆಲವರು ಇವರಿಗಿಂತ ಸ್ವಲ್ಪ ಭಿನ್ನರು. ಇವರಿಗೆ 'ಸರಸ'ವೆಂದರೆ ಅಶ್ಲೀಲ. ತಮ್ಮನ್ನು ತಾವು ಸರಸದಲ್ಲಿ, ಪ್ರಣಯದಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯುತ್ತಾರೆ - ಸರ್ಮಾಸೋಫೋಬಿಯಾದ ಜನ. ಮುಂದಿನ ರೀತಿಯ ಜನ ಸರಸವಾಡಲು ಇವರದೇನೂ ಅಡ್ಡಿಯಿಲ್ಲ, ಆದರೆ ಬೇರೊಬ್ಬ ವ್ಯಕ್ತಿಯೆದುರು (ಆ ವ್ಯಕ್ತಿ ಯಾರೇ ಆಗಿದ್ದರೂ) ಬೆತ್ತಲಾಗಲು ಇವರದು ಹಿಂಜರಿಕೆ - ಡೈಶಾಬಿಲಿಯೋಫೋಬಿಯಾ! ಪ್ರಣಯೋನ್ನತಕಾಲದಲ್ಲಿ ಸ್ತ್ರೀ "ಅಂಗವನ್ನು" ನೋಡಲು ಅಂಜುವವರೂ ಇದ್ದಾರೆ! ಯೂರೋಟೋಫೋಬಿಯಾ ಅಥವಾ ಕೋಲ್ಪೋಫೋಬಿಯಾ ಇತ್ತೆಂದರೆ ಮುಗಿಯಿತು, ಸಮೃದ್ಧರಾಗಿದ್ದರೂ ಸ್ತ್ರೀ-ಸಂಗ ಮಾಡರು. ಇದೇ ರೀತಿ ಉದ್ರೇಕಿತ ಶಿಶ್ನವನ್ನು ನೋಡಲೂ ಸಹ ಅಂಜುವವರೂ ಇದ್ದಾರೆ! ಮೆಡಾರ್ಥೋಫೋಬಿಯಾ ಇರುವ ಹೆಣ್ಣು ಪುರುಷಸಂಗ ಮಾಡಲು ಚಿತ್ರಹಿಂಸೆ ಪಡುತ್ತಾಳೆ. ಪ್ರಣಯಕ್ಕೆ ಬಹಳ ಮುಖ್ಯವಾದ ಸಂಗತಿಯೆಂದು ತಜ್ಞರು ಹೇಳುವುದು ದೈಹಿಕ ಘಮ. ಪರ್ಫ್ಯೂಮುಗಳು, ಹೂಗಳು, ಸಾಬೂನು ಇವೆಲ್ಲಾ ಬಳಸುವುದೇ ಸಂಗಾತಿಯನ್ನು ಉದ್ರೇಕಗೊಳಿಸಲು ಎನ್ನುತ್ತಾರೆ. ಆದರೆ ಈ ಘಮವೇ ವರಿಯಾದೀತು ಬ್ರಾಮಿಡ್ರೋಫೋಬಿಯಾ ಇರುವ ಜನಕ್ಕೆ! ಕೆಲವು ಪುರುಷರಿಗೆ ತಮ್ಮ ಲೈಂಗಿಕ ಉದ್ರೇಕವೆಲ್ಲಿ ಕಡಿಮೆಯಾಗಿಬಿಡುತ್ತೋ ಎಂಬ ಚಿಂತೆ, ಆತಂಕ - ಮೆಡೋಮೆಲಾಸುಫೋಬಿಯಾ. ಮತ್ತೆ ಕೆಲವರಿಗೆ ಲೈಂಗಿಕ ಕ್ರಿಯೆಯೆಂದರೇ ಅಲರ್ಜಿ - ಜೀನೋಫೋಬಿಯಾ!
ಗಮನಿಸಿ - ಸೆಕ್ಸೋಫೋಬಿಯಾ ಎಂದರೆ ಮೇಲೆ ಓದಿದ ಹೆಟಿರೋಫೋಬಿಯಾ ಎಂದೇ ಅರ್ಥ. ಹೆಣ್ಣಿಗೆ ಗಂಡೆಂದರೆ, ಗಂಡಿಗೆ ಹೆಣ್ಣೆಂದರೆ ಮುಜುಗರ, ಅಥವಾ ಅಸಹ್ಯ, ಅಥವಾ ದ್ವೇಷ, ಅಥವಾ ಭಯ, ಅಥವಾ....
ಮತ್ತೊಂದೇ ಒಂದು ಫೋಬಿಯಾದೊಂದಿಗೆ ಇವತ್ತಿನ ಮೋಟುಗೋಡೆ ಪ್ರವಚನವನ್ನು ಮುಗಿಸೋಣ. ಪ್ಯಾಂಟೋಫೋಬಿಯಾ ಎಂದು. ಪ್ಯಾಂಟ್ ಕಂಡರೆ ಭಯವೆಂದುಕೊಂಡಿರಾ? ಇಲ್ಲ. ಹೀಗೆಂದರೆ "ಎಲ್ಲದಕ್ಕೂ" ಅಸಹ್ಯ, ಅಥವಾ ಭಯ, ಅಥವಾ ದ್ವೇಷ, ಅಥವಾ ತಿರಸ್ಕಾರ, ಅಥವಾ ಮುಜುಗರ, ಅಥವಾ..... ಇರುವವರು ಎಂದು.
ಒಟ್ಟಿನಲ್ಲಿ ಪ್ರತಿಯೊಂದು ಭಾವನೆಯೂ ಫೀಲಿಯಾ ಆಗಿರಬೇಕು, ಅಥವಾ ಫೋಬಿಯಾ ಆಗಿರಬೇಕು ಎಂದು ಗೊತ್ತಾಯಿತಷ್ಟೆ. ಮುಂದಿನ ಪ್ರವಚನದಲ್ಲಿ ಮೋಟುಗೋಡೆಯ ಪರಿಧಿಯೊಳಗಿನ ಫೀಲಿಯಾಗಳ ಬಗ್ಗೆ ಗಮನ ಹರಿಸೋಣ. ಬದುಕು ಫೋಬಿಯಾರಹಿತವಾಗಿರಲಿ!
-ಅ
28.01.2009
11PM
3 comments:
ಅಲ್ಲಾ, ಮೋಟುಗೋಡೆಯ ಕುಂಬಿಯ ಮೇಲೆ ಇದ್ದ ಮಾನವರೆಲ್ಲಾ ಎಲ್ಲಿ ಹೋದರು? ಅಥವಾ ತಮ್ಮ ವಸ್ತ್ರಗಳನ್ನು ಕಳಚಿ, ಅಸ್ತ್ರಗಳನ್ನು ಪ್ರದರ್ಶಿಸುತ್ತಾ ವಾನರರ ಸೋಗು ಹಾಕಿಕೊಂಡಿದ್ದಾರೊ? ಇದು ಯಾವ ಫೋಬಿಯಾ ಸ್ವಾಮಿ?
super phobia
ಹೌದಲ್ಲಾ..ಛೇ ಛೇ.. ಬಟ್ಟೆ ಹಾಕ್ರೀ ಕೋತಿಗಳಿಗೆ.. atleast ಒಂದೊಂದು ಕೌಪಿನವಾದ್ರೂ!
ಕೋತಿಗಳ ಮಾನ ಮೂರ್ಕಾಸಿಗೆ ಹರಾಜಾಗ್ತಿದೆ..
ಒಂದೆರಡು ಕೋತಿಗಳ್ ನೋಡಿ ಹೆಂಗ್ ನಿಲ್ಸ್ಕೊಂಡು ಪೋಸು ಕೊಟ್ಟಿವೆ.. ಬಾಲಗಳನ್ನ.
ಕೋತಿಗಳಿಗೆ ಫ್ಹೋಭಿಯಾಗಳು ಕಡಿಮೆ ಅಂತೀರಾ.. :p
Post a Comment