ಯಯಾತಿ... ವಿ.ಎಸ್. ಖಾಂಡೇಕರ್‌ರ ಮರಾಠಿ ಮೂಲದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ. ಹಸ್ತಿನಾಪುರದ ಅರಸು ನಹುಷನ ಮಗ ಯಯಾತಿಯ ವ್ಯಥೆಯ ಬದುಕಿನ ಚಿತ್ರಣವನ್ನು ಖಾಂಡೇಕರ್ ಅದೆಷ್ಟು ಅದ್ಭುತವಾಗಿ ವರ್ಣಿಸುತ್ತಾ ಹೋಗುತ್ತಾರೆಂದರೆ ಓದುತ್ತಿರಬೇಕಾದರೆ ಅದೊಂದು ಕಾದಂಬರಿಯಲ್ಲ, ಕಾವ್ಯ ಎಂದೆನಿಸಿಬಿಡುತ್ತದೆ. ಖಾಂಡೇಕರ್ ಅದರಲ್ಲಿ ಬಳಸುವ ಉಪಮೆಗಳು, ರೂಪಕಗಳು, ಜೀವನಾನುಭವದ ನಿರೂಪಣೆ, ಕಾದಂಬರಿಯ ತಂತ್ರಗಾರಿಕೆ -ಎಲ್ಲಾ ಸೇರಿ, ’ಯಯಾತಿ’ಯ ಓದು ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ. ಅದು ಕೇವಲ ಯಯಾತಿಯ ಕಾಮದ ಕಥೆಯಾಗದೆ, ದೇವಯಾನಿಯ ಸಂಸಾರದ ಕಥೆಯಾಗಿದೆ, ಶರ್ಮಿಷ್ಠೆಯ ಪ್ರೀತಿಯ ಕಥೆಯಾಗಿದೆ ಹಾಗೂ ಕಚನ ಭಕ್ತಿಯ ಪ್ರಗಾಥವಾಗಿದೆ. ಅದನ್ನು ಅಷ್ಟೇ ಚಂದವಾಗಿ ಕನ್ನಡಕ್ಕೆ ತಂದವರು ವಿ.ಎಂ. ಇನಾಂದಾರ್.
ಹೇಳುವುದೋ ಬೇಡವೋ ಎಂಬ ಅನುಮಾನದೊಂದಿಗೇ ತನ್ನ ಕಥೆಯನ್ನು ಶುರು ಮಾಡುತ್ತಾನೆ ಯಯಾತಿ.. ಆದರೆ ಏನನ್ನೂ ಮುಚ್ಚಿಡದೇ ಹೇಳುತ್ತಾ ಹೋಗುತ್ತಾನೆ..
"..ಆ ರಾತ್ರಿ ಮುಕುಲಿಕೆಯ ಬಾಹುಪಾಶದಲ್ಲಿ ನಾನು -ಅಥವಾ- ನನ್ನ ಬಾಹುಪಾಶದಲ್ಲಿ ಮುಕುಲಿಕೆ.. ಅಂದು ರಾತ್ರಿ ಯಾರು ಯಾರ ಬಾಹುಪಾಶದಲ್ಲಿದ್ದರು ಎನ್ನುವುದನ್ನು ಮದನ ಕೂಡ ಹೇಳಲಾರ! ಮುಕುಲಿಕೆಯ ಕೈಯನ್ನು ನಾನು ಎತ್ತಿಕೊಂಡದ್ದೇ ತಡ, ಕ್ಷಣಾರ್ಧದಲ್ಲಿ ಹೊರಪ್ರಪಂಚದೊಡನಿದ್ದ ನನ್ನ ಸಂಬಂಧ ಕಡಿದುಹೋಯಿತು. ನಾನು ಯುವರಾಜನಾಗಿ ಉಳಿದಿರಲಿಲ್ಲ. ಆಕೆ ದಾಸಿಯಾಗಿ ಉಳಿದಿರಲಿಲ್ಲ. ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುವ ಎರಡು ಜೀವಿಗಳು, ಎರಡು ಹಕ್ಕಿಗಳು, ಎರಡು ಚುಕ್ಕೆಗಳು..
ನಾವು ಆ ಮಹಲಿನಲ್ಲಿರಲಿಲ್ಲ; ಹಸ್ತಿನಾಪುರದಲ್ಲಿರಲಿಲ್ಲ; ಈ ಪ್ರಪಂಚದಲ್ಲಿಯೇ ಇರಲಿಲ್ಲ.. ಅನಂತವಾದ ಆಕಾಶದಲ್ಲಿ, ತಾರಾಮಂಡಲದ ಆಚೆಯಲ್ಲಿ, ದುಃಖ, ರೋಗ, ಮೃತ್ಯು ಎಂಬಂಥ ಮಾತುಗಳ ಧ್ವನಿ ಕೂಡ ಬಂದು ತಲುಪಲಾರದ ದೂರವನ್ನು ನಾವು ಸೇರಿದ್ದೆವು. ಆ ಲೋಕವೇ ಬೇರೆ. ಚೆಲುವು ತುಂಬಿದ್ದಷ್ಟೂ ದೂಳಿನಿಂದ ತುಂಬಿದ್ದು; ಮೋಹಕವಾಗಿದ್ದರೂ ಸುಡಬಲ್ಲದ್ದು! ಆ ಪ್ರಪಂಚ ಕೇವಲ ನಮ್ಮದಾಗಿತ್ತು. ಅದೊಂದು ಮಧುರವಾದ ಮೂರ್ಛೆಯೇ? ವಿಲಕ್ಷಣವಾದ ಹುಚ್ಚೇ? ಅಥವಾ ಚೆಲುವಾದ ಸಮಾಧಿಸ್ಥಿತಿಯೇ?
ಯಾರು ಹೇಳಬೇಕು?
ಮುಕುಲಿಕೆಯ ಹಾಗೂ ನನ್ನ ತುಟಿಗಳು ಒಂದಾದ ಕ್ಷಣಕ್ಕೆ ನನ್ನ ಮನಸ್ಸಿನಲ್ಲಿಯ ಸಾವಿನ ಭೀತಿ ಮಾಯವಾಯಿತು. ಅಂದು ರಾತ್ರಿ ನಾನು ಆಕೆಯನ್ನು ಚುಂಬಿಸಿದ್ದೆಷ್ಟು, ಆಕೆ ನನ್ನನ್ನು ಚುಂಬಿಸಿದ್ದೆಷ್ಟು- ಆಕಾಶದಲ್ಲಿಯ ಚುಕ್ಕೆಗಳನ್ನು ಯಾರಾದರೂ ಎಣಿಸುವುದು ಸಾಧ್ಯವೇ?
ಸ್ತ್ರೀಸೌಂದರ್ಯದ ವರ್ಣನೆಯನ್ನು ನಾನು ಕಾವ್ಯದಲ್ಲಿ ಓದಿದ್ದೆ. ಮುಸುಕುಮುಸುಕಾಗಿ ಅದರ ಆಕರ್ಷಣೆ ಕೆಲವು ವರ್ಷಗಳಿಂದ ನನ್ನನ್ನು ಸೆಳೆಯತೊಡಗಿತ್ತು. ಆಕರ್ಷಣೆಯ ಆನಂದದ ಅಸ್ಪಷ್ಟ ಕಲ್ಪನೆಯೂ ನನ್ನಲ್ಲಿ ಬೆಳೆದಿತ್ತು. ಆದರೆ ಆ ಆನಂದವೆಲ್ಲ ಎಳೆಯ ಮಗು ಆಕಾಶದಲ್ಲಿಯ ಚಂದ್ರನಿಗಾಗಿ ಹಾತೊರೆಯುವಂಥದಾಗಿತ್ತು. ಚೆಲುವೆಯಾದ ಯುವತಿಯ ಸಹವಾಸ ಎಷ್ಟು ಉನ್ಮಾದಕಾರಿಯಾಗಿರಬಹುದು, ಆಕೆಯ ಅಂಗಾಂಗಗಳು ಸ್ವರ್ಗಸುಖದ ತುಷಾರಗಳನ್ನು ಕ್ಷಣಕ್ಷಣಕ್ಕೆ ಹೇಗೆ ಚಿಮ್ಮಿ ತೂರಬಲ್ಲವು ಎನ್ನುವುದರ ಅನುಭವ ಅಂದು ರಾತಿ ಮೊದಲಬಾರಿಗೆ ನನ್ನದಾಯಿತು. ಅದಕ್ಕೆ ನಾನು ಸಂಪೂರ್ಣವಾಗಿ ಮನಸೋತೆ, ಮೈಮರೆತುಹೋದೆ."
-ಅದು ಯಯಾತಿಯ ಪ್ರಥಮ ಪ್ರಣಯದ ಅನುಭವ! ಆಮೇಲೆ ಆತ ಅನೇಕ ಯುವತಿಯರೊಂದಿಗೆ ಇಂತಹ ಅನುಭವಕ್ಕೆ ಫಕ್ಕಾಗುತ್ತಾನೆ. ಕಾಮಸುಖವಿಲಾಸಗಳು ಅವನಿಗೆ ಧಾರೆಯಾಗುತ್ತವೆ. ಆದರೆ ಅವನು ಹುಡುಕುತ್ತಿದ್ದ ’ಆ ಸುಖ’ ಮಾತ್ರ ಅವನಿಗೆ ಸಿಗುವುದಿಲ್ಲ. ಆತ ಪ್ರತಿಕ್ಷಣ ಕೊರಗುತ್ತಿರುತ್ತಾನೆ. ಹಿಡಿ ಪ್ರೀತಿಗಾಗಿ ಹಂಬಲಿಸುತ್ತಿರುತ್ತಾನೆ.
ಅವನ ಮಿಕ್ಕುಳಿದ ಪ್ರಣಯದ ವರ್ಣನೆಗಳನ್ನು ಮತ್ಯಾವಾಗಲಾದರೂ ನೋಡೋಣ. ಸಧ್ಯ, ಖಾಂಡೇಕರರಿಗೊಂದು ಸಲಾಮ್ ಹೇಳೋಣ. ಆ ಕಾದಂಬರಿಯನ್ನು ಮತ್ತೆ ಮತ್ತೆ ಓದಿ ಅನುಭವಿಸೋಣ.
1 comment:
ಯಯಾತಿ ಮಹಾಕಾಮುಕ. ಖಾಂಡೇಕರರು ಒಳ್ಳೆಯ ವಿವರಗಳನ್ನು ನೀಡಿದ್ದಾರೆ. ರುಚಿಕಟ್ಟಾದ ಭಾಗಗಳನ್ನು ಹೆಕ್ಕಿ ಹೆಕ್ಕಿ ನಮಗೆ ಉಣಬಡಿಸಲು ನಿಮ್ಮಲ್ಲಿ indent ಮಂಡಿಸುತ್ತಿದ್ದೇನೆ.
Post a Comment