Tuesday, October 26, 2010

ಕೃಷ್ಣನ್ ಲವ್ ಸ್ಟೋರಿ

-ಪರಮೇಶ್ವರ ಗುರುಸ್ವಾಮಿ

ಹನ್ನೆರಡನೆಯ ಶತಮಾನದ ಸಂಸ್ಕೃತ ಕವಿ ಜಯದೇವ ತನ್ನ ಶೃಂಗಾರ ಕಾವ್ಯ, ‘ಗೀತ ಗೋವಿಂದ’ದಲ್ಲಿ, ಕೃಷ್ಣ ಮತ್ತು ಗೋಪಿಕೆಯರ ಅದರಲ್ಲೂ ರಾಧೆs ಮತ್ತು ಕೃಷ್ಣರ ಪ್ರಣಯವನ್ನು ರಸಿಕತೆಯಿಂದ ವರ್ಣಿಸಿದ್ದಾನೆ. ಆತ್ಮವು ಭಗವಂತನಿಗಾಗಿ ಕಾತರಿಸುವುದು ಈ ಪದ್ಯಗಳಲ್ಲಿ ಪ್ರಣಯದ ಅನ್ಯೋಕ್ತಿಯಾಗಿದೆ. ನಮ್ಮ ಸಂಗೀತ ಮತ್ತು ಚಿತ್ರಕಲೆಗಳ ಮೇಲೆ ಜಯದೇವನ ಈ ಕೃತಿ ಅಪಾರ ಪ್ರಭಾವ ಬೀರಿದೆ. ೧೮ನೆಯ ಶತಮಾನದಲ್ಲಿ ಹಿಮಾಲಯದ ತಪ್ಪಲು ಪ್ರದೇಶದಲ್ಲಿ ಉತ್ತುಂಗಕ್ಕೇರಿದ ಚಿಕಣಿ ಅಥವ ಮಿನಿಯೇಚರ್ ಚಿತ್ರಕಲೆ ‘ಪಹಾಡಿ (ಗುಡ್ಡಗಾಡು) ಚಿತ್ರಕಲೆ’ ಎಂದೇ ಜಗತ್ಪ್ರಸಿದ್ಧ.  ಸಸ್ಯಗಳು ಮತ್ತು ಖನಿಜಗಳಿಂದ ಮಾತ್ರ ಸಂಗ್ರಹಿಸಲಾದ ನೈಸರ್ಗಿಕ ಬಣ್ಣಗಳನ್ನು ಬಳಸಿ ರಚಿಸಲಾಗಿರುವ ಪಹಾಡಿ ಶೈಲಿಯ ಮಿನಿಯೇಚರ್ ಚಿತ್ರಗಳು ತಮ್ಮ ಭಾವಗೀತಾತ್ಮಕ, ಕುಸುರಿಯ ಸೂಕ್ಷ್ಮತೆಯಿಂದ, ಚಿತ್ರ ರಚನಾ ಕೌಶಲದಿಂದ, ನಾಜೂಕು ಗುಣಗಳಿಂದ,  ನೈಸರ್ಗಿಕ ಸೌಂದರ್ಯ ಮತ್ತು ಹೆಣ್ಣನ್ನು ಅವಳೆಲ್ಲ ಸೌಂದರ್ಯದೊಂದಿಗೆ ಅಂದಿನ ಅತ್ಯುತ್ತಮ ಮಾದರಿಯಲ್ಲಿ (ಹಾವ ಭಾವ ವಿಲಾಸ ವಿಭ್ರಮಂಗಳನೆಲ್ಲ ಸೇರಿಸಿ) ಚಿತ್ರಿಸಿರುವುದು ಮನ ಸೆಳೆಯುತ್ತದೆ. ಪಹಾಡಿ ಕಲಾವಿದರು ‘ಭಾಗವತ ಪುರಾಣ’, ‘ಗೀತ ಗೋವಿಂದ’, ‘ನಳ ದಮಯಂತಿ’, ‘ರಾಗಮಾಲ’, ‘ಕೃಷ್ಣಲೀಲಾ’, ‘ಸತ್ಸಾಯಿ’ (ಸಪ್ತ ಶತ ಪದ್ಯಗಳು) ಮುಂತಾದ ಸಾಹಿತ್ಯವನ್ನವಲಂಬಿಸಿ ಮನೋಹರವಾದ ಚಿತ್ರಗಳನ್ನು ರಚಿಸಿದ್ದಾರೆ. ಈ ಚಿತ್ರಗಳ ಕೇಂದ್ರ ಶೃಂಗಾರವಾದರೂ ತುಡಿತ ಆಧ್ಯಾತ್ಮಿಕವಾಗಿದೆ (ಹಿಂದು ಪುರಾಣ ಅವಲಂಬಿತ).. ಭಾರತೀಯ ಕಲೆಯಲ್ಲಿ ರಸಾನುಭವವು ಒಂದು ನಿರ್ಧಿಷ್ಟವಾದ ಅನುಕೂಲಕರ ದೃಷ್ಟಿಕೋನವನ್ನು ಮೀರಿ ವಾಸ್ತವದ ಅಸ್ತಿತ್ವವನ್ನು ಸಂವಹನಿಸುತ್ತದೆ. ಅದಕ್ಕಾಗಿ ಕಲಾವಿದರು ಹಲವಾರು ಕಣ್ನೆಲೆಗಳನ್ನು ತಮ್ಮ ಕೃತಿಗಳಲ್ಲಿ ದುಡಿಸಿಕೊಂಡಿದ್ದಾರೆ. ಈ ಮಾತನ್ನು ಪಹಾಡಿ ಮಿನಿಯೇಚರ್‌ಗಳಲ್ಲೂ ಕಾಣ ಬಹುದು.

ಗೀತ ಗೋವಿಂದದ ೧೨ನೆಯ ಸರ್ಗದಲ್ಲಿ ಪುಷ್ಪಭರಿತ ಮರದಡಿಯಲ್ಲಿ ಹಸಿರು ಹಾಸಿಗೆಯ ಮೇಲೆ ಕೃಷ್ಣ ರಾಧೇಯರ ಉತ್ಕಟ ಪ್ರಣಯ ಸಮಾಗಮವನ್ನು ಜಯದೇವ ವರ್ಣಿಸಿದ್ದಾನೆ.  ಆ ವರ್ಣನೆಯನ್ನಿಲ್ಲಿ ಪಹಾಡಿ ಕಲಾವಿದ ಅಭಿವ್ಯಕ್ತಿಸಿದ್ದಾನೆ.


‘ಗೀತ ಗೋವಿಂದ’ವನ್ನಾಧರಿಸಿದ ಚಿತ್ರಗಳು ಅವುಗಳಲ್ಲಿ ವ್ಯಕ್ತವಾಗುವ ಸೊಬಗು ಮತ್ತು ಪರಿಪೂರ್ಣತೆಗಳಿಂದಾಗಿ ಮಹತ್ವದ್ದಾಗಿವೆ. ಆನಂದ ಕೆ. ಕೂಮಾರಸ್ವಾಮಿ ಹೇಳುವಂತೆ ಗೀತ ಗೋವಿಂದ ಚಿತ್ರಗಳ ಮಾಯಾ ಲೋಕ, “ಅವಾಸ್ತವ ಅಥವಾ  ಭ್ರಾಮಕವಲ್ಲ, ಕಲ್ಪನೆ ಮತ್ತು ಅನಂತತೆಯ ಲೋಕ. ಪ್ರೇಮ ದಿವ್ಯತೆಯ ಕಣ್ಣುಗಳಲ್ಲಿ ಕಾಣುವುದನ್ನು ನಿರಾಕರಿಸದ ಎಲ್ಲರಿಗೂ (ಈ ಲೋಕ) ಗೋಚರವಾಗುವಂತಹದ್ದು..” 

[ಇದನ್ನು ಮೋಟುಗೋಡೆಗಾಗಿ ಕಳುಹಿಸಿಕೊಟ್ಟ ಶ್ರೀ ಪರಮೇಶ್ವರ ಗುರುಸ್ವಾಮಿಯವರಿಗೆ ನಮ್ಮ ಧನ್ಯವಾದಗಳು.]

1 comment:

ಸೀತಾರಾಮ. ಕೆ. / SITARAM.K said...

ಚೆನ್ನಾಗಿದೆ ಚಿತ್ರ