Showing posts with label ಕೋಡನಕಟ್ಟೆ. Show all posts
Showing posts with label ಕೋಡನಕಟ್ಟೆ. Show all posts

Saturday, June 2, 2007

ಬಾಳಿಗೆ ೨೦ ರುಪಾಯಿ

ಈಗತಾನೆ ತೇಜು ಕೊಟ್ಟು ಕಳುಹಿಸಿದ್ದ CD ನೋಡುತ್ತಿದ್ದೆ. ಅದರಲ್ಲಿ ಕೋಡನಕಟ್ಟೆಯ (ಕ್ವಾಣನ್‘ಕಟ್ಟೆ ಹೇಳೇ ಅಭ್ಯಾಸ, ಇರ್ಲಿ..) ದೇವಸ್ಥಾನದ ಮುಂದೆ, ಬಸ್‘ಸ್ಟ್ಯಾಂಡಿನ್ ಬಳಿಯ ಹುಣಸೇ ಮರ ನೋಡಿ ಇದರ ನೆನಪಾಯ್ತು.

ಸುಮಾರು ವರ್ಷಗಳ ಹಿಂದಿನ ಕತೆ. ಕೋಡನಕಟ್ಟೆಯ ಕಲ್ಯಾಣಮಂಟಪದ ಎದುರಿಗೆ (ಹೊಸಬಾಳೆಗೆ ಹೋಗುವ ಒಳದಾರಿ ಶುರುವಾಗುವುದು ಇಲ್ಲಿಂದಲೇ ಎಂದರು ತಪ್ಪಿಲ್ಲ!) ಮೂರು ನಾಲ್ಕು ಹುಣಸೇ ಮರಗಳಿದ್ದವು. ಈಗಲೂ ಇರಬಹುದು! ಸೈಕಲ್ಲು, ಬೈಕು ಆಗೆಲ್ಲಾ ಸ್ವಲ್ಪ ಕಡಿಮೆಯೇ ಇದ್ದ ಕಾರು ಇತ್ಯಾದಿಗಳನ್ನು ನಿಲ್ಲಿಸಲಾಗುತ್ತಿತ್ತು. ಹೀಗೆ ಒಂದು ಮದುವೆಯ ಊಟದ ನಂತರ ಆ ಜಾಗದಲ್ಲಿ ಕತೆ ನಡೆಯುತ್ತಿತ್ತು.
ನೆನಪಿನಲ್ಲಿರುವವರೆಂದರೆ, ಹಳೆಮನೆ ನರಹರಿಯಣ್ಣ ಹಾಗೂ ದೊಡ್ಡೇರಿ ರವಿ ಮಾವ. ಆಗೆಲ್ಲಾ ಹೊಸತಾಗಿದ್ದ ಬಾಳೆ ಲೆಕ್ಕದ ಊಟದ ಕಡೆಗೆ ಮಾತು ಹರಿಯಿತು.
ಮುಂದಿನದನ್ನು ಸಂಭಾಷಣೆಯ ರೂಪದಲ್ಲೇ ಓದಿ.
"ಹೋಯ್.. ಈಗೆಲ್ಲ ಇಲ್ಲು ಬಾಳೆ ಲೆಕ್ಕ ಮಾಡ್ಬುಟಿದ.. ಎಷ್ಟ್ ಜನ ಊಟ ಮಾಡ್ತ್ವ.. ಅದ್ರಮೇಲೆ ದುಡ್ಡು..
ಅಂದಾಜ್ ಎಷ್ಟ್ ಜನ ಬರ್ಗು ಅಂತ ಮೊದ್ಲೆ ಹೇಳಿರ್ ಆತು ಅಷ್ಟೆ.."

"ಯಾವಾಗಿಂದ ಶುರ್ಮಾಡಿದ್ವೊ ಮಾರಾಯ.. ಗೊತ್ತೇ ಇರ್ಲೆ.. ಮತ್ತೆ.. ಹುಡ್ರ್ ಬಾಳಿಗೆ ಬೇರೆ ಲೆಕ್ವಾ??"

"ಅದ್ನೆಲ್ಲಾ ಒಟ್ಟಿಗೆ ಲೆಕ್ಕಕ್ ಹಿಡಿತ್ವಡ... ಕೆಲ್ಸ್‘ದವ್ರಿಗ್ ಕೊಟ್ಟಿದ್ದು.. ಹೊರ್ಗಿದ್ದವ್ರಿಗೆ.. ಹುಶಾರಿಲ್ದಿದ್ದವ್ರಿಗೆ ಅಂತ ಅಚಿಚೆ ಮನೆವ್ರು ಪ್ಲೇಟಲ್ ಹಾಕ್ಯಂಡ್ ತಗಂಡೋಗಿದ್ದು.. ಎಲ್ಲದು ಲೆಕ್ಕ ಅಂತಾತು"

"ಓಹಾ! ಅಲ್ಲ.. ಅದ್ನೇ ಕೇಳಿದೆ.. ಅದ್ಕೇನಾರು ಕಮ್ಮಿ ರೇಟಿದ್ದ ಅಂತ..??"

"ಹಂಗೆಲ್ಲ ಎಂತು ಇಲ್ಯೋ...

ನಿಂಗವ್ ಒಂತುತ್ತುಣ್ಣಿ, ಎರಡ್ತುತ್ತುಣ್ಣಿ..
ಹತ್ತುತ್ತುಣ್ಣಿ ಐವತ್ತುತ್ತುಣ್ಣಿ..
ಕುಂತುಣ್ಣಿ ಇಲ್ಲ ನಿಂತುಣ್ಣಿ..
ಬಾಳಿಗ್ ೨೦ ರುಪಾಯಿ.."