Monday, March 26, 2007

ಕಾಮಸೂತ್ರ

  • ಗಂಗಾಧರ ಚಿತ್ತಾಲ

ಅಂದು ಬೆತ್ತಲೆ ರಾತ್ರಿ

ಅರಿವೆ ಇರಲಿಲ್ಲ ಪರಿವೆ ಇರಲಿಲ್ಲ
ಅರೆನಾಚಿ ಮರೆಮಾಚಿ ಸರಿವುದಿರಲಿಲ್ಲ
ಜೀವ ಝಲ್ಲೆನೆ ಪೂರ್ಣ ನಗ್ನರಾಗಿ
ಒಬ್ಬರಲ್ಲೊಬ್ಬರು ನಿಮಗ್ನರಾಗಿ
ಮೊದಲ ನಂದನದಲ್ಲಿ ಸೆಳೆದ ಹಸಿವು
ಮತ್ತೆ ಹೊಡಕರಿಸೆ ನಂದದಲೆ ತುಸುವೂ
ಕೊಂಬೆಕೊಂಬೆಗೆ ತೂಗಿ ಬೀಗಿ ಬಯಕೆಯ ಹಣ್ಣು
ಹೊಡೆಯೆ ಕಣ್ಣು

ತಡೆಯಲಾರದೆ ಬಂದೆವೆದುರುಬದುರು
ಮೈಯೆಲ್ಲ ನಡುಕ, ತುಟಿಯೆಲ್ಲ ಅದುರು
ಅಂದು ಬೆತ್ತಲೆ ರಾತ್ರಿ

ಏನು ಮಿದು ನುಣುಪು ಸರ್ವಾಂಗ ಸ್ಪರ್ಶ
ಉಗುರು ಬೆಚ್ಚಗೆ, ಹಗುರು, ಆಹಾ ಜೀವಂಕರ್ಷ
ಮೈಯ ತಬ್ಬಿತು ಮೈಯ ನಗುವು ಹರ್ಷ

ಗುಬ್ಬಕ್ಕಿ ಮೊಲೆ ಬಂದು ಮುದ್ದಾಡಿದುವು ಎದೆಗೆ
ಮಿದ್ದಿದೊಲು ತೊಡೆ ಬಂದು ತೆಕ್ಕೆಯಿಟ್ಟವು ತೊಡೆಗೆ

ತುಟಿಗೆ ತುಟಿ ಮುಟ್ಟಿಸಿತು ಎಂಥ ಮಾತು
ಕಂಠನಾಳದಲೆಲ್ಲ ನಾಗಸಂಪಗೆಯಂತೆ ಉಸಿರು ಹೂತು
ಬಾಯ್ತುಂಬ ಜೇನು, ಕೈತುಂಬ ಮೊಲೆಹೂ
ಮಗ್ಗುಲು ತಿರುವಿದಲ್ನೆಲ್ಲ ಸುಖದ ಉಲುಹು

ಬೆದೆಯ ಕಾವಿಗೆ ಸಿಕ್ಕು ಮೆತ್ತೆ ಮೆತ್ತೆ
ಬಿಗಿದಪ್ಪಿ ಮುತ್ತಿಟ್ಟು ಮತ್ತೆ ಮತ್ತೆ
ತುಟಿ ತೆರೆದು ಕಟಿ ತೆರೆದು ಎಲ್ಲ ತೆರೆದು
ಒಡಲ ಹೂವನ್ನರಸಿ ಹೊಕ್ಕು ಬೆರೆದು

ಇದು ಬಯಕೆ, ಇದು ಹಸಿವೆ, ಇದುವೆ ದಾಹಾ
ಒಂದೆ ಉಸಿರಿನಲ್ಲಿತ್ತು ಅಯ್ಯೋ ಆಹಾ

ಹೊಲದುದ್ದ ನಡೆದಿತ್ತು ನೇಗಿಲ ಮೊನೆ
ಬಸಿರೆಲ್ಲ ಬಿರಿದು ಜೊಲ್ಲುಕ್ಕಿ ಸುರಿದು
ಬಸಿದು ಹೊರಚೆಲ್ಲಿತ್ತು ಜೀವದ ಸೊನೆ
ಅಂದು ಬೆತ್ತಲೆ ರಾತ್ರಿ

ತೆರೆದೆ ಇದೆ ಬಾಗಿಲವು, ನೇರ ಒಳ ಬಾ ಎಂದೆ
ನನ್ನ ಎದೆಕದವನೂ ತೂರಿ ನೀ ಒಳಬಂದೆ
ಏನು ಸುಮಧುರ ಸಹಜವೀ ಪ್ರವೇಶ

ಬೇಕಾದ್ದ ತಿನು ಎಂದೆ
ನನ್ನ ತೋಳುಗಳಲ್ಲಿ ಇಡಿಯ ನೀನು
ಬೇಕಾದ್ದ ತಕೋ ಎಂದೆ
ನಿನ್ನ ತೋಳುಗಳಲ್ಲಿ ಇಡಿಯ ನಾನು

ಆ ಒಂದು ಗಳಿಗೆಯಲಿ ಏನು ಗೈದರು ಮಾಫಿ
ಕಾಡಿದರು ಬೇಡಿದರು ಹಿಡಿಹಿಡಿದು ಆಡಿದರು ಮಾಫಿ
ಸಂದಿಯಲಿ ಮೂಲೆಯಲಿ ಕೈಹಾಕಿ ಬೆದಕಿದರು,
ಯಾವ ಗುಟ್ಟನು ಕೆದಕಿದರು ಮಾಫಿ

ಬರಿಗೈಲೆ ಬಂದು ಪರೆಕಳಚಿ ನಿಂತು
ಬೇಕಾದ್ದ ತಿನಿಸಿ ಬೇಕಾದ್ದ ತಿಂದು

ಕೊಟ್ಟುದೆನಿತು ನಾವು ಕೊಂಡುದೆನಿತು
ಉಣ್ಣಿಸಿದುದೆನಿತು ಉಂಡುದೆನಿತು
ಕಣ್ಮುಚ್ಚಿಯೂ ಕೂಡ ಕಂಡುದೆನಿತು
ಮಾತಿಲ್ಲದೆಯೂ ಕೂಡ ಅಂದುದೆನಿತು

ಅಂದು ಬೆತ್ತಲೆ ರಾತ್ರಿ

ಒಡಲಿಗೊಡಲನು ಬೆಸೆದು ನಿನ್ನ ಬಳಿ ಸಾರೆ
ಏಕಾಂತ ಸಮ್ಮತಿಯ ಆ ಒಂದು ಕ್ಷಣದಿಂದೆ
ಈ ಜಗತ್ತೇ ಬೇರೆ.

ಯಾವ ಹಿಗ್ಗಿನ ಸೆಲೆಯೋ ನಮಗೆ ಸಿಲುಕಿ
ಇಳೆಯ ಮೂಲಕು ನಮ್ಮ ಬೇರು ನಿಲುಕಿ

ಭೂಗರ್ಭ ಸುರಿದಿತ್ತು ಜೊಲ್ಲುಬಾಯಿ
ನಾವಿಂದು ಮನುಕುಲದ ತಂದೆತಾಯಿ

Wednesday, March 7, 2007

ಹೀಗೊ೦ದು ಸವೆ೯

2006 ರಲ್ಲಿ ABTS* ಎ೦ಬ ಸ೦ಸ್ಥೆ ಒ೦ದು ಅ೦ಶವನ್ನು ಮು೦ದಿಟ್ಟುಕೊ೦ಡು ಸುಮಾರು ಒ೦ದು ಲಕ್ಷ ಪಾಕಿಸ್ತಾನಿಗಳ ಸವೆ೯ ನಡೆಸಿತು. ಅದರಿ೦ದ ತು೦ಬಾ ಕುತೂಹಲಕಾರಿ ಫಲಿತಾ೦ಶ ಬೆಳಕಿಗೆ ಬ೦ತು. ಆವರು ಜನರಿಗೆ ಕೇಳಿದ ಪ್ರಶ್ನೆ ಇದು.

"ನಿಮಗೆ ಸೆಕ್ಸ್ ಗೆ ಪ್ರಾಶಸ್ತ್ಯವಾದ ಜಾಗ ಯಾವುದು?"

ಇದರ ಫಲಿತಾ೦ಶ ಹೀಗಿದೆ.

1% ಜನ ಪ್ರಕೃತಿ ಯಲ್ಲಿ ಏಕಾ೦ತವಾಗಿ ಅ೦ದರು

2% ಜನ ತಮ್ಮ ಬೆಡ್ ರೂಮ್ ತಮಗೆ ಚ೦ದ ಅ೦ದರು

3% ಜನ ಚಳಿ ಅಥವಾ ತ೦ಪಾದ ಪ್ರದೇಶ ಆಯ್ದು ಕೊ೦ಡರು

5% ಜನ ಸ್ವಿಜರ್ ಲ್ಯಾ೦ಡ್ ನ್ಯೂಜಿಲ್ಯಾ೦ಡ್ ರೋಮ್ ಗಳನ್ನ ಆಯ್ದು ಕೊ೦ಡರು

ಇನ್ನು ಉಳಿದ 89 ಪ್ರತಿಶತರು "ಏರಡು ಕಾಲುಗಳ ಮಧ್ಯದ್ದು ಅ೦ದರು"


*ಅಖಿಲ ಭಾರತ ತಲಬುದಾರರ ಸ೦ಘ(ABTS).

(ಗೆಳೆಯ ಹರ್ಷ ಕಳಿಸಿದ ಸರ್ವೆ ಇದು, ಆ ಪುಣ್ಯಾತ್ಮನಿಗೆ ಯಾರು ಯಾವಾಗ ಹೇಳಿದರೆಂದು ತಿಳಿದು ಬಂದಿಲ್ಲ!!)

Thursday, March 1, 2007

ಕಂಡಕ್ಟರ್ ಹತ್ತಿದ, ಡ್ರೈವರ್ ಹತ್ತಿದ....

ಮತ್ತೊಂದಿಷ್ಟು ಸಾಲುಗಳು...

೧. ಕಂಡಕ್ಟರ್ ಹತ್ತಿದ, ಡ್ರೈವರ್ ಹತ್ತಿದ, ಅಚೆ ಮನೆ ಭಾವ ಓಡಿ ಬಂದು ಹತ್ತಿದ, ನಿಂಗ ಮಾತ್ರ ಹತ್ತಿದ್ರೇ ಇಲ್ಲೆ..
( ಬಸ್ಸು ಹತ್ತದ ಗಂಡನನ್ನ ಹೆಂಡತಿ ಬೈಯುವ ಪರಿ)

೨. ಯಾರಾದ್ರೂ ಮಾಡವು ಇದ್ರೆ, ಉದ್ದಕೆ ಕೈ ಕಾಲು ನೀಡಿ ಮಲಗವು ಕಾಣಸ್ತು!
( ಕೆಲ್ಸ ಮಾಡುವವರು ಇದ್ರೆ..)

೩. ಆಳಗ ಬತ್ತ, ಅವು ಬೇರೆ ಮನೆಲಿ ಇಲ್ಲೆ, ನಾನೇ ಒಳಗೂ , ಹೊರಗೂ ನಿಂತು ಮಾಡ್ಸ್ ಗ್ಯಳವು..
( ಗಂಡ ಮನೇಲಿಲ್ಲ, ನಾನೇ ಎಲ್ಲ ಕೆಲ್ಸ ಮಾಡಿಸ್ಕೋಬೇಕು ಅಂತ, ಹೆಂಡತಿಯ ಅಳಲು)

೪. ಇವತ್ತು ನಂಗೆ ಬರಲೆ ಆಗ್ತಲ್ಲೆ, ಒಳಗೆಂತೂ ಹಚ್‍ಕ್ಯಳಡ!
(ನಾನು ಇವತ್ತು ಬರೋದಿಲ್ಲ, ಏನೊ ಅಡ್ಗೆ ಮಾಡ್ಬೇಡಾ ಅಂತ)

೫. ಕೂಸೇ ನಿಂಗೆ ಬೆಂಡೆಕಾಯಿ ಹಿಡಸ್ತಾ?, ತೊಂಡೆಕಾಯಿ ಹಿಡಸ್ತಾ?, ಮೂಲಂಗಿ, ಕ್ಯಾರೆಟ್ಟು? ಬಹುಶಃ ಹೀರೇಕಾಯಿ ಹಿಡಸ್ತಲ್ಲೆ ಮಾಡಿದ್ದಿ..
(ಯಾವ ತರಕಾರಿ ಇಷ್ಟ ಅಂತ ಕೇಳಿದ್ದು..)

೬. "ನೀನು ಇದ್ದಿದ್ದಿಲ್ಲೆ, ನಿನ್ ಹೆಂಡ್ತಿ ಇತ್ತು, ನಾನು ಅಲ್ಲಿಗೆ ಹೋದ್ದು ಎತ್ನೋಡಲೆ ಹೇಳಿ, ಅಲ್ಲೇ ಜಡ್ದು ಕವಳ ಹಾಕ್ಯಂಡು ಬಂದಿ..
( ಎತ್ತು ನೋಡಲು ಹೋದಾತ ಗೆಳೆಯನಿಗೆ ಹೇಳಿದ್ದು, ಜಡಿದು ಹಾಕಿದ್ದು ಕವಳ- ಎಲೆ ಅಡಿಕೆನ)

೭. "ನೀನು ಹಾಲು ಕುಡಿದೇ ಹೋದ್ರೆ ಕಂಡಕ್ಟ್ರಂಗೆ ಕೊಟ್ ಬಿಡ್ತಿ ನೋಡು!!
(ಮಗುವಿಗೆ ಬಾಟಲಿ ಹಾಲು ಕುಡಿಸುತ್ತಿದ್ದ ತಾಯಿ)

೮. ನಿಂಗೆ ಉಬ್ಬಿದ್ದಾ, ನಿಂಗೆ ಉಬ್ಬಿದ್ದಾ..
( ಊಟದ ಪಂಕ್ತಿಯಲ್ಲಿ, ಪೂರಿ ಬಡಿಸುತ್ತಾ..)

ಲಾಸ್ಟು, ಆದ್ರೆ ಇಂಪಾರ್ಟೆಂಟು,

೯. ಇವೆಲ್ಲಾ ಎನ್ ಕೇದವೇಯಾ..
( ಇವರೆಲ್ಲ, n.k (Northa Canara) ದವರು ಅಂತ ಹುಡುಗಿಯೊಬ್ಬಳು ತನ್ನ ಸ್ನೇಹಿತರನ್ನ ಪರಿಚಯ ಮಾಡಿಸಿದ್ದು)

Wednesday, February 14, 2007

ಪ್ರೀತಿ

  • ಬಿ.ಆರ್. ಲಕ್ಷ್ಮಣರಾವ್

ನೋಡಿದ, ಅವನು ಹೀಗೆ ನೋಡಿದ:
ಒಣಬೇರಿಗೆ ನೀರೂಡುವ ಹಾಗೆ ನೋಡಿದ
ಕೂಡಿದ, ನನ್ನ ಹೀಗೆ ಕೂಡಿದ:
ಹೊಸ ಚೇತನ ನನ್ನಲಿ ಹರಿವಂತೆ ಕೂಡಿದ

ನರಳಿದೆ, ಆಹಾ! ಹೇಗೆ ನರಳಿದೆ?
ಮೈಯ ತುಂಬ ಚಿಗುರು ನಿಮಿರಿದಂತೆ ನರಳಿದೆ
ಅರಳಿದೆ, ಹಿಗ್ಗಿ ಹೇಗೆ ಅರಳಿದೆ?
ಹೂವಿನೋಕುಳಿಯಲ್ಲಿ ಮಿಂದ ಹಾಗೆ ಅರಳಿದೆ.

ಸುರಿಸಿದ, ಒಲವ ಹೇಗೆ ಸುರಿಸಿದ?
ಆಗುಂಬೆಯ ಹುಚ್ಚುಮಳೆಯ ಹಾಗೆ ಸುರಿಸಿದ
ಫಲಿಸಿತು, ನನ್ನೊಳೇನು ಫಲಿಸಿತು?
ಜೊಂಪೆ ಜೊಂಪೆ ಹಣ್ಣು ತೂಗಿ ಜೀವ ಫಲಿಸಿತು.

ತುಂಬಿತು, ಎದೆಯೊಳೇನು ತುಂಬಿತು?
ನೂರು ಹಕ್ಕಿ ಹೈಕಳುಗಳ ಹಾಡು ತುಂಬಿತು
ಆದೆನು, ನಾನು ಏನಾದೆನು?
ಸುತ್ತ ತಂಪು ನೆರಳು ಹರಡಿ ಧನ್ಯಳಾದೆನು.


ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ.

[ಪ್ಲೀಸ್ ನೋಟ್: ಈ ಹಿಂದೆ ಇಲ್ಲಿ ಪ್ರತಿಭಾ ನಂದಕುಮಾರರ ಒಂದು ಕವಿತೆಯನ್ನು ಪೋಸ್ಟ್ ಮಾಡಿದ್ದೆ. ಅದರಲ್ಲಿ, ನಾವು 'ಅಶ್ಲೀಲ' ಎಂದು ಪರಿಗಣಿಸುವ ಎಲ್ಲಾ ಶಬ್ದಗಳೂ ಬಳಕೆಯಾಗಿದ್ದರೂ ಆ ಕವಿತೆ ಅಶ್ಲೀಲತೆಯ ಸೋಂಕಿನಿಂದ ದೂರವಿತ್ತು. ಬಿ.ಆರ್.ಎಲ್.ರವರ ಈ ಕವಿತೆ 'ಪ್ರೀತಿ' ಎಂಬ ಶೀರ್ಷಿಕೆ ಹೊಂದಿದೆಯಾದರೂ ಇದು ಪ್ರಣಯದ ಬಗ್ಗೆ ಬರೆದಿರುವ ಕವಿತೆ. ಯಾವುದೇ ಅಶ್ಲೀಶ ಶಬ್ದವನ್ನೂ ಬಳಸದೆಯೂ 'ಹೇಳಬೇಕಾದ್ದನ್ನೆಲ್ಲ' ಹೇಳಿರುವುದು ಇಲ್ಲಿ ಗಮನಾರ್ಹ. ಪ್ರೀತಿಯ ದಿನದ ಪ್ರೀತಿಯ ಪೋಸ್ಟಿಂಗ್ -ಸು]

Friday, February 2, 2007

ಓಶೋ ಬಗ್ಗೆ ಒಂಚೂರು...

[ಈಗ ನಾಲ್ಕಾರು ವರ್ಷಗಳ ಕೆಳಗೆ 'ಹಾಯ್ ಬೆಂಗಳೂರ್'ನಲ್ಲಿ "ಸೆಕ್ಸು, ಲೈಫು, ರಜನೀಶು" ಎಂಬ ಶೀರ್ಷಿಕೆಯಡಿ ಒಂದು ಲೇಖನ ಪ್ರಕಟವಾಗಿತ್ತು -ಎರಡು ಕಂತುಗಳಲ್ಲಿ. ಆ ಲೇಖನ ನನಗೆ ತುಂಬಾ ಇಷ್ಟವಾಗಿತ್ತಾದ್ದರಿಂದ ಅದರಿಂದ ಹೆಕ್ಕಿದ ಕೆಲ ಪ್ಯಾರಾಗಳನ್ನು ನೋಟ್ ಮಾಡಿಟ್ಟುಕೊಂಡಿದ್ದೆ. ಅವನ್ನೇ ಜೋಡಿಸಿ ಇಲ್ಲಿ ಕೊಡುತ್ತಿದ್ದೇನೆ.]

ಅವನ ಹೆಸರು ರಜನೀಶ್.

ಜಗತ್ತು ಅವನನ್ನು 'ಓಶೋ' ಅಂತ ಕರೆಯುತ್ತದೆ. ಅವನೊಬ್ಬ ಯೋಗಿಯೋ, ದಾರ್ಶನಿಕನೋ, ಸಾಕ್ಷಾತ್ ದೇವರೋ ಅಥವಾ ಹುಚ್ಚನೋ..? ಒಟ್ಟಿನಲ್ಲಿ ನಮ್ಮಂತ ಚಿಲ್ಲರೆ ಮನುಷ್ಯನಂತೂ ಅಲ್ಲ. ಅವನು ಹೇಳಿದ್ದನ್ನು ನಾವು ಒಪ್ಪುತ್ತೇವೋ ಬಿಡುತ್ತೇವೋ, ಅವನು ಹೇಳಿಕೊಟ್ಟಿದ್ದನ್ನು ಅಳವಡಿಸಿಕೊಳ್ಳುತ್ತೇವೋ ಬಿಡುತ್ತೇವೋ, ಆದರೆ ಅವನನ್ನು ನಾವು ಕಡೆಗಣಿಸಲಿಕ್ಕೆ ಸಾಧ್ಯವಿಲ್ಲ. You can't ignore him. ಆತ ಯಾವ್ಯಾವುದೋ ಸಂದರ್ಭದಲ್ಲೆಲ್ಲಾ ನೆನಪಾಗಿ ಕಾಡಿಬಿಡುತ್ತಾನೆ.

ಓಶೋ ಮಾತನಾಡಲು ಶುರುಮಾಡಿದ ವಿಷಯವೇ ಅಂಥದಿತ್ತು. ಭಾರತದ ಮಟ್ಟಿಗಂತೂ ತೀರ 'ಮುಚ್ಚಿಡಬೇಕಾದಂತಹ ಸಂಗತಿ' ಎಂಬಂತೆ treat ಆಗುವ ವಿಷಯವಾದ 'sex' ಬಗ್ಗೆ ಆತ ಮಾತನಾಡತೊಡಗಿದ. ಅವನನ್ನು ಜಗತ್ತು 'Teacher of Vagina' (ಯೋನಿಗುರು) ಅಂತ ಕರೆಯಿತು. 'ಕಾಮದ ಮೂಲಕ ದೇವರನ್ನು ಕಾಣಿ' ಎಂಬ ವಿಶಿಷ್ಟ ಸಿದ್ಧಾಂತವನ್ನು ರೂಪಿಸಿದವನು ರಜನೀಶ್. ಜನ ಅವನೆಡೆಗೆ ಭಯ, ಕುತೂಹಲ, ಅಚ್ಚರಿ, ಅಪಹಾಸ್ಯಗಳ ದೃಷ್ಟಿಯಿಂದ ನೋಡಿದರು. ಅವನ ನೀಳ ಬಿಳಿ ಗಡ್ಡ ಮತ್ತು ತೀಕ್ಷ್ಣವಾದ ದೊಡ್ಡ ಕಣ್ಣುಗಳೆಡೆಗೆ ಜನ ಇನ್ನಿಲ್ಲದಂತೆ ಆಕರ್ಷಿತರಾದರು. ಅವನ ಉಪನ್ಯಾಸಗಳನ್ನು ಕೇಳಲು ಜನ ಕ್ಯೂ ನಿಂತು ಕಾದರು.

ಅವನ ಒಂದು ಉಪನ್ಯಾಸ ನಡೆಯುತ್ತಿತ್ತು. ರಜನೀಶ್ ಹೇಳುತ್ತಿದ್ದ: 'ಇವತ್ತಿನ ಈ ಜಗತ್ತಿನಲ್ಲಿ ನೀವು ದೇವರನ್ನು ಕಾಣಲಿಕ್ಕೆ ಮಾಡುವ ಹುಚ್ಚು ಪ್ರಯತ್ನಗಳಿಂದ ಯಾವುದೇ ಪ್ರಯೋಜನವೂ ಇಲ್ಲ. ಯಾಕೆಂದರೆ ನಿಮಗೆ ನಿಮ್ಮ ಸ್ವಾರ್ಥವನ್ನು, ಸ್ವಾಭಿಮಾನವನ್ನು ಬದಿಗಿಟ್ಟು ಒಂದು ನಿಮಿಷವೂ ಬದುಕುವುದಕ್ಕೆ ಸಾಧ್ಯವಿಲ್ಲ...' ಜನ convince ಆದಂತೆ ಕಾಣಲಿಲ್ಲ. ತಕ್ಷಣ ಅಲ್ಲಿದ್ದ ಒಬ್ಬನನ್ನು ಕರೆದು ಕೇಳಿದ ಓಶೋ: 'ನೀನು ಯಾರು?' ಅಂತ. ಆ ವ್ಯಕ್ತಿ ತಕ್ಷಣ ಉತ್ತರಿಸಿದ: 'ನಾನು ರಮೇಶ' ಅಂತ. ಮತ್ತೊಬ್ಬನನ್ನು ಕರೆದು ಕೇಳಿದ ಓಶೋ: 'ನೀನು ಯಾರು?' ಆತ ಉತ್ತರಿಸಿದ: 'ನಾನು ಈ ರಾಜ್ಯದ ಮುಖ್ಯಮಂತ್ರಿ'. ಮತ್ತೊಬ್ಬನನ್ನು ಕರೆದು ಅದೇ ಪ್ರಶ್ನೆ ಕೇಳಿದಾಗ ಅವನು ತಾನು ಇಂಥಾ ಕಂಪನಿಯ ಮಾಲೀಕ ಅಂದ.

ಓಶೋ ಹೇಳಿದ: 'ನೋಡಿ, ಇಲ್ಲಿರುವವರಿಗೆ ಯಾರಿಗೂ ತಾವು ಯಾರು ಎಂಬುದೇ ಗೊತ್ತಿಲ್ಲ. ರಮೇಶ ಎಂಬುದು ಕೇವಲ ತನ್ನ ಹೆಸರು ಎಂಬುದರ ಅರಿವಿಲ್ಲ. ತಾನೇ ರಮೇಶ ಅಂದುಕೊಂಡುಬಿಟ್ಟಿದ್ದಾನೆ! ಮುಖ್ಯಮಂತ್ರಿ, ಕಂಪನಿಯ ಮಾಲೀಕತ್ವ -ಇವುಗಳು ಕೇವಲ ತನಗೆ ದೊರಕಿದ ಹುದ್ದೆಗಳು ಎಂಬುದರ ಅರಿವೇ ಇವರಿಗಿಲ್ಲ. ಇಂಥವರು ದೇವರನ್ನು ಕಾಣಲು ಸಾಧ್ಯವೇ? ನಿಮ್ಮೆಲ್ಲರ ಪರಿಸ್ಥಿತಿಯೂ ಇದೇ.

'ದೇವರು ಅಂತ ಕರೆಯಲ್ಪಡುವ ಫೋಟೋದ ಮುಂದೋ, ಮೂರ್ತಿಯ ಎದುರೋ, ಕಲ್ಲಿನ ಸಮ್ಮುಖದಲ್ಲಿ ಮಂಡಿಯೂರಿಯೋ 'ದೇವರೇ ನನಗೆ ಒಳ್ಳೆಯದು ಮಾಡು' ಅಂತಲೇ ಎಲ್ಲರೂ ಬೇಡಿಕೊಳ್ಳುವುದು. ಆದರೆ ಅವನು ದೇವರ ಬಳಿ ಅದೆಷ್ಟೇ ಭಕ್ತಿಯಿಂದ ಬೇಡಿಕೊಳ್ಳುತ್ತಿದ್ದೀನಿ ಅಂತ ಅಂದುಕೊಂಡರೂ, ಆ ಭಕ್ತಿಯನ್ನು ಅವನು ತೋರುವುದು ಕೇವಲ ತನಗಾಗಿ, ತನ್ನವರ ಒಳಿತಿಗಾಗಿ. ಸ್ವಾರ್ಥ ಅವನನ್ನು ಎಂದಿಗೂ ಬಿಡದೇ ಕಾಡುತ್ತದೆ. ಅಂಥವರಿಗೆ 'ನಿಜವಾದ ದೇವರು' ಕಾಣಲು ಸಾಧ್ಯವೇ? ಊಹೂಂ, impossible.

'ಆದ್ದರಿಂದ, ನೀವು ದೇವರನ್ನು ಕಾಣಬಯಸುವಿರೇ ಹೌದಾದರೆ, ನೀವು ಅನುಸರಿಸಿಬಹುದಾದ ಕೆಲವೇ ಕೆಲವೊಂದು ಮಾರ್ಗಗಳಿವೆ... ಅದರಲ್ಲಿ ಒಂದು ಸುಖವಾದ ನಿದ್ರೆ! ನೀವು ಮಾಡುವ ಸುದೀರ್ಘ-ಸುಖ ನಿದ್ರೆಯಲ್ಲಿ, ಒಟ್ಟು ಎಂಟು ಗಂಟೆ ನಿದ್ರೆ ಮಾಡಿದರೆ ಅದರಲ್ಲಿ ಎರಡು ಗಂಟೆ ನಿಜವಾದ ನಿದ್ರೆ ಅಂತ ಒಂದು ಇರುತ್ತದೆ. ಆ ನಿದ್ರೆಯಲ್ಲಿ ಕನಸಿರುವುದಿಲ್ಲ, ಕನವರಿಕೆಯಿರುವುದಿಲ್ಲ, at least ನೀವು ಯಾರೆಂಬುದರ ಅರಿವೇ ನಿಮಗೆ ಇರುವುದಿಲ್ಲ. ವಿಜ್ಞಾನಿಗಳು ಅದನ್ನು small death ಅನ್ನುತ್ತಾರೆ. ಅಂಥಾ ಸಮಯದಲ್ಲಿ, ಹಾಂ, ಅಂತಹ ಸಮಯದಲ್ಲಿ ನೀವು ದೇವರ ಕೈ ಹಿಡಿದು ನಡೆಯುತ್ತಿರುತ್ತೀರಿ...!' ಅಂದ ರಜನೀಶ್. ಜನ ಅವನೆಡೆಗೆ ನಿಬ್ಬೆರಗಾಗಿ ನೋಡುತ್ತಿದ್ದರು. 'ಈಗ ಹೇಳಿ ನೀವು: ಮಲಗಿ ಸುಖವಾಗಿ ನಿದ್ರಿಸುತ್ತಿರುವ ನಿಮ್ಮ ಮಗುವನ್ನು ಬಡಿದು ಎಬ್ಬಿಸುತ್ತೀರಾ? 'ನಾಳೇನೇ history exam ಇದೆ. ಅಲೆಕ್ಸಾಂಡರ್ ಹುಟ್ಟಿದ ದಿನ ಬಾಯಿಪಾಠ ಮಾಡು' ಅಂತ ಗದರಿಸ್ತೀರಾ? ಆ ಅಲೆಕ್ಸಾಂಡರ್ ಎಂಬ ಯುದ್ಧಬಾಕ ಹುಟ್ಟದಿದ್ರೇನೇ ಚೆನ್ನಾಗಿತ್ತು! ಗೊತ್ತಾಯ್ತಲ್ಲ, ಸುಖವಾಗಿ ನಿದ್ರಿಸುವುದನ್ನು ಕಲಿಯಿರಿ ಮೊದಲು' ಅಂದ ರಜನೀಶ್. ಜನ ಬಿಟ್ಟಕಣ್ಣು ಬಿಟ್ಟಂತೆ ನೋಡುತ್ತಿದ್ದರು.

'ಎರಡನೆಯದು ಮಿಲನ ಮಹೋತ್ಸವ. ಕಾಮವೆಂಬುದು ಹೊಲಸು ಎಂಬ ಕಲ್ಪನೆಯನ್ನು ನಿಮ್ಮ ಮನಸ್ಸಿನಿಂದ ಮೊದಲು ಹೊರಹಾಕಿ. ಅದು ನಿಮ್ಮನ್ನು ಮಾನಸೋಲ್ಲಾಸಗೊಳಿಸಿ ದೇವರೆಡೆಗೆ ಕರೆದೊಯ್ಯುವ ಕ್ರಿಯೆ. ಮಲಗುವ ಕೋಣೆಯಲ್ಲಿ ಹಿತವಾದ ಗಾಳಿ ಬೀಸುತ್ತಿರಲಿ. ಹದವಾದ ಬೆಳಕಿರಲಿ. ಕರ್ಪೂರದ ಘಮವಿರಲಿ. ಮೃದುವಾದ ಸಂಗೀತ ಕೇಳಿಬರುತ್ತಿರಲಿ. ಅಂಥದ್ದೊಂದು ಅಪೂರ್ವ ಸನ್ನಿವೇಶದಲ್ಲಿ ನೀವು ಅವಳೊಂದಿಗೆ, ಅವಳು ನಿಮ್ಮೊಂದಿಗೆ ಬೆತ್ತಲಾಗುತ್ತಾ, ಮಗ್ಗುಲಾಗುತ್ತಾ, ಹೊರಳಾಡುತ್ತಾ, ನಲಿದಾಡುತ್ತಾ, ಇಬ್ಬರೂ ಬೆರೆತುಹೋಗುತ್ತಾ, ಬೆಸೆದುಕೊಳ್ಳುತ್ತಾ...ನೀವು ಅನುಭವಿಸುವ ಆ ಸುಖವಿದೆಯಲ್ಲಾ, ಆ ಕಟ್ಟ ಕಡೆಯ ಕ್ಷಣವಿದೆಯಲ್ಲಾ, ಹಾಂ, ಆಗ ನೀವು ದೇವರನ್ನು ಕಾಣುತ್ತೀರಿ. ಆಗ ನೀವು ನೀವಾಗಿರುವುದಿಲ್ಲ. ಅಂತಹ ಕ್ಷಣಗಳಲ್ಲಿ ನಿಮಗೆ ದೇವರ ದರುಶನವಾಗುತ್ತದೆ. ಅಂತಹ ಕ್ಷಣಗಳನ್ನು ಹೆಚ್ಚಿಸಿಕೊಳ್ಳಿ' ಅಂದ ಓಶೋ.

'ಮೂರನೆಯದು, ನೀವು ತುಂಬಾ ಆಶ್ಚರ್ಯವಾಗುವಂತಹ, ತುಂಬಾ ಭಯವಾಗುವಂತಹ ಸನ್ನಿವೇಶದಲ್ಲಿ ಭಾಗಿಯಾದಾಗ. ನೀವು ಭಯಂಕರವಾಗಿ excite ಆಗುತ್ತೀರಿ ನೋಡಿ, ಆಗ ನೀವು ನೀವಾಗಿರುವುದಿಲ್ಲ. ಅದಕ್ಕೆ ನೀವು ಹಿಮಾಲಯ ಪರ್ವತವನ್ನು ಹತ್ತಬೇಕಾಗುತ್ತದೆ. ಅಂಥದ್ದೊಂದು ಪರ್ವತವನ್ನು ಹತ್ತಿ ತುತ್ತ ತುದಿ ತಲುಪಿ, ಒಂದು ಕ್ಷಣ ತಿರುಗಿ ಕೆಳಗೆ ನೋಡುತ್ತೀರಲ್ಲಾ, ಆಗ ಆಗುವ ಭಯ.... ಹಾಂ, ಆಗ ನಿಮಗೆ ದೇವರು ಸಿಗುತ್ತಾನೆ! ವಿಪರೀತ ವೇಗವಾಗಿ drive ಮಾಡುತ್ತಿರುವಾಗ, ಎದಿರುಗಡೆಯಿಂದ ಬಂದ ಲಾರಿಯೊಂದು ನಿಮಗೆ ಗುದ್ದೇಬಿಡುತ್ತದೆ ಅನ್ನುವ ಕ್ಷಣವಿದೆಯಲ್ಲಾ, ಆಗ ನೀವು ನಿಜವಾಗಿಯೂ excite ಆಗಿರುತ್ತೀರಿ. ಆಗ ನೀವು ರಮೇಶನಾಗಿರುವುದಿಲ್ಲ; ದೊಡ್ಡ ಕಂಪನಿಯ manager ಆಗಿರುವುದಿಲ್ಲ; ರಾಜ್ಯದ ಮುಖ್ಯಮಂತ್ರಿಯಾಗಿರುವುದಿಲ್ಲ... ನಿಮ್ಮನ್ನು ಕೇವಲ ಆ ಭಯ, ಆ excitement ಆವರಿಸಿಕೊಂಡಿರುತ್ತದೆ. ಆಗ ನೀವು ದೇವರಲ್ಲಿ ಐಕ್ಯವಾಗಿರುತ್ತೀರಿ. ಅಂತಹ ಸನ್ನಿವೇಶಗಳನ್ನು ಹೆಚ್ಚು ಹೆಚ್ಚು ಮಾಡಿಕೊಳ್ಳುತ್ತಾ ಹೋಗಿ. ಹೆಚ್ಚು ಹೆಚ್ಚು ಅಚ್ಚರಿಗಳಿಗೆ ನಿಮ್ಮನ್ನು ತೆರೆದುಕೊಳ್ಳುತ್ತಾ ಹೋಗಿ. ತನ್ಮೂಲಕ ನೀವು ದೇವರೊಂದಿಗಿರುವ ಅವಕಾಶಗಳು ಹೆಚ್ಚಾಗುತ್ತಾ ಹೋಗುತ್ತವೆ' -ಅಂದ ರಜನೀಶ್.

ಎದುರಿಗೆ ಕುಳಿತಿದ್ದ ಜನ ಚಪ್ಪಾಳೆ ತಟ್ಟಿದರು. ನೀನೇ ದೇವರು ಎನ್ನುತ್ತಾ ಅವನ ಕಾಲಿಗೆರಗಿದರು. ಆತ ಭಾರತದಲ್ಲಿದ್ದಾಗಲಾಗಲೀ, ಬೇರೆ ದೇಶದಲ್ಲಿದ್ದಾಗಾಗಲೀ, ಜನ ಅವನೆಡೆಗೆ ಮುಗಿಬಿದ್ದು ಹೋದರು. ಅವನ ಭಾಷಣವೊಂದನ್ನು ಕೇಳಲು ಸಾಲುಗಟ್ಟಿ ನಿಂತರು. ಹಾಗೆ ನಿಂತ ಜನರನ್ನುದ್ದೇಶಿಸಿ 'ಅಲ್ಲಿ ಪಶ್ಚಿಮದಲ್ಲಿ ಸುಂದರ ಸೂರ್ಯಾಸ್ತವಾಗುತ್ತಿದೆ. ಅದನ್ನು ನೋಡುವುದು ಬಿಟ್ಟು ನನ್ನ ಭಾಷಣಕ್ಕಾಗಿ ವೇದಿಕೆ ನೋಡುತ್ತಿದ್ದೀರಲ್ಲಾ..? ನನ್ನದು ನಾಳೆಯೂ ಇರುತ್ತದೆ. ಆದರೆ ಇವತ್ತಿನ ಸೂರ್ಯಾಸ್ತ ತಪ್ಪಿಸಿಕೊಂಡರೆ, ನೀವು ಅಷ್ಟರಿಂದ ವಂಚಿತರಾದಂತೆಯೇ!' ಅಂತ ವಿಚಿತ್ರವಾಗಿ ಎಚ್ಚರಿಸಿ ಹೇಳಿದವ ರಜನೀಶ್.

ಆತ ಮೂರ್ತಿಪೂಜೆಯನ್ನು ವಿರೋಧಿಸಿದ, ದೇವರನ್ನು ಕಾಣುತ್ತೀನಿ ಅಂತ ತಪಸ್ಸಿಗೆ ಹೊರಟವರನ್ನು ಹೀಯಾಳಿಸಿದ, ಎಂಥಾ ಪರಮ ನಾಸ್ತಿಕನಿಗೂ ದೇವರನ್ನು ತೋರಿಸುತ್ತೀನಿ ಅಂತ ಹೊರಟ. 'ಕಾಮದ ಮೂಲಕ ದೈವದರ್ಶನ' ಎಂಬ ತನ್ನ ಸಿದ್ಧಾಂತ ಸಾಧನೆಗಾಗಿ ತಾನೇ ಅನೇಕ ಸಾಮೂಹಿಕ ವೇಶ್ಯಾವಾಟಿಕೆಗಳನ್ನು ಸೃಷ್ಟಿಸಿದ. ಇಂತಹ ಕಾರಣಗಳಿಗಾಗಿಯೇ ಅಮೆರಿಕಾ ಸರ್ಕಾರದಿಂದ ಬಂಧಿತನಾಗಿ ಜೈಲು ಸೇರಿದ. ಬಿಡುಗಡೆಯಾದ. Aids ನಂತಹ ರೋಗ ಬಂದಾಗ ನಿರೋಧ್ ಬಳಸಿ ಎಂಬ ಹುಚ್ಚು ಸಲಹೆ ನೀಡಿದ. ದುಡ್ಡು ಅವನನ್ನು ಹುಡುಕಿಕೊಂಡು ಬಂತು, ಜನಪ್ರಿಯತೆ, ಹಣ, ಕೀರ್ತಿ ಅವನನ್ನು ಮುಚ್ಚಿಹಾಕಿಬಿಟ್ಟಿತು.

ಒಟ್ಟಿನಲ್ಲಿ ಆತ ಹತ್ತೊಂಬತ್ತನೇ ಶತಮಾನ ಕಂಡ ಒಬ್ಬ ಮಹಾನ್ ದಾರ್ಶನಿಕ ಎಂಬುದು ಮಾತ್ರ ನಿಜ.