- ಬನ್ನಂಜೆ ಗೋವಿಂದಾಚಾರ್ಯ
ತಾಯಿ ಇಲ್ಲ; ತಂದೆ ಇಲ್ಲ
ಇದೂ ಒಂದು ತಬ್ಬಲಿ
ಅವಳು ಸೂಳೆ ಇವ ಮಹರ್ಷಿ
ಇವರ ಕೀರ್ತಿ ಹಬ್ಬಲಿ ||೧||
ಕಚ್ಚೆ ಬಿಗಿದು ನಡೆದನವನು
ತಪಕ್ಕೆಂದು ಕಾಡಿಗೆ
ಸೀರೆ ಕೊಡವಿ ನಡೆದಳವಳು
ದೇವತೆಗಳ ನಾಡಿಗೆ ||೨||
ನೇಸರುದಿಸಿ ಬಲೆಯನೆಸೆದ
ಹಕ್ಕಿ ಕೊರಳ ಹಾಡಿಗೆ
ಹಳತಾದರು ಮಾಸಲಿಲ್ಲ
ಅವಳ ಕಣ್ಣ ಕಾಡಿಗೆ ||೩||
ಅವನು ಅವಳು ನಡೆದರಯ್ಯ
ತಮ್ಮ ತಮ್ಮ ಪಾಡಿಗೆ
ಎಂತೋ ಮುಂದೆ ಸಾಗಬೇಕು
ದಾರಿಗಿಲ್ಲ ಬಾಡಿಗೆ ||೪||
* * *
ಎದೆಯ ಎತ್ತರಕ್ಕೆ ನಾಚಿ
ಸೆರಗು ಸ್ವಲ್ಪ ಜಾರಿದೆ
ಗಮನವಿಟ್ಟು ನಡೆಯಬೇಕು
ದಾರಿಯೂ ಇಳಿಜಾರಿದೆ ||೫||
ತಾಯಿಯಂತೆ ಮಗಳು ಕೂಡ
ಆಹ! ಎಂಥ ರೂಪಸಿ
ಕಾಡು ಜನರ ನಡುವೆ ತಾನು
ಆದರೂನು ರೂಪಸಿ ||೬||
ಹಕ್ಕಿ ಹಾಡು ಕಲಿಸಿತೇನು
ಜಿಂಕೆ ಕಣ್ಣ ಕೊಟ್ಟಿತು?
ಕಾಡು ಮರದ ಕಳಿತ ಹಣ್ಣು
ಮೊಲೆಯ ಮೊಟ್ಟೆಯಿಟ್ಟಿತು? ||೭||
ಕಣ್ವ ಕೂಡ ಕಣ್ಣುಬಿಟ್ಟ
ಯಾರು ಇವಳ ನಲ್ಲನು!
ಇವಳ ಎದೆಯ ಬೆದೆಯ ಸೊದೆಯ
ಯಾರು ಗೆದೆಯಬಲ್ಲನು! ||೮||
* * *
ಗಡ್ಡನೆರೆತ ಮುದುಕ ಇನ್ನೂ
ತೋರಿಸಿಲ್ಲ ಜಾತಕ
ಅವನು ಬರುವ ಮುನ್ನ ಇಲ್ಲಿ
ನಡೆಯಿತೊಂದು ನಾಟಕ ||೯||
ಜಿಂಕೆ ಹೊಡೆಯಬಂದ ರಾಜ
ಜಿಂಕೆ ಕಣ್ಣ ಹೆಣ್ಣಿಗೆ
ಕಣ್ಣು ಹೊಡೆದನಂತೆ ಏಕೊ
ನಂಟುಬಿತ್ತು ಕಣ್ಣಿಗೆ ||೧೦||
ಎದೆಯ ಎತ್ತರಕ್ಕೆ ಸೋತು
ಸೀರೆ ಜಾರಿಬಿಟ್ಟಿದೆ
ಗಮನವಿಟ್ಟು ನಡೆದರೂನು
ಹೇಳದಂಥ ಗುಟ್ಟಿದೆ ||೧೧||
ಕೆನ್ನೆ ತುಂಬ ಕೆಂಪುಕೆಂಪು
ಎದೆಯು ಎದೆಯನಪ್ಪಿದೆ
ಒಳಗು ಹೊರಗು ತಂಪುತಂಪು
ತೊಡೆಯ ತಾಳ ತಪ್ಪಿದೆ ||೧೨||
* * *
ಕಣ್ವ ಕೂಡ ಕಣ್ಣು ಬಿಟ್ಟ
ಏನು ನಡೆದುಹೋಯಿತು
ಮದುವೆಗೆಂದು ತಂದ ದರ್ಭೆ
ಜಾತಕರ್ಮಕಾಯಿತು ||೧೩||
[“ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ” ಪುಸ್ತಕದಿಂದ]