Friday, January 28, 2011

ಸಿಗ್ನಲ್ ಸ್ಟೋರಿ

ಇಲ್ಲಿ ಎಲ್ಲಾ ಸಿಗ್ನಲ್ಲ ಮಾಡ್ಯಾರ್ರಿ. ಹೇಳುದಕ್ಕೆ ಏನು ಇಲ್ಲ... ಬರೆ ನೋಡಿ ಕಲಿ ಮಾಡಿ ತಿಳಿ.


ಚಿತ್ರ ಕೃಪೆ: ರವೀಂದ್ರ
(ಸೂಚನೆ: ಚಿತ್ರ ಸ್ಪಷ್ಟವಾಗಿರದಿದ್ದಲ್ಲಿ ಚಿತ್ರದ ಮೇಲೆ ಕ್ಲಿಕ್ಕಿಸಿ ಮತ್ತು ಹಿಗ್ಗಿಸಿ ನೋಡಿ )

Tuesday, January 11, 2011

ಕುಮಾರವ್ಯಾಸನ ದ್ರೌಪದಿ

ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಕರೆಯಲ್ಪಡುವ ಗದುಗಿನ ನಾರಣಪ್ಪ, ಭಾಮಿನಿ ಷಟ್ಪದಿಯಲ್ಲಿ ಮಹಾಭಾರತವನ್ನು ರಚಿಸಿ ಕುಮಾರವ್ಯಾಸನಾದವನು. ಅವನ ಕರ್ಣಾಟ ಭಾರತ ಕಥಾಮಂಜರಿ ಇವತ್ತಿಗೂ ಓದುಗರಿಗೆ ರೋಮಾಂಚನವನ್ನುಂಟುಮಾಡುವ ಕೃತಿ. ಗಮಕಗಾಯನದಲ್ಲಿ ಅದನ್ನು ಕೇಳುವಾಗ ಶ್ರೋತೃಗಳಿಗೆ ಮೈನವಿರೇಳುತ್ತದೆ. "ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು! ಭಾರತ ಕಣ್ಣಲಿ ಕುಣಿಯುವುದು! ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು!" ಎಂದು ಕುವೆಂಪು ಅವನನ್ನು ಹೊಗಳಿದ್ದಾರೆ.

ಕುಮಾರವ್ಯಾಸನ ಭಾರತದಲ್ಲಿ ಶೃಂಗಾರ ರಸಗಳೂ ಮೇಳೈಸಿಕೊಂಡಿವೆ. ಇದೀಗ, ಮೋಟುಗೋಡೆಯಲ್ಲಿ ನಿಂತಿರುವ ನಾವು, ಕುಮಾರವ್ಯಾಸನ ಶೃಂಗಾರಮೀಮಾಂಸೆಯ ಪರಿಯನ್ನು ನೋಡುವರಾಗೋಣ!

* *
ಪಾಂಚಾಲ ದೇಶದ ಅರಮನೆಯಲ್ಲಿ ದ್ರೌಪದಿಯ ಸ್ವಯಂವರ ನಡೆಯುತ್ತಿದೆ. ನಾನಾ ದೇಶದ ಅರಸುಗಳು ನೆರೆದಿದ್ದಾರೆ. ಕಿಕ್ಕಿರಿದ ಅರಮನೆಯ ಸಭಾಂಗಣದಲ್ಲಿ ನಡೆದು ಬರುವ ಕೃಷ್ಣೆಯ ರೂಪನ್ನು ಕುಮಾರವ್ಯಾಸ ಬಣ್ಣಿಸುವ ಬಗೆ ಹೀಗಿದೆ:

ಮೊಲೆಗಳಲಿ ಸಿಲುಕಿದೊಡೆ ನೋಟಕೆ
ಬಳಿಕ ಪುನರಾವರ್ತಿಯೇ ಕಂ
ಗಳಿಗೆ ಕಾಮಿಸಿದರೆಯು ನಿಮಿಷಕೆ ಸಮಯವೆಲ್ಲಿಹುದು
ಲಲಿತ ಮೈಕಾಂತಿಗಳೊಳದ್ದರೆ
ಮುಳುಗಿ ತೆಗೆವವರಾರು ಜಘನ
ಸ್ಥಳಕೆ ಮುರಿದರೆ ಮರಳದಲೆ ಕಂಗಳಿಗೆ ಹುಸಿಯೆಂದ

ಅಸಿಯ ನಡುವಿನ ನಿಮ್ನ ನಾಭಿಯ
ಮಸುಳ ಬಾಸೆಯ ತೋರ ಮೊಲೆಗಳ
ಮಿಸುಪ ತೊಡೆಗಳ ಚಾರು ಜಂಘೆಯ ಚರಣಪಲ್ಲವದ
ಎಸಳುಗಂಗಳ ತೊಳಗಿ ಬೆಳಗುವ
ಮುಸುಡ ಕಾಂತಿಯ ಮುರಿದ ಕುರುಳಿನ
ಬಿಸಜ ಗಂಧಿಯ ರೂಪನಭಿವರ್ಣಿಸುವಡಿರೆಂದ

ದ್ರೌಪದಿಯೊಂದಿಗಿರುವ ಸಖಿಯರಾದರೂ ಅಲ್ಪಸುಂದರಿಯರೇ? ಊಹುಂ!

ತೋರ ಮೊಲೆಗಳ ನಲಿವನಡು ಪೊರ
ವಾರಗಳ ನುಣ್ದೊಡೆಯ ಕಿರುದೊಡೆ
ಯೋರಣದ ಹಾವುಗೆಯ ಹೆಜ್ಜೆಯ ಹಂಸೆಗಳ ಗತಿಯ
ನೀರೆಯರ ಮೈಗಂಪುಗಳ ತನಿ
ಸೂರೆಗೆಳಸುವ ತುಂಬಿಗಳ ಕೈ
ವಾರಗಳ ಕಡು ಗರುವೆಯರ ನೆರೆದುದು ಸಖೀನಿವಹ

ತೋರ ಮೊಲೆಗಳ ದಂತಿ ಘಟೆಗಳ
ಚಾರು ಜಘನದ ಜೋಡಿಸಿದ ಹೊಂ
ದೇರುಗಳ ಸುಳಿಗುರುಳುಗಳ ಝಲ್ಲರಿಗಳ ಝಾಡಿಗಳ
ಚಾರುನಯನದ ಚಪಲಗತಿಗಳ
ವಾರುವಂಗಳ ಮೇಲುವಸನದ
ಸಾರಸಿಂಧದ ಸೇನೆ ನಡೆದುದು ಸತಿಯ ಬಳಸಿನಲಿ

ಇಂತಹ ಸುಂದರಿಯನ್ನು ಅರ್ಜುನ ಗೆಲ್ಲುತ್ತಾನೆ. ದ್ರೌಪದಿ ವೀರ ಪಾಂಡವರ ಸತಿಯಾಗುತ್ತಾಳಾದರೂ ಜೀವಿತದುದ್ದಕ್ಕೂ ಕೊರಗುಗಳನ್ನನುಭವಿಸುತ್ತಿರುತ್ತಾಳೆ. ಮೊದಲೇ ಐವರು ಪತಿಯರನ್ನು ಸಂಭಾಳಿಸಬೇಕಾದ ಕಷ್ಟ. ಅರ್ಜುನನ ಮೇಲೆ ಅವಳಿಗೆ ಹೆಚ್ಚಿನ ಅನುರಕ್ತಿಯಿದ್ದರೂ ಅರ್ಜುನನ ಪ್ರೀತಿ ಮತ್ತೀರ್ವರು ಸತಿಯರಿಗೆ ಹಂಚಿಹೋಗಿದೆ. ಭೀಮನಿಗೂ ಸಾಲಕಟಂಕಟಿಯೆಂಬ ಮತ್ತೊಬ್ಬ ಹೆಂಡತಿ. ದ್ಯೂತದಲ್ಲಿ ಸೋತ ಗಂಡನಿಂದಾಗಿ ದ್ರೌಪದಿ ಕುರುಸಭಾಮಧ್ಯದಲ್ಲಿ ಬೆತ್ತಲಾಗಬೇಕಾಗುತ್ತದೆ. "ಐವರಿಗೆ ಹೆಂಡತಿಯಾದವಳು ನಮಗೂ ಆಗಲಾರೆಯಾ?" ಎಂಬಂತಹ ಕೌರವರ ಕುಹಕದ ಮಾತುಗಳಿಗೆ ಕಿವಿಯಾಗಬೇಕಾಗುತ್ತದೆ. ನಂತರ ಗಂಡಂದಿರೊಂದಿಗೆ ವನವಾಸ-ಅಜ್ಞಾತವಾಸಗಳನ್ನನುಭವಿಸಬೇಕಾಗಿ ಬರುತ್ತದೆ.

ಈ ಮಧ್ಯೆ ಅರ್ಜುನನಿಗೆ ಇಂದ್ರಪುರಿಗೆ ಹೋಗುವ ಅವಕಾಶ ದೊರೆಯುತ್ತದೆ. ಅಲ್ಲಿ ಊರ್ವಶಿ ಅರ್ಜುನನಿಗೆ ಮನಸೋಲುತ್ತಾಳೆ. ಅರ್ಜುನನ್ನು ಸೇರಬಯಸುತ್ತಾಳೆ. "ಮನಸಿಜನ ಮಾರಾಂಕ ಕಾಮುಕ ಜನದ ಜೀವಾರ್ಥಕೆ ವಿಭುವೆಂದೆನಿಸಿದೂರ್ವಶಿ" ಅಂತಃಪುರದಲ್ಲಿ ನಡೆದು ಬರುವುದನ್ನು ವರ್ಣಿಸುವಾಗ ಕುಮಾರವ್ಯಾಸನಂಥ ಕುಮಾರವ್ಯಾಸನೇ "ಶಬ್ದಬ್ರಹ್ಮ ಸೋತುದು ಸೊರಹಲೇನೆಂದ" ಎನ್ನುತ್ತಾನೆ! ಹಾಗಾದರೆ ಅವಳ ರೂಪು-ಅಲಂಕಾರಗಳಾದರೂ ಹೇಗಿದ್ದಿರಬಹುದು?

ಪರಿಮಳದ ಪುತ್ಥಳಿಯೊ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತೆಯೊ ಕಾಮುಕರ ಭಾಗ್ಯದ ಕಲ್ಪತರುಫಲವೊ
ಸ್ಮರನ ವಿಜಯಧ್ವಜವೊ ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ
ಸುರಸತಿಯರಧಿ ದೇವತೆಯೊ ವರ್ಣಿಸುವೊಡರಿದೆಂದ

ತಿಗುರ ಗೆಲಿದಳು ತಿಲಕವನು ತೆ
ತ್ತಿಗರಲಂಕರಿಸಿದರು ಹೊಳಹಿನ
ಹೊಗರ ಹೊಸ ಜವ್ವನದ ಜೋಡಿಯ ಜಾಡಿಯಿಮ್ಮಡಿಸೆ
ಉಗಿದೊರೆಯ ಕೂರಲಗೊ ಧಾರೆಯ
ಮಿಗೆ ಹಿಡಿದ ಖಂಡೆಯವೊ ಕಾಮನ
ಹಗೆಗೆ ಹುಟ್ಟಿದ ಧೂಮಕೇತುವೊ ರೂಪು ಸುರಸತಿಯ

ಆದರೆ ಪಾಂಡವರೈವರಲ್ಲೇ ಅತಿರಸಿಕನೆಂದು ಚಿತ್ರಿಸಲ್ಪಡುವ ಪಾರ್ಥ ಇಲ್ಲಿ ಊರ್ವಶಿಯ ಎದುರು ಸೋಲುತ್ತಾನೆ. ತನ್ನ ವಂಶವೃಕ್ಷದ ಪ್ರಕಾರ ನೀನು ತಾಯಿಯ ಸಮಾನ ಎಂದು ಗೋಗರೆಯುತ್ತಾನೆ. ಅವಮಾನಿತನಾಗಿ ವಾಪಸಾಗುತ್ತಾನೆ.

ಪಾಂಡವರು ವಿರಾಟನ ಆಸ್ಥಾನದಲ್ಲಿ ಅಜ್ಞಾತವಾಸದಲ್ಲಿದ್ದಾಗ ದ್ರೌಪದಿಯನ್ನು ಕಂಡಾಗ ಕೀಚಕನಿಗೆ ಅವಳ ಮೇಲೆ ಆಸೆಯುಂಟಾಗುತ್ತದೆ.

ನಿಂದು ನೋಡಿದ ದ್ರೌಪದಿಯ ಮೊಗ
ದಂದವನು ಕಂಡಾಗ ಕೀಚಕ
ನೊಂದನೆನೆ ಮೊಗ ತೆಗೆಯಲೆಚ್ಚನು ಕಾಮ ಕೈಗೂಡಿ
ಅಂದು ಬೆರಗಾದನು ವಿಳಾಸಿನಿ
ಯಿಂದು ತಳೆದಳು ಮನವನಿವಳಾ
ರೆಂದು ಭಾವಿಸಿ ಚಾಚಿದನು ಕದಪಿನಲಿ ಕರತಳವ

ತಿಳಿಯಿವಳು ಮೂಜಗದ ಮೋಹಿಪ
ತಿಲಕವೋ ಕಾಮಂಗೆ ಕಟ್ಟಿದ
ಕಳನ ಭಾಷೆಗೆ ನಿಂದ ಮಾಸಾಳೋ ಮಹಾದೇವ
ಕೊಲೆಗಡಿಗ ಕಂದರ್ಪಕನ ಕೂ
ರಲಗೊ ಮದನನ ಸೊಕ್ಕಿದಾನೆಯೊ
ನಳಿನಮುಖಿಯಿವಳಾರ ಸತಿಯೆಂದಳುಪಿ ನೋಡಿದನು

ಜಗವ ಕೆಡಹಲು ಜಲಜವಿಶಿಖನು
ಬಿಗಿದ ಬಲೆಯಿವಳಲ್ಲಲೇ ಯೋ
ಗಿಗಳ ಯತಿಗಳನೆಸಲು ಕಾಮನು ಮಸೆದ ಕೂರಲಗು
ಮುಗುದನಾದನು ಕಾಮನಂಬುಗ
ಳುಗಿದವೆದೆಯಲಿ ನಟ್ಟ ದೃಷ್ಟಿಯ
ತೆಗೆಯಲಾರದೆ ಸೋತು ಕೀಚಕ ಪಾತಕವ ನೆನೆದ

ನಂತರ ವಿರಾಟನನ್ನು ಭೀಮ ಕೊಲ್ಲುವುದು, ಪಾಂಡವರು ಅಜ್ಞಾತವಾಸ ಮುಗಿಸಿ ಬರುವುದು, ದುರ್ಯೋಧನ ರಾಜ್ಯವನ್ನು ಬಿಟ್ಟುಕೊಡದೆ ಯುದ್ಧಕ್ಕೆ ಆಹ್ವಾನಿಸುವುದು, ಕುರುಕ್ಷೇತ್ರದಲ್ಲಿ ಪಾಂಡವರು ವಿಜಯಿಗಳಾಗುವುದು..... ಯುದ್ಧದಲ್ಲಿ ಸೋಲೆಂತು ಗೆಲುವೆಂತು? ಪುತ್ರರು-ಬಂಧು-ಬಾಂಧವ-ಪ್ರಜೆ-ಸೈನ್ಯವನ್ನೆಲ್ಲ ಕಳೆದುಕೊಂಡ ಪಾಂಡವರು ಗೆದ್ದರೂ ಸೋತವರಂತೆ ಕಾಣುತ್ತಾರೆ. ಮಹಾಭಾರತ, ಧರ್ಮರಾಯನ ಪಟ್ಟಾಭಿಷೇಕದೊಂದಿಗೆ ಒಂದು ದುರಂತ ಕತೆಯಂತೆ ಮುಗಿತಾಯವಾಗುತ್ತದೆ.

ಆದರೆ ಕುಮಾರವ್ಯಾಸನ ಬಣ್ಣನೆಯಲ್ಲಿ ಭಾರತ ದೇಶದ ಈ ಮಹಾಕಾವ್ಯ ಮನೋಹರವಾಗಿ ಚಿತ್ರಿಸಲ್ಪಟ್ಟಿದೆ. ಅದನ್ನು ಓದುವ, ಅರ್ಥೈಸಿಕೊಳ್ಳುವ, ಖುಶಿಪಡುವ ಅದೃಷ್ಟ ನಮ್ಮದಾಗಲಿ.

Monday, December 13, 2010

ಜಾಹೀರಾ'ಥೂ'!

ಒಂದಷ್ಟು ಜಾಣ ಜಾಹೀರಾತುಗಳು..



"Sex sells; unfortunately we sell Jeans"
"Really Big.." (Durex Ad)
"Wide Angle Lens"
"Axe Effect"
"Skin Color Underwear"
"smoking can affect your sex life"
"The Nikon: Detcts up to 12 faces"
"for sxier knees"

ಸೋರ್ಸು: http://www.boredpanda.com/sexy-ads/;  ಥ್ಯಾಂಕ್ಸು: ಮಡಿವಾಳಯ್ಯ ಪಾಟೀಲ್

Monday, November 15, 2010

ಗೌತಮನ ಕ್ಷಮಾಯಾಚನೆ!

  • ಗೌತಮ್ ಹೆಗಡೆ
ಮೆಲ್ಲಗೆ ಮೊಳಕೆಯೊಡೆದ ಚಿಗುರು ಮೀಸೆ,
ನಿದಿರೆ ಬಾರದ ಇರುಳಿಗೆ
ನಟ್ಟ ನಡುರಾತ್ರಿ ಎಬ್ಬಿಸಿ
ಕಾಡುವ ಹಾಳು ಚೆಂದದ ಕನಸಿಗೆ
ಅರ್ಥವೇನೆಂದು ಪರಧ್ಯಾನದಿ
ಅಲ್ಲಿ, ಮನೆಯೆದುರ ದಾರಿ ತಿರುವಲ್ಲಿ
ಒಂದು ಹಳದಿ ಮಧ್ಯಾಹ್ನದಿ
ಕಣ್ಣ ನೆಟ್ಟು ಕುಳಿತಾಗ ಬಂದವಳು ನೀನು..

ತುಂತುರು ಹನಿ ಸಿಂಚನವಾಗಿ
ಏನೆಲ್ಲ ಪ್ರಶ್ನೆಗಳಿಗೆ ಉತ್ತರವಾಗಿ,
ಅನರ್ಥದರ್ಥ ಹರೆಯಕ್ಕೆ ಅರ್ಥವಾಗಿ..

ಹಾಗೆ ಕಂಡವಳು ಹಾಗೇ ಹೋಗದೆ ಎನ್ನ ಕಂಡು-
ಒರೆನೋಟದಿ ಕಳ್ಳ ಮಂದಹಾಸವಾಗಿಬಿಟ್ಟೆ.
ನಾ ನಿಂತ ನಿಲುವಲ್ಲಿ ಎನ್ನ ಕಳೆದುಕೊಂಡು,
ನಿನ್ನ ಆ ಮಂದಹಾಸ, ಓರೆನೋಟ
ಎನಗೆ ಸಿಕ್ಕ ರಹದಾರಿಯೆಂದುಕೊಂಡು
ಗಡಿ ದಾಟಿಬಿಟ್ಟೆ.

ನಿದಿರೆ ಬಾರದ ರಾತ್ರಿಯೊಳು,
ಹಿಡಿದು ಕನಸಿನ ಜಾಡು,
ತಿರುಗಿ ಬಾರದಷ್ಟು ದೂರ ದೂರ
ಅಡಿಯಿಂದ ಮುಡಿವರೆಗೆ
ಕಡು ಕಷ್ಟ - ಸುಖದ ದಾರಿಯಲಿ
ದಾರಿ ಮುಗಿಯುವನಕ,
ಕನಸು ಕರಗಿ ನೀರಾಗಿ ನನಸಾಗುವನಕ
ಬೆದೆಗೆ ಬಂದ ಹರೆಯಕೆ ಈಡಾಗಿಬಿಟ್ಟೆ.

ಕ್ಷಮಿಸಿಬಿಡು ಎನ್ನದಲ್ಲದ ತಪ್ಪಿಗೆ..
ಪರವಾನಿಗೆಯ ಹಂಗಿರದೆ
ಎನ್ನ ಮಾನಸದೊಳು ನಿನ್ನಲಿ ಅಲೆದುಬಿಟ್ಟೆ..
ಕ್ಷಮಿಸಿಬಿಡು ಎನ್ನದಲ್ಲದ ತಪ್ಪಿಗೆ..

Tuesday, October 26, 2010

ಕೃಷ್ಣನ್ ಲವ್ ಸ್ಟೋರಿ

-ಪರಮೇಶ್ವರ ಗುರುಸ್ವಾಮಿ

ಹನ್ನೆರಡನೆಯ ಶತಮಾನದ ಸಂಸ್ಕೃತ ಕವಿ ಜಯದೇವ ತನ್ನ ಶೃಂಗಾರ ಕಾವ್ಯ, ‘ಗೀತ ಗೋವಿಂದ’ದಲ್ಲಿ, ಕೃಷ್ಣ ಮತ್ತು ಗೋಪಿಕೆಯರ ಅದರಲ್ಲೂ ರಾಧೆs ಮತ್ತು ಕೃಷ್ಣರ ಪ್ರಣಯವನ್ನು ರಸಿಕತೆಯಿಂದ ವರ್ಣಿಸಿದ್ದಾನೆ. ಆತ್ಮವು ಭಗವಂತನಿಗಾಗಿ ಕಾತರಿಸುವುದು ಈ ಪದ್ಯಗಳಲ್ಲಿ ಪ್ರಣಯದ ಅನ್ಯೋಕ್ತಿಯಾಗಿದೆ. ನಮ್ಮ ಸಂಗೀತ ಮತ್ತು ಚಿತ್ರಕಲೆಗಳ ಮೇಲೆ ಜಯದೇವನ ಈ ಕೃತಿ ಅಪಾರ ಪ್ರಭಾವ ಬೀರಿದೆ. ೧೮ನೆಯ ಶತಮಾನದಲ್ಲಿ ಹಿಮಾಲಯದ ತಪ್ಪಲು ಪ್ರದೇಶದಲ್ಲಿ ಉತ್ತುಂಗಕ್ಕೇರಿದ ಚಿಕಣಿ ಅಥವ ಮಿನಿಯೇಚರ್ ಚಿತ್ರಕಲೆ ‘ಪಹಾಡಿ (ಗುಡ್ಡಗಾಡು) ಚಿತ್ರಕಲೆ’ ಎಂದೇ ಜಗತ್ಪ್ರಸಿದ್ಧ.  ಸಸ್ಯಗಳು ಮತ್ತು ಖನಿಜಗಳಿಂದ ಮಾತ್ರ ಸಂಗ್ರಹಿಸಲಾದ ನೈಸರ್ಗಿಕ ಬಣ್ಣಗಳನ್ನು ಬಳಸಿ ರಚಿಸಲಾಗಿರುವ ಪಹಾಡಿ ಶೈಲಿಯ ಮಿನಿಯೇಚರ್ ಚಿತ್ರಗಳು ತಮ್ಮ ಭಾವಗೀತಾತ್ಮಕ, ಕುಸುರಿಯ ಸೂಕ್ಷ್ಮತೆಯಿಂದ, ಚಿತ್ರ ರಚನಾ ಕೌಶಲದಿಂದ, ನಾಜೂಕು ಗುಣಗಳಿಂದ,  ನೈಸರ್ಗಿಕ ಸೌಂದರ್ಯ ಮತ್ತು ಹೆಣ್ಣನ್ನು ಅವಳೆಲ್ಲ ಸೌಂದರ್ಯದೊಂದಿಗೆ ಅಂದಿನ ಅತ್ಯುತ್ತಮ ಮಾದರಿಯಲ್ಲಿ (ಹಾವ ಭಾವ ವಿಲಾಸ ವಿಭ್ರಮಂಗಳನೆಲ್ಲ ಸೇರಿಸಿ) ಚಿತ್ರಿಸಿರುವುದು ಮನ ಸೆಳೆಯುತ್ತದೆ. ಪಹಾಡಿ ಕಲಾವಿದರು ‘ಭಾಗವತ ಪುರಾಣ’, ‘ಗೀತ ಗೋವಿಂದ’, ‘ನಳ ದಮಯಂತಿ’, ‘ರಾಗಮಾಲ’, ‘ಕೃಷ್ಣಲೀಲಾ’, ‘ಸತ್ಸಾಯಿ’ (ಸಪ್ತ ಶತ ಪದ್ಯಗಳು) ಮುಂತಾದ ಸಾಹಿತ್ಯವನ್ನವಲಂಬಿಸಿ ಮನೋಹರವಾದ ಚಿತ್ರಗಳನ್ನು ರಚಿಸಿದ್ದಾರೆ. ಈ ಚಿತ್ರಗಳ ಕೇಂದ್ರ ಶೃಂಗಾರವಾದರೂ ತುಡಿತ ಆಧ್ಯಾತ್ಮಿಕವಾಗಿದೆ (ಹಿಂದು ಪುರಾಣ ಅವಲಂಬಿತ).. ಭಾರತೀಯ ಕಲೆಯಲ್ಲಿ ರಸಾನುಭವವು ಒಂದು ನಿರ್ಧಿಷ್ಟವಾದ ಅನುಕೂಲಕರ ದೃಷ್ಟಿಕೋನವನ್ನು ಮೀರಿ ವಾಸ್ತವದ ಅಸ್ತಿತ್ವವನ್ನು ಸಂವಹನಿಸುತ್ತದೆ. ಅದಕ್ಕಾಗಿ ಕಲಾವಿದರು ಹಲವಾರು ಕಣ್ನೆಲೆಗಳನ್ನು ತಮ್ಮ ಕೃತಿಗಳಲ್ಲಿ ದುಡಿಸಿಕೊಂಡಿದ್ದಾರೆ. ಈ ಮಾತನ್ನು ಪಹಾಡಿ ಮಿನಿಯೇಚರ್‌ಗಳಲ್ಲೂ ಕಾಣ ಬಹುದು.

ಗೀತ ಗೋವಿಂದದ ೧೨ನೆಯ ಸರ್ಗದಲ್ಲಿ ಪುಷ್ಪಭರಿತ ಮರದಡಿಯಲ್ಲಿ ಹಸಿರು ಹಾಸಿಗೆಯ ಮೇಲೆ ಕೃಷ್ಣ ರಾಧೇಯರ ಉತ್ಕಟ ಪ್ರಣಯ ಸಮಾಗಮವನ್ನು ಜಯದೇವ ವರ್ಣಿಸಿದ್ದಾನೆ.  ಆ ವರ್ಣನೆಯನ್ನಿಲ್ಲಿ ಪಹಾಡಿ ಕಲಾವಿದ ಅಭಿವ್ಯಕ್ತಿಸಿದ್ದಾನೆ.


‘ಗೀತ ಗೋವಿಂದ’ವನ್ನಾಧರಿಸಿದ ಚಿತ್ರಗಳು ಅವುಗಳಲ್ಲಿ ವ್ಯಕ್ತವಾಗುವ ಸೊಬಗು ಮತ್ತು ಪರಿಪೂರ್ಣತೆಗಳಿಂದಾಗಿ ಮಹತ್ವದ್ದಾಗಿವೆ. ಆನಂದ ಕೆ. ಕೂಮಾರಸ್ವಾಮಿ ಹೇಳುವಂತೆ ಗೀತ ಗೋವಿಂದ ಚಿತ್ರಗಳ ಮಾಯಾ ಲೋಕ, “ಅವಾಸ್ತವ ಅಥವಾ  ಭ್ರಾಮಕವಲ್ಲ, ಕಲ್ಪನೆ ಮತ್ತು ಅನಂತತೆಯ ಲೋಕ. ಪ್ರೇಮ ದಿವ್ಯತೆಯ ಕಣ್ಣುಗಳಲ್ಲಿ ಕಾಣುವುದನ್ನು ನಿರಾಕರಿಸದ ಎಲ್ಲರಿಗೂ (ಈ ಲೋಕ) ಗೋಚರವಾಗುವಂತಹದ್ದು..” 

[ಇದನ್ನು ಮೋಟುಗೋಡೆಗಾಗಿ ಕಳುಹಿಸಿಕೊಟ್ಟ ಶ್ರೀ ಪರಮೇಶ್ವರ ಗುರುಸ್ವಾಮಿಯವರಿಗೆ ನಮ್ಮ ಧನ್ಯವಾದಗಳು.]