ಇದನ್ನ ಬಹಳ ಹಿಂದೆಯೇ, ಅಂದರೆ ನಮ್ಮ ತುಂಟಿ ನೀಲು-೨ ಪೋಸ್ಟಿಗೆ ಬಂದಿದ್ದ ಪ್ರತಿಕ್ರಿಯೆ-ಮರುಪ್ರತಿಕ್ರಿಯೆಗಳನ್ನು ನೋಡಿದಾಗಲೇ ಬ್ಲಾಗಿಗೆ ಹಾಕಬೇಕು ಎಂದುಕೊಂಡಿದ್ದೆ; ಅದು ಹೇಗೋ ಬಿಟ್ಟುಹೋಗಿತ್ತು. ಇದೀಗ ಪೋಸ್ಟಿಸುತ್ತಿದ್ದೇನೆ.
ಕನ್ನಡದ ಪ್ರಜ್ಞಾವಂತ ಕವಯತ್ರಿ ಪ್ರತಿಭಾ ನಂದಕುಮಾರ್, ಜಯಂತ ಕಾಯ್ಕಿಣಿಯವರ ಸಾಲೊಂದಕ್ಕೆ ಪ್ರತಿಕ್ರಿಯಿಸುತ್ತ ಬರೆದ ಕವನ ಇದು. ಮೋಟುಗೋಡೆ ಇಂತಹ ಚರ್ಚೆ / ಒಳನೋಟಗಳಿಗೂ ವೇದಿಕೆಯಾಗಲಿ ಎಂಬುದು ಆಶಯ.
* *
"ಎಷ್ಟೊಂದು ಹುಡುಗಿಯರ ಮಗ್ಗಲುಗಳಲ್ಲಿ ತಾಯ್ತನದ ಪುಲಕದ ಕುಡಿ ಮೂಡುತ್ತಿದೆ.."
-ಜಯಂತ ಕಾಯ್ಕಿಣಿ.
ಪುಳಕ
-ಪ್ರತಿಭಾ ನಂದಕುಮಾರ್
ಮಗ್ಗಲುಗಳ ನಡುವೆ ಮೂರು ಲೋಕದ ಗುಟ್ಟು
ಬಿಟ್ಟು ಕೊಡದಂತೆ ಆತುಕೊಳ್ಳುವ ಜೋತು
ಬೀಳುವ ತೆವಲುಗಳು ಮೂಡಿಸಿ ಸಿಟ್ಟು
ಭಗ್ನ ಸ್ವಪ್ನಗಳ ದ್ವಾರಗಳಲ್ಲಿ ಹಸೆಯಿರದೆ
ಹಾಡಿರದೆ ಖಾಲಿ ನಡೆಯಲ್ಲಿ ಗೂಟ ನೆಟ್ಟು
ಸುಳ್ಳು ಕಥೆಗೆ ದುಡ್ಡಿನಾಸೆಗೆ ನಟಿಸಿದ ಯಾವುದೋ
ನಟಿಯ ಅಮಲಿನಲ್ಲಿ ಶೃಂಗಕ್ಕೇರಿದವನ ಪಕ್ಕದಲ್ಲಿ ಕಿಬ್ಬೊಟ್ಟೆ ನೇವರಿಸುತ್ತ ಮಗ್ಗುಲಾಗಿ
ಬಿಗಿಯಾಗಿ ಕಣ್ಣು ಮುಚ್ಚಿದರೆ ಕನಸು
ಕಾಣಬಹುದೆನ್ನುವ ಭ್ರಮೆಯಲ್ಲಿ ಎಷ್ಟೊಂದು
ಹುಡುಗಿಯರು ಪುಳಕಗಳಿಗೆ ಹಾತೊರೆಯುತ್ತ...
ಕುಡಿ ಎಂದರೆ ಕುಡಿದು ಬೆಳೆದೇಬಿಟ್ಟ
ಹಸಿರು ಚಿಗುರಿನ ತುದಿಯಲ್ಲಿ ಹೂವರಳಿ
ಜೀವವೇ ನೀರಾಗಿ ಹರಿದು ಕಟ್ಟೆಯೊದೆದು
ಕುಸಿದು ತೆವಳಿ ನೋವು ತಿನ್ನುತ್ತ
ಊಟ ಮಾಡುವಾಗಲೇ ಎದ್ದಳುವ ಕೂಸಿಗೆ
ಒಂದು ಕೈಯಲ್ಲಿ ಎದೆ ಕೊಟ್ಟು
ಅವಸರದಲ್ಲಿ ನುಂಗುವ ಬಿಸಿ ಅನ್ನ ಸಾರು
ನಾಲಿಗೆ ಸುಟ್ಟು ಕಣ್ಣಲ್ಲಿ ನೀರು
ಅಲ್ಲೇ ಕೈತೊಳೆದು ಗೋಡೆಗೊರಗುವ
ಎಷ್ಟೊಂದು ಹುಡುಗಿಯರು ಇದೇ ಪುಳಕೆವೆನ್ನುತ್ತ...
ಪುಟ್ಟ ಕೈಗಳ ಬಡಿತಕ್ಕೆ ತಪ್ಪು ಹೆಜ್ಜೆಯ ಹಾದಿ
ಹಗಲಿರುಳು ಅಳೆದು ಕಾಲನ ಕಾಲಡಿಯಲ್ಲಿ
ಹಿಂದೆ ಒತ್ತಿ ಜಗತ್ತು ಎಲ್ಲ ದೃಶ್ಯಗಳು
ಕಣ್ಮರೆಯಾಗಿ ನೇಪಥ್ಯದಲ್ಲಿ ಇಲ್ಲವಾದ
ಕೃಷ್ಣ ಯಶೋಧೆಯರಾಟ ನೋಡುವಾಗ
ಬಳೆ ತುಂಬಿದ ಕೈಗಳು ಮೆಲ್ಲನೆ ಆಧರಿಸಿ
ಒಡಲು ಪುಳಕದ ಕುಡಿ ಚಿಗುರೊಡೆಯುತ್ತಿತ್ತು.
No comments:
Post a Comment