ತನ್ನದೇ ಬ್ಲಾಗಿನಲ್ಲಿ ಹಾಕಿಕೊಳ್ಳಲು ಹಿಂಜರಿದು ಮೋಟುಗೋಡೆ ಟೀಮಿಗೆ ಕಳುಹಿಸಿದ ಈ ಕವನವನ್ನು ಗೌತಮ್‌ಗೊಂದು ಥ್ಯಾಂಕ್ಸ್ ಮತ್ತು ಗುಡ್‌ಲಕ್ ಹೇಳುತ್ತಾ ಪ್ರಕಟಿಸುತ್ತಿದ್ದೇವೆ. ಗೌತಮನ ಪ್ರಯತ್ನವನ್ನು ನೀವೂ ಪ್ರೋತ್ಸಾಹಿಸಿ. ;)
* * *
ಇರುಳೆಂಬ ಮಾಯೆ ಬಾನೇರಿದೆ..
ಕಣ್ಣ ಹರವಿನಲಿ ಕಳ್ಳ ಕಾಮನೆಯ
ಪೂರ್ಣ ಶಶಿ ಬಿಂಬ ಮೂಡಿದೆ.
ಬಾ ಗೆಳತಿ,
ಪ್ರಣಯ ಕಡಲೊಳು
ತನುವ ನೌಕೆ ಇಳಿಬಿಟ್ಟು
ಅನಂಗರತಿ ಜೋಡಿಯ
ಅನಾದಿ ಜಾಡಲಿ
ಅನಂಗ ನಾ ರತಿ ನೀನಾಗಿ
ಉಬ್ಬು ತಗ್ಗುಗಳ
ರೋಚಕ ತಿರುವುಗಳ
ಏರಿಳಿವ ದಾರಿಯಲಿ
ತೇಲಿ ತೇಲಿ ಅಲ್ಲಲ್ಲಿ ಮುಳುಗಿ
ಈಜಿ ಈಜಿ ರಸಕಡಲ ಸೀಳಿ
ದೂರ ಗಮ್ಯ ಸೇರುವ.
ಬಾ ಗೆಳತಿ,
ಮನದ ನೂರು ದುಗುಡಗಳೆಲ್ಲ
ಮೊದಮೊದಲೆಂಬ ಭಯವೆಲ್ಲ
ಬೆವರಾಗಿ ಹನಿಯಲಿ.
ಕಿಬ್ಬೊಟ್ಟೆಯಾಳದ ಕನವರಿಕೆಯಲ್ಲ
ಹಿರಿಕಿರಿಯ ಸುಖದ ಝೇಂಕಾರದಲೆಯಾಗಿ ಹೊಮ್ಮಿ
ಸುತ್ತಲ ನೀರವ
ಹಾಗೆ ಸುಮ್ಮನೆ ಕದಡಲಿ.
ರೋಮ ರೋಮದಿ ಮಿಂಚು ಮುಸುಕಿ
ನರನಾಡಿ ಮೆಲುವಾಗಿ ಮೀಟಲಿ.
ನಡೆಯಲಿ ತನು ಮಥನ
ಬಾಳ ನಿಜ ಸುಧೆಗಾಗಿ
ಬಹಿರಂಗ ಅಂತರಂಗದೊಳು ಲೀನವಾಗಿ
ಜೀವರಸ ಚಿಮ್ಮಲಿ.
ಬಾ ಗೆಳತಿ ,
ಇನ್ನೂ ತಡವೇಕೆ?
ಸುಮ್ಮನೆ ಇರುಳು ಸುರಿದು ಸರಿಯುತಿದೆ
ವ್ಯರ್ಥವಾಗಿ.
ಬಾರೆ ಬಾ ಬೇಗನೆ
ಮಣಿಯುವ ಪ್ರಕೃತಿ ಸಹಜಕೆ ತಲೆಬಾಗಿ...
2 comments:
hmmm....ಕವಿವರ್ಯ ಬೆಳೆಯುತ್ತಿದ್ದಾನೆಂದಾಯ್ತು! ಉತ್ತಮ ಕವನ ಗೌತಮ್! ಗುಡ್ ನೈಟು ಬೆಳೆದು hot night ಆಗಲಿ!
ಕಲ್ಪನೆಯೇ ಇಷ್ಟು ರೋಚಕವಾಗಿದ್ದಾಗ, ಅನುಭವ ಇನ್ನೆಂತಹ ಕವನಕ್ಕೆ ಜನ್ಮ ನೀಡೀತು? ಗೌತಮ, ನಿಮ್ಮ ಕವನಗಳು ಅನುಭವಶ್ರೀಮಂತವಾಗಲಿ ಎಂದು ಹಾರೈಸುತ್ತೇನೆ. Carry on, ಕವಿ!
Post a Comment